ADVERTISEMENT

1,800 ಕಾರುಗಳ ಸಂಚಾರಕ್ಕೆ ₹43 ಸಾವಿರ ಕೋಟಿ ವೆಚ್ಚ: ತೇಜಸ್ವಿ ಸೂರ್ಯ

ಹಣ ಪೋಲು ಮಾಡುವ ಯೋಜನೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 16:39 IST
Last Updated 29 ಅಕ್ಟೋಬರ್ 2025, 16:39 IST
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ   

ಬೆಂಗಳೂರು: ‘ಸುರಂಗ ರಸ್ತೆ ನಿರ್ಮಾಣಕ್ಕೆ ₹43 ಸಾವಿರ ಕೋಟಿ ವಿನಿಯೋಗಿಸಲಾಗುತ್ತಿದೆ. ಇದು ರಾಜ್ಯ ಸರ್ಕಾರದ ಸಾಮಾಜಿಕ ಪಿಡುಗಿನ ನಿವಾರಣೆಗಾಗಿಯೇ? 1,800 ಕಾರುಗಳ ಮಾಲೀಕರ ಸಂಚಾರಕ್ಕೆ ಇಷ್ಟೊಂದು ವೆಚ್ಚ ಅಗತ್ಯವಿದೆಯೇ’ ಎಂದು ಸಂಸದ ತೇಜಸ್ವಿ ಸೂರ್ಯ ಪ್ರಶ್ನಿಸಿದರು.

‘ಬೆಂಗಳೂರಿನಲ್ಲಿ ಕಾರು ಇಲ್ಲದಿದ್ದರೆ ಯಾವುದೇ ಗಂಡಿಗೂ ಹೆಣ್ಣು ಕೊಡುವುದಿಲ್ಲ’ ಎಂಬುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೀಡಿದ ಹೇಳಿಕೆಗೆ ತೇಜಸ್ವಿ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.

ಅಷ್ಟೊಂದು ದೊಡ್ಡ ಮೊತ್ತ ವಿನಿಯೋಗಿಸಿ 18 ಕಿ.ಮೀ ಸುರಂಗ ರಸ್ತೆ ನಿರ್ಮಾಣ ಮಾಡಿದರೆ ಎಲ್ಲ ಮಾರ್ಗಗಳ ಸಂಚಾರ ದಟ್ಟಣೆಯ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ತಜ್ಞರ ಸಲಹೆ, ಕಾರ್ಯಸಾಧ್ಯತೆಯ ಕುರಿತು ಅಧ್ಯಯನ ನಡೆಸಿಲ್ಲ. ಅಪಘಾತಗಳ ನಿರ್ವಹಣೆ ಬಗ್ಗೆ ಸೂಕ್ತ ಪರಿಹಾರ ಕಂಡುಕೊಂಡಿಲ್ಲ. ಸಾರ್ವಜನಿಕರ ಹಣ ಪೋಲು ಮಾಡುವ ಸರ್ಕಾರದ ನಡೆಗೆ ಇದಕ್ಕಿಂತ ಬೇರೆ ನಿದರ್ಶನವಿಲ್ಲ ಎಂದು ಟೀಕಿಸಿದರು.

ADVERTISEMENT

‘ಬೆಂಗಳೂರಿನ ಶೇ 70 ರಷ್ಟು ಜನರು ಸಾರ್ವಜನಿಕ ಸಾರಿಗೆಗಳಲ್ಲಿ ಸಂಚರಿಸುವಂತಾಗಬೇಕು. ಅದಕ್ಕಾಗಿ ಐದು ಅಂಶಗಳನ್ನು ಒಳಗೊಂಡ ವೈಜ್ಞಾನಿಕ ಪರಿಹಾರಗಳನ್ನು ನೀಡಿದ್ದೇವೆ. ಹೊಸ ಯೋಜನೆಗಳನ್ನು ಆರಂಭಿಸುವ ಮೊದಲು ಬಾಕಿ ಇರುವ ಯೋಜನೆ ಮುಗಿಸಬೇಕು. ಕಡಿಮೆ ಸಮಯ, ಕಡಿಮೆ ಖರ್ಚಿನಲ್ಲಿ ಅತಿ ಹೆಚ್ಚು ಜನರಿಗೆ ಪ್ರಯೋಜನ ಲಭಿಸಬೇಕು. ಕೇವಲ ಕಾರುಗಳ ಸಂಚಾರಕ್ಕೆ ಆದ್ಯತೆ ನೀಡಬಾರದು. ಹಳದಿ ಮೆಟ್ರೊ ಮಾರ್ಗ ಆರಂಭವಾದ ನಂತರ ರೇಷ್ಮೆ ಮಂಡಳಿ ರಸ್ತೆಯಲ್ಲಿ ಕಾರುಗಳ ಸಂಚಾರ ದಟ್ಟಣೆ ಶೇ 37ರಷ್ಟು, ನೇರಳೆ ಮೆಟ್ರೊ ಮಾರ್ಗದಿಂದ ಶೇ 12ರಿಂದ 14ರಷ್ಟು ಸಾರಿಗೆ ದಟ್ಟಣೆ ಕಡಿಮೆಯಾಗಿದೆ. ಕಾರು ಬಳಸುವವರೂ ಹವಾನಿಯಂತ್ರಿತ ಮೆಟ್ರೊಗಳಿಗೆ ಒಲವು ತೋರುತ್ತಿದ್ದಾರೆ. ಮೆಟ್ರೊ ಜಾಲ ವಿಸ್ತರಣೆ, ಉಪನಗರ ರೈಲು ಯೋಜನೆ, ಟ್ರ್ಯಾಮ್‍ಗಳು, ವರ್ತುಲ ರೈಲು ಯೋಜನೆಗಳು ಬೇಕಿವೆ ಎಂದು ಸಲಹೆ ನೀಡಿದರು.

ಮೆಟ್ರೊ ರೈಲು ಹೊಸ ಯೋಜನೆಗಳ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಪ್ರಯಾಣ ದರ ಹೆಚ್ಚಳದ ಪರಿಣಾಮ ಜನರು ಸ್ವಂತ ವಾಹನಗಳನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಇದರಿಂದ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಫುಟ್‌ಪಾತ್‌ಗಳಿಲ್ಲದೆ ಪಾದಚಾರಿಗಳು ಅಧಿಕ ಸಂಖ್ಯೆಯಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಪುಲ್ವಾಮಾ ದಾಳಿಯಲ್ಲಿ ಕರ್ನಾಟಕದ ಮೂವರು ಮೃತರಾಗಿದ್ದರು. ಆ ಪ್ರಕರಣ ದೊಡ್ಡ ಸುದ್ದಿ ಆಗಿತ್ತು. ಬೆಂಗಳೂರಿನಲ್ಲಿ ಪ್ರತಿದಿನ 15- 20 ಪಾದಚಾರಿಗಳು ಅಪಘಾತದಲ್ಲಿ ಮೃತರಾಗುತ್ತಿದ್ದಾರೆ. ಇಂತಹ ವಿಷಯಗಳಿಗೆ ಸರ್ಕಾರ ಆದ್ಯತೆ ನೀಡುತ್ತಿಲ್ಲ ಎಂದು ದೂರಿದರು.

ಸರ್ಜಾಪುರದಿಂದ ಹೆಬ್ಬಾಳ ಮೆಟ್ರೊ ಜಾಗದಲ್ಲೇ ಸುರಂಗ ರಸ್ತೆ ಪ್ರಸ್ತಾಪವಿದೆ. ಸರ್ಜಾಪುರ– ಹೆಬ್ಬಾಳ ಮೆಟ್ರೊದಿಂದ ಗಂಟೆಗೆ 69 ಸಾವಿರ ಜನರು ಪ್ರಯಾಣಿಸಬಹುದು. ಸರ್ಕಾರಕ್ಕೆ ಅಷ್ಟು ಜನರು ಓಡಾಡುವುದು ಬೇಕಾಗಿಲ್ಲ. ಸಮಗ್ರ ಸಂಚಾರ ಯೋಜನೆಯಡಿ ಬೆಂಗಳೂರಿಗೆ 300 ಕಿ.ಮೀ ಮೆಟ್ರೊ ಜಾಲ ಆಗಬೇಕು. ಆಗ ಬೆಂಗಳೂರಿನ ಯಾವುದೇ ಸ್ಥಳದಲ್ಲಿದ್ದರೂ ಕಾಲ್ನಡಿಗೆಯಲ್ಲಿ ಐದು ನಿಮಿಷಕ್ಕೆ ಮೆಟ್ರೊ ನಿಲ್ದಾಣ ಸಿಗುತ್ತದೆ. ಪ್ರತಿ 3 ನಿಮಿಷಕ್ಕೊಂದು ರೈಲು ಸಾಗಬೇಕು. ಇದು ಬಿಜೆಪಿಯ ಪರ್ಯಾಯ ಸಲಹೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.