ಸಿದ್ದರಾಮಯ್ಯ
ಬೆಂಗಳೂರು: ಬೆಳಗಾವಿಯಲ್ಲಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯವರೂ (ಎಂಇಎಸ್) ಕನ್ನಡಿಗರೇ. ಅವರಲ್ಲಿ ಯಾರಾದರೂ ಪುಂಡಾಟಿಕೆ ಮಾಡಿದರೆ ಮಟ್ಟ ಹಾಕುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಮೈಸೂರು ಬ್ಯಾಂಕ್ ವೃತ್ತದ ನೃಪತುಂಗ ಮಂಟಪದಲ್ಲಿ ಭುವನೇಶ್ವರಿ ಹಾಗೂ ಅಣ್ಣಮ್ಮ ದೇವತೆಯ ವೈಭವದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ಬೆಳಗಾವಿ ವಿಚಾರದಲ್ಲಿ ರಾಜಿ ಇಲ್ಲ. ಮಹಾಜನ್ ವರದಿಯೇ ಅಂತಿಮ. ಬೆಳಗಾವಿ ಕನ್ನಡದ ನೆಲ, ಕರ್ನಾಟಕದ ಭಾಗ. ಇದನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಕನ್ನಡ ಹೋರಾಟಗಾರರ ವಿರುದ್ಧದ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಭರವಸೆ ನೀಡಿದರು.
ಎಂಇಎಸ್‌ನವರು ಕರ್ನಾಟಕದಲ್ಲಿ ಇರಬೇಕು ಎಂದಾದರೆ ಕನ್ನಡಿಗರಾಗಿರ ಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕರ್ನಾಟಕದಲ್ಲಿ ಇರುವವರು ಕಡ್ಡಾಯವಾಗಿ ಕನ್ನಡ ಕಲಿಯಬೇಕು, ಮಾತನಾಡಬೇಕು. ಈ ನಾಡಿನಲ್ಲಿ ಬದುಕುವವರು ಕನ್ನಡದ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಹೇಳಿದರು.
‘ಎಂಇಎಸ್‌ನವರ ಮನ ಪರಿವರ್ತಿಸುವ ಕೆಲಸವನ್ನು ಮಾಡೋಣ. ಕರ್ನಾಟಕದಲ್ಲಿ ಎಂಇಎಸ್ ಒಂದು ಗುಂಪು ಆಗಿ, ಒಂದು ಪಕ್ಷವಾಗಿ ಕೆಲಸ ಮಾಡುತ್ತಿದೆ. ಅವರೂ ಕನ್ನಡರಿಗರೇ ಆಗಿದ್ದಾರೆ. ಅವರು ಕೂಡ ಕರ್ನಾಟಕ ವಿಧಾನಸಭೆಗೆ ಪ್ರವೇಶ ಮಾಡಿದ್ದಾರೆ. ಇತರ ವಿಚಾರಗಳ ಮಾಹಿತಿ ಗೃಹ ಸಚಿವರಿಗೆ ಇರುತ್ತದೆ’ ಎಂದು ಅವರು ಹೇಳಿದರು.
ಬೆಳಗಾವಿ: ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಎಂಇಎಸ್ ಮುಖಂಡರು ಶನಿವಾರ ಕರಾಳ ದಿನ ಆಚರಿಸಿ, ಕಪ್ಪು ಬಟ್ಟೆ ಧರಿಸಿ ಮೆರವಣಿಗೆ ನಡೆಸಿದರು.
‘ಸಂಯುಕ್ತ ಮಹಾರಾಷ್ಟ್ರ ಝಾಲಾಚ್ ಪಾಹಿಜೆ (ಸಂಪೂರ್ಣ ಮಹಾರಾಷ್ಟ್ರ ಆಗಲೇಬೇಕು)’ ಘೋಷಣೆಗಳನ್ನು ಕೂಗಿದರು. ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಪಾಲಿಕೆ ಸದಸ್ಯೆ ವೈಶಾಲಿ ಭಾತಕಾಂಡೆ ಕೂಡ ಪಾಲ್ಗೊಂಡರು.
ಪೊಲೀಸ್ ವಶಕ್ಕೆ: ಕರಾಳ ದಿನ ವಿರೋಧಿಸಿ ಮರಾಠ ಮಂದಿರದತ್ತ ನುಗ್ಗಲೆತ್ನಿಸಿದ ಕನ್ನಡ ಸಂಘಟನೆಗಳ 20ಕ್ಕೂ ಹೆಚ್ಚು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.
ಜಿಲ್ಲೆ ಗಡಿ ಪ್ರವೇಶಿಸಲೆತ್ನಿಸಿದ ಮಹಾರಾಷ್ಟ್ರದ ಸಂಸದ ಧೈರ್ಯಶೀಲ ಮಾನೆ, ಶಿವಸೇನಾ (ಉದ್ಧವ್ ಠಾಕ್ರೆ ಬಣ) ಕೊಲ್ಹಾಪುರ ಘಟಕದ ಅಧ್ಯಕ್ಷ ವಿಜಯ ದೇವಣೆ ಸೇರಿ ಹಲವರನ್ನು ನಿಪ್ಪಾಣಿ ಪೊಲೀಸರು ವಾಪಸ್ ಕಳುಹಿಸಿದರು.
ಶಿವಸೇನಾದವರು ನಾಡದ್ರೋಹಿ ಹೇಳಿಕೆ ನೀಡಿ, ಶಾಂತಿ ಕದಡುವ ಕಾರಣ ನೀಡಿ ಗಡಿ ಪ್ರವೇಶಿಸಬಾರದು ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ಎಂಇಎಸ್ ನಿಷೇಧಿಸಲು ಆಗ್ರಹಗಳು ಬಂದಿವೆ. ನಾಡದ್ರೋಹಿ ಚಟುವಟಿಕೆ ಕೈಗೊಂಡಿದ್ದರೆ ನಿಷೇಧಿಸಲು ಗಂಭೀರ ಚರ್ಚೆ ನಡೆಸಲಾಗುವುದು.–ಸತೀಶ ಜಾರಕಿಹೊಳಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ
ಕರಾಳ ದಿನ ಆಚರಣೆ ಕಾರಣ ಮೆರವಣಿಗೆ ನಡೆಸಲು ಎಂಇಎಸ್‌ಗೆ ಅನುಮತಿ ನೀಡಿಲ್ಲ. ಅದರ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು.–ಭೂಷಣ ಬೊರಸೆ, ಪೊಲೀಸ್ ಆಯುಕ್ತ, ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.