ಡೊನಾಲ್ಡ್ ಟ್ರಂಪ್
(ರಾಯಿಟರ್ಸ್ ಚಿತ್ರ)
ವಾಷಿಂಗ್ಟನ್: ಇರಾನ್‌ನ ಮೂರು ಅಣು ಕೇಂದ್ರಗಳ ಮೇಲೆ ನಡೆಸಿದ ಬಾಂಬ್ ದಾಳಿಯ ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಅಣು ಕೇಂದ್ರಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ. ಒಂದು ವೇಳೆ ಇರಾನ್ ಪ್ರತಿರೋಧ ಒಡ್ಡಿದರೆ ಮತ್ತಷ್ಟು ದಾಳಿ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಶ್ವೇತಭವನದಲ್ಲಿ ಅಮೆರಿಕದ ಜನರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, 'ಇರಾನ್‌ನ ಮೂರು ಪ್ರಮುಖ ಅಣು ಕೇಂದ್ರಗಳಾದ ಫೋರ್ಡೊ, ನತಾನ್ಜ್ ಮತ್ತು ಎಸ್ಪಹಾನ್ ಮೇಲೆ ಅಮೆರಿಕದ ಮಿಲಿಟರಿ ನಿಖರ ದಾಳಿ ನಡೆಸಿತು' ಎಂದು ಹೇಳಿದ್ದಾರೆ.
'ಇರಾನ್‌ನ ಪರಮಾಣು ಸಾಮರ್ಥ್ಯವನ್ನು ನಾಶಪಡಿಸುವುದು ಹಾಗೂ ಭಯೋತ್ಪಾದನಾ ಪ್ರಾಯೋಜಿತ ರಾಷ್ಟ್ರದಿಂದ ಎದುರಾಗುವ ಭೀತಿಯಿಂದ ಜಗತ್ತನ್ನು ರಕ್ಷಿಸುವುದು ನಮ್ಮ ಗುರಿಯಾಗಿತ್ತು' ಎಂದು ಹೇಳಿದ್ದಾರೆ.
'ಇಂದು (ಶನಿವಾರ) ರಾತ್ರಿ, ನಾವು ನಡೆಸಿರುವ ದಾಳಿಯು ಅದ್ಭುತ ಯಶಸ್ಸನ್ನು ಕಂಡಿದೆ ಎಂದು ಜಗತ್ತಿಗೆ ಹೇಳಬಲ್ಲೆ. ಇರಾನ್‌ನ ಪರಮಾಣು ಕೇಂದ್ರಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ' ಎಂದು ತಿಳಿಸಿದ್ದಾರೆ.
'ಮಧ್ಯಪ್ರಾಚ್ಯವನ್ನು ಬೆದರಿಸುವ ಇರಾನ್‌ನಲ್ಲಿ ಈಗ ಶಾಂತಿ ಸ್ಥಾಪನೆಯಾಗಬೇಕು. ಅದನ್ನು ಮಾಡದಿದ್ದರೆ ಭವಿಷ್ಯದ ದಾಳಿಗಳು ಇನ್ನಷ್ಟು ಮಾರಕವಾಗಿರುತ್ತವೆ' ಎಂದು ಅವರು ಎಚ್ಚರಿಸಿದ್ದಾರೆ.
'ಇರಾನ್‌ನಲ್ಲಿ ಶಾಂತಿ ನೆಲೆಸುತ್ತದೆ ಎಂದು ಭಾವಿಸುತ್ತೇನೆ. ಇಲ್ಲದಿದ್ದರೆ ಕಳೆದ ಎಂಟು ದಿನಗಳಲ್ಲಿ ಕಂಡಿರುವುದಕ್ಕಿಂತ ಹೆಚ್ಚಿನ ವಿನಾಶ ಉಂಟಾಗಲಿದೆ. ನೆನಪಿಡಿ, ಇನ್ನೂ ಹಲವು ಗುರಿಗಳು ಬಾಕಿ ಉಳಿದಿವೆ. ಇಂದಿನ ಗುರಿ ಅವೆಲ್ಲದಕ್ಕಿಂತಲೂ ಕಷ್ಟಕರವಾಗಿತ್ತು. ಬಹುಶಃ ಅತ್ಯಂತ ಮಾರಕವಾಗಿತ್ತು. ಮುಂದಿನ ಗುರಿಗಳು ಸುಲಭವಾಗಲಿವೆ. ಬೇಗನೇ ಶಾಂತಿ ನೆಲೆಸದಿದ್ದರೆ ಆ ಗುರಿಗಳನ್ನು ನಿಖರವಾಗಿ ಕೌಶಲ್ಯದಿಂದ ಹೊಡೆದುರುಳಿಸಲಿದ್ದೇವೆ. ನಾವು ಮಾಡಿದ್ದನ್ನು ಮಾಡಲು ಜಗತ್ತಿನ ಬೇರೆ ಯಾವುದೇ ಮಿಲಿಟರಿ ಶಕ್ತಿಗೂ ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.
'ಕಳೆದ 40 ವರ್ಷಗಳಿಂದ ಇರಾನ್ 'ಅಮೆರಿಕಕ್ಕೆ ಸಾವು', 'ಇಸ್ರೇಲ್‌ಗೆ ಸಾವು' ಎಂದು ಹೇಳುತ್ತಲೇ ಬಂದಿದೆ. ಅವರು ನಮ್ಮವರನ್ನು ಕೊಲುತ್ತಿದ್ದಾರೆ. 1,000ಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿದ್ದೇವೆ. ಅಲ್ಲದೆ ಮಧ್ಯಪ್ರಾಚ್ಯ ಹಾಗೂ ಜಗತ್ತಿನಾದ್ಯಂತ ಲಕ್ಷಾಂತರ ಜನರು ಸಾವಿಗೀಡಾಗಿದ್ದಾರೆ' ಎಂದು ಹೇಳಿದ್ದಾರೆ.
'ಇದನ್ನು ಹೀಗೆಯೇ ಮುಂದುವರಿಯಲು ಬಿಡುವುದಿಲ್ಲ ಎಂದು ಬಹಳ ಹಿಂದೆಯೇ ನಾನು ನಿರ್ಧರಿಸಿದ್ದೆ. ನಾನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಅಭಿನಂದಿಸಲು ಬಯುಸುತ್ತೇನೆ. ಈ ಅದ್ಭುತ ಕೆಲಸಕ್ಕಾಗಿ ಇಸ್ರೇಲ್ ಮಿಲಿಟರಿಗೂ ಅಭಿನಂದನೆ ಸಲ್ಲಿಸುತ್ತೇನೆ. ನಾವು ಒಂದು ತಂಡವಾಗಿ ಕೆಲಸ ಮಾಡಿದ್ದೇವೆ. ಅಲ್ಲದೆ ಇರಾನ್‌ನ ಬೆದರಿಕೆಯನ್ನು ನಿರ್ಮೂಲನೆ ಮಾಡುವತ್ತ ಬಹಳ ಮುಂದೆ ಸಾಗಿದ್ದೇವೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.