ADVERTISEMENT

ಚಿನ್ನ ಬಚ್ಚಿಟ್ಟು ತರಲು ಯೂಟ್ಯೂಬ್‌ ನೋಡಿದ ರನ್ಯಾ ರಾವ್‌

ದುಬೈ ವಿಮಾನ ನಿಲ್ದಾಣದಲ್ಲಿ ನಟಿಗೆ ಚಿನ್ನದ ಬಿಸ್ಕತ್‌ ನೀಡಿದ ವ್ಯಕ್ತಿ

ಕೆ.ಎಸ್.ಸುನಿಲ್
Published 13 ಮಾರ್ಚ್ 2025, 23:30 IST
Last Updated 13 ಮಾರ್ಚ್ 2025, 23:30 IST
<div class="paragraphs"><p>ರನ್ಯಾ ರಾವ್‌</p></div>

ರನ್ಯಾ ರಾವ್‌

   

ಬೆಂಗಳೂರು: ‘ದುಬೈನಿಂದ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದು ಇದೇ ಮೊದಲು. ಈ ಹಿಂದೆ ಇಂತಹ ಕೃತ್ಯದಲ್ಲಿ ಭಾಗಿಯಾಗಿಲ್ಲ. ಚಿನ್ನವನ್ನು ಕದ್ದುಮುಚ್ಚಿ ತರುವುದು ಹೇಗೆ ಎಂಬುದನ್ನು ಯೂಟ್ಯೂಬ್ ವಿಡಿಯೊ ನೋಡಿ ಕಲಿತೆ’ ಎಂದು ನಟಿ ರನ್ಯಾ ರಾವ್ ಅವರು ‌ವಿಚಾರಣೆ ವೇಳೆ ತಿಳಿಸಿದ್ದಾರೆ.

‘ಎರಡು ವಾರಗಳಿಂದ ವಿದೇಶಿ ಸಂಖ್ಯೆಗಳಿಂದ ಅಪರಿಚಿತ ಕರೆಗಳು ಬರುತ್ತಿದ್ದವು. ಖಾಸಗಿತನ ಕಾಪಾಡಿಕೊಳ್ಳುವ ಉದ್ದೇಶದಿಂದ ಈ ವಿಷಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಿಲ್ಲ. ಮಾರ್ಚ್‌ 1ರಂದು ಕರೆ ಮಾಡಿದ ವ್ಯಕ್ತಿಯಿಂದ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3ರ ಗೇಟ್ ‘ಎ’ನಿಂದ ಚಿನ್ನ ಸಂಗ್ರಹಿಸಿ, ಬೆಂಗಳೂರಿಗೆ ತಲುಪಿಸುವಂತೆ ಸೂಚನೆ ಬಂತು’ ಎಂದು ನಟಿ ಹೇಳಿದ್ದಾರೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಆರ್‌ಐ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಚಿನ್ನ ಕಳ್ಳಸಾಗಣೆ ಕುರಿತು ನಟಿ ಅಧಿಕಾರಿಗಳಿಗೆ ನೀಡಿರುವ ಮಾಹಿತಿಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಕರೆ ಮಾಡಿದ ವ್ಯಕ್ತಿ ಯಾರು ಎಂಬುದು ಸ್ಪಷ್ಟವಾಗಿ ಗೊತ್ತಿಲ್ಲ. ಆತ ಅಮೆರಿಕನ್‌–ಆಫ್ರಿಕನ್ ಶೈಲಿಯಲ್ಲಿ ಮಾತನಾಡುತ್ತಿದ್ದ. ಆರು ಅಡಿಗೂ ಎತ್ತರದ ಶ್ವೇತ ವಸ್ತ್ರಧಾರಿ ವ್ಯಕ್ತಿ ದುಬೈ ವಿಮಾನ ನಿಲ್ದಾಣದಲ್ಲಿ 17 ಚಿನ್ನದ ಬಿಸ್ಕತ್‌ ಇರುವ ಎರಡು  ಬಾಕ್ಸ್‌ ನೀಡಿದ. ಇದನ್ನು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರಗೆ ಹೋದ ಮೇಲೆ ಸರ್ವಿಸ್ ರಸ್ತೆಯಲ್ಲಿ ನಿಂತಿರುವ ಆಟೊದಲ್ಲಿರುವ ವ್ಯಕ್ತಿಗೆ ನೀಡುವಂತೆ ಹೇಳಿ ಹೊರಟು ಹೋದ. ಆದರೆ ಆಟೊ ನೋಂದಣಿ ಸಂಖ್ಯೆ ನೀಡಿರಲಿಲ್ಲ. ನನಗೆ ಅಪರಿಚಿತ ವ್ಯಕ್ತಿಯಿಂದ ಚಿನ್ನ ಸಂಗ್ರಹಿಸಿ, ಮತ್ತೊಬ್ಬರಿಗೆ ತಲುಪಿಸುವಂತೆ ಸೂಚನೆ ನೀಡಲಾಗಿತ್ತು’ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.‌

‘ನಾನು ಶೌಚಾಲಯಕ್ಕೆ ತೆರಳಿ, ಚಿನ್ನದ ಬಿಸ್ಕತ್‌ಗಳನ್ನು ದೇಹದ ಸುತ್ತ, ಶೂ ಮತ್ತು ಜೀನ್ಸ್‌ ಪಾಕೆಟ್‌ನಲ್ಲಿ ಇರಿಸಿಕೊಂಡೆ. ಚಿನ್ನವನ್ನು ಹೇಗೆ ಹೊರಗೆ ತೆಗೆದುಕೊಂಡು ಹೋಗಬೇಕು ಎಂಬುದನ್ನು ಯೂಟ್ಯೂಬ್ ವಿಡಿಯೊ ನೋಡಿ ಕಲಿತೆ’ ಎಂದೂ ವಿವರಿಸಿದ್ದಾರೆ.

‘ದುಬೈನಿಂದ ಬೆಂಗಳೂರಿಗೆ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದು ಇದೇ ಮೊದಲು. ಈ ಮೊದಲು ದುಬೈನಿಂದ ಚಿನ್ನವನ್ನು ತಂದಿಲ್ಲ ಅಥವಾ ಖರೀದಿಸಿಲ್ಲ’ ಎಂದು ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. 

‘ನಾನು ರಿಯಲ್ ಎಸ್ಟೇಟ್ ಮತ್ತು ಛಾಯಾಗ್ರಹಣದ ಕೆಲಸಕ್ಕಾಗಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದೆ.  ಯುರೋಪ್, ಅಮೆರಿಕ, ಆಫ್ರಿಕಾ ಮತ್ತು ಮಧ್ಯಪ್ರಾಚ್ಯಕ್ಕೆ ಹಲವಾರು ಸಂದರ್ಭಗಳಲ್ಲಿ ಪ್ರಯಾಣಿಸಿದ್ದೇನೆ’ ಎಂದು ಮಾಹಿತಿ ನೀಡಿದ್ದಾರೆ. 

ಚಿನ್ನ ಸಾಗಣೆಗೆ ಪೂರ್ವ ತಯಾರಿ

ವಿಮಾನ ನಿಲ್ದಾಣದಲ್ಲಿ ಕತ್ತರಿ ತೆಗೆದುಕೊಂಡು ಹೋದರೆ ಸಿಕ್ಕಿಬೀಳಬಹುದೆಂಬ ಕಾರಣಕ್ಕೆ ಬೆಂಗಳೂರು ವಿಮಾನ ನಿಲ್ದಾಣದ ಅರ್ಧ ಕಿಲೋ ಮೀಟರ್ ದೂರದಲ್ಲಿರುವ ಸ್ಟೇಷನರಿ ಅಂಗಡಿಯಲ್ಲಿ ನಟಿ ರನ್ಯಾ ಅವರು ಕ್ರೇಪ್ ಬ್ಯಾಂಡೇಜ್ ಖರೀದಿಸಿದ್ದರು. ವಿಮಾನ ನಿಲ್ದಾಣ ಪ್ರವೇಶಿಸುವ ಮೊದಲೇ ಅದನ್ನು ತುಂಡು ತುಂಡಾಗಿ ಕತ್ತರಿಸಿ ಬ್ಯಾಗ್‌ನಲ್ಲಿ ಇಟ್ಟುಕೊಂಡು ಹೋಗಿದ್ದರು. ಚಿನ್ನ ಸಾಗಣೆಗೆ ಪೂರ್ವ ತಯಾರಿ ಮಾಡಿಕೊಂಡಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಸರ್ಕಾರದಿಂದ ಯಾರದ್ದೋ ರಕ್ಷಣೆ: ಪ್ರಲ್ಹಾದ ಜೋಶಿ

ಹುಬ್ಬಳ್ಳಿ: ‘ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದ ರನ್ಯಾ ರಾವ್‌ ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸದ ರಾಜ್ಯ ಸರ್ಕಾರ ಯಾರನ್ನೋ ರಕ್ಷಿಸಲು ಯತ್ನಿಸುತ್ತಿದೆ ಎಂಬಂತೆ ತೋರುತ್ತದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

‘ಪ್ರಕರಣದಲ್ಲಿ ರಾಜಕಾರಣಿಗಳು, ಸಚಿವರು ಭಾಗಿಯಾದ ಬಗ್ಗೆ ವರದಿಗಳಿದ್ದು, ಇದು ದೇಶದ್ರೋಹದ ಕೆಲಸ. ಚಿನ್ನ ಎಲ್ಲಿಂದ ಬಂದು, ಎಲ್ಲಿಗೆ ಹೋಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಹಣ ದೇಶವಿರೋಧಿ ಕೃತ್ಯಗಳಿಗೆ ಅಥವಾ ನಕ್ಸಲ್‌ ಚಟುವಟಿಕೆಗೆ ಹೋಗುತ್ತಿತ್ತಾ ಎಂಬುದು ಕೂಡ ಸ್ಪಷ್ಟವಿಲ್ಲ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

‘ಪ್ರಕರಣವನ್ನು ಸಿಐಡಿ ತನಿಖೆಗೆ ಕೊಡಲಾಗಿದೆಯೇ ಅಥವಾ ಇಲ್ಲವೇ ಎಂಬುದು ಕೂಡ ಸ್ಪಷ್ಟವಿಲ್ಲ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನಿಷ್ಪಕ್ಷಪಾತ ತನಿಖೆ ನಡೆಸಬೇಕು’ ಎಂದರು.

‘ನಾನೇ ಸಿಎಂ’ ಎನ್ನುವ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾನೇ ಇರ್ತಿನಿ ಎನ್ನುವುದೇ ದೊಡ್ಡ ವಿಷಯ. ಡಿ.ಕೆ ಶಿವಕುಮಾರ್ ಮತ್ತು ಅವರ ಬೆಂಬಲಿಗರು ಇದನ್ನು ಹೇಳಬೇಕು. ನೀವೇ ಇರಬೇಕು ಎನ್ನುವುದು ನಮ್ಮ ಆಶಯ. ಚೆನ್ನಾಗಿ ಕೆಲಸ ಮಾಡಿ, ಲೂಟಿ‌ ಮಾಡಬೇಡಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.