ADVERTISEMENT

ಒತ್ತೆಯಾಳುಗಳ ಬಿಡುಗಡೆ ಆಗದಿದ್ದರೆ ದಾಳಿ ಬಿರುಸು: ಹಮಾಸ್‌ಗೆ ಇಸ್ರೇಲ್ ಎಚ್ಚರಿಕೆ

ಗಾಜಾ ಮೇಲೆ ದಾಳಿ, ಆಸ್ಪತ್ರೆ ಧ್ವಂಸ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 15:37 IST
Last Updated 22 ಮಾರ್ಚ್ 2025, 15:37 IST
<div class="paragraphs"><p>ಗಾಜಾಪಟ್ಟಿಯ ಡೇರ್‌ ಎಲ್ ಬಾಲಾದಲ್ಲಿ ಮೀನುಗಾರಿಕೆ ನೆಲೆ ಇಸ್ರೇಲ್‌ ದಾಳಿಯಿಂದ ಹಾನಿಗೊಂಡಿದೆ </p></div>

ಗಾಜಾಪಟ್ಟಿಯ ಡೇರ್‌ ಎಲ್ ಬಾಲಾದಲ್ಲಿ ಮೀನುಗಾರಿಕೆ ನೆಲೆ ಇಸ್ರೇಲ್‌ ದಾಳಿಯಿಂದ ಹಾನಿಗೊಂಡಿದೆ

   

ಜೆರುಸಲೇಂ: ಗಾಜಾಪಟ್ಟಿ ಮೇಲಿನ ದಾಳಿಯನ್ನು ತೀವ್ರಗೊಳಿಸಿರುವ ಇಸ್ರೇಲ್‌ನ ಸೇನೆ, ನೆಟ್‌ಜರಿಮ್ ಕಾರಿಡಾರ್‌ನಲ್ಲಿದ್ದ ಏಕೈಕ ವಿಶೇಷ ಕ್ಯಾನ್ಸರ್ ಆಸ್ಪ‍ತ್ರೆಯನ್ನು ಧ್ವಂಸಗೊಳಿಸಿದೆ. ಬಾಕಿ 59 ಒತ್ತೆಯಾಳುಗಳನ್ನು ಹಮಾಸ್‌ ಬಂಡುಕೋರರು ಬಿಡುಗಡೆ ಮಾಡದಿದ್ದಲ್ಲಿ, ದಾಳಿ ಇನ್ನಷ್ಟು ಬಿರುಸುಗೊಳ್ಳಲಿದೆ ಎಂದು ಎಚ್ಚರಿಸಿದೆ.

ಟರ್ಕಿ–ಪ್ಯಾಲೆಸ್ಟೀನ್ ಸಹಭಾಗಿತ್ವದಲ್ಲಿ ನಿರ್ಮಾಣವಾಗಿದ್ದ ಆಸ್ಪತ್ರೆ ಮೇಲೆ ದಾಳಿ ನಡೆಸಲಾಗಿದೆ. ಆಸ್ಪತ್ರೆಯ ಡಾ. ಝಕಿ ಅಲ್‌ ಝಕ್‌ಜೌಕ್‌, ‘ಆಸ್ಪತ್ರೆಗೆ ತೀವ್ರ ಹಾನಿಯಾಗಿದೆ. ಕೆಲ ಸೌಲಭ್ಯಗಳಷ್ಟೇ ಸುಸ್ಥಿತಿಯಲ್ಲಿವೆ’ ಎಂದಿದ್ದಾರೆ.

ADVERTISEMENT

ಟರ್ಕಿಯ ವಿದೇಶಾಂಗ ಸಚಿವಾಲಯವು ಈ ದಾಳಿಯನ್ನು ಖಂಡಿದ್ದು, ಇಂತಹ ದಾಳಿಯ ಮೂಲಕ ಇಸ್ರೇಲ್‌ ಒತ್ತಾಯಪೂರ್ಕವಾಗಿ, ಪ್ಯಾಲೆಸ್ಟೀನಿಯರ ಎತ್ತಂಗಡಿಗೆ ಮುಂದಾಗಿದೆ ಎಂದಿದ್ದಾರೆ.

‘ಹಮಾಸ್‌ ಬಂಡುಕೋರರ ಕಾರ್ಯನೆಲೆ ಗುರಿಯಾಗಿಸಿ ದಾಳಿ ಮುಂದುವರಿಯಲಿದೆ. ಒತ್ತೆ ಇರಿಸಿಕೊಂಡಿರುವ ಬಾಕಿ 59 ಮಂದಿಯನ್ನು ಶೀಘ್ರ ಬಿಡುಗಡೆ ಮಾಡದಿದ್ದಲ್ಲಿ ದಾಳಿ ತೀವ್ರಗೊಳ್ಳಲಿದೆ. ಬರುವ ದಿನಗಳಲ್ಲಿ ಇನ್ನಷ್ಟು ಅಧಿಕ ಸಾಮರ್ಥ್ಯದ ಶಸ್ತ್ರಾಸ್ತ್ರಗಳು ದಾಳಿಗೆ ಬಳಕೆಯಾಗಲಿವೆ’ ಎಂದು ಇಸ್ರೇಲ್‌ನ ಸೇನೆ ಎಚ್ಚರಿಸಿದೆ. 

ರಕ್ಷಣಾ ಸಚಿವ ಕಾಟ್ಜ್ ಅವರು, ‘ಹಮಾಸ್‌ ಬಂಡುಕೋರರು ಒತ್ತೆ ಇರಿಸಿಕೊಂಡಿರುವವರಲ್ಲಿ 24 ಮಂದಿ ಬದುಕುಳಿದಿರುವ ವಿಶ್ವಾಸವಿದೆ’ ಎಂದು ಹೇಳಿದರು.

ಹೆಜ್ಬುಲ್ಲಾಗೆ ಕಟು ಎಚ್ಚರಿಕೆ (ಬೈರೂತ್ ವರದಿ): ಲೆಬನಾನ್‌ನಿಂದ ರಾಕೆಟ್‌ ದಾಳಿ ಮುಂದುವರಿದಿದ್ದೇ ಆದರೆ ತಕ್ಕ ಪರಿಣಾಮ ಎದುರಿಸಬೇಕಾದಿತು ಎಂದು ಹೆಜ್ಬುಲ್ಲಾ ಬಂಡುಕೋರರಿಗೆ ಇಸ್ರೇಲ್‌ ಎಚ್ಚರಿಸಿದೆ.

ಲೆಬನಾನ್‌ನಿಂದ ನಡೆದ ರಾಕೆಟ್ ದಾಳಿಗೆ ಇಸ್ರೇಲ್ ತೀಕ್ಷ ಪ್ರತಿಕ್ರಿಯೆ ನೀಡಿದೆ. ಅಲ್ಲದೆ, ದಾಳಿಗೆ ಪ್ರತಿಯಾಗಿ ರಾಕೆಟ್ ದಾಳಿಯನ್ನು ಸೇನೆ ನಡೆಸಿದೆ. 

ಲೆಬನಾನ್‌ನ ಪ್ರಧಾನಿ ನವಾಫ್ ಸಲಾಂ ಅವರು, ‘ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸಬೇಕು ಎಂದು ಸೇನೆಗೆ ಸೂಚಿಸಿದ್ದಾರೆ. ಯುದ್ಧ ಸ್ಥಿತಿಗೆ ಮರಳುವ ಉದ್ದೇಶ ರಾಷ್ಟ್ರಕ್ಕಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ದಾಳಿ: ಉಕ್ರೇನ್‌ನಲ್ಲಿ 3 ಸಾವು

ಕೀವ್: ಉಕ್ರೇನ್‌ನ ಝಪೊರಿಝಿಯಾ ನಗರದ ಮೇಲೆ ರಷ್ಯಾದ ಸೇನೆ ಶನಿವಾರ ಡ್ರೋನ್‌ ದಾಳಿ ನಡೆಸಿದ್ದು ಮೂವರು ಮೃತಪಟ್ಟು ಇತರೆ 12 ಮಂದಿ ಗಾಯಗೊಂಡರು.   ‘ರಷ್ಯಾ 179 ಡ್ರೋನ್‌ ದಾಳಿ ನಡೆಸಿದೆ. ಈ ಪೈಕಿ 100 ಡ್ರೋನ್‌ ಅನ್ನು ವಿಫಲಗೊಳಿಸಿದ್ದು 63 ತಾಂತ್ರಿಕ ಕಾರಣದಿಂದ ನಿಷ್ಕ್ರಿಯವಾಗಿರಬಹುದು’ ಎಂದು ಉಕ್ರೇನ್‌ನ ಸೇನೆ ತಿಳಿಸಿದೆ.

ಇನ್ನೊಂದೆಡೆ ಉಕ್ರೇನ್‌ ಕೂಡಾ 47 ಡ್ರೋನ್‌ಗಳನ್ನು ಪ್ರಯೋಗಿಸಿದ್ದು ಅದನ್ನು ತನ್ನ ಸೇನೆಯು ಹೊಡೆದುರುಳಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯವು ತಿಳಿಸಿದೆ. ಸೀಮಿತ ಕದನವಿರಾಮ ಕುರಿತ ಅಮೆರಿಕದ ಪ್ರಸ್ತಾವವನ್ನು ರಷ್ಯಾ ಮತ್ತು ಉಕ್ರೇನ್‌ ಈಚೆಗೆ ತಾತ್ವಿಕವಾಗಿ ಒಪ್ಪಿದ್ದವು. ಸಂಬಂಧಿತ ಚರ್ಚೆ ಚಾಲ್ತಿಯಲ್ಲಿರುವಂತೇ ದಾಳಿ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.