ADVERTISEMENT

ಕಾಶ್ಮೀರ ವಿಚಾರದಲ್ಲಿ ಹಸ್ತಕ್ಷೇಪ ಸಲ್ಲ: ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್

ಕಾಶ್ಮೀರವು ಭಾರತ–ಪಾಕಿಸ್ತಾನ ದ್ವಿಪಕ್ಷೀಯ ವಿಷಯ ಎಂದ ಇಮ್ಯಾನುವೆಲ್

ಪಿಟಿಐ
Published 23 ಆಗಸ್ಟ್ 2019, 5:39 IST
Last Updated 23 ಆಗಸ್ಟ್ 2019, 5:39 IST
ಜಂಟಿ ಪತ್ರಿಕಾಗೋಷ್ಠಿಯ ಬಳಿಕ ಪ್ರಧಾನಿ ಮೋದಿ ಜತೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ –ಎಪಿ ಚಿತ್ರ
ಜಂಟಿ ಪತ್ರಿಕಾಗೋಷ್ಠಿಯ ಬಳಿಕ ಪ್ರಧಾನಿ ಮೋದಿ ಜತೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ –ಎಪಿ ಚಿತ್ರ   

ಚ್ಯಾಂಟಿಲಿ (ಫ್ರಾನ್ಸ್):ಕಾಶ್ಮೀರ ಸಮಸ್ಯೆ ಕುರಿತು ಭಾರತ–ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಈ ವಿಚಾರದಲ್ಲಿ ಮೂರನೇ ರಾಷ್ಟ್ರ ಹಸ್ತಕ್ಷೇಪ ಮಾಡಬಾರದು ಎಂದು ಫ್ರಾನ್ಸ್ ಅಧ್ಯಕ್ಷಇಮ್ಯಾನುವೆಲ್ ಮ್ಯಾಕ್ರನ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಸುಮಾರು 90 ನಿಮಿಷ ದ್ವಿಪಕ್ಷೀಯ ಮಾತುಕತೆ ನಡೆಸಿದ ಅವರು ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದರು. ಇದರ ಬೆನ್ನಲ್ಲೇ ಮ್ಯಾಕ್ರನ್ ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಮ್ಮು–ಕಾಶ್ಮರ ವಿಶೇಷ ಸ್ಥಾನಮಾನ ರದ್ದತಿ ನಿರ್ಧಾರದ ಕುರಿತು ಮೋದಿಯವರು ತಮಗೆ ಮಾಹಿತಿ ನೀಡಿದ್ದಾರೆ. ಕಾಶ್ಮೀರವು ಭಾರತದ ಸಾರ್ವಭೌಮತ್ವಕ್ಕೆ ಸಂಬಂಧಿಸಿದ್ದು ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ ಎಂದು ಮ್ಯಾಕ್ರನ್ ತಿಳಿಸಿದ್ದಾರೆ.

‘ಕಾಶ್ಮೀರ ಪ್ರದೇಶದಲ್ಲಿ ಶಾಂತಿ ನೆಲೆಸಬೇಕು. ಆ ಪ್ರದೇಶದ ಜನರ ಹಕ್ಕುಗಳ ರಕ್ಷಣೆಯಾಗಬೇಕು. ಅದಕ್ಕಾಗಿ ಭಾರತ–ಪಾಕಿಸ್ತಾನ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಬೇರೆಯೆವರು ಹಸ್ತಕ್ಷೇಪ ಮಾಡಬಾರದು. ಈ ಕುರಿತು ಪಾಕಿಸ್ತಾನದ ಪ್ರಧಾನಿ ಜತೆಗೂ ಮಾತುಕತೆ ನಡೆಸಲಿದ್ದೇನೆ. ದ್ವಿಪಕ್ಷೀಯವಾಗಿ ಪರಿಹಾರ ಕಂಡುಕೊಳ್ಳುವಂತೆ ಅವರಿಗೆ ಸೂಚಿಸಲಿದ್ದೇನೆ’ ಎಂದುಮ್ಯಾಕ್ರನ್ ಹೇಳಿದ್ದಾರೆ.

ಎರಡು ದಿನಗಳ ಫ್ರಾನ್ಸ್ ಪ್ರವಾಸದಲ್ಲಿರುವ ಮೋದಿ ಅವರು ಗುರುವಾರ ಪ್ಯಾರಿಸ್‌ಗೆ ತೆರಳಿದ್ದು, ಮ್ಯಾಕ್ರನ್ ಜತೆ ಮಾತುಕತೆ ನಡೆಸಿದ್ದಾರೆ.

ಮೊದಲ ಹಂತದಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಮುಂದಿನ ತಿಂಗಳು ಭಾರತಕ್ಕೆ ಹಸ್ತಾಂತರಿಸಲಾಗುವುದು ಎಂದೂ ಮ್ಯಾಕ್ರನ್ ಮಾಹಿತಿ ನೀಡಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.