ADVERTISEMENT

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹಿನ್ನೆಲೆ; ಅರ್ಜಿ ಕರೆಯದೇ 70 ಸಾಧಕರಿಗೆ ಗೌರವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಅಕ್ಟೋಬರ್ 2025, 20:23 IST
Last Updated 30 ಅಕ್ಟೋಬರ್ 2025, 20:23 IST
   

ಬೆಂಗಳೂರು: ಸಮಾಜವಾದಿ ಹೋರಾಟಗಾರ ಕೋಣಂದೂರು ಲಿಂಗಪ್ಪ, ಪೌರ ಕಾರ್ಮಿಕ ಮಹಿಳೆ ಫಕೀರಿ, 103 ವರ್ಷದ ಸೂಲಗಿತ್ತಿ ಈರಮ್ಮ, ನಟ ಪ್ರಕಾಶ್ ರಾಜ್, ಸಾಹಿತಿಗಳಾದ ರಾಜೇಂದ್ರ ಚೆನ್ನಿ, ರಹಮತ್‌ ತರೀಕೆರೆ, ಯಕ್ಷಗಾನ ಕ್ಷೇತ್ರದ ಕೆ.ಪಿ. ಹೆಗಡೆ ಹಾಗೂ ಏರ್ ಮಾರ್ಷಲ್ ಫಿಲಿಪ್ ರಾಜಕುಮಾರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 70 ಸಾಧಕರು 2025-26ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿಗೆ ಅರ್ಹರಾದವರ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಗುರುವಾರ ಪ್ರಕಟಿಸಿದರು.

ಚೌಡಿಕೆ ವಾದಕ ಬಸಪ್ಪ ಭರಮಪ್ಪ ಚೌಡ್ಕಿ, ಡೊಳ್ಳು ಕಲಾವಿದ ಬಿ. ಟಾಕಪ್ಪ ಕಣ್ಣೂರು, ದೈವಾರಾಧನೆಯ ಹಾಡುಗಳಲ್ಲಿ ಪ್ರಸಿದ್ಧರಾದ ಸಿಂಧು ಗುಜರನ್,ನಂದಿಧ್ವಜ ಕಲಾವಿದ ಎಲ್‌. ಮಹಾದೇವಪ್ಪ ಉಡಿಗಾಲ, ಕಥೆಗಾರ ತುಂಬಾಡಿ ರಾಮಯ್ಯ, ಭರತನಾಟ್ಯ ನಟುವಾಂಗ ಕಲಾವಿದ ಕೆ. ರಾಮಮೂರ್ತಿ ರಾವ್‌, ನಟಿ ವಿಜಯಲಕ್ಷ್ಮಿ ಸಿಂಗ್‌, ನಟ ನಿರ್ದೇಶಕ ಮೈಮ್ ರಮೇಶ್‌, ಶಿಕ್ಷಣ ಕ್ಷೇತ್ರದಿಂದ ಎಂ.ಆರ್. ಜಯರಾಮ್ ಅವರೂ ಪಟ್ಟಿಯಲ್ಲಿದ್ದಾರೆ.

ADVERTISEMENT

ಪ್ರಶಸ್ತಿಗೆ ಆಯ್ಕೆಯಾದವರಲ್ಲಿ 13 ಮಂದಿ ಮಹಿಳಾ ಸಾಧಕರಿದ್ದಾರೆ. ಪ್ರಶಸ್ತಿಯು ₹5 ಲಕ್ಷ ನಗದು, 25 ಗ್ರಾಂ ಚಿನ್ನ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ನ. 1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

‘ರಾಜ್ಯೋತ್ಸವ ಪ್ರಶಸ್ತಿಗೆ ಪ್ರತಿ ವರ್ಷ ಅರ್ಜಿ ಆಹ್ವಾನಿಸಲಾಗುತ್ತಿತ್ತು. ಆದರೆ, ಈ ಬಾರಿ ಅರ್ಜಿ ಆಹ್ವಾನಿಸಿಲ್ಲ. ಆಯ್ಕೆ ಸಮಿತಿ ಅರ್ಹ ಸಾಧಕರನ್ನು ಗುರುತಿಸಿದೆ. ಮೊದಲ‌ ಬಾರಿಗೆ ಅರ್ಜಿ ಕರೆಯದೆ ಒಟ್ಟು 70 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.‌ ಈ ಪೈಕಿ‌ ಕೆಲವರು ಸ್ವಯಂ ಮನವಿ ನೀಡಿದ್ದರು. ಅಂಥವರು ಪ್ರಶಸ್ತಿಗೆ ಅರ್ಹರಿದ್ದ ಕಾರಣ‌‌ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ತಂಗಡಗಿ ತಿಳಿಸಿದರು.

‘ಇದೇ ಮೊದಲ ಬಾರಿಗೆ ಸಮಗಾರ ಹರಳಯ್ಯ ಸಮುದಾಯಕ್ಕೆ ಸೇರಿದ ಇಬ್ಬರು ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೊದಲೇ ನಿರ್ಧರಿಸಿದಂತೆ‌ ಈ ಬಾರಿ‌ ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ. ಆಯ್ಕೆ ಮಾಡುವ ಸಂದರ್ಭದಲ್ಲಿ ಜಿಲ್ಲಾವಾರು ಪರಿಗಣಿಸಲಾಗಿದೆ. ಜೊತೆಗೆ, ಸಾಮಾಜಿಕ ನ್ಯಾಯವನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಆಯ್ಕೆ ಸಲಹಾ ಸಮಿತಿ ಶಿಫಾರಸು ಮಾಡಿದ್ದ ಬಹುತೇಕ‌‌ರನ್ನು ಆಯ್ಕೆ ಮಾಡಲಾಗಿದೆ. ನಾಲ್ಕೈದು‌ ಬಾರಿ‌ ಸಭೆ ನಡೆಸಿ ಅರ್ಹರ ಹೆಸರು ಅಂತಿಮಗೊಳಿಸಲಾಗಿದೆ’ ಎಂದರು.

***ಪ್ರಶಸ್ತಿ ಪುರಸ್ಕೃತರ ಹೆಸರು ಹಾಗೂ ಹಿನ್ನೆಲೆ***

ಜಾನಪದ ಕ್ಷೇತ್ರ

1. ಬಸಪ್ಪ ಬರಮಪ್ಪ ಚೌಡ್ಕಿ : ಇವರು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತೆಗ್ಗಿಹಾಳ ಗ್ರಾಮದವರಾದ ಇವರಿಗೆ 92 ವರ್ಷದವರಾಗಿರುತ್ತಾರೆ. ವಂಶ ಪಾರಂಪರ್ಯವಾಗಿ ಬಂದ ಚೌಡಿಕೆ ಪದಗಳನ್ನು ಕರಗತ ಮಾಡಿಕೊಂಡ ಇವರು ಬಾಲ್ಯದಿಂದಲೇ ಹಾಡುತ್ತಾ, ತುಂತುಣಿ ವಾದ್ಯಗಳನ್ನು ನುಡಿಸುತ್ತಾ, ಮೂಲ ಚೌಡಿಕೆ ಪದಗಳನ್ನು ಉಳಿಸಿ ಬೆಳೆಸುತ್ತಾ ಬಂದಿರುತ್ತಾರೆ. ಚೌಡಕಿ ಪದಗಳಲ್ಲದೇ, ಗೀಗೀ ಪದ, ರಿವಾಯತ್‌ ಪದ, ತತ್ವ ಪದ, ಶ್ರೀ ಕೃಷ್ಣ ಪಾರಿಜಾತದಲ್ಲಿ ರಾದೆಯಾಗಿ ಅಲ್ಲದೇ ನೂರು ಸಣ್ಣಾಣಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಹಲವಾರು ಸಂಘ ಸಂಸ್ಥೆಗಳು ಇವರ ಕಲಾ ಸೇವೆಯನ್ನು ಗುರತಿಸಿ ಗೌರವಿಸಿರುತ್ತಾರೆ.

2. ಬಿ. ಟಾಕಪ್ಪ ಕಣ್ಣೂರು: ಇವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಣ್ಣೂರು ಗ್ರಾಮದಲ್ಲಿ ಜನಿಸಿದರು. 75 ವರ್ಷ ವಯಸ್ಸಾಗಿದ್ದು, ಕೃಷಿ ಕುಟುಂಬದವರಾದ ಇವರು ಜಾನಪದ ಕಲೆಯನ್ನು ಬಾಲ್ಯದಲ್ಲಿಯೇ ಮೈಗೂಡಿಸಿಕೊಂಡು ಬೆಳೆದವರು. ವಿಶೇಷವಾಗಿ ಡೊಳ್ಳು ಕಲೆಯನ್ನು ಬಾಲ್ಯದಲ್ಲಿಯೇ ಕಲಿತು ಈ ಕಲೆಯಲ್ಲಿ ಪರಿಣಿತರಾಗಿದ್ದಾರೆ. ಸುಮಾರು 500 ಕ್ಕೂ ಹೆಚ್ಚು ಕಲಾವಿದರಿಗೆ ಡೊಳ್ಳು ತರಬೇತಿ ನೀಡಿ ಹಲವಾರು ಕಲಾವಿದರನ್ನು ರೂಪಿಸಿರುತ್ತಾರೆ. ಸದರಿಯವರು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕಲಾಸೇವೆ ಮಾಡಿರುತ್ತಾರೆ. ಇವರಿಗೆ ಅನೇಕ ಪ್ರಶಸ್ತಿಗಳು ಸಂದಿರುತ್ತವೆ. ಇವರು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ.

3. ಸಣ್ಣನಿಂಗಪ್ಪ ಸತ್ತೆಪ್ಪಾ ಮುಶನ್ನಗೋಳ: ಇವರು ಬೆಳಗಾವಿ ಜಿಲ್ಲೆಯಲ್ಲಿ ಜನಿಸಿದ ಇವರಿಗೆ 75 ವರ್ಷ. ಬಾಲ್ಯದಲ್ಲಿಯೇ ಡೊಳ್ಳಿನ ಹಾಡುಗಳನ್ನು ಹಾಡುತ್ತಾ ಬೆಳೆದವರು. ಡೊಳ್ಳಿನ ಹಾಡಿನ ಮೂಲಕ ಪ್ರಸಿದ್ದರಾದ ಇವರು ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಹಾಗೂ ಹಲವಾರು ಜನಪ್ರಿಯ ವೇದಿಕೆಗಳಲ್ಲಿ ಕಲಾ ಪ್ರದರ್ಶನ ನೀಡಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ಇವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಹಲವಾರು ಸಂಘ ಸಂಸ್ಥೆಗಳು ಇವರ ಕಲಾ ಸೇವೆಯನ್ನು ಗುರತಿಸಿ ಗೌರವಿಸಿರುತ್ತಾರೆ.

4. ಹನುಮಂತಪ್ಪ ಮಾರಪ್ಪ ಚೀಳಂಗಿ : ಇವರು ಚಿತ್ರದುರ್ಗ ಜಿಲ್ಲೆಯಲ್ಲಿ 1947 ರಲ್ಲಿ ಜನಿಸಿದರು. ಕಡು ಬಡತನದಲ್ಲಿ ಬೆಳೆದ ಇವರು ವಂಶ ಪಾರಂಪರ್ಯವಾಗಿ ಬಂದ ಉರುಮೆ, ಕಹಳೆ ಕಲೆಯನ್ನು ತಂದೆಯಿಂದ ಬಳುವಳಿಯಾಗಿ ಪಡೆದು ಸುಮಾರು 60 ವರ್ಷಗಳಿಂದ ಕಲಾ ಸೇವೆ ತೊಡಗಿಕೊಂಡಿರುತ್ತಾರೆ. ಕರ್ನಾಟಕ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್‌ ನಿಂದ ಲೋಕಸಿರಿ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಹಲವಾರು ಸಂಘ ಸಂಸ್ಥೆಗಳು ಇವರ ಕಲಾ ಸೇವೆಯನ್ನು ಗುರತಿಸಿ ಗೌರವಿಸಿರುತ್ತಾರೆ.

5. ಎಂ. ತೋಪಣ್ಣ : ಇವರು ಕೋಲಾರ ಜಿಲ್ಲೆಯಲ್ಲಿ ಜನಿಸಿದ ಇವರಿಗೆ 63 ವರ್ಷ ವಯಸ್ಸು, ಕೀಲುಕುದುರೆ, ಗಾರುಡಿ ಗೊಂಬೆ, ಜಾನಪದ ನೃತ್ಯ ಕಲಾ ಸೇವೆಯನ್ನು ಬಾಲ್ಯದಲ್ಲಿಯೇ ರೂಡಿಸಿಕೊಂಡು ಬೆಳೆದವರು. ಇವರು ಕಲೆಯನ್ನು ವಿವಿಧ ಸಂಘಟನೆಗಳು ಆಯೋಜಿಸುವ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ್ದಾರೆ. ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಆಯೋಜಿಸುವ ಸರ್ಕಾರದ ಕಾರ್ಯಕ್ರಮಗಳಲ್ಲಿ ಕಲಾ ಪ್ರದರ್ಶನ ನೀಡಿರುತ್ತಾರೆ, ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್‌ ನಿಂದ ಲೋಕಸಿರಿ ಪ್ರಶಸ್ತಿ ಹಲವಾರು ಸಂಘ ಸಂಸ್ಥೆಗಳು ಇವರ ಕಲಾ ಸೇವೆಯನ್ನು ಗುರತಿಸಿ ಗೌರವಿಸಿರುತ್ತಾರೆ.

6. ಸೋಮಣ್ಣ ದುಂಡಪ್ಪ ಧನಗೊಂಡ: ಇವರು ವಿಜಯಪುರ ಜಿಲ್ಲೆಯ ಬಿಜ್ಜರಗಿಯವರಾದ ಇವರು 65 ವರ್ಷದವರಾಗಿದ್ದು, ಇವರು ಡೊಳ್ಳಿನ ಹಾಡುಗಳನ್ನು ಮತ್ತು ಡೊಳ್ಳು ಕುಣಿತ ಜಾನಪದ ಕಲೆಯನ್ನು ಮೈಗೂಡಿಕೊಂಡು ಬೆಳೆದವರು. ಜಾನಪದ ಕಲಾವಿದರಾದ ಇವರು ಅನೇಕ ಕಲಾವಿದರಿಗೆ ತರಬೇತಿ ನೀಡಿ ಕಲಾವಿದರನ್ನು ಬೆಳೆಸಿದ್ದಾರೆ. ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್‌ ನಿಂದ ಲೋಕಸಿರಿ ಪ್ರಶಸ್ತಿ ಹಲವಾರು ಸಂಘ ಸಂಸ್ಥೆಗಳು ಇವರ ಕಲಾ ಸೇವೆಯನ್ನು ಗುರತಿಸಿ ಗೌರವಿಸಿರುತ್ತಾರೆ.‌

7. ಸಿಂಧು ಗುಜರನ್: ಇವರು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ. 75 ವಯಸ್ಸಿನವರಾಗಿದ್ದು, ದೈವಾರಾದನೆ ಸಂಬಂಧಿಸಿದ ಹಾಡುಗಳನ್ನು ಬಾಲ್ಯದಲ್ಲಿಯೇ ಕಲೆತು ಕಲೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡಿದ್ದಾರೆ. ದೈವಾರಾದನೆಯ ಅನ್ಣಪ್ಪ ಪಂಜುರ್ಲಿ, ಕೋಟಿ ಚೆನ್ನಯ್ಯ, ನಡಿಬೆಟ್ಟು ಜಮಾದಿ, ಪಡುಬಿದ್ರಿ ಪಡ್ಡಯ್ಯ ಮುಂತಾದ ದೈವಾರಾದನೆಯ ಹಾಡುಗಳಲ್ಲಿ ಪ್ರಸಿದ್ದರು. ಇವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ, ಹಲವಾರು ಸಂಘ ಸಂಸ್ಥೆಗಳು ಇವರ ಕಲಾ ಸೇವೆಯನ್ನು ಗುರತಿಸಿ ಗೌರವಿಸಿರುತ್ತಾರೆ.‌

8. ಎಲ್‌ ಮಹಾದೇವಪ್ಪ ಉಡಿಗಾಲ: ಇವರು ಚಾಮರಾಜ ನಗರ ಜಿಲ್ಲೆಯಲ್ಲಿ ಜನಿಸಿದವರಾಗಿದ್ದು, 80ರ ಇಳಿ ವಯಸ್ಸಿನಲ್ಲಿಯೂ ಕೂಡ ಇವರು ನಂದಿಧ್ವಜ ಜಾನಪದ ಕಲೆಯಲ್ಲಿ ಪರಿಣಿತರಾಗಿದ್ದಾರೆ. ಶಿವಭಕ್ತರಲ್ಲಿ ನಂದಿ ಧ್ವಜಕ್ಕೆ ಮಹತ್ವದ ನಂಬಿಕೆಯಿದ್ದು, ಸದರಿ ಕಲೆಯನ್ನು ಧಾರ್ಮಿಕವಾಗಿಯೂ ಕೂಡ ಉಪಯೋಗಿಸಿಕೊಂಡು ಬಂದಿರುತ್ತಾರೆ. ಅನೇಕ ಕಲಾವಿದರಿಗೆ ಕಲಾ ತರಬೇತಿಯನ್ನು ನೀಡಿದ್ದಾರೆ. ಮೈಸೂರು ದಸರಾ, ರಾಜ್ಯೋತ್ಸವ ಮುಂತಾದ ಅನೇಕ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಹಲವಾರು ಸಂಘ ಸಂಸ್ಥೆಗಳು ಇವರ ಕಲಾ ಸೇವೆಯನ್ನು ಗುರತಿಸಿ ಗೌರವಿಸಿರುತ್ತಾರೆ.

ಕ್ಷೇತ್ರ : ಸಾಹಿತ್ಯ

1. ಪ್ರೊ.ರಾಜೇಂದ್ರ ಚೆನ್ನಿ: ಇವರು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ನಾಗರಗಾಳಿಯಲ್ಲಿ ಜನಿಸಿದ ಇವರು 1955 (70) ವರ್ಷದವರಾಗಿದ್ದು, ಸಾಹಿತ್ಯದ ಸ್ನಾತಕೋತ್ತರ ಪದವಿಗಳಲ್ಲಿ ಪ್ರಥಮರಾಗಿ ತೇರ್ಗಡೆಗೊಂಡು ಚಿನ್ನದ ಪದಕ ಪುರಸ್ಕೃತರಾಗಿದ್ದು, ಕನ್ನಡ, ಹಿಂದಿ, ಇಂಗ್ಲೀಷ್‌ ಮತ್ತು ಫ್ರೆಂಚ್‌ ಭಾಷೆಗಳಲ್ಲಿ ಓದುವ , ಮಾತನಾಡುವ ಸಾಮರ್ಥ್ಯವುಳ್ಳರಾಗಿದ್ದು, ಕುವೆಂಪು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್‌ ಪ್ರಾದ್ಯಪಕರಾಗಿ ಸೇವೆ ಸಲ್ಲಿಸಿದ್ದಾರೆ. ವಿಚಾರ ಗೋಷ್ಠಿಗಳು, ಕನ್ನಡ ವಿಮರ್ಶೆ ಹಾಗೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿವೆ.

2. ತುಂಬಾಡಿ ರಾಮಯ್ಯ : ಇವರು ತುಮಕೂರು ಜಿಲ್ಲೆಯ ಕೊರಟಗೆರೆಯವರಾಗಿದ್ದು, 72 ವರ್ಷ ವಯಸ್ಸಿನ ತುಂಬಾಡಿ ರಾಮಯ್ಯನವರು ತಮ್ಮ ಶಿಕ್ಷಣವನ್ನು ತುಂಬಾಡಿಯಲ್ಲಿ ಪೂರೈಸಿ, ಸ್ನಾತಕೋತ್ತರ ಪದವಿ ಪಡೆದವರಾಗಿದ್ದಾರೆ. ಕಾರ್ಮಿಕ ನಿರೀಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಇವರು ಕತೆಗಾರರಾಗಿಸಾಹಿತ್ಯ ಸೇವೆಯನ್ನು ಆರಂಭಿಸಿದರು. ಪರಿಶಿಷ್ಟ ಜಾತಿಯ ಮಾದಿಗ ಸಮುದಾಯಕ್ಕೆ ಸೇರಿದವರಾಗಿದ್ದ ಇವರು ಸೃಜನಶೀಲ ಸಾಹಿತ್ಯವನ್ನು ರಚಿಸಿಕೊಂಡು ಬಂದಿರುತ್ತಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

3. ಪೊ. ಆರ್. ಸುನಂದಮ್ಮ : ಚಿಕ್ಕಬಳ್ಳಾಪುರ ಜಿಲ್ಲೆಯ ವರಾದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

4. ಡಾ. ಹೆಚ್. ಎಲ್. ಪುಷ್ಪ : ತುಮಕೂರು ಜಿಲ್ಲೆಯವರಾದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಲೇಖಕಿಯರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

5. ರೆಹಮತ್ ತರೀಕೆರೆ : ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ 1959ರಲ್ಲಿ ಜನಿಸಿದವರಾಗಿದ್ದು 66 ವರ್ಷ, ಇವರು ಕಡು ಬಡತನದಲ್ಲಿ ಓದಿ ಬೆಳೆದವರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಶಿವಮೊಗ್ಗ ಸಹ್ಯಾದ್ರಿ ಕಾಲೇಜಿಲ್ಲಿ ಉಪನ್ಯಾಸಕರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯವನ್ನು ಓದಿಕೊಂಡು ಬೆಳೆದ ಇವರು ಕನ್ನಡ ಸಾಹಿತ್ಯದಲ್ಲಿಯೇ ಹೆಸರು ಮಾಡಿದವರು. ಸಂಶೋಧನೆ, ವಿಮರ್ಶೆ ಚಿಂತನಾ ಕೃತಿಗಳು, ಸಂಪಾದನೆ ಮುಂತಾದ ಕೃತಿಗಳನ್ನು ರಚಿಸುವ ಮೂಲಕ ಸಾಹಿತ್ಯ ಕೃಷಿ ಮಾಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

6. ಹ.ಮ ಪೂಜಾರ್: ವಿಜಯಪುರ ಜಿಲ್ಲೆಯವರಾದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಕ್ಷೇತ್ರ : ಸಂಗೀತ

1. ದೇವೇಂದ್ರ ಕುಮಾರ ಪತ್ತಾರ : ಕೊಪ್ಪಳ ಜಿಲ್ಲೆಯ ಯಲಬುರಗ ತಾಲ್ಲೂಕಿನ ಮುಧೋಳ ತಾಲೂಕಿನಲ್ಲಿ 1955ರಲ್ಲಿ ಜನಿಸಿದ್ದು, ಇವರಿಗೆ 70 ವರ್ಷ ವಯಸ್ಸಾಗಿರುತ್ತದೆ. ಸದರಿಯವರು ಡಾ.ಪಂ. ಪುಟ್ಟರಾಜ ಗವಾಯಿಗಳ ಶಿಷ್ಯರಾದ ಇವರು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಹಾಗೂ ಸುಗಮ ಸಂಗೀತವನ್ನು ಗ್ವಾಲಿಯರ್‌ ಗರಾಣ ಪದ್ಧತಿಯಲ್ಲಿ ಕಲಿತಿರುತ್ತಾರೆ.ಆಕಾಶವಾಣಿಯ ಧಾರವಾಡ-ಕಲಬುರಗಿ ಕೇಂದ್ರದ ʼಬಿʼ ಹೈಗ್ರೇಡ್‌ ಕಲಾವಿದರಾಗಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದು, ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿಯವರ ಹೆಸರಿನಲ್ಲಿ ಸಂಗೀತ ಶಾಲೆಯನ್ನು ಆರಂಭಿಸಿ ನೂರಾರು ವಿದ್ಯಾರ್ಥಿಗಳಿಗೆ ಉಚಿತ ಸಂಗೀತ ತರಬೇತಿ ನೀಡುತ್ತಾ ಬಂದಿರುತ್ತಾರೆ. ಇವರಿಗೆ ಕರ್ನಾಟಕ ಕಲಾಶ್ರೀ ಪುರಸ್ಕಾರ, ಶ್ರೀ ಗುರು ಪುಟ್ಟರಾಜ ಸನ್ಮಾನ ಪುರಸ್ಕಾರ ಇನ್ನೂ ಹಲವಾರು ಪ್ರಶಸ್ತಿ, ಸನ್ಮಾನಗಳಿಗೆ ಭಾಜನರಾಗಿರುತ್ತಾರೆ.

2. ಮಡಿವಾಳಯ್ಯ ಸಾಲಿ: ಬೀದರ್‌ ಜಿಲ್ಲೆಯ ಉಮನಾಬಾದ ತಾಲೂಕಿನ ಸಾಲಿಗ್ರಾಮದವರಾದ ಇವರು 1955ರಲ್ಲಿ ಜನಿಸಿದರು. ಇವರಿಗೆ 70 ವರ್ಷ ವಯಸ್ಸಾಗಿರುತ್ತದೆ. ಸದರಿಯವರು ಚಂದ್ರಪ್ಪ ಪಾಂಚಾಳ ಸಿದ್ರಾಮಪ್ಪ ಅಲ್ಲೂರ ಅವರಿಂದ ಪ್ರಾಥಮಿಕ ತಬಲ ಶಿಕ್ಷಣ ಪಡೆದ ಇವರು ಸುಮಾರು 40ಕ್ಕೂ ಹೆಚ್ಚು ಜನರಿಗೆ ತಬಲ ವಾದನ ಶಿಕ್ಷಣ ನೀಡಿರುತ್ತಾರೆ. ನಾಡಿನ ಅನೇಕ ಹಿರಿಯ-ಕಿರಿಯ ಕಲಾವಿದರಿಗೆ ತಬಲಾ ಸಾಥ್‌ ನೀಡಿದ್ದು, ಪಂ.ಬಸವರಾಜ ರಾಜಗುರು, ಪಂ.ಗಣಪತಿಭಟ್ಟ ಹಾಸನಗಿ, ಪಂ.ಇಂದೂದರ ನಿರೋಡಿ, ಪಂ.ರಾಜಶೇಖರ ಮನ್ಸೂರ ಇನ್ನೂ ಮುಂತಾದ ವಿದ್ವಾಂಸರ ಸಂಗೀತ ಕಚೇರಿಗಳಿಗೆ ತಬಲಾ ವಾದನ ಸಾಥ್‌ ನೀಡಿರುತ್ತಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ನಮ್ಮ ಸಾಧಕರು ಪ್ರಶಸ್ತಿ ನೀಡಿ ಗೌರವಿಸಿದೆ. ಶ್ರೀ ಗುರು ಪುಟ್ಟರಾಜ ಸಂಗೀತ ಸಭಾ, ಮೈಸೂರು ಇವರಿಂದ ಪಂ.ಕೆ.ಎಸ್‌.ಹಡಪದ ಪ್ರಶಸ್ತಿ ಇನ್ನೂ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ.

ಕ್ಷೇತ್ರ : ನೃತ್ಯ

1. ಪ್ರೊ. ಕೆ.ರಾಮಮೂರ್ತಿ ರಾವ್‌ : ಮೈಸೂರು ಜಿಲ್ಲೆಯವರಾದ ಇವರು 1955ರಲ್ಲಿ ಜನಿಸಿದ್ದು, ಇವರಿಗೆ 70 ವರ್ಷ ವಯಸ್ಸಾಗಿರುತ್ತದೆ. ಭರತನಾಟ್ಯ ನಟುವಾಂಗ ಕಲಾವಿದರಾದ ಇವರು ಹಲವಾರು ಪ್ರಖ್ಯಾತ ಭರತನಾಟ್ಯ ಕಲಾವಿದರ ನೃತ್ಯಕ್ಕೆ ನಟುವಾಂಗ ಸಹಕಾರ ನೀಡಿರುತ್ತಾರೆ. ಪ್ರಜಾವಾಣಿಯಲ್ಲಿ 10 ವರ್ಷಗಳ ಕಾಲ ಕಲಾವಿಮರ್ಶಕ ಅಂಕಣಕಾರರಾಗಿ ಸೇವೆ ಸಲ್ಲಿಸಿದ್ದು, 800ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರು ಬರೆದ ನಾಟ್ಯ ಸರಸ್ವತಿ ಜಟ್ಟಿ ತಾಯಮ್ಮ ಎಂಬ ಪುಸ್ತಕವನ್ನು ಸಂಗೀತ ನೃತ್ಯ ಅಕಾಡೆಮಿ ಪ್ರಕಟಿಸಿದೆ. ಅಂಕಣ ಬರಹಗಳ ಸಂಗ್ರಹ ʼಕಲಾಚಿಂತನೆʼ 2009ರಲ್ಲಿ ಪ್ರಕಟವಾಗಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನೀಡುವ ಗೌರವ ಪ್ರಶಸ್ತಿ ಇನ್ನೂ ಮುಂತಾದ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

ಚಲನಚಿತ್ರ / ಕಿರುತೆರೆ

1. ಪ್ರಕಾಶ್‌ ರಾಜ್: ದಕ್ಷಿಣ ಕನ್ನಡ ಜಿಲ್ಲೆಯವರಾದ ಇವರು ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ನಟಿಸಿರುತ್ತಾರೆ.

2. ವಿಜಯಲಕ್ಷ್ಮಿ ಸಿಂಗ್‌ : ಬೆಂಗಳೂರಿನವರಾದ ಇವರು 1960ರಲ್ಲಿ ಜನಿಸಿದ್ದು, ಇವರಿಗೆ 65 ವರ್ಷ ವಯಸ್ಸಾಗಿರುತ್ತದೆ. ಸದರಿಯವರು 48 ವರ್ಷಗಳಿಂದ ನಟಿಯಾಗಿ ಸೇವೆ ಸಲ್ಲಿಸುತ್ತಿದ್ದು, ಸುಮಾರು 60 ಚಿತ್ರಗಳಲ್ಲಿ ನಟಿಸಿರುತ್ತಾರೆ. ಧರಣೀಮಂಡಲ ಮಮ್ಮೊಳಗೆ, ಪಿತಾಮಹ, ವೀರ ಪರಂಪರೆ, ರಾಜಕುಮಾರ, ಬೆಂಕಿಯಲ್ಲಿ ಅರಳಿದ ಹೂವು ಇನ್ನೂ ಮುಂತಾದ ಚಿತ್ರಗಳಲ್ಲಿ ನಟಿಸಿರುತ್ತಾರೆ. ನಿರ್ಮಾಪಕಿಯಾಗಿ ಸುಮಾರು 25 ಚಿತ್ರಗಳಲ್ಲಿ ನಿರ್ಮಿಸಿರುತ್ತಾರೆ. ಅಲ್ಲದೆ ಈ ಬಂಧನ, ಮಳೆ ಬರಲಿ ಮಂಜು ಇರಲಿ ವಾರೆವಾ ಇತ್ಯಾದಿ ಚಿತ್ರಗಳಿಗೆ ನಿರ್ದೇಶನ ನೀಡಿರುತ್ತಾರೆ. ಮುಂಗಾರಿನ ಮಿಂಚು ಚಲನಚಿತ್ರಕ್ಕೆ ರಾಷ್ಟ್ರಪ್ರಶಸ್ತಿ, ಕುರಿಗಳು ಸಾರ್‌ ಕುರಿಗಳು ಚಲನಚಿತ್ರಕ್ಕೆ ರಾಜ್ಯಪ್ರಶಸ್ತಿ, ಕೋತಿಗಳು ಸಾರ್‌ ಕೋತಿಗಳು ಚಲನಚಿತ್ರಕ್ಕೆ ರಾಜ್ಯಪ್ರಶಸ್ತಿ ಹಾಗೂ ಫಿಲಂ ಫೇರ್‌ ಪ್ರಶಸ್ತಿ, ಇತ್ಯಾದಿ ಪ್ರಶಸ್ತಿಗಳು ಸಂದಿರುತ್ತವೆ.

ಕ್ಷೇತ್ರ : ಆಡಳಿತ

1. ಹೆಚ್. ಸಿದ್ದಯ್ಯ ಭಾ.ಆ.ಸೇ (ನಿ):ಬೆಂಗಳೂರು ದಕ್ಷಿಣ ಜಿಲ್ಲೆಯವರಾದ ಇವರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ದಕ್ಷ ಆಡಳಿತಗಾರರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.

ಕ್ಷೇತ್ರ : ವೈದ್ಯಕೀಯ

1. ಡಾ. ಆಲಮ್ಮ ಮಾರಣ್ಣ: ಇವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಇವರಿಗೆ 80 ವರ್ಷ ವಯಸ್ಸಾಗಿರುತ್ತದೆ. ಇವರು ಕನಕಪುರದ ಐಪಿಪಿ ಆಸ್ಪತ್ರೆಯಲ್ಲಿ ಅನೇಕ ಕ್ಯಾನ್ಸರ್‌ ಪತ್ತೆ ಶಿಬಿರಗಳನ್ನು ಮತ್ತು ಸತತ 6 ವರ್ಷಗಳ ಕಾಲ ಡಿಹೆಚ್‌ಓಯಿಂದ ಕುಟುಂಬ ಯೋಜನೆ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಮಹಿಳೆಯರ ಆರೋಗ್ಯ ಜಾಗೃತಿ ಮತ್ತು ಸ್ವಾಸ್ತ್ಯದ ಕುರಿತು ಅನೇಕ ರೇಡಿಯೋ ಭಾಷಣಗಳು ಮತ್ತು ಟಿ.ವಿ.ಚರ್ಚಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ.

2. ಡಾ. ಜಯರಂಗನಾಥ್‌ : ಇವರು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ವಡಗೆರೆ ಗ್ರಾಮದಲ್ಲಿ ಜನಿಸಿದ್ದು, 60 ವರ್ಷ ವಯಸ್ಸಾಗಿರುತ್ತದೆ. ಸದರಿಯವರುಗುಜರಾತಿನ ಎನ್‌ಹೆಚ್‌ಎಲ್‌ ಮೆಡಿಕಲ್‌ ಕಾಲೇಜಿನಲ್ಲಿ ಜನರಲ್‌ ಮೆಡಿಷನ್‌ನಲ್ಲಿ ಅಧ್ಯಯನ ನಡೆಸಿದ್ದು, ಮುಂಬೈನ ಗ್ರಾಂಟ್‌ ಮೆಡಿಕಲ್‌ ಕಾಲೇಜು ಮತ್ತು ಜೆ.ಜೆ.ಆಸ್ಪತ್ರೆಯಲ್ಲಿ ಹೃದ್ರೋಗ ವಿಭಾಗದಲ್ಲಿ ತರಬೇತಿಯನ್ನು ಪೂರ್ಣಗೊಳಿಸಿ 1995ರಲ್ಲಿ ಬಾಂಬೆ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಸೋಧನಾ ಸಂಸ್ಥೆಯಲ್ಲಿ ಮಕ್ಕಳ ಹೃದ್ರೋಗ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 2021ರಿಂದ 2023ರವರೆಗೆ Padiatric Cordiac Socity of India ದ ಗೌರವ ಕಾರ್ಯದರ್ಶಿಯಾಗಿ ನಂತರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕ್ಷೇತ್ರ : ಸಮಾಜ ಸೇವೆ

1 ಸೂಲಗಿತ್ತಿ ಈರಮ್ಮ : ಇವರು ಓಬಳಶೆಟ್ಟಿಹಳ್ಳಿ ಗ್ರಾಮ ಕೂಡ್ಲಗಿ ತಾಲೂಕಿನ ವಿಜಯನಗರ ಜಿಲ್ಲೆಯಲ್ಲಿ ಜನಿಸಿದರು. ಇವರಿಗೆ 103 ವರ್ಷ ವಯಸ್ಸಾಗಿದ್ದು, ಕಳೆದ 70 ವರ್ಷಗಳಿಂದ ಶತಾಯುಷಿಯಾಗಿ ಸೂಲಗಿತ್ತಿಯಾಗಿ ಮನೆಮನೆಗೆ ತೆರಳಿ ಸುಮಾರು 14000ಕ್ಕೂ ಹೆಚ್ಚು ಸಹಜ ಹಾಗೂ ಸುರಕ್ಷಿತ ಹೆರಿಗೆ ಮಾಡಿಸುವ ಮೂಲಕ ಮಗು ಮತ್ತು ತಾಯಿಯ ಜೀವ ಉಳಿಸುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಎದುರಾಗುವ ವೈದ್ಯರ ಕೊರತೆಯನ್ನು ನಿಭಾಯಿಸುವಲ್ಲಿ ಇವರ ಪಾತ್ರ ಅನನ್ಯವಾದುದು.

2 ಫಕೀರಿ: ಇವರು ಬೆಂಗಳೂರಿನಲ್ಲಿ ಜನಿಸಿರುತ್ತಾರೆ. ಇವರಿಗೆ 72 ವರ್ಷ ವಯಸ್ಸಾಗಿದ್ದು ಇವರು ಪೌರ ಕಾರ್ಮಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು ವರ್ಷಗಳಿಂದ ರಸ್ತೆಗಳನ್ನು ಗುಡಿಸುವುದು, ಒಳಚರಂಡಿಗಳನ್ನು ಸ್ವಚ್ಛ ಮಾಡುವುದು ಹಾಗೂ ಬೆಂಗಳೂರಿಗೆ ಒಳಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣ ಹಗಲು ರಾತ್ರಿಯೆನ್ನದೆ ತಮ್ಮ ಜೀವನವನ್ನು ಪೌರಕಾರ್ಮಿಕ ವೃತ್ತಿಯಲ್ಲಿಯೇ ತೊಡಗಿಸಿಕೊಂಡಿರುತ್ತಾರೆ.

3 ಕೋರಿನ್‌ ಆಂಟೊನಿಯಟ್‌ ರಸ್ಕೀನಾ: ಇವರು 1963ನೇ ಇಸವಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕ್ರಿಶ್ಚಿಯನ್‌ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಇವರಿಗೆ 62 ವರ್ಷ ವಯಸ್ಸಾಗಿರುತ್ತದೆ. ಕಳೆದ 31 ವರ್ಷಗಳಿಂದ ನಿರಂತರವಾಗಿ ಕಷ್ಟ ಸ್ಥಿತಿಯಲ್ಲಿರುವ ನಿರ್ಗತಿಕರ, ಮಾನಸಿಕ ಅಸ್ವಸ್ಥರನ್ನು ಯಾವುದೇ ಜಾತಿ, ಮತ ಲಿಂಗಭೇದವಿಲ್ಲದೆ ಅರೈಕೆ ಮಾಡುತ್ತಾ ಅವರ ಬಾಳಿಗೆ ಹೊಸ ಅರ್ಥ ನೀಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಓರ್ವ ಸಂಗೀತಗಾರರು, ವಾದ್ಯಗಾರರು, ಸಂಗೀತ ಬರಹಗಾರರೂ ಆಗಿರುತ್ತಾರೆ. ಇವರ ಸೇವೆಯನ್ನು ಗುರುತಿಸಿ, 2021ರಲ್ಲಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2022ರಲ್ಲಿ ವಿಶ್ವ ಕೊಂಕಣಿ ಪ್ರಶಸ್ತಿ ಲಭಿಸಿದೆ.

4 ಡಾ. ಎನ್‌ ಸೀತಾರಾಮ ಶೆಟ್ಟಿ : ಉಡುಪಿ ಜಿಲ್ಲೆಯವರಾದ ಇವರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ.

5. ಕೋಣಂದೂರು ಲಿಂಗಪ್ಪ : ಶಿವಮೊಗ್ಗ ಜಿಲ್ಲೆಯವರಾದ ಇವರು ಉಳುವವನೇ ಹೊಲದೊಡೆಯ ಚಳುವಳಿಯ ಮೂಲಕ ಗೇಣಿದಾರರ ರೈತರಿಗೆ ಭೂ ಒಡೆತನ ಸಿಗುವಂತೆ ಮಾಡಿದ ಅಪ್ಪಟ ಸಮಾಜವಾದಿ ಹೋರಾಟಗಾರರಾಗಿರುತ್ತಾರೆ.

ಕ್ಷೇತ್ರ : ಸಂಕೀರ್ಣ

1. ಉಮೇಶ್‌ ಪಂಬದ: 31.03.1966 ಮಂಗಳೂರಿನ ಕೊಂಚಾಡಿಯಲ್ಲಿ ಜನಿಸಿದ ಇವರು ಕರಾವಳಿ ಕರ್ನಾಟಕದ ದೈವಾರಾಧನೆ ಕ್ಷೇತ್ರದಲ್ಲಿ ಹಿರಿಯರಿಂದ ಬಳುವಳಿಯಾಗಿ ಪಡೆದು ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

2. ಡಾ. ರವೀಂದ್ರ ಕೋರಿ ಶೆಟ್ಟರ್: (73) 1952ರಲ್ಲಿ ಧಾರವಾಡದಲ್ಲಿ ಜನಿಸಿದ ಇವರು ತಮ್ಮ ಉನ್ನತ ಶಿಕ್ಷಣವನ್ನು ಪುಣೆ ವಿಶ್ವವಿದ್ಯಾಲಯದಿಂದ ಪಡೆದು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಚ್ಯಾವಸ್ತು ಇತಿಹಾಸ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಭಾರತದ ಇತಿಹಾಸ ಪೂರ್ವ ಮತ್ತು ಕರ್ನಾಟಕ ಸಂಸ್ಕೃತಿಯ ಪರಂಪರೆಯನ್ನು ಗುರುತಿಸುವ ಕೆಲವೇ ಕೆಲವು ಮಹನೀರಯಲ್ಲಿ ಇವರು ಒಬ್ಬರು.

3. ಕೆ. ದಿನೇಶ್: ಬೆಂಗಳೂರು ಜಿಲ್ಲೆಯವರಾದ ಇವರು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿರುತ್ತಾರೆ.

4. ಶಾಂತರಾಜು: ತುಮಕೂರು ಜಿಲ್ಲೆಯವರಾದ ಇವರು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿರುತ್ತಾರೆ

5. ಜಾಫರ್‌ ಮೊಯಿದ್ದೀನ್: ರಾಯಚೂರು ಜಿಲ್ಲೆಯಲ್ಲಿ ಜನಿಸಿದ ಇವರು 61 ವರ್ಷದವರಾಗಿದ್ದು, ತಮ್ಮ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರೈಸಿದ ನಂತರ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯಲ್ಲಿ ಉಪ ವಾಸ್ತುಶಿಲ್ಪಿಯಾಗಿ ಸೇವೆ 1997ರಲ್ಲಿ ಸೇವೆಗೆ ರಾಜಿನಾಮೆ ನೀಡಿ ಜಾಫರ್‌ ಅಸೋಸಿಯೇಟ್ಸ್‌, ಬೆಂಗಳೂರು ಮತ್ತು ರಾಯಚೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾನವ ಹಕ್ಕುಗಳಿಗಾಗಿ ಹೋರಾಟ, ಅನೇಕ ಚಳುವಳಿಗಳಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ನಾನು ನಿರ್ದೇಶಿಸಿ ನಟಿಸಿದ "ಝಿಕ್ರ್-ಎ-ಗಾಲಿಬ್" ಅನ್ನು ಆಗಸ್ಟ್ 13, 2016 ರಂದು ದುಬೈನ ಭಾರತೀಯ ದೂತಾವಾಸದಲ್ಲಿ ಭಾರತೀಯ ಸ್ವಾತಂತ್ರ್ಯದ ಅಂಗವಾಗಿ ಪ್ರದರ್ಶಿಸಿದ್ದಾರೆ.

6. ಪೆನ್ನ ಒಬಳಯ್ಯ : 70 ವರ್ಷದವರಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಸಿಂಪಾಡಿಪುರದಲ್ಲಿ ವೀಣೆಗಳು ತಯಾರಾಗುವ ಕರ್ನಾಟಕದ ಏಕೈಕ ಊರು. ಇಲ್ಲಿ ತಯಾರಾಗುವ ವೀಣೆಗಳು ಸಂಗೀತ ವಿದ್ಯಾರ್ಥಿಗಳ ಕೈಯಲ್ಲಿ ನುಡಿಯುತ್ತಿವೆ. ತಂಜಾವೂರಿನ ವೀಣೆಗಳಿಗೆ ಇಲ್ಲದ ಎರಡು ವಿಶೇಷ ಸಿಂಪಾಡಿಪುರದ ವೀಣೆಗಳಿಗಿದೆ. ಇವುಗಳ ತಯಾರಿಕೆಯ ಯಾವ ಹಂತದಲ್ಲೂ ಯಂತ್ರಗಳ ಬಳಕೆಯಾಗುವುದಿಲ್ಲ.

7. ಪುಂಡಲೀಕ ಶಾಸ್ತ್ರೀ (ಬುಡಬುಡಕೆ) :ಬೆಳಗಾವಿ ಜಿಲ್ಲೆಯವರಾದ ಇವರು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿರುತ್ತಾರೆ.

8. ಶಾಂತಾ ಬಾಯಿ: ಬಳ್ಳಾರಿ ಜಿಲ್ಲೆಯವರಾಗಿದ್ದು, ಸಾಂಪ್ರದಾಯಿಕ ಕಸೂತಿ ಕಲೆಯಲ್ಲಿ ನಿಪುಣರಾಗಿದ್ದು, ಹಲವಾರು ಜನರಿಗೆ ಕಸೂತಿ ಕಲೆಯನ್ನು ತರಬೇತಿ ನೀಡಿರುತ್ತಾರೆ.

ಕ್ಷೇತ್ರ : ಹೊರನಾಡು-ಹೊರದೇಶ‌

1. ಜಕರಿಯ ಬಜಪೆ (ಸೌದಿ): ಹೊರದೇಶ ಸೌದಿಯಲ್ಲಿ ನೆಲೆಸಿರುವ ಇವರು ಸೌದಿಯಲ್ಲಿ ಕನ್ನಡದ ಕಂಪನ್ನು ಹರಡಿರುತ್ತಾರೆ. 

2. ಪಿ.ವಿ. ಶೆಟ್ಟಿ (ಮುಂಬೈ): ಇವರಿಗೆ 62 ವರ್ಷ ವಯಸ್ಸಾಗಿದ್ದು ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಸದರಿಯವರು ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಎಂ.ಬಿ.ಬಿ.ಎಸ್‌ ಪದವಿ ಪಡೆದಿರುತ್ತಾರೆ. ಇವರು ವೈದ್ಯಕೀಯ ವ್ಯವಹಾರ, ಕ್ರೀಡೆ, ಸಮಾಜಸೇವೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಬಹುಮುಖಿ ಕೊಡುಗೆಗಳನ್ನು ನೀಡಿರುವ ವಿಶಿಷ್ಟ ವ್ಯಕ್ತಿತ್ವ ಹೊಂದಿದವರಾಗಿದ್ದು, ಶ್ರೇಷ್ಠ ಉದ್ಯಮಿ, ಬದ್ಧತೆಯ ಲೋಕೋಪಕಾರಿ ಮತ್ತು ದೇಶದ ಅತ್ಯಂತ ಗೌರವಾನ್ವಿತ ಕ್ರಿಕೆಟ್‌ ಆಡಳಿತಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಕ್ಷೇತ್ರ : ಪರಿಸರ

1. ರಾಮೇಗೌಡ: ಇವರು ಸೋಲಿಗರ ಶ್ರೀ ರಾಮೀನಂಜೇಗೌಡ ಅವರ ಪುತ್ರರಾಗಿ ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟದ ಸೋಲಿಗ ಸಮುದಾಯದ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರುತ್ತಾರೆ. ಇವರಿಗೆ 63 ವರ್ಷ ವಯಸ್ಸಾಗಿದ್ದು, ಇವರು ಅರಣ್ಯ ವೃಕ್ಷಗಳ ಬೀಜಗಳನ್ನು ಸಂಗ್ರಹಿಸಿ ಅವುಗಳನ್ನು ಬಿತ್ತಿ ಮೊಳಕೆಯೊಡೆಯಿಸಿ ಬೆಳೆಸುವ ವಿಶಿಷ್ಟ ವಿಧಾನವನ್ನು ಕರಗತ ಮಾಡಿಕೊಂಡಿದ್ದಾರೆ. ಅಪಾಯದ ಅಂಚಿನಲ್ಲಿರುವ ಮತ್ತು ಅಪರೂಪದ ಸಸ್ಯ ಸಂತತಿ ನಶಿಸಿ ಹೋಗದಂತೆ ಅವುಗಳ ಬೀಜಗಳಿಂದ ಅಸಂಖ್ಯಾತ ಸಸಿಗಳನ್ನು ಬೆಳೆಸಿ ನಾಡಿನ ವಿವಿಧ ಸಂಸ್ಥೆಗಳಿಗೆ ವಿತರಿಸಿದ್ದಾರೆ. ಸುಮಾರು 26 ವರ್ಷಗಳಿಂದಲೂ ತಮ್ಮ ಇಡೀ ಜೀವನವನ್ನು ಹಸಿರಿನ ಅಭಿವೃದ್ಧಿಗೆ ಮುಡಿಪಿಟ್ಟು, ಅಪಾಯದ ಅಂಚಿನಲ್ಲಿರುವ ಅಪರೂಪದ ಅರಣ್ಯ ಸಂತತಿಯನ್ನು ಕಾಪಾಡುತ್ತಿರುವ ಕಾರಣಕ್ಕಾಗಿ ಇವರ ಸೇವಾ ಭಾವನೆಯನ್ನು ಗುರುತಿಸಿ, ಸಿರಿ ಸಂವರ್ಧನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುತ್ತಾರೆ.

2. ಮಲ್ಲಿಕಾರ್ಜುನ ನಿಂಗಪ್ಪ : ಇವರು ಯಾದಗಿರಿ ಜಿಲ್ಲೆಯಲ್ಲಿ 1963ರಲ್ಲಿ ಜನಿಸಿದ್ದು, ಇವರು 53 ವರ್ಷಗಳಿಂದಲೂ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅಪಾರವಾಗಿ ಪರಿಸರ ಸಂರಕ್ಷಣೆಯನ್ನು ಮಾಡುತ್ತ ಬಂದಿರುತ್ತಾರೆ. ಸುಮಾರು 100 ಎಕರೆಗಿಂತಲೂ ಹೆಚ್ಚು ಅರಣ್ಯ ಪ್ರದೇಶದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಅವುಗಳ ಪಾಲನೆ-ಪೋಷಣೆ ಮಾಡಿ ದಟ್ಟ ಅರಣ್ಯ ಪ್ರದೇಶವಾಗಲು ಇವರ ಕೊಡುಗೆ ಅನನ್ಯವಾಗಿದೆ. ಇವರು ವನಮಹರ್ಷಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುತ್ತಾರೆ.

ಕೃಷಿ ಕ್ಷೇತ್ರ

1. ಡಾ. ಎಸ್. ವಿ. ಹಿತ್ತಲಮನಿ: ಹಾವೇರಿ ಜಿಲ್ಲೆಯವರಾಗಿದ್ದು 73 ವರ್ಷದವರಾಗಿದ್ದು, ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು, ಸಹಾಯಕ ನಿರ್ದೇಶಕರಾಗಿ ತೋಟಗಾರಿಕೆ ಇಲಾಖೆಯಲ್ಲಿ ಸೇವೆ ಆರಂಭಿಸಿದ ಇವರು ಹೆಚ್ಚುವರಿ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ನಿವೃತ್ತಿಯ ನಂತರ ರೈತರೊಂದಿಗೆ ಸಂಪರ್ಕದಲ್ಲಿದ್ದು, ಕೃಷಿಗೆ ಸಂಬಂಧಿಸಿದ ಸಮಸ್ಯೆಗಳ ಮತ್ತು ಮಾರ್ಗದರ್ಶನ ನೀಡುವುದು.

2. ಎಂ.ಸಿ. ರಂಗಸ್ವಾಮಿ: ಹಾಸನ ಜಿಲ್ಲೆಯವರಾದ ಇವರು ಕೃಷಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮಾಧ್ಯಮ ಕ್ಷೇತ್ರ

1. ಕೆ. ಸುಬ್ರಹ್ಮಣ್ಯ : ಬೆಂಗಳೂರು ನಗರ ಜಿಲ್ಲೆಯವರಾಗಿದ್ದು, ಮಾದ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುತ್ತಾರೆ.

2. ಅಂಶಿ ಪ್ರಸನ್ನ ಕುಮಾರ್‌ : 1964 ರಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರು ಪತ್ರಿಕೋದ್ಯಮದಲ್ಲಿ ಎಂ.ಎ ಪದವಿ ಮೈಸೂರು ವಿಶ್ವವಿದ್ಯಾಲಯದ ಪದವಿಧರರಾಗಿದ್ದಾರೆ. 1983ರಿಂದ ಪತ್ರಕರ್ತರಾಗಿ, ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. 1995ರಿಂದ ಕನ್ನಡ ಪ್ರಭ, ದಿನಪತ್ರಿಕೆ, ಮೈಸೂರು ಇಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮೈಸೂರು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಪತ್ರಿಕೋಧ್ಯಮ ಸೇವೆಗಾಗಿ ಅನೇಕ ಪ್ರಶಸ್ತಿಗಳು ಬಂದಿವೆ. ಅಲ್ಲದೇ ಇವರು ಮೈಸೂರು, ಚಾಮರಾಜನಗರ, ಕೃಷಿ, ಸಖಿ, ದಸರಾ, ಯುಗಾದಿ ಕನ್ನಡ ಪ್ರಭದ ಸಾಪ್ತಾಯಿಕ ಪುರಾವಣಿಯಲ್ಲಿ ಲೇಖನ ಪ್ರಕಟಿಸಿದ್ದಾರೆ.

3. ಬಿ. ಎಂ. ಹನೀಫ್‌ : 1961ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಮಂಗಳೂರು ವಿಶ್ವವಿದ್ಯಾಲಯದಿಂದ ಬಿ.ಕಾಂ. ಪದವಿ ಪಡೆದು, ಪತ್ರಿಕಾ ವೃತ್ತಿಯಲ್ಲಿ 38 ವರ್ಷಗಳ ಅನುಭವ ಹೊಂದಿದ್ದು, ಬೆಂಗಳೂರಿನ ಪ್ರಜಾವಾಣಿ ಪತ್ರಿಕೆಯ ಉಪ ಸಂಪಾದಕನಾಗಿ ವೃತ್ತಿ ಆರಂಭಿಸಿದ್ದು, ನಂತರ ಹಿರಿಯ ಉಪ ಸಂಪಾದಕ, ಮುಖ್ಯ ಉಪಸಂಪಾದಕ, ವಿಜಯಪುರ, ಮೈಸೂರು ಬೆಂಗಳೂರಿನಲ್ಲಿ ಕೆಲಸ ನಿರ್ವಹಣೆ ಹಾಗೂ ಹಲವು ಸಂದರ್ಶನ, ಸಾಕ್ಷ್ಯಚಿತ್ರಗಳು, ಅಂಕಣಗಳು, ರಾಜಕೀಯ ಕುರಿತು ಲೇಖನಗಳ ಸಂಕಲನ ಹೀಗೆ ಹಲವಾರು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳು ಸಂದಿವೆ.

4. ಎಂ. ಸಿದ್ದರಾಜು: ಮಂಡ್ಯ ಜಿಲ್ಲೆಯವರಾಗಿದ್ದು, ಮಾದ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುತ್ತಾರೆ.

ವಿಜ್ಞಾನ ತಂತ್ರಜ್ಞಾನ ಕ್ಷೇತ್ರ‌

1. ರಾಮಯ್ಯ : ಚಿಕ್ಕಬಳ್ಳಾಪುರ ಜಿಲ್ಲೆಯವರಾಗಿದ್ದು, ಬಾಲ್ಯದಿಂದಲೇ ಸಂಶೋಧನೆ, ವಿಜ್ಞಾನದಲ್ಲಿ ಆಸಕ್ತಿ ಹೊಂದಿದವರಾಗಿದ್ದು, ವಿಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿರುತ್ತಾರೆ.

2. ಏರ್‌ ಮಾರ್ಷಲ್‌ ಪಿಲಿಪ್‌ ರಾಜ್‌ಕುಮಾರ್: ಏರ್ ಮಾರ್ಷಲ್ ರಾಜ್‌ಕುಮಾರ್ ಅವರನ್ನು 1962 ರಲ್ಲಿ ಭಾರತೀಯ ವಾಯುಪಡೆಯ ಫ್ಲೈಯಿಂಗ್ ಬ್ರಾಂಚ್‌ನಲ್ಲಿ ನಿಯೋಜಿಸಲಾಯಿತು. ಅವರು ಪೂರ್ವ ಮತ್ತು ಪಶ್ಚಿಮ ರಂಗಭೂಮಿಗಳಲ್ಲಿ ಮುಂಚೂಣಿಯ ಫೈಟರ್ ಸ್ಕ್ವಾಡ್ರನ್‌ಗಳಲ್ಲಿ ಒಂಬತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ, ಅವರು ಸೆಪ್ಟೆಂಬರ್ 1965 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ 22 ಕಾರ್ಯಾಚರಣೆಯ ಕಾರ್ಯಾಚರಣೆಗಳನ್ನು ಹಾರಿಸಿದರು ಮತ್ತು ಶೌರ್ಯಕ್ಕಾಗಿ ಡೆಸ್ಪ್ಯಾಚ್‌ನಲ್ಲಿ ಮೆನ್ಶನ್ ಪಡೆದರು. 1971 ರಲ್ಲಿ ಅವರನ್ನು ಫ್ರಾನ್ಸ್‌ನಲ್ಲಿ ಪ್ರಾಯೋಗಿಕ ಪರೀಕ್ಷಾ ಪೈಲಟ್ ಆಗಿ ತರಬೇತಿ ಪಡೆಯಲು ಆಯ್ಕೆ ಮಾಡಲಾಯಿತು. ಅವರ ಕಾರ್ಯಾಚರಣೆಯ ನಿಯೋಜನೆಗಳು ಪಂಜಾಬ್ ವಲಯದಲ್ಲಿ ಮುಂಚೂಣಿಯ ಫೈಟರ್ ಸ್ಕ್ವಾಡ್ರನ್ ಮತ್ತು ಕೇಂದ್ರ ವಲಯದಲ್ಲಿ ಜಾಗ್ವಾರ್ ಸ್ಟ್ರೈಕ್ ಏರ್‌ಕ್ರಾಫ್ಟ್ ಬೇಸ್‌ನ ಕಮಾಂಡ್ ಆಗಿದ್ದರು. ಬೆಂಗಳೂರಿನ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ ಭಾಗವಾಗಿ, ಏರ್ ಮಾರ್ಷಲ್ ತೇಜಸ್ ಎಂಬ ಲಘು ಯುದ್ಧ ವಿಮಾನದ ಹಾರಾಟ ಪರೀಕ್ಷಾ ಕಾರ್ಯಕ್ರಮವನ್ನು ಯೋಜಿಸಲು ಮತ್ತು ಕಾರ್ಯಗತಗೊಳಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ.

3. ಡಾ. ಆರ್. ವಿ. ನಾಡಗೌಡ : ಗದಗ ಜಿಲ್ಲೆಯವರಾದ ಇವರು ವಿಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿರುತ್ತಾರೆ.

ಕ್ಷೇತ್ರ : ಸಹಕಾರ

1. ಶೇಕರಗೌಡ ವಿ ಮಾಲಿ ಪಾಟೀಲ್ : ಕೊಪ್ಪಳ ಜಿಲ್ಲೆಯಲ್ಲಿ ವಾಸಿಸುತ್ತಿರುವ ಇವರಿಗೆ 66ವರ್ಷ ವಯಸ್ಸಾಗಿರುತ್ತದೆ. 12 ಕನ್ನಡ ಪುಸ್ತಕಗಳನ್ನು ಹೊರತಂದಿರುತ್ತಾರೆ. ಇವರು ಕೊಪ್ಪಳ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುತ್ತಾರೆ. 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ಜರುಗಿಸಿದ್ದು, ಇವರ ಜೀವನದ ಸಾಧನೆಯ ನೋಟ. ಇವರಿಗೆ ಹಲವು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ.

ಕ್ಷೇತ್ರ : ಯಕ್ಷಗಾನ

1. ಕೋಟ ಸುರೇಶ ಬಂಗೇರ : ಉಡುಪಿ ಜಿಲ್ಲೆಯವರಾದ ಇವರು ಯಕ್ಷಗಾನ ಕಲೆಯನ್ನು ಮೈಗೂಡಿಕೊಂಡು ವಿವಿಧ ಜಿಲ್ಲೆಗಳಲ್ಲಿ ಕಲಾ ಪ್ರದರ್ಶನ ನೀಡಿರುತ್ತಾರೆ.

2. ಆನಂದ ಶೆಟ್ಟಿ, ಐರಬೈಲು : ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆಳಕಳಿ ದೊಡ್ಡಮನೆಯಲ್ಲಿ 1960ರಲ್ಲಿ ಜನಿಸಿರುವ ಇವರಿಗೆ 65 ವರ್ಷ ವಯಸ್ಸಾಗಿರುತ್ತದೆ. ಯಕ್ಷಗಾನ ಕಲಾವಿದರಾದ ಇವರು ಪೀಠಿಕೆ ಸ್ತ್ರೀ ವೇಷಧಾರಿ, ತುಂಡುವೇಷ, ಪುರುಷ ವೇಷದ ಮೂಲಕ ಯಕ್ಷಗಾನದ ಗೆಜ್ಜೆ ಕಟ್ಟಿದ ಇವರು 65ನೇ ವಯಸ್ಸಿನಲ್ಲಿಯೂ ಕಲಾ ತಿರುಗಾಟದಲ್ಲಿ ತೊಡಗಿಸಿಕೊಂಡಿರುತ್ತಾರೆ. ಇವರಿಗೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿರುತ್ತವೆ.

3. ಕೃಷ್ಣ ಪರಮೇಶ್ವರ ಹೆಗಡೆ, (ಕೆ.ಪಿ. ಹೆಗಡೆ) : ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗೋಳಗೊಡು ಗ್ರಾಮದವರಾದ ಇವರು 1955ರಲ್ಲಿ ಜನಿಸಿದರು. ಇವರಿಗೆ 66 ವರ್ಷ ವಯಸ್ಸಾಗಿರುತ್ತದೆ. ಯಕ್ಷಗಾನ ಕ್ಷೇತ್ರದಲ್ಲಿ 1978ರಿಂದ ಸೇವೆ ಮಾಡುತ್ತಿರುವ ಇವರು ಬಾಲ್ಯದಿಂದಲೇ ಯಕ್ಷಗಾನದ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಇವರು ದಿ.ಎಂ ನಾರಾಯಣಪ್ಪ ಉಪ್ಪೂರ ಅವರ ಶಿಷ್ಯನಾಗಿ ಯಕ್ಷಗಾನ ಭಾಗವತಿಕೆ ಕಲೆಯನ್ನು ಕಲಿತಿರುತ್ತಾರೆ. ವೃತ್ತಿಪರ ಮೇಳಗಳಲ್ಲಿ ಹಾಗೂ ಯಕ್ಷಗಾನ ಕಲಿಕಾ ಕೇಂದ್ರಗಳಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದು, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ರತ್ನ, ಪೌರಾಣಿಕ ಯಕ್ಷ ಮಾಧುರ್ಯ ಗೌರವಗಳಿಗೆ ಪಾತ್ರರಾಗಿರುತ್ತಾರೆ.

ಕ್ಷೇತ್ರ : ಬಯಲಾಟ

1. ಗುಂಡೂರಾಜ್‌ : ಇವರು ಹಾಸನ ಜಿಲ್ಲೆಯ ಹೂವಿನಹಳ್ಳಿಕಾವಲು ಗ್ರಾಮದಲ್ಲಿ 1959ರಲ್ಲಿ ಜನಿಸಿದರು. ಇವರಿಗೆ 66 ವರ್ಷ ವಯಸ್ಸಾಗಿರುತ್ತದೆ. ತೊಗಲುಗೊಂಬೆಯಾಟ ವೃತ್ತಿ ಕಲಾವಿದರಾದ ಇವರು ಭಾರತದ ದೆಹಲಿ, ಮಧ್ಯಪ್ರದೇಶ, ಉತ್ತರಪ್ರದೇಶ ಮುಂತಾದ ರಾಜ್ಯಗಳಲ್ಲಿ ಹಾಗೂ ಅಮೇರಿಕಾ, ಕುವೈತ್‌, ಕೋರಿಯಾ, ಪ್ರಾನ್ಸ್‌ ಮುಂತಾದ ದೇಶಗಳಲ್ಲಿ ತೊಗಲುಗೊಂಬೆಯಾಟವನ್ನು ಪ್ರದರ್ಶನ ನೀಡಿರುತ್ತಾರೆ. 2009ರಲ್ಲಿ ಕೋರಿಯಾ ದೇಶದಲ್ಲಿ ನಡೆದ 3ನೇ ಡೆಲ್ಲಿಪಿಕ್‌ ಗೇಮ್‌ನಲ್ಲಿ ಡೆಲ್ಲಿ ಪದಕವನ್ನು ಪಡೆದಿರುತ್ತಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಪ್ರಶಸ್ತಿ, ಕೋರಿಯಾ ದೇಶವು ನೀಡಿದ ಹೆರಿಟೇಜ್‌ ಪ್ರಶಸ್ತಿ, ಅಮೇರಿಕಾದ ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟದವರು ನೀಡಿದ ಗೌರವ ಸಮರ್ಪಣೆ ಮುಂತಾದ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

ಕ್ಷೇತ್ರ : ರಂಗಭೂಮಿ

1. ಹೆಚ್. ಎಂ. ಪರಮಶಿವಯ್ಯ : ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ) ಕನಕಪುರ ತಾಲ್ಲೂಕಿನಲ್ಲಿ ಜನಿಸಿದ ಇವರು ರೈತ ಕುಟುಂಬದಿಂದ ಬಂದವರಾದರೂ ಕೃಷಿ ಕೆಲಸದ ಜೊತೆಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡು ರಂಗಭೂಮಿ ಕ್ಷೇತ್ರದಲ್ಲಿ ಹೆಸರು ಮಾಡಿದ ಪರಮಶಿವಯ್ಯನವರು ತಮ್ಮ 15ನೇ ವಯಸ್ಸಿನಲ್ಲಿ ನಾಟಕ ನಿರ್ದೇಶಕರಾಗಿ , ನಟರಾಗಿ, ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

2. ಎಲ್.ಬಿ. ಶೇಖ್‌ (ಮಾಸ್ತರ್) : ಇವರು ಮುದ್ದೇಬಿಹಾಳ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಜನಿಸಿದ ಇವರು ಸಂಗೀತಾಭ್ಯಾಸವನ್ನು ತಾಳಿಕೋಟಿ ಖಾಸ್ಗತೇಶ್ವರ ಮಠದಲ್ಲಿ ಸಂಗೀತ ಹಾಗೂ ಹಾರ್ಮೋನಿಯಂ ವಾದನವನ್ನು ನುಡಿಸುತ್ತಿದ್ದರು. ಇವರು ವೃತ್ತಿ ಕಂಪನಿ ಮಾಲೀಕರಾದ ಇವರು ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ, ಹಾನಗಲ್‌ -1983ರಲ್ಲಿ ಸ್ಥಾಪನೆ ಮಾಡಿದರು. ವೃತ್ತಿ ರಂಗಭೂಮಿಯಲ್ಲಿ 50 ವರ್ಷಗಳಿಂದ ಅವಿರತ ಸೇವೆಸಲ್ಲಿಸುತ್ತಾ ಬಂದಿದ್ದಾರೆ. ಇವರು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ ಹಾಗೂ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

3. ಬಂಗಾರಪ್ಪ ಖೂದಾನಪುರ: ಮೂಲತ: ವಿಜಯಪುರ ಜಿಲ್ಲೆಯವರಾದ ಇವರು 64 ವರ್ಷವಾಗಿದ್ದು, ರಂಗಭೂಮಿ ಕ್ಷೇತ್ರವನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡು ಕಲಾ ಸೇವೆಯಲ್ಲಿ ತೊಡಗಿದವರು. ಬಿ.ಇ. ಎಂ.ಎಲ್‌ ನಲ್ಲಿ ನೌಕರರಾಗಿದ್ದುಕೊಂಡು ರಂಗಭೂಮಿಯಲ್ಲಿ ತೊಡಗಿಸಿಕೊಂಡು ಮಂಟೇಸ್ವಾಮಿ, ಕತ್ತಲೆಯ ದಾರಿ ದೂರ, ಅನೇಕ ಬೀದಿ ನಾಟಕಗಳಲ್ಲಿ ಅಭಿನಯದ ಜೊತೆಗೆ ನಿರ್ದೇಶನ ಮಾಡಿರುತ್ತಾರೆ.

4. ಮೈಮ ರಮೇಶ್‌ : ದಕ್ಷಿಣ ಕನ್ನಡ ಜಿಲ್ಲೆಯವರಾದ ಇವರು ನಟ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

5. ಡಿ. ರತ್ನಮ್ಮ ದೇಸಾಯಿ : ರಾಯಚೂರು ಜಿಲ್ಲೆಯವರಾದ ಇವರು ರಂಗಭೂಮಿ ಕ್ಷೇತ್ರದಲ್ಲಿ ನಟಿಯಾಗಿ ಸೇವೆ ಸಲ್ಲಿಸುತ್ತಿದ್ದು, ಹಲವಾರು ನಾಟಕಗಳಲ್ಲಿ ನಟಿಸಿರುತ್ತಾರೆ.

ಶಿಕ್ಷಣ ಕ್ಷೇತ್ರ

1. ಡಾ. ಎಂ.ಆರ್. ಜಯರಾಮ್: ಇವರು 75 ವರ್ಷದವರಾಗಿದ್ದು, “ಮಾನವಕುಲದ ಒಳಿತಿಗಾಗಿ ಶಿಕ್ಷಣ ಮತ್ತು ಆರೋಗ್ಯ" ಎಂಬ ಧ್ಯೇಯದೊಂದಿಗೆ GEF 1962 ರಲ್ಲಿ ಸ್ಥಾಪನೆಯಾಯಿತು. GEF ವರ್ಷಗಳಲ್ಲಿ 85 ಎಕರೆ ಜ್ಞಾನಗಂಗೋತ್ರಿ ಕ್ಯಾಂಪಸ್‌ನಲ್ಲಿ 21 ಸಂಸ್ಥೆಗಳನ್ನು ಸ್ಥಾಪಿಸಿದೆ. ಎಂಜಿನಿಯರಿಂಗ್, ವೈದ್ಯಕೀಯ, ನರ್ಸಿಂಗ್, ದಂತ, ಕಾನೂನು ಮತ್ತು ನಿರ್ವಹಣೆ ಇತ್ಯಾದಿ ಸಂಸ್ಥೆಗಳಲ್ಲಿ ಸೇರಿವೆ. ಒಂದೇ ಕ್ಯಾಂಪಸ್‌ನಲ್ಲಿ ಬಹುತೇಕ ಎಲ್ಲಾ ವಿಭಾಗಗಳನ್ನು ನೀವು ಕಾಣಬಹುದು. ಇಂದು 14,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕ್ಯಾಂಪಸ್‌ನಲ್ಲಿ ಅಧ್ಯಯನ ಮಾಡುತ್ತಾರೆ. ಅವರು ಶಿಕ್ಷಣ ತಜ್ಞರಷ್ಟೇ ಅಲ್ಲ, ಉದ್ಯಮಿ ಮತ್ತು ಖ್ಯಾತಿಯ ಕೈಗಾರಿಕೋದ್ಯಮಿಯೂ ಹೌದು. ಅವರು "ವಾಲ್ಡೆಲ್ ಕಾರ್ಪೊರೇಷನ್" ನ ಅಧ್ಯಕ್ಷರೂ ಹೌದು. ವಾಲ್ಡೆಲ್ ಎಂಜಿನಿಯರಿಂಗ್ ನಿರ್ಮಾಣ, ಎಂಜಿನಿಯರಿಂಗ್ ವಿನ್ಯಾಸ, ಚಿಲ್ಲರೆ ವ್ಯಾಪಾರ, ಬಿಪಿಒ ಮತ್ತು ಇತರ ಹಲವಾರು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಅವರು ಉಕ್ಕಿನ ತಯಾರಿಕೆ, ಸಿಮೆಂಟ್ ಉತ್ಪಾದನೆ, ಕೃಷಿ ವ್ಯವಹಾರ ಮತ್ತು ಐಟಿ ವ್ಯವಹಾರದಲ್ಲೂ ಇದ್ದರು.

2. ಎನ್‌ ಎಸ್. ರಾಮೇಗೌಡ : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಜಿಲ್ಲೆಯ ನಗುವನಹಳ್ಳಿಯಲ್ಲಿ 1941(84)ರಲ್ಲಿ ಜನಿಸಿದರು. ಇವರು ಪ್ರಾಥಮಿಕ ಮತ್ತು ಪೌಢಶಾಲೆಯ ವಿದ್ಯಾಭ್ಯಾಸವನ್ನು ಚನ್ನಪಟ್ಟಣದಲ್ಲಿ ಉನ್ನತ ಶಿಕ್ಷಣವನ್ನು ಮೈಸೂರಿನಲ್ಲಿ 1974ರಲ್ಲಿ ಜೋಧಪುರ್‌ ವಿಶ್ವವಿದ್ಯಾಲಯ, ರಾಜಸ್ಥಾನದಲ್ಲಿ ಪಿ.ಹೆಚ್.ಡಿ. ಯನ್ನು ಪಡೆದಿರುತ್ತಾರೆ. ಉಪನ್ಯಾಸಕರಾಗಿ ರೂರಲ್‌ ಕಾಲೇಜು, ಕನಕಪುರದಲ್ಲಿ, ಪ್ರೊಫೆಸರ್‌, ರೂರಲ್‌ ಕಾಲೇಜು, ಕನಕಪುರ, ಪ್ರಿನ್ಸಿಪಲ್‌ , ಭಾರತೀ ಕಾಲೇಜು ಭಾರತೀನಗರ, ಮಂಡ್ಯ ಜಿಲ್ಲೆ ಕುಲಪತಿಗಳಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು ಇಲ್ಲಿ ಸೇವೆಗಳನ್ನು ಸಲ್ಲಿಸಿರುತ್ತಾರೆ.

3. ಎಸ್. ಬಿ. ಹೊಸಮನಿ : ವಿಜಯಪುರ ಜಿಲ್ಲೆಯ ಕೌಜಲಗಿಯಲ್ಲಿ 1945ರಲ್ಲಿ ಜನಿಸಿದ ಇವರು ಸ್ನಾತಕೋತ್ತರ ಎಂ.ಎ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಕೇಂದ್ರ ಸರ್ಕಾರದ ಟಿಲಿಕಾಂ ಇಲಾಖೆಯಲ್ಲಿ ಹೀಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಾಗೃತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

4. ರಾಜಶ್ರೀ ನಾಗರಾಜ್: ಇವರು ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್‌ ಸದಸ್ಯರಾದ ಶ್ರೀ ನಾಗರಾಜ್‌ ಯಾದವ್‌ ರವರ ಧರ್ಮ ಪತ್ನಿ, ಇವರು ಬೆಳಗಾವಿ ಜಿಲ್ಲೆಯಲ್ಲಿ ಜನಿಸಿದ್ದು, 60 ವರ್ಷದವರಾಗಿದ್ದು, ಸಮಾಜದ ಒಳಿತಿಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಇವರು ಅನೇಕ ವಿದ್ಯಾ ಸಂಸ್ಥೆಗಳನ್ನು, ಬೆಳಗಾವಿ, ಖಾನಾಪುರ, ನಿಪ್ಪಾಣಿ ಮುಂತಾದ ಸ್ಥಳಗಳಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ವಿದ್ಯಾದಾನ ಮಾಡುತ್ತಿದ್ದಾರೆ.

ಕ್ಷೇತ್ರ : ಕ್ರೀಡೆ

1. ಆಶೀಶ್‌ ಕುಮಾರ್‌ ಬಲ್ಲಾಳ್: ಬೆಂಗಳೂರು ಜಿಲ್ಲೆಯವರಾದ ಇವರು ಹಾಕಿ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ರಾಜ್ಯ, ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿರುತ್ತಾರೆ.

2. ಎಂ ಯೋಗೇಂದ್ರ : ಇವರು ಮೈಸೂರು ಜಿಲ್ಲೆಯವರಾಗಿದ್ದು ಇವರಿಗೆ 62 ವರ್ಷ ವಯಸ್ಸಾಗಿರುತ್ತದೆ. ಅಥ್ಲೆಟಿಕ್ಸ್‌ ವಿಭಾಗದಲ್ಲಿ ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿರುವ ಇವರು ಚೈನಾದಲ್ಲಿ 2016ರಲ್ಲಿ ನಡೆದ ಏಷ್ಯನ್‌ ಮಾಸ್ಟರ್ಸ್ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ ಎರಡು ಕಂಚಿನ ಪದಕಗಳು, ಜಪಾನ್‌ ದೇಶದಲ್ಲಿ 2014ರಲ್ಲಿ ನಡೆದ 19ನೇ ಏಷ್ಯಾ ಮಾಸ್ಟರ್ಸ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.

3. ಡಾ. ಬಬಿನಾ ಎನ್. ಎಂ. (ಯೋಗ): ಕೊಡಗು ಜಿಲ್ಲೆಯವರಾದ ಇವರು ಯೋಗ ಕಲೆಯಲ್ಲಿ ನುರಿತರಾಗಿದ್ದು ಇವರು ಹಲವು ರೋಗಿಗಳಿಗೆ ಚಿಕಿತ್ಸೆ ನೀಡುವುದರ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ.

ಕ್ಷೇತ್ರ : ನ್ಯಾಯಾಂಗ

1. ನ್ಯಾ. ಶ್ರೀ ಪಿ.ಬಿ. ಭಜಂತ್ರಿ ( ಪವನ್‌ಕುಮಾರ್‌ ಭಜಂತ್ರಿ ) : ಇವರು ಬೆಂಗಳೂರು ನಗರದಲ್ಲಿ ವಾಸಿಸುತ್ತಿದ್ದು ಇವರಿಗೆ 66 ವರ್ಷ ವಯಸ್ಸಾಗಿರುತ್ತದೆ. ಸದರಿಯವರು 1990ರಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿ, 2015ರಲ್ಲಿ ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ನ್ಯಾಯಮೂರ್ತಿಯಾಗಿ ನೇಮಕಗೊಂಡು ತದನಂತರ ಪಂಜಾಬ್‌, ಹರಿಯಾಣ ಹೈಕೋರ್ಟ್‌ಗೆ ವರ್ಗಾವಣೆಗೊಂಡು ನಂತರ ಬಿಹಾರದ ಪಾಟ್ನಾ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.

ಕ್ಷೇತ್ರ : ಶಿಲ್ಪಕಲೆ

1. ಬಸವಣ್ಣ ಮೌನಪ್ಪ ಬಡಿಗೇರ: ಗುಲಬರ್ಗಾ ಜಿಲ್ಲೆಯ ಸುರಪುರ ತಾಲೂಕಿನ ಅಂದ್ರಾಳ ಗ್ರಾಮದವರಾದ ಬಸೌಣ್ಣ ಮೌನಪ್ಪ ಬಡಿಗೇರ ಇವರು 1933ರಲ್ಲಿ ಜನಿಸಿದರು. ಇವರಿಗೆ 92 ವರ್ಷ ವಯಸ್ಸಾಗಿರುತ್ತದೆ. ಕಾಷ್ಠ ಶಿಲ್ಪದಲ್ಲಿ ಪರಿಣಿತಿ ಹೊಂದಿರುವ ಇವರು ಅನೇಕ ಕಲಾತ್ಮಕ ಮನೆಗಳನ್ನು ನಿರ್ಮಿಸಿದ್ದು, ಇವುಗಳಲ್ಲಿ ಚದರಂಗ ಪಡಶಾಲೆ, ಐದು ಮತ್ತು ಏಳು ಅಂಕಣ ಪಡಶಾಲೆ, ಇದರಲ್ಲಿ ತೊಲೆ, ಬೋದು, ತೋರಣ, ಪ್ರಾಣಿ, ಪಕ್ಷಿ, ದೇವತೆಗಳ ಅನೇಕ ಕಲಾತ್ಮಕ ಶಿಲ್ಪಗಳನ್ನು ನಿರ್ಮಿಸಿರುತ್ತಾರೆ. ಇವರ ಕಲಾಕೃತಿಗಳು ಕಲಬುರಗಿ ಹಾಗೂ ರಾಯಚೂರು ವಿಭಾಗಗಳಲ್ಲಿ ನೋಡಲು ಸಿಗುತ್ತವೆ. ಸುರಪುರದಲ್ಲಿ ನಡೆದ ಸಗರನಾಡು ದರ್ಶನ ಕಾರ್ಯಕ್ರಮದಲ್ಲಿ ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2005 ರಿಂದ 2010ರವರೆಗೆ ಏರ್ಪಡಿಸಿದ ವಾರ್ಷಿಕ ದರ್ಶನಗಳಲ್ಲಿ ಇವರ ಕಲಾಕೃತಿಗಳು ಪ್ರದರ್ಶನಗೊಂಡಿವೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಗೌರವ ಪ್ರಶಸ್ತಿ ಹಾಗೂ ಜಕಣಾಚಾರಿ ಪ್ರಶಸ್ತಿಗಳು ಲಭಿಸಿದೆ.

2. ನಾಗಲಿಂಗಪ್ಪ ಗಂಗಪ್ಪ ಗಂಗೂರ, ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿಯವರಾದ ಇವರು 1953ರಲ್ಲಿ ಜನಿಸಿದರು. ಇವರಿಗೆ 72 ವರ್ಷ ವಯಸ್ಸಾಗಿರುತ್ತದೆ. ರಜತ ಶಿಲ್ಪಿಯಾಗಿರುವ ಇವರು ಶಕ್ತಿನಗರದ ವೀರಭದ್ರೇಶ್ವರ ಉತ್ಸವ ಮೂರ್ತಿ, ಕೂಡಲಸಂಗಮೇಶ್ವರದ ಕವಚ ಹಾಗೂ ಮೂರ್ತಿ, ಬಾಗಲಕೋಟೆಯ ಬೆಳ್ಳಿರಥ ಇತ್ಯಾದಿ ಕಲಾಕೃತಿಗಳನ್ನು ರಚಿಸಿದ್ದು, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯ ಚಿನ್ನ-ಬೆಳ್ಳಿ ಕೆಲಸಗಾರರ ಫೆಡರೇಶನ್‌ ಇವರಿಂದ ಸ್ವರ್ಣಶ್ರೀ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.

ಚಿತ್ರಕಲೆ

1. ಬಿ.ಮಾರುತಿ : ಬಳ್ಳಾರಿ ಜಿಲ್ಲೆಯ ಹೊಸಪೇಟೆಯವರಾದ ಇವರು 1954ರಲ್ಲಿ ವಾಲ್ಮೀಕಿ ಸಮುದಾಯದ ರೈತ ಕುಟುಂಬದಲ್ಲಿ ಜನಿಸಿರುತ್ತಾರೆ. ಬಾಲ್ಯದಿಂದಲೂ ಹಂಪೆಯ ಪರಿಸರ, ಅಲ್ಲಿನ ಗತವೈಭವ, ಜಾನಪದ ಸೊಗಡಿನ ಸಂಸ್ಕೃತಿ ಇವುಗಳಿಂದ ಪ್ರಭಾವಿತರಾಗಿ ಬಣ್ಣ ಮತ್ತು ಕುಂಚದೊಂದಿಗೆ ಚಿತ್ರಕಲೆಯನ್ನು ತಮ್ಮ ಬದುಕಿನ ಉಸಿರಾಗಿಸಿಕೊಂಡವರು. ಇವರ ಕೈ ಚಳಕದಿಂದ ಮೂಡಿಬಂದಿರುವ ಹಂಪೆಯ ಬಂಡೆಗಳ ಕುರಿತಾದ ಚಿತ್ರಗಳ ಶ್ರೇಣಿ, ನಿಸರ್ಗ ಚಿತ್ರಗಳು, ಜಾನಪದ ಬದುಕಿನ ವೈವಿಧ್ಯಮಯ ಚಿತ್ರಗಳು ದೇಶದ ಹಲವಾರು ಪ್ರಸಿದ್ಧ ಸಂಸ್ಥೆಗಳ, ವಿದ್ಯಾಸಂಸ್ಥೆಗಳ ಗೋಡೆಗಳನ್ನು ಅಲಂಕರಿಸಿದೆ. ಇವರ ಕುರಿತು ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಇವರ ಜೀವನ ಕುರಿತ ಸಾಕ್ಷ್ಯ ಚಿತ್ರಗಳು, ಉದಯ ಟಿ.ವಿ. ಬೆಳಗು ಮತ್ತು ಬುಕ್‌ ಬ್ರಹ್ಮ ವಾಹಿನಿಗಳಲ್ಲಿ ವಿಶೇಷ ಸಂದರ್ಶನಗಳು ಪ್ರಸಾರಗೊಂಡಿವೆ. ಇವರ ಏಕೋಕ್ತಿ ಚಿತ್ರಕಲಾ ಪ್ರದರ್ಶನಗಳು ಧಾರವಾಡ, ಬೀದರ್‌, ನವದೆಹಲಿ, ಗೋವಾ ಇತ್ಯಾದಿ ನಗರಗಳಲ್ಲಿ ಪ್ರದರ್ಶನಗೊಂಡಿರುತ್ತವೆ.

ಕರಕುಶಲ ಕಲೆ

1. ಎಲ್‌ ಹೇಮಾಶೇಖರ್: ಇವರು 1952ರಲ್ಲಿ ಮೈಸೂರಿನ ನಂಜನಗೂಡಿನಲ್ಲಿ ಜನಿಸಿರುತ್ತಾರೆ. ಇವರಿಗೆ ಪ್ರಸ್ತುತ 73 ವರ್ಷ ವಯಸ್ಸಾಗಿದ್ದು, ಇವರು ಸೂಫಿ ಮತ್ತು ಮೈಸೂರು ವರ್ಣ ಕಲೆಯನ್ನು ಮೈಸೂರು ಅರಮನೆ ಕಲಾವಿದರಾದ ಶ್ರೀ ರಾಮನರಸಯ್ಯನವರಿಂದ ಅಭ್ಯಾಸ ಮಾಡಿರುತ್ತಾರೆ. ಅಲ್ಲದೆ ಡ್ರಾಯಿಂಗ್‌ ಮತ್ತು ವರ್ಣ ಕಲೆಗಳನ್ನು ಇತರ ನುರಿತ ಕಲಾವಿದರು, ಶ್ರಮಿಕ ವಿದ್ಯಾಪೀಠ ಮತ್ತು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಇವರುಗಳಿಂದ ತರಭೇತಿ ಪಡೆದಿರುತ್ತಾರೆ. ಇವರು ʼಬಾಟಿಕ್‌ ಮತ್ತು ಟೈ ಅಂಡ್‌ ಡೈʼ ಕಲೆಯನ್ನು ವೃತ್ತಿಯಾಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯದಿಂದ 2014ನೇ ಸಾಲಿನ ಶಿಲ್ಪಗುರು ರಾಷ್ಟ್ರ ಪ್ರಶಸ್ತಿ, 2003ರಲ್ಲಿ ರಾಜ್ಯ ಸರ್ಕಾರದಿಂದ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಲಭಿಸಿದೆ.

*****

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.