ADVERTISEMENT

ಭಾರತ ಪಾಕ್‌– ಸಂಘರ್ಷ: ಟ್ರಂಪ್‌– ಪುಟಿನ್‌ ಚರ್ಚೆ

ರಷ್ಯಾದ ಮಧ್ಯಸ್ಥಿಕೆಗೆ ಪಾಕಿಸ್ತಾನದ ಮನವಿ

ಪಿಟಿಐ
Published 5 ಜೂನ್ 2025, 15:39 IST
Last Updated 5 ಜೂನ್ 2025, 15:39 IST
<div class="paragraphs"><p>ವ್ಲಾಡಿಮಿರ್‌ ಪುಟಿನ್‌,&nbsp;ಡೊನಾಲ್ಡ್‌ ಟ್ರಂಪ್‌</p></div>

ವ್ಲಾಡಿಮಿರ್‌ ಪುಟಿನ್‌, ಡೊನಾಲ್ಡ್‌ ಟ್ರಂಪ್‌

   

ಮಾಸ್ಕೊ : ‘ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಸೇನಾ ಸಂಘರ್ಷದ ಕುರಿತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇತ್ತೀಚೆಗೆ ದೂರವಾಣಿ ಮೂಲಕ ಚರ್ಚಿಸಿದ್ದಾರೆ. ಉಭಯ ದೇಶಗಳ ನಡುವೆ ಕದನ ವಿರಾಮ ಘೋಷಣೆಯಲ್ಲಿ ಟ್ರಂಪ್‌ ವಹಿಸಿದ್ದ ಪಾತ್ರದ ಬಗ್ಗೆಯೂ ಪ್ರಸ್ತಾಪವಾಗಿದೆ’ ಎಂದು ರಷ್ಯಾದ ಆಡಳಿತ ಕಚೇರಿ ಕ್ರೆಮ್ಲಿನ್‌ ಹೇಳಿದೆ.

‘ಇಬ್ಬರೂ ನಾಯಕರ ಮಧ್ಯೆ ನಡೆದ ದೂರವಾಣಿ ಸಂಭಾಷಣೆಯಲ್ಲಿ ಹಲವು ವಿಷಯಗಳ ಪ್ರಸ್ತಾಪವಾಗಿದೆ. ಮಧ್ಯ ಏಷ್ಯಾದಲ್ಲಿ ಭಾರತ– ಪಾಕಿಸ್ತಾನದ ನಡುವಿನ ಸಂಘರ್ಷದ ಬಗ್ಗೆಯೂ ಚರ್ಚಿಸಲಾಗಿದೆ. ಉಕ್ರೇನ್‌ಗೆ ಸಂಬಂಧಿಸಿದಂತೆಯೂ ಚರ್ಚೆ ನಡೆದಿದೆ’ ಎಂದು ಕ್ರೆಮ್ಲಿನ್‌ನ ಅಧಿಕಾರಿ ಯೂರಿ ಉಷಕೋವ್‌ ಅವರನ್ನು ಉಲ್ಲೇಖಿಸಿ ರಷ್ಯಾದ ಸರ್ಕಾರಿ ಸುದ್ದಿಸಂಸ್ಥೆ ಟಾಸ್‌ ವರದಿ ಮಾಡಿದೆ.

ADVERTISEMENT

ಈ ಮಧ್ಯೆ, ಭಾರತದ ಜೊತೆಗಿನ ಸಂಘರ್ಷ ಅಂತ್ಯಗೊಳಿಸಲು ನೆರವಾಗುವಂತೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಪುಟಿನ್‌ ಅವರನ್ನು ಕೋರಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿಯವರ ವಿಶೇಷ ಅಧಿಕಾರಿ ಸೈಯದ್‌ ತಾರೀಖ್ ಫತೇಮಿ ತಿಳಿಸಿದ್ದಾರೆ.

ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್‌ ಅವರನ್ನು ಮಾಸ್ಕೊದಲ್ಲಿ ಮಂಗಳವಾರ ಭೇಟಿಮಾಡಿದ್ದ ಫತೇಮಿ, ಪುಟಿನ್‌ ಅವರಿಗೆ ಶೆಹಬಾಜ್‌ ಷರೀಫ್‌ ಅವರು ಬರೆದಿರುವ ಪತ್ರವನ್ನು ಹಸ್ತಾಂತರಿಸಿದ್ದಾರೆ.

ಡಿಎಂಕೆ ಸಂಸದೆ ಕನಿಮೊಳಿ ಕರುಣಾನಿಧಿ ನೇತೃತ್ವದ ವಿವಿಧ ಪಕ್ಷಗಳ ಭಾರತೀಯ ನಿಯೋಗವು ರಷ್ಯಾಕ್ಕೆ ಭೇಟಿನೀಡಿ, ಪಹಲ್ಗಾಮ್‌ ಭಯೋತ್ಪಾದಕ ದಾಳಿ ಹಾಗೂ ನಂತರದಲ್ಲಿ ಭಾರತ– ಪಾಕಿಸ್ತಾನದ ಮಧ್ಯೆ ನಡೆದ ಸೇನಾ ಸಂಘರ್ಷದ ಕುರಿತು ವಾಸ್ತವಿಕ ಸಂಗತಿಗಳನ್ನು ಮನವರಿಕೆ ಮಾಡಿಕೊಟ್ಟಿತ್ತು. ಭಯೋತ್ಪಾದನೆ ವಿರುದ್ಧ ಭಾರತ ತಳೆದಿರುವ ಶೂನ್ಯಸಹನೆ ನೀತಿಯನ್ನು ರಷ್ಯಾ ಬೆಂಬಲಿಸಿತ್ತು. ಅದರ ಬೆನ್ನಲ್ಲೇ ಫತೇಮಿ ರಷ್ಯಾ ಪ್ರವಾಸ ಕೈಗೊಂಡಿದ್ದರು.

‘ರಷ್ಯಾದ ವಿದೇಶಾಂಗ ಸಚಿವ ಲಾವ್ರೋವ್‌ ಅವರನ್ನು ನಾನು ಭೇಟಿ ಮಾಡಿದ್ದೇನೆ. ನಮ್ಮ ಪ್ರಧಾನಿಯವರು ಪುಟಿನ್‌ ಅವರಿಗೆ ಬರೆದಿರುವ ಪತ್ರವನ್ನು ಹಸ್ತಾಂತರ ಮಾಡಿದ್ದೇನೆ. ಭಾರತ– ಪಾಕಿಸ್ತಾನ ಒಟ್ಟಾಗಿ ಕುಳಿತು ಚರ್ಚಿಸಲು ಹಾಗೂ ಸಮಸ್ಯೆಗೆ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳಲು ಅವರ ಪ್ರಭಾವವನ್ನು ಬಳಸುವಂತೆ ಕೋರಿದ್ದೇವೆ’ ಎಂದು ಫತೇಮಿ ಬುಧವಾರ ತಿಳಿಸಿದರು.

ಭಾರತದ ಜೊತೆಗಿನ ಸಂಘರ್ಷ ತಿಳಿಗೊಳಿಸಲು ರಷ್ಯಾ ಮುಂದಾಗಲಿದೆ ಎಂಬುದನ್ನು ಪಾಕಿಸ್ತಾನವು ನಿರೀಕ್ಷಿಸುತ್ತಿದೆ ಎಂದು ಫತೇಮಿ ಹೇಳಿರುವುದಾಗಿ ಟಾಸ್‌ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

‘ಸಂಘರ್ಷ ಕೊನೆಗೊಳಿಸಲು ನಾವು ರಷ್ಯಾದ ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇವೆ. ಪಾಕಿಸ್ತಾನ ಮತ್ತು ಭಾರತ ಒಟ್ಟಾಗಿ ಕುಳಿತು ಚರ್ಚಿಸಬೇಕು. ಅವರೊಂದಿಗೆ ಕುಳಿತು ಚರ್ಚಿಸಲು ನಾವು ಸಿದ್ದರಾಗಿದ್ದೇವೆ. ಅವರು ಸಮಸ್ಯೆಯನ್ನು ಪರಿಹರಿಸಲಿ’ ಎಂಬುದಾಗಿ ಹೇಳಿದ್ದಾರೆ ಎಂದು ಸುದ್ದಿಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.