ADVERTISEMENT

Honey Trap | ಮಧುಬಲೆ: ಹೈಕಮಾಂಡ್‌ ಗರಂ, ಖರ್ಗೆ-ಸಿಎಂ ರಹಸ್ಯ ಚರ್ಚೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 0:30 IST
Last Updated 24 ಮಾರ್ಚ್ 2025, 0:30 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು</p></div>

ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು

   

ಬೆಂಗಳೂರು: ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಮತ್ತು ವಿಧಾನ ಪರಿಷತ್‌ ಸದಸ್ಯರೂ ಆಗಿರುವ ಅವರ ಮಗ ಕೆ. ರಾಜೇಂದ್ರ ಅವರನ್ನು ‘ಮಧುಬಲೆ’ಗೆ (ಹನಿಟ್ರ್ಯಾಪ್‌) ಕೆಡವಲು ಯತ್ನಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಹೈಕಮಾಂಡ್‌ ಮಧ್ಯಪ್ರವೇಶ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಭೇಟಿಯಾಗಿ ಈ ಕುರಿತು ರಹಸ್ಯ ಚರ್ಚೆ ನಡೆಸಿದರು.

ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪವಾದ ಬಳಿಕ ಕಾಂಗ್ರೆಸ್‌ ನಾಯಕರ ಮಧ್ಯೆ ತೀವ್ರ ವಾಕ್ಸಮರ ನಡೆಯುತ್ತಿದೆ. ಪ್ರಕರಣದ ಕುರಿತು ರಾಷ್ಟ್ರವ್ಯಾಪಿ ಚರ್ಚೆ ನಡೆಯುತ್ತಿದೆ. ಪಕ್ಷದ ಪ್ರಭಾವಿ ನಾಯಕರೊಬ್ಬರು ತಮ್ಮದೇ ಪಕ್ಷದ ನೇತೃತ್ವದ ಸರ್ಕಾರದಲ್ಲಿನ ಸಚಿವರು, ಅವರ ಕುಟುಂಬದ ಸದಸ್ಯರನ್ನು ಹನಿಟ್ರ್ಯಾಪ್‌ಗೆ ಬೀಳಿಸಲು ಯತ್ನಿಸಿದ್ದರು ಎಂಬ ಆರೋಪ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದೆ.

ADVERTISEMENT

ದೆಹಲಿಯಿಂದ ಬೆಂಗಳೂರಿಗೆ ಮರಳಿದ್ದ ಖರ್ಗೆ ಅವರು ಮುಖ್ಯಮಂತ್ರಿಯವರ ಅಧಿಕೃತ ನಿವಾಸಕ್ಕೆ ಭಾನುವಾರ ಬೆಳಿಗ್ಗೆಯೇ ಬಂದರು. ಸಚಿವ ಪ್ರಿಯಾಂಕ್‌ ಖರ್ಗೆ ಜೊತೆಗಿದ್ದರು. ಉಭಯ ಕುಶಲೋಪರಿ ಬಳಿಕ ಉಭಯ ನಾಯಕರು, ಕೊಠಡಿಯೊಂದರಲ್ಲಿ ಕುಳಿತು ಸುಮಾರು ಅರ್ಧ ಗಂಟೆ ರಹಸ್ಯ ಸಮಾಲೋಚನೆ ನಡೆಸಿದರು.

ಅಸಮಾಧಾನದ ಸಂದೇಶ:

‘ಈ ಪ್ರಕರಣದಲ್ಲಿ ರಾಜಣ್ಣ ಮತ್ತು ರಾಜೇಂದ್ರ ಅವರು ನೀಡಿದ್ದ ಮಾಹಿತಿಗಳನ್ನು ಸಿದ್ದರಾಮಯ್ಯ ಅವರು ಖರ್ಗೆ ಅವರೊಂದಿಗೆ ಹಂಚಿಕೊಂಡಿದ್ದಾರೆ. ರಾಜಕೀಯ ಮೇಲುಗೈಗಾಗಿ ನಡೆಸುತ್ತಿರುವ ಇಂತಹ ಪ್ರಯತ್ನಗಳು ಸರ್ಕಾರ, ಪಕ್ಷದ ವರ್ಚಸ್ಸಿಗೆ ಹಾನಿ ಮಾಡುತ್ತಿವೆ ಎಂದು ಎಐಸಿಸಿ ಅಧ್ಯಕ್ಷರಿಗೆ ತಿಳಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಹೈಕಮಾಂಡ್‌ ಮಟ್ಟದಲ್ಲಿ ಈ ಬಗ್ಗೆ ನಡೆದ ಚರ್ಚೆ, ವ್ಯಕ್ತವಾದ ಅಭಿಪ್ರಾಯಗಳನ್ನು ಖರ್ಗೆಯವರು ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ. ಕರ್ನಾಟಕದಲ್ಲಿನ ಬೆಳವಣಿಗೆಗಳಿಂದ ಕಾಂಗ್ರೆಸ್‌ ಪಕ್ಷಕ್ಕೆ ರಾಷ್ಟ್ರ ಮಟ್ಟದಲ್ಲಿ ಹಾನಿಯಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ವಿಷಯವು ವಿಧಾನಸಭೆಯಲ್ಲಿ ಪ್ರಸ್ತಾಪ ಆಗಿರುವುದು ಹಾಗೂ ಆ ನಂತರದಲ್ಲಿ ಪ್ರಕರಣವನ್ನು ನಿರ್ವಹಿಸುವಲ್ಲಿ ಸರ್ಕಾರದ ಹಂತದಲ್ಲಿ ಲೋಪಗಳಾಗಿವೆ ಎಂಬ ಅಸಮಾಧಾನವನ್ನು ಖರ್ಗೆ ವ್ಯಕ್ತಪಡಿಸಿದ್ದಾರೆ. ಆರಂಭಿಕ ಹಂತದಲ್ಲೇ ಮಧ್ಯಪ್ರವೇಶಿಸಿ, ಕ್ರಮ ಕೈಗೊಳ್ಳಬೇಕಿತ್ತು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

ದೂರು ಆಧರಿಸಿ ಕ್ರಮಕ್ಕೆ ಸೂಚನೆ:

‘ರಾಜಣ್ಣ ಮತ್ತು ಅವರ ಮಗ ನೀಡುವ ದೂರು ಆಧರಿಸಿ ತಕ್ಷಣವೇ ತನಿಖೆಗೆ ಆದೇಶಿಸಬೇಕು. ಹನಿಟ್ರ್ಯಾಪ್‌ನಂತಹ ಗಂಭೀರ ಆರೋಪಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಮೃದು ಧೋರಣೆ ತಳೆದಿದ್ದೇವೆ ಎಂಬ ಆರೋಪಕ್ಕೆ ಗುರಿಯಾಗುವುದು ಬೇಡ. ಸಮಗ್ರವಾಗಿ ತನಿಖೆ ನಡೆಸಿ. ಈ ಸಂಚಿನ ಹಿಂದೆ ಯಾರಿದ್ದಾರೆ? ಯಾವ ಉದ್ದೇಶಕ್ಕಾಗಿ ಮಾಡಿದ್ದಾರೆ ಎಂಬ ಸತ್ಯ ಹೊರಗೆ ಬರಲಿ. ಈ ವಿಷಯದಲ್ಲಿ ಯಾವ ಒತ್ತಡಕ್ಕೂ ಮಣಿಯುವುದು ಬೇಡ’ ಎಂಬುದಾಗಿ ಖರ್ಗೆ ಅವರು ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಪ್ರಕರಣವನ್ನು ವಿರೋಧಪಕ್ಷಗಳು ಪ್ರಬಲ ಅಸ್ತ್ರವಾಗಿಸಿಕೊಂಡು ವಿಧಾನಸಭೆ ಕಲಾಪದ ವೇಳೆ ಸರ್ಕಾರ ಮತ್ತು ಪಕ್ಷವನ್ನು ಇಕಟ್ಟಿಗೆ ಸಿಲುಕಿಸಿದ್ದು, ಇದರಿಂದ ಸಾರ್ವಜನಿಕವಾಗಿ ಸರ್ಕಾರ ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗಿದೆ ಎಂಬ ಅಭಿಪ್ರಾಯವೂ ಮಾತುಕತೆ ವೇಳೆ ವ್ಯಕ್ತವಾಯಿತು ಎಂದು ಮೂಲಗಳು ಹೇಳಿವೆ.

ಖರ್ಗೆ ನಿವಾಸಕ್ಕೆ ಹೊರಟಿದ್ದ ಸಿದ್ದರಾಮಯ್ಯ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಬಂದಿರುವುದು ತಿಳಿಯುತ್ತಿದ್ದಂತೆಯೇ ಅವರ ಮನೆಗೆ ಹೋಗಿ ಪ್ರಕರಣದ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದರು. ಭೇಟಿಗಾಗಿ ಮನೆಗೆ ಬರುತ್ತಿರುವುದಾಗಿ ಖರ್ಗೆ ಅವರಿಗೆ ಭಾನುವಾರ ಬೆಳಿಗ್ಗೆಯೇ ದೂರವಾಣಿ ಕರೆಮಾಡಿ ತಿಳಿಸಿದ್ದರು.

‘ಮೊಣಕಾಲಿನ ನೋವು ಇರುವ ಕಾರಣದಿಂದ ನೀವು ಬರುವುದು ಬೇಡ. ನಾನೇ ನಿಮ್ಮ ಮನೆಗೆ ಬರುತ್ತೇನೆ. ಅಲ್ಲಿಯೇ ಚರ್ಚೆ ಮಾಡೋಣ ಎಂದು ಖರ್ಗೆಯವರು ಮುಖ್ಯಮಂತ್ರಿಯವರಿಗೆ ತಿಳಿಸಿದರು. ಬಳಿಕ ಸಿ.ಎಂ ಮನೆಗೆ ಬಂದು ಚರ್ಚಿಸಿದರು’ ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅವರನ್ನೇ ಕೇಳಿ: ಡಿಕೆಶಿ

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ಕೆ.ಎನ್‌. ರಾಜಣ್ಣ ಭೇಟಿ ಮಾಡಿದ್ದರ ಬಗ್ಗೆ ನನ್ನನ್ನೇಕೆ ಕೇಳುತ್ತೀರಿ? ಆ ಬಗ್ಗೆ ಸಿದ್ದರಾಮಯ್ಯ ಅವರನ್ನೇ ಕೇಳಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸುದ್ದಿಗಾರರ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದರು.

‘ಮಧುಬಲೆ’ ಯತ್ನ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದ್ದಕ್ಕೆ ಹೈಕಮಾಂಡ್‌ ಸಿಟ್ಟಾಗಿದೆಯಂತಲ್ಲಾ’ ಎಂದು ಪ್ರಶ್ನಿಸಿದಾಗ, ‘ಯಾರು ಸಿಟ್ಟಾಗಿದ್ದಾರೆ? ನಿಮಗೆ ಯಾರು ಹೇಳಿದ್ದು? ಇವೆಲ್ಲವೂ ಬೋಗಸ್‌. ಕೆಲವರು ಸುಮ್ಮನೆ ಸುಳ್ಳುಸುದ್ದಿ ಸೃಷ್ಟಿಸುತ್ತಿದ್ದಾರೆ’ ಎಂದರು.

‘ಹನಿಟ್ರ್ಯಾಪ್‌ ಯತ್ನದ ಬಗ್ಗೆ ನಿಮ್ಮಲ್ಲಿರುವ ಮಾಹಿತಿ ನೀಡಿ, ಪರಿಶೀಲಿಸುತ್ತೇವೆ ಎಂದು ರಾಜಣ್ಣಗೆ ಕೇಳಿದ್ದೆ. ಅವರು, ‘ನನ್ನ ಬಳಿ ಏನೂ ಇಲ್ಲ’ ಎಂದರು. ಅವರು ಇನ್ನೂ ಏನೇನೋ ಹೇಳಿದ್ದಾರೆ. ಅವನ್ನೆಲ್ಲಾ ನಿಮ್ಮ ಮುಂದೆ ಹೇಳಲಾಗದು. ನಿಮ್ಮದು ಏನಾದರೂ ಇದ್ದರೆ ದೂರು ನೀಡಿ ಎಂದು ಹೇಳಿದ್ದೇನೆ. ಅವರು ಕೋಲಾರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಆರೋಗ್ಯ ವಿಚಾರಿಸಲು ಬಂದಿದ್ದೆ’

ಮುಖ್ಯಮಂತ್ರಿ ಅವರ ನಿವಾಸದಿಂದ ಹೊರಬಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ, ‘ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ’ ಎಂದರು.

‘ಅವರಿಗೆ ಮೊಣಕಾಲು ನೋವು ಇತ್ತು. ಈಗ ಹೇಗಿದೆ ಎಂದು ವಿಚಾರಿಸಿದೆ. ಬೇಗ ಗುಣಮುಖರಾಗಿ ಎಂದು ಹಾರೈಸಿದೆ’ ಎಂದರು.

‘ಮಧುಬಲೆ’ ಯತ್ನ ಪ್ರಕರಣದ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

‘ಹನಿಟ್ರ್ಯಾಪ್‌ ಮುಜುಗರದ ವಿಚಾರ’

‘ಹನಿಟ್ರ್ಯಾಪ್‌ ಯತ್ನ ಮುಜುಗರ ತರುವ ವಿಚಾರ. ಎಲ್ಲರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದರೆ ನಾನೂ ಸೇರಿಕೊಂಡಂತಾಯಿತಲ್ವಾ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಭೇಟಿಯ ನಂತರ ಹೊರಬಂದ ಅವರನ್ನು ಸುದ್ದಿಗಾರರು, ‘ಹನಿಟ್ರ್ಯಾಪ್‌ಗೆ ಕೆಡವುವ ಯತ್ನದ ಆರೋಪದಿಂದ ಸರ್ಕಾರಕ್ಕೆ ಮುಜುಗರವಾಗಿದೆಯೇ’ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರಿಯಾಂಕ್‌, ‘ಮುಜರವಾಗುತ್ತದೆ ಎಂದು ನಾನೇ ಒಪ್ಪಿಕೊಂಡಿದ್ದೇನಲ್ಲಾ. ಎಲ್ಲರನ್ನೂ ಸೇರಿಸಿ ಹೇಳಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಮತ್ತು ಎಐಸಿಸಿ ಅಧ್ಯಕ್ಷರು ಸೇರಿದಾಗ ಸಹಜವಾಗಿ ರಾಜಕೀಯದ ಬಗ್ಗೆ ಮಾತನಾಡಿರುತ್ತಾರೆ. ಏನು ಮಾತನಾಡಿದರು ಎಂಬುದನ್ನು ಅವರೇ ಹೇಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.