ADVERTISEMENT

ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ: ಹಕ್ಕುಪತ್ರ ಪಡೆದು ಹಿಗ್ಗಿದರು

ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಭಾಗಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 0:30 IST
Last Updated 15 ಫೆಬ್ರುವರಿ 2026, 0:30 IST
ಹಾವೇರಿಯಲ್ಲಿ ಶನಿವಾರ ಆಯೋಜಿಸಿದ್ದ ‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಫಲಾನುಭವಿಗಳಿಗೆ ಹಕ್ಕುಪತ್ರ  ವಿತರಿಸಿದರು. ಸಚಿವರಾದ ಕೆ.ಎಚ್.ಮುನಿಯಪ್ಪ, ಜಿ.ಪರಮೇಶ್ವರ, ಎಚ್.ಕೆ.ಪಾಟೀಲ ಮತ್ತಿತರರು ಇದ್ದರು.
ಹಾವೇರಿಯಲ್ಲಿ ಶನಿವಾರ ಆಯೋಜಿಸಿದ್ದ ‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಫಲಾನುಭವಿಗಳಿಗೆ ಹಕ್ಕುಪತ್ರ  ವಿತರಿಸಿದರು. ಸಚಿವರಾದ ಕೆ.ಎಚ್.ಮುನಿಯಪ್ಪ, ಜಿ.ಪರಮೇಶ್ವರ, ಎಚ್.ಕೆ.ಪಾಟೀಲ ಮತ್ತಿತರರು ಇದ್ದರು.   
* ಸಮಾವೇಶಕ್ಕೆ ಹರಿದು ಬಂದ ಜನಸಾಗರ * ಒಂದು ಲಕ್ಷ ಹಕ್ಕು ಪತ್ರ ಹಂಚಿಕೆ * ಸಂತಸ ಹಂಚಿಕೊಂಡ ಫಲಾನುಭವಿಗಳು 

ಹಾವೇರಿ: ರಾಜ್ಯದ ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ನಗರದಲ್ಲಿ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ಕ್ಕೆ ಜನಸಾಗರವೇ ಹರಿದು ಬಂದಿತ್ತು. ಕಂದಾಯ ಇಲಾಖೆಯಿಂದ ಹಕ್ಕುಪತ್ರ ಸ್ವೀಕರಿಸಿದ ಜನರು, ದಾಖಲೆಗಳನ್ನು ಹಿಡಿದು ಪರಸ್ಪರ ಮಾಲೀಕತ್ವದ ಖುಷಿ ಹಂಚಿಕೊಂಡರು.

ಸರ್ಕಾರಿ ಹಾಗೂ ಖಾಸಗಿ ಜಾಗದಲ್ಲಿ ಹಲವು ವರ್ಷಗಳಿಂದ ವಾಸವಿದ್ದರೂ ಮಾಲೀಕತ್ವದಿಂದ ವಂಚಿತರಾಗಿದ್ದ ಕುಟುಂಬಗಳಿಗೆ ಕಂದಾಯ ಇಲಾಖೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಸಮ್ಮುಖದಲ್ಲಿ ದಾಖಲೆಗಳನ್ನು ನೀಡಲಾಯಿತು. ಹಾವೇರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ, ಗದಗ, ಕೊಪ್ಪಳ, ಉತ್ತರ ಕನ್ನಡ ಜಿಲ್ಲೆಯ ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ರಾಜ್ಯ ಸರ್ಕಾರವು ಸಾವಿರ ದಿನಗಳ ಆಡಳಿತವನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕಾಗಿ ಸಾಧನಾ ಸಮಾವೇಶವನ್ನೂ ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಅಜ್ಜಯ್ಯ ದೇವಸ್ಥಾನದ ಎದುರಿನ 130 ಎಕರೆ ಬಯಲು ಜಾಗದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಸಮಾವೇಶ ಜರುಗಿತು.

ADVERTISEMENT

ನಸುಕಿನಿಂದಲೇ ಜನರು ಹಾವೇರಿಯತ್ತ ಬಂದು, ಸಮಾವೇಶದ ಸ್ಥಳದಲ್ಲಿ ಜಮೆಗೊಂಡರು. ಮುಖ್ಯವೇದಿಕೆಯತ್ತ ಹೋಗಲು ನೂಕುನುಗ್ಗಲು ಉಂಟಾಯಿತು. ಬಹುತೇಕ ಜನರು, ನಿಂತುಕೊಂಡೇ ಸಮಾವೇಶ ವೀಕ್ಷಿಸಿದರು. ಇ–ಪೋತಿ, ದರಖಾಸ್ತ್ ಪೋಡಿ, ಪಿಎಂಜಿಎ, ಬಗರ್‌ಹುಕುಂ ದಾಖಲೆಗಳನ್ನೂ ಫಲಾನುಭವಿಗಳಿಗೆ ವಿತರಿಸಲಾಯಿತು. ಬಿಗ್‌ಬಾಸ್ ರಿಯಾಲಿಟಿ ಶೋ ವಿಜೇತ ಹನುಮಂತ ಲಮಾಣಿ ಅವರ ತಂದೆಗೂ ಹಕ್ಕುಪತ್ರ ನೀಡಿದ್ದು ವಿಶೇಷವಾಗಿತ್ತು. 

ಹಕ್ಕುಪತ್ರ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಮನೆ ಮನೆಗೆ ತೆರಳಿ ದಾಖಲೆ ರಹಿತರನ್ನು ಗುರುತಿಸಿ ದಾಖಲೆ ನೀಡಿ, ಅವರೆಲ್ಲರೂ ನೆಮ್ಮದಿಯಾಗಿ ಬದುಕುವ ಹಕ್ಕು ನೀಡುವಂತೆ ಮುಖ್ಯಮಂತ್ರಿ ಸೂಚಿಸಿದ್ದರು. ಅದರಂತೆ, ಫಲಾನುಭವಿಗಳನ್ನು ಗುರುತಿಸಿ ಹಕ್ಕುಪತ್ರ ನೀಡುತ್ತಿದ್ದೇವೆ. ಜನರಿಗೆ ಮಾಲೀಕತ್ವದ ಶಾಶ್ವತ ಪರಿಹಾರ ನೀಡಿದ್ದೇವೆ’ ಎಂದರು.

‘ನಮ್ಮ ಸರ್ಕಾರ ಸಾವಿರ ದಿನಗಳಲ್ಲಿ, ಹಿಂದಿನ ಸರ್ಕಾರಕ್ಕಿಂತಲೂ ಐದು ಪಟ್ಟು ಹೆಚ್ಚಿನ ಕೆಲಸ ಮಾಡಿದೆ. 2,492 ಕಂದಾಯ ಗ್ರಾಮ ಮಾಡಿ, 2.20 ಲಕ್ಷ ಕುಟುಂಬಕ್ಕೆ ಹಕ್ಕುಪತ್ರ ನೀಡಿದ್ದೇವೆ. ಭೂಮಿ ಮಾಲೀಕತ್ವಕ್ಕಾಗಿ  ವಾಜ್ಯಗಳು ನಡೆಯುತ್ತಿವೆ. ಕಚೇರಿ, ಕೋರ್ಟ್‌ಗೆ ಅಲೆದಾಡುವಂತಾಗಿದೆ. ಹಣ ಖರ್ಚಾಗುತ್ತಿದೆ. ಅಂತಹ ಸಮಸ್ಯೆ ಆಗದಿರಲಿಯೆಂದೇ ಈ ಸಮಾವೇಶ ಮಾಡುತ್ತಿದ್ದೇವೆ’ ಎಂದರು.

ಹಾವೇರಿಯಲ್ಲಿ ಶನಿವಾರ ಆಯೋಜಿಸಿದ್ದ ‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಫಲಾನುಭವಿಗಳಿಗೆ ಹಕ್ಕುಪತ್ರ  ವಿತರಿಸಿದರು. ಸಚಿವರಾದ ಶಿವಾನಂದ ಪಾಟೀಲ ಕೆ.ಎಚ್.ಮುನಿಯಪ್ಪ ಜಿ.ಪರಮೇಶ್ವರ ಎಚ್.ಕೆ.ಪಾಟೀಲ ಮತ್ತಿತರರು ಇದ್ದರು.
ಕಂದಾಯ ಇಲಾಖೆಯಿಂದ ಎರಡನೇ ಬಾರಿ ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಈಗಾಗಲೇ 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ಬಾಕಿ ಕುಟುಂಬಗಳಿಗೂ ಹಕ್ಕುಪತ್ರ ನೀಡಲಾಗುವುದು.
ಸಿದ್ದರಾಮಯ್ಯ ಮುಖ್ಯಮಂತ್ರಿ
ಬಿಜೆಪಿಯವರು ಭಾವನೆ ಮೇಲೆ ರಾಜಕಾರಣ ಮಾಡುತ್ತಾರೆ. ನಾವು ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ರಾಮ ಆಂಜನೇಯ ಹಾಗೂ ಇತರೆ ದೇವರು ಕೇವಲ ಬಿಜೆಪಿಯ ಆಸ್ತಿಯಲ್ಲ. ದೇಶದ ಎಲ್ಲ ವರ್ಗದವರ ಆಸ್ತಿ.
ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.