ADVERTISEMENT

ಕನ್ನಡಕ್ಕೆ ವಿರೋಧವಿಲ್ಲ–ಹಿಂದಿ ಹೇರಿಕೆಯೂ ಅಲ್ಲ: ಕೇಂದ್ರ ಸಚಿವ ಸದಾನಂದಗೌಡ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 9:20 IST
Last Updated 15 ಸೆಪ್ಟೆಂಬರ್ 2019, 9:20 IST
   

ಬೆಂಗಳೂರು: ‘ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಹಿಂದಿ ದಿವಸ್‌ ಆಚರಣೆ ಹಿನ್ನೆಲೆಯಲ್ಲಿ ದೇಶಕ್ಕೆ ಏಕ ಭಾಷೆ ಇರಬೇಕು ಎಂದು ಹೇಳಿದ್ದಾರೆ. ಅವರು ಕನ್ನಡ ವಿರೋಧಿ ಎಂದು ಅರ್ಥವಲ್ಲ, ಹಿಂದಿ ಹೇರಿಕೆಯ ಉದ್ದೇಶವೂ ಅದರಲ್ಲಿಲ್ಲ’ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕನ್ನಡ ಭಾಷೆ ಉಳಿಸಿ, ಬೆಳೆಸಲು ನಾನು ಬದ್ಧನಾಗಿದ್ದೇನೆ. ನಾನು ಕನ್ನಡದ ಪರವಾಗಿದ್ದೇನೆ. ನಾನು ಸಹಿ ಮಾಡುವುದು ಕೂಡ ಕನ್ನಡದಲ್ಲಿಯೇ’ ಎಂದು ಹೇಳಿದರು.

‘ಪ್ರಾದೇಶಿಕ ಭಾಷೆಗೆ ಪ್ರಾಧಾನ್ಯತೆ ನೀಡಬೇಕು. ಆಗ ಮಾತ್ರ ಸಂಸ್ಕೃತಿ ಉಳಿಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತ್ರಿಭಾಷಾ ಸೂತ್ರಕ್ಕೆ ನಮ್ಮ ಒಪ್ಪಿಗೆ ಇದೆ’ ಎಂದು ಹೇಳಿದರು.

‘ಗ್ರಾಮೀಣ ಬ್ಯಾಂಕ್‌ ಮತ್ತು ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿಯೂ ಕನ್ನಡ ಬಳಕೆ ಅನುಷ್ಠಾನಗೊಳಿಸಲಾಗಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕೂಡ ಸ್ಪಷ್ಟಪಡಿಸಿದ್ದಾರೆ’ ಎಂದು ಸದಾನಂದಗೌಡ ಹೇಳಿದರು.

ಅಮಿತ್‌ ಶಾ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸದಾನಂದಗೌಡ, ‘ಹಿಂದಿ ಹೇರಿಕೆಯ ಪ್ರಶ್ನೆ ಇಲ್ಲ ಎಂದು ಹಲವು ಬಾರಿ ಹೇಳಲಾಗಿತ್ತು. ಆದರೂ, ಸಿದ್ದರಾಮಯ್ಯ ಈ ವಿಷಯವನ್ನು ಎತ್ತಿಕೊಂಡಿದ್ದಾರೆ. ಸ್ವಂತ ಕ್ಷೇತ್ರ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡಿರುವ ಸಿದ್ದರಾಮಯ್ಯ ಅವರು, ಪ್ರತಿಪಕ್ಷ ನಾಯಕ ಸ್ಥಾನ ಪಡೆಯಲು ಸೋನಿಯಾ ಗಾಂಧಿಯವರ ಭೇಟಿಗೆ ಹೋಗಿ ಬಂದಿದ್ದಾರೆ. ಅವರ ಗಮನ ಸೆಳೆಯಲು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದರು.

ಎಲ್ಲದಕ್ಕೂ ಅಪಾರ್ಥ ಸರಿಯಲ್ಲ

ಒಕ್ಕಲಿಗರ ಓಲೈಕೆಗಾಗಿ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಮಾದರಿಯಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಸದಾನಂದ ಗೌಡ, ‘ಎಲ್ಲದಕ್ಕೂ ಅಪಾರ್ಥ ಕಲ್ಪಿಸುವುದು ಸರಿಯಲ್ಲ. ಕೆಂಪೇಗೌಡರು ಕೇವಲ ಒಕ್ಕಲಿಗರ ನಾಯಕರಲ್ಲ. ಒಕ್ಕಲಿಗ ಜಾತಿಯಲ್ಲಿ ಹುಟ್ಟಿದರೂ ಅವರು ಎಲ್ಲ ಸಮುದಾಯಕ್ಕೆ ಸೇರಿದ ನಾಯಕ. ಎಲ್ಲವನ್ನೂ ಕ್ಷುಲ್ಲಕವಾಗಿ ನೋಡುವ ಕಾಂಗ್ರೆಸ್‌ನವರಿಗೆ ದೇವರೇ ಬುದ್ಧಿ ಹೇಳಬೇಕು’ ಎಂದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.