ADVERTISEMENT

16 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮ ನಿಷೇಧ: ಫೇಸ್‌ಬುಕ್, ಇನ್‌ಸ್ಟಾಗ್ರಾಂ ಬಂದ್

ಏಜೆನ್ಸೀಸ್
Published 4 ಡಿಸೆಂಬರ್ 2025, 2:24 IST
Last Updated 4 ಡಿಸೆಂಬರ್ 2025, 2:24 IST
   

ಸಿಡ್ನಿ: ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದರ ಮೇಲೆ ನಿರ್ಬಂಧಗಳು, ಮಿತಿಗಳು ಇರಬೇಕು ಎಂಬ ವಿಚಾರವಾಗಿ ವಿಶ್ವದಾದ್ಯಂತ ಪರ–ವಿರೋಧ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಈಗ ಆಸ್ಟ್ರೇಲಿಯಾ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವಂತಿಲ್ಲ ಎಂದು ಕಾನೂನು ರೂಪಿಸಿದೆ.

ಡಿಸೆಂಬರ್‌ 10ರಂದು ಹೊಸ ಕಾನೂನು ಜಾರಿಗೆ ಬರಲಿದ್ದು, ಎಲ್ಲ ಸಾಮಾಜಿಕ ಮಾಧ್ಯಮ ಕಂಪನಿಗಳು ತಮ್ಮ ಬಳಕೆದಾರರು ಕನಿಷ್ಠ 16 ವರ್ಷದವರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ 16 ವರ್ಷದೊಳಗಿನ ಮಕ್ಕಳು ಬಳಸುತ್ತಿರುವ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಥ್ರೆಡ್‌ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಟೆಕ್‌ ದೈತ್ಯ ‘ಮೆಟಾ’ ಕಂಪನಿ ತಿಳಿಸಿದೆ.

ಹೊಸ ಕಾನೂನಿನ ಅನ್ವಯ ಡಿ.10ರೊಳಗೆ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರನ್ನು ತೆಗೆದುಹಾಕುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದೇವೆ ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಈ ಹಿಂದೆ ಟಿಕ್‌ಟಾಕ್ ಮತ್ತು ಯೂಟ್ಯೂಬ್ ಸೇರಿದಂತೆ ಪ್ರಮುಖ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಅಪ್ರಾಪ್ತ ವಯಸ್ಸಿನ ಬಳಕೆದಾರರನ್ನು ನಿರ್ಬಂಧಿಸಬೇಕೆಂದು ಆಸ್ಟ್ರೇಲಿಯಾ ಸರ್ಕಾರ ಒತ್ತಾಯಿಸಿತ್ತು.

ಅಪ್ರಾಪ್ತ ವಯಸ್ಸಿನ ಬಳಕೆದಾರರನ್ನು ಹೊರಗಿಡುವ ಜವಾಬ್ದಾರಿಯುತ ಕ್ರಮ ಕೈಗೊಳ್ಳಲು ವೇದಿಕೆಗಳು ವಿಫಲವಾದರೆ 5.5 ಲಕ್ಷ ಆಸ್ಟ್ರೇಲಿಯನ್ ಡಾಲರ್‌ವರೆಗೆ (₹289 ಕೋಟಿ) ದಂಡವನ್ನು ಎದುರಿಸಬೇಕಾಗುತ್ತದೆ ಎಂದೂ ಸರ್ಕಾರ ತಿಳಿಸಿತ್ತು.

ಕಳೆದ ವರ್ಷ ನವೆಂಬರ್‌ನಲ್ಲಿ ಆಸ್ಟ್ರೇಲಿಯಾದ ಸಂಸತ್ತು 16 ವರ್ಷದೊಳಗಿನ ಮಕ್ಕಳನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಸ್ನಾಪ್‌ಚಾಟ್, ಟಿಕ್‌ಟಾಕ್ ಮತ್ತು ಎಕ್ಸ್‌ನಂತಹ ವೇದಿಕೆಗಳಿಂದ ನಿಷೇಧಿಸುವ ವಿಶ್ವದ ಮೊದಲ ಕಾನೂನನ್ನು ಜಾರಿ ಮಾಡಿತ್ತು. ಈ ವೇಳೆ ಅದು ಯೂಟ್ಯೂಬ್‌ಗೆ ವಿನಾಯಿತಿ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.