ADVERTISEMENT

ಕಮಿಷನ್‌ ಆಸೆ ತೋರಿಸಿ ವಂಚನೆ; ಉತ್ತರ ಪ್ರದೇಶ, ಬಿಹಾರದ 12 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 15 ಮೇ 2025, 0:30 IST
Last Updated 15 ಮೇ 2025, 0:30 IST
   

ಬೆಂಗಳೂರು: ಕಮಿಷನ್‌ ರೂಪದಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ಹೇಳಿ ವಿವಿಧ ಯುಪಿಐಗಳು ಹಾಗೂ ಬ್ಯಾಂಕ್‌ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸುತ್ತಿದ್ದ ಅಂತರ ರಾಜ್ಯದ 12 ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹರ್ಷವರ್ಧನ್‌ (25), ಸೋನು(27), ಪ್ರಕಾಶ್‌ ಯಾದವ್‌(23), ಗೋರಖನಾಥ್‌(20), ಸಂಜಿತ್‌ ಕುಮಾರ್‌(25), ಆಕಾಶ್‌ ಕುಮಾರ್‌ ಸಿಂಗ್‌ (19), ಅಮಿತ್‌ ಯಾದವ್‌ (19), ಗೌರವ್‌ ಪ್ರತಾಪ್‌ ಸಿಂಗ್‌(22), ಬ್ರಿಜೇಶ್‌ ಸಿಂಗ್‌ (20), ರಾಜ್‌ ಮಿಶ್ರಾ(21), ತುಷಾರ್‌ ಮಿಶ್ರಾ(22), ಗೌತಮ್‌ ಶೈಲೇಶ್‌ (25) ಬಂಧಿತರು.

ಬಂಧಿತರು ಉತ್ತರ ಪ್ರದೇಶ ಹಾಗೂ ಬಿಹಾರದ ವಿವಿಧ ಪ್ರದೇಶಗಳ ನಿವಾಸಿಗಳು ಎಂದು ಗೊತ್ತಾಗಿದೆ.

ADVERTISEMENT

ಠಾಣಾ ವ್ಯಾಪ್ತಿಯ ಎಲ್‌.ಆರ್‌. ನಗರದ ನಿವಾಸಿ ಸುಮಿಯಾ ಬಾನು ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

‘ದೂರುದಾರರ ಮೊಬೈಲ್‌ ಸಂಖ್ಯೆಗೆ ಅಪರಿಚಿತ ವ್ಯಕ್ತಿಯೊಬ್ಬ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಇರುವುದಾಗಿ ಸಂದೇಶ ಕಳುಹಿಸಿದ್ದ. ಕೆಲಸ ಪೂರ್ಣಗೊಳಿಸಿದರೆ ಕಮಿಷನ್‌ ಹಣ ನೀಡುವುದಾಗಿ ಹೇಳಿದ್ದ’ ಎಂದು ಪೊಲೀಸರು ಹೇಳಿದರು.

ಹೆಚ್ಚಿನ ಕಮಿಷನ್ ಆಸೆ:

ದೂರುದಾರಿಗೆ ಸೈಬರ್ ವಂಚಕರು ಕೆಲಸವೊಂದನ್ನು ನೀಡಿದ್ದರು. ದೂರುದಾರರು ಕೆಲಸ ಪೂರ್ಣಗೊಳಿಸಿದ್ದರು. ಕಮಿಷನ್‌ ಹಣ ಡ್ರಾ ಮಾಡಿಕೊಳ್ಳಲು ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದ್ದರು. ನೋಂದಣಿ ಮಾಡಿಕೊಂಡ ಬಳಿಕ ದೂರುದಾರ ಖಾತೆಗೆ ಕಮಿಷನ್‌ ರೂಪದಲ್ಲಿ ₹800 ಅನ್ನು ವಂಚಕರು ಜಮೆ ಮಾಡಿದ್ದರು. ಉಳಿದ ಹಣ ಡ್ರಾ ಮಾಡಿಕೊಳ್ಳಲು ₹8 ಸಾವಿರ ಜಮೆ ಮಾಡುವಂತೆ ಸೂಚಿಸಿದ್ದರು. ಆ ಹಣ ಜಮೆ ಮಾಡಿದ ಬಳಿಕ, ದೂರುದಾರರ ಖಾತೆಗೆ ಮತ್ತೆ ₹20 ಸಾವಿರ ಹಾಕಿದ್ದರು’ ಎಂದು ಪೊಲೀಸರು ಹೇಳಿದರು.

‘ದೂರುದಾರರಿಗೆ ಸೈಬರ್‌ ವಂಚಕರು ಆಸೆ ಹುಟ್ಟುವಂತೆ ಹಾಗೂ ನಂಬಿಕೆ ಬರುವಂತೆ ಮಾಡಿದ್ದರು.
ಸ್ಕೋರ್ ಬ್ಯಾಲೆನ್ಸ್‌ ಶೀಟ್‌ನಲ್ಲಿ ₹10,83,502 ಇರುವಂತೆ ತೋರಿಸಿದ್ದರು. ಆ ಹಣವು ಬ್ಯಾಂಕ್‌ ಖಾತೆಗೆ ಜಮೆಯಾಗಬೇಕಾದರೆ ₹5 ಲಕ್ಷ ಹಣ ಜಮೆ ಮಾಡುವಂತೆ ಸೂಚಿಸಿದ್ದರು. ಸೈಬರ್‌ ವಂಚಕರು ತಿಳಿಸಿದಂತೆ ದೂರುದಾರರು, ಅಪರಿಚಿತರ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಣ ಜಮೆ ಮಾಡಿದ್ದರು. ಇನ್ನೂ ಹೆಚ್ಚಿನ ಹಣ ಬೇಕಾದರೆ, ಮತ್ತೆ ₹3.24 ಲಕ್ಷ ಜಮೆ ಮಾಡುವಂತೆ ವಂಚಕರು ತಿಳಿಸಿದ್ದರು. ಆಗ ಅನುಮಾನಗೊಂಡು ದೂರು ನೀಡಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಪ್ರಕರಣ ದಾಖಲಿಸಿಕೊಂಡು ದೂರುದಾರರು ಹಣ ವರ್ಗಾವಣೆ ಮಾಡಿದ್ದ ಬ್ಯಾಂಕ್‌ ಖಾತೆಯ ವಿವರ ಪಡೆದು ಖಾತೆದಾರರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಆರೋಪಿಗಳ ಕೃತ್ಯ ಬಯಲಾಯಿತು’ ಎಂದು ಪೊಲೀಸರು ಹೇಳಿದರು.

ಒಂದು ಬ್ಯಾಂಕ್ ಖಾತೆಗೆ ₹20 ಸಾವಿರ ಕಮಿಷನ್

ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆ ಉತ್ತರ ಪ್ರದೇಶದ ಫೆಡರಲ್ ಬ್ಯಾಂಕ್‌ನಲ್ಲಿ ಕಾರ್ಮಿಕನೊಬ್ಬನದ್ದು ಎಂದು ಪರಿಶೀಲನೆ ವೇಳೆ ಕಂಡುಬಂದಿತ್ತು. ಆತನಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿದಾಗ ಮುಂಬೈನ ಗುತ್ತಿಗೆದಾರ (ಲೇಬರ್ ಕಂಟ್ರ್ಯಾಕ್ಟರ್‌) ಸೋನು ಎಂಬಾತ ಕಾರ್ಮಿಕನ ವೈಯಕ್ತಿಕ ದಾಖಲೆ ಪಡೆದು ಬ್ಯಾಂಕ್‌ ಖಾತೆ ತೆರೆದಿದ್ದು ಗೊತ್ತಾಗಿತ್ತು. ಪಾಸ್‌ಬುಕ್ ಸೇರಿ ಬ್ಯಾಂಕ್ ದಾಖಲಾತಿಗಳು ಆತನ ವಶದಲ್ಲಿರುವ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ವಿಶೇಷ ತಂಡವು ಮುಂಬೈಗೆ ತೆರಳಿ ಸೋನು ಎಂಬಾತನನ್ನು ವಶಕ್ಕೆ ಪಡೆದುಕೊಂಡಿತು ಎಂದು ಮೂಲಗಳು ತಿಳಿಸಿವೆ.

‘ಸೋನು ತನ್ನ ಬಳಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಬ್ಯಾಂಕ್ ಖಾತೆಗಳ ವಿವರವನ್ನು ಉತ್ತರ ಪ್ರದೇಶದ ರಾಜ್ ಮಿಶ್ರಾ ಸೇರಿ ಮೂವರು ಅರೋಪಿಗಳಿಗೆ ನೀಡಿ ಕಮಿಷನ್ ರೂಪದಲ್ಲಿ ಹಣ ಪಡೆಯುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ರಾಜ್‌ ಮಿಶ್ರಾ ನೀಡಿದ ಮಾಹಿತಿ ಆಧರಿಸಿ ಪ್ರಯಾಗರಾಜ್‌ನಲ್ಲಿ 10 ಮಂದಿಯನ್ನು ಬಂಧಿಸಲಾಯಿತು. ರಾಷ್ಟ್ರೀಕೃತ ಬ್ಯಾಂಕ್ ಖಾತೆಯ ವಿವರ ನೀಡಿದರೆ ₹18 ಸಾವಿರದಿಂದ ₹20 ಸಾವಿರ (ಒಂದು ಖಾತೆಗೆ) ಹಾಗೂ ಸ್ಥಳೀಯ ಬ್ಯಾಂಕ್ ಖಾತೆ ವಿವರ ನೀಡಿದರೆ ₹3 ಸಾವಿರವನ್ನು ಸೈಬರ್ ವಂಚಕರು ನೀಡುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

400 ಸಿಮ್‌, 140 ಎಟಿಎಂ ಕಾರ್ಡ್‌ ಜಪ್ತಿ

ಆರೋಪಿಗಳಿಂದ 400 ಸಿಮ್‌ ಕಾರ್ಡ್‌, 140 ಎಟಿಎಂ ಕಾರ್ಡ್‌ಗಳು, 17 ಚೆಕ್‌ಬುಕ್, 27 ಮೊಬೈಲ್‌ ಫೋನ್‌, ವಿವಿಧ ಬ್ಯಾಂಕ್‌ಗಳ 27 ಪಾಸ್‌ಬುಕ್‌, ಆದಾಯ ಹಾಗೂ ಖರ್ಚುವೆಚ್ಚು ನಮೂದಿಸಿದ್ದ ಸ್ಲೈರಲ್‌ ಬೈಂಡ್‌ ಪುಸ್ತಕ, ₹15 ಸಾವಿರ ನಗದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.