ADVERTISEMENT

ಪಿಎಸ್ಐ ನೇಮಕಾತಿ ಅಕ್ರಮ: ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಒತ್ತಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಮೇ 2022, 9:32 IST
Last Updated 4 ಮೇ 2022, 9:32 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಬಸವರಾಜ ಬೊಮ್ಮಾಯಿ ಆಡಳಿತವನ್ನು ಹೊಗಳುವ ಮೂಲಕರಾಜ್ಯದಲ್ಲಿನ ಭ್ರಷ್ಟಾಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಧಿಕೃತ ಮುದ್ರೆ ಒತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ರಾಜ್ಯದಲ್ಲಿ ಕೇಳಿಬರುತ್ತಿರುವ ಕಮಿಷನ್‌ ಆರೋಪದ ಕುರಿತು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಆರೋಪಗಳು ಕೇಳಿಬಂದಿವೆ. ಗುತ್ತಿಗೆದಾರರ ಸಂಘವು ಪ್ರಧಾನಿಗೆ ಪತ್ರವನ್ನೂ ಬರೆದಿದೆ. ಆದರೆ, ಪ್ರಧಾನಿ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಇದಲ್ಲದೇ ಕೇಂದ್ರದ ಮಂತ್ರಿಗಳು ಇಲ್ಲಿಗೆ ಬಂದು ಬೊಮ್ಮಾಯಿಯಬೆನ್ನು ತಟ್ಟಿ ಹೋಗುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಪಿಎಸ್‌ಐ ಅಕ್ರಮದಲ್ಲಿ ತೊಡಗಿರುವ ಅಧಿಕಾರಿಗಳವರ್ಗಾವಣೆ ಮಾಡಲಾಗಿದೆ. ಕನಿಷ್ಟ ಪಕ್ಷ ಅಧಿಕಾರಿಗಳ ಮೇಲೆ ಎಫ್‌ಐಆರ್‌ ಅನ್ನೂ ದಾಖಲಿಸಲಾಗಿಲ್ಲ. ಇದರಿಂದ ಬಿಜೆಪಿ ನಾಯಕರೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬುದು ತಿಳಿದುಬರುತ್ತದೆ’ ಎಂದು ಸಿದ್ದರಾಮಯ್ಯ ಹೇಳಿದರು.

ಈ ಹಗರಣಗಳಿಗೆಗೃಹ ಸಚಿವ ಆರಗ ಜ್ಞಾನೇಂದ್ರ ನೇರ ಹೊಣೆಯಾಗಿದ್ದಾರೆ. ಅವರೊಬ್ಬಬೇಜವಾಬ್ದಾರಿ ವ್ಯಕ್ತಿ. ಪಿಎಸ್‌ಐ ಹಗರಣದ ಸಂತ್ರಸ್ತರುಪತ್ರ ಬರೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲಎಂದು ಹೇಳಿದರು.

ಪಿಎಸ್‌ಐ ಅಕ್ರಮಗಳ ಕುರಿತು ಸಚಿವಪ್ರಭು ಚವ್ಹಾಣ್ ಹಾಗೂ ಬಿಜೆಪಿ ಎಂಎಲ್‌ಸಿ ಸಂಕನೂರ ಅವರು ಬೊಮ್ಮಾಯಿ ಹಾಗೂ ಆರಗ ಅವರಿಗೆ ಪತ್ರ ಬರೆದಿದ್ದಾರೆ. ಆದರೆ, ನೇಮಕಾತಿ ಅಕ್ರಮದ ಕುರಿತು ಸರ್ಕಾರ ತಲೆಕೆಡಿಸಿಕೊಂಡಿಲ್ಲಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಪಿಎಸ್ಐ ನೇಮಕಾತಿಯನ್ನು ರದ್ದು ಮಾಡುವ ಮೂಲಕ ಅಕ್ರಮ ನಡೆದಿದೆ ಎಂಬುದಾಗಿಸರ್ಕಾರವೇ ಒಪ್ಪಿಕೊಂಡಿದೆ ಎಂದು ಕಾಂಗ್ರೆಸ್‌ ನಾಯಕ ಕಿಡಿ ಕಾರಿದರು.

ಸಿಐಡಿ ತನಿಖೆ ಬಗ್ಗೆ ನಮಗೆ ನಂಬಿಕೆ ಇಲ್ಲ. ಅದರಿಂದ ನ್ಯಾಯ ಸಿಗಲ್ಲ. ಕಾರಣ, ಇದರಲ್ಲಿ ಪೊಲೀಸ್‌ ಅಧಿಕಾರಿಗಳು, ಸಚಿವರು ಶಾಮೀಲಾಗಿದ್ದಾರೆ. ಇದನ್ನು ನ್ಯಾಯಾಂಗ ತನಿಖೆಗೆಕೂಡಲೇ ಒಪ್ಪಿಸಬೇಕು. ಹೈಕೋರ್ಟ್‌ ನ್ಯಾಯಮೂರ್ತಿಗಳಿಂದ ತನಿಖೆ ನಡೆಯಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಇವುಗಳನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.