ADVERTISEMENT

ಕ್ಷೇತ್ರ ಮರುವಿಂಗಡಣೆ | ಅನ್ಯಾಯದ ವಿರುದ್ಧ ಒಟ್ಟಾಗಬೇಕು: ಡಿ.ಕೆ.ಶಿವಕುಮಾರ್ ಕರೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 16:16 IST
Last Updated 22 ಮಾರ್ಚ್ 2025, 16:16 IST
<div class="paragraphs"><p>ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಡಿ.ಕೆ.ಶಿವಕುಮಾರ್‌ ಮಾತನಾಡಿದರು</p></div>

ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಡಿ.ಕೆ.ಶಿವಕುಮಾರ್‌ ಮಾತನಾಡಿದರು

   

ಚೆನ್ನೈ/ಬೆಂಗಳೂರು: ‘ಕೇಂದ್ರ ಸರ್ಕಾರವು ಜನಸಂಖ್ಯೆಯನ್ನು ಮಾತ್ರ ಆಧಾರವಾಗಿರಿಸಿಕೊಂಡು ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಗೆ ಮುಂದಾಗಿದೆ. ಇದರಿಂದ ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಗೂ ಅನ್ಯಾಯವಾಗುತ್ತದೆ. ಇದರ ವಿರುದ್ಧ ನಾವೆಲ್ಲರೂ ಒಟ್ಟಾಗಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದರು.

ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡಣೆ ಮತ್ತು ಹಿಂದಿ ಹೇರಿಕೆ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಸಂಘಟಿಸಿರುವ ‘ಜಂಟಿ ಕ್ರಿಯಾ ಸಮಿತಿ’ಯ ಮೊದಲ ಸಭೆ ಚೆನ್ನೈನಲ್ಲಿ ನಡೆಯಿತು. ಕರ್ನಾಟಕ ಸರ್ಕಾರದ ಪರವಾಗಿ ಡಿ.ಕೆ.ಶಿವಕುಮಾರ್ ಅವರು ಸಭೆಯಲ್ಲಿ ಭಾಗಿಯಾಗಿದ್ದರು.

ADVERTISEMENT

‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಕ್ಷಿಣ ಭಾರತದ ರಾಜ್ಯಗಳ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗುವುದಿಲ್ಲ ಎಂದು ಅರ್ಧಸತ್ಯವನ್ನಷ್ಟೇ ಹೇಳುತ್ತಿದ್ದಾರೆ. ನಮ್ಮ ಸಂಖ್ಯೆ ಕಡಿಮೆಯಾಗುವುದಿಲ್ಲ, ಆದರೆ ಉತ್ತರದ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುತ್ತದೆ. ಪರಿಣಾಮವಾಗಿ ಲೋಕಸಭೆಯಲ್ಲಿ ನಮ್ಮ ಪ್ರಾತಿನಿಧ್ಯದ ಪ್ರಮಾಣ ಕುಸಿಯುತ್ತದೆ. ನಮ್ಮ ದನಿಗೆ ಬೆಲೆಯೇ ಇಲ್ಲದಂತಾಗುತ್ತದೆ. ಈ ಸತ್ಯವನ್ನು ನಾವು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ದಕ್ಷಿಣ ಭಾರತದ ಇತರ ರಾಜ್ಯಗಳು ಭಾರತದ ಪ್ರಗತಿಯಲ್ಲಿ ಗಣನೀಯ ಕೊಡುಗೆ ನೀಡಿವೆ. ಈ ರಾಜ್ಯಗಳು ಶಿಕ್ಷಣ, ಆರೋಗ್ಯ ಸುಧಾರಣೆ, ಸುಸ್ಥಿರ ಅಭಿವೃದ್ಧಿ ಮತ್ತು ಜನಸಂಖ್ಯೆ ನಿಯಂತ್ರಣದಲ್ಲಿ ಗಣನೀಯ ಪ್ರಗತಿ ಸಾಧಿಸಿವೆ. ಜನಸಂಖ್ಯೆ ನಿಯಂತ್ರಣ ಮಾಡಿದ್ದನ್ನೇ ಬಳಸಿಕೊಂಡು ನಮ್ಮ ರಾಜ್ಯಗಳನ್ನು ಶಿಕ್ಷಿಸಲಾಗುತ್ತಿದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು’ ಎಂದು ಆಗ್ರಹಿಸಿದರು.

‘ದಕ್ಷಿಣ ಭಾರತದ ರಾಜ್ಯಗಳಂತೆಯೇ ಪಂಜಾಬ್‌ ಮತ್ತು ಒಡಿಶಾ ಮೇಲೂ ಕೇಂದ್ರವು ದಬ್ಬಾಳಿಕೆ ನಡೆಸುತ್ತಿದೆ. ಈ ಕಾರಣದಿಂದಲೇ ಆ ರಾಜ್ಯದ ನಾಯಕರೂ ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ಹೋರಾಟವನ್ನು ಅತ್ಯಂತ ವ್ಯವಸ್ಥಿತವಾಗಿ ಸಂಘಟಿಸಿ, ಗುರಿ ಮುಟ್ಟಿಸಬೇಕು’ ಎಂದರು.

‘ಅನ್ಯಾಯವಲ್ಲ ಲೂಟಿ’

‘ಕೇಂದ್ರ ಸರ್ಕಾರವು ದಕ್ಷಿಣದ ರಾಜ್ಯಗಳನ್ನು ತನ್ನ ಎಟಿಎಂನಂತೆ ಬಳಸಿಕೊಳ್ಳುತ್ತಿದೆ. ಈವರೆಗೂ ಕೇಂದ್ರವು ತೆರಿಗೆ ಪಾಲು ಹಂಚಿಕೆಯಲ್ಲಿ ನಮಗೆ ಅನ್ಯಾಯ ಮಾಡುತ್ತಿದೆ ಎನ್ನುತ್ತಿದ್ದೆವು. ಅದು ಬರಿ ಅನ್ಯಾಯವಲ್ಲ ಲೂಟಿ. ಕೇಂದ್ರವು ದಕ್ಷಿಣದ ರಾಜ್ಯಗಳನ್ನು ಲೂಟಿ ಹೊಡೆಯುತ್ತಿದೆ. ಇದರ ವಿರುದ್ಧವೂ ಹೋರಾಟ ಸಂಘಟಿಸುವ ತುರ್ತು ಇದೆ’ ಎಂದು ಶಿವಕುಮಾರ್ ಕಳವಳ ವ್ಯಕ್ತಪಡಿಸಿದರು.

‘ಕರ್ನಾಟಕವು ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ₹4 ಲಕ್ಷ ಕೋಟಿ ನೀಡುತ್ತದೆ. ಆದರೆ ನಮಗೆ ವಾಪಸ್‌ ಬರುವುದು ₹45000 ಕೋಟಿ ಮಾತ್ರ. ನಾವು ನೀಡುವ ಪ್ರತಿ ಒಂದು ರೂಪಾಯಿಗೆ ವಾಪಸ್‌ ಸಿಗುತ್ತಿರುವುದು 13 ಪೈಸೆ ಮಾತ್ರ. ಇದು ವ್ಯವಸ್ಥಿತ ಲೂಟಿ. ಸಂಸತ್ತಿನಲ್ಲಿ ನಮ್ಮ ಪ್ರಾತಿನಿಧ್ಯ ಇನ್ನಷ್ಟು ಕಡಿಮೆಯಾದರೆ ಈ ಲೂಟಿ ಮತ್ತಷ್ಟು ಹೆಚ್ಚುತ್ತದೆ’ ಎಂದರು.

‘ಇದು ಕೇವಲ ಹಣಕಾಸಿನ ಲೆಕ್ಕಾಚಾರವಲ್ಲ. ಬದಲಿಗೆ ನಮ್ಮ ಸಂಸ್ಕೃತಿ–ಜೀವನದ ರಕ್ಷಣೆಯ ಹೋರಾಟ. ಕೇಂದ್ರವು ರೈಲ್ವೆ ಚಿಹ್ನೆಯಿಂದ ಆರಂಭಿಸಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಹಿಂದಿ ಹೇರಿಕೆ ಮಾಡುತ್ತಿದೆ. ಆ ಮೂಲಕ ನಮ್ಮ ಸಂಸ್ಕೃತಿಗಳನ್ನು ತುಳಿಯುತ್ತಿದೆ. ಕೇಂದ್ರದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು ನಮ್ಮ ಭಾಷೆಗಳಲ್ಲೂ ನಡೆಯುವಂತೆ ಮಾಡಬೇಕು’ ಎಂದು ಕರೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.