ನೀತಾ ಅಂಬಾನಿ
ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಮಾಣವಚನ ಕಾರ್ಯಕ್ರಮಕ್ಕೂ ಮುನ್ನ ನಡೆದ ಖಾಸಗಿ ಔತಣ ಕೂಟದಲ್ಲಿ ಭಾರತದ ಉದ್ಯಮಿ ಅಂಬಾನಿ ದಂಪತಿ ಪಾಲ್ಗೊಂಡಿದ್ದರು. ಈ ವೇಳೆ ನೀತಾ ಅಂಬಾನಿ ಧರಿಸಿದ್ದ ಕಾಂಚೀಪುರಂ ಸೀರೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ.
ಜಗತ್ತಿನ ವಿವಿಧ ದೇಶಗಳಿಂದ 100 ಕ್ಕೂ ಹೆಚ್ಚು ಗಣ್ಯ ವ್ಯಕ್ತಿಗಳು ಟ್ರಂಪ್ ಔತಣಕೂಟದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಅವರು ಭಾರತದಲ್ಲಿ ತಯಾರಾದ 9 ಗಜದ ಸಾಂಪ್ರದಾಯಿಕ ಕಾಂಚೀಪುರಂ ರೇಷ್ಮೆ ಸೀರೆಯುಟ್ಟು, ಒಡವೆ ಧರಿಸಿ ಮಿಂಚಿದ್ದಾರೆ.
ಈ ಸೀರೆಯನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದ ಬಿ. ಕೃಷ್ಣಮೂರ್ತಿ ನೇಯ್ದಿದ್ದಾರೆ.
ಕಪ್ಪು, ಚಿನ್ನ ಹಾಗೂ ಬೆಳ್ಳಿ ಬಣ್ಣದ ಸಂಯೋಜನೆಯ ಸೀರೆ ಗಾಢ ಗುಲಾಬಿ ಬಣ್ಣದ ಬಾರ್ಡರ್‌ನಿಂದ ಕೂಡಿತ್ತು. ಇದಕ್ಕೆ ಸರಿ ಹೊಂದುವಂತೆ ಕಪ್ಪು ಬಣ್ಣದ ಉದ್ದ ತೋಳಿನ ಬ್ಲೌಸ್ ಹೆಚ್ಚು ಆಕರ್ಷಣೀಯವಾಗಿ ಕಾಣುವಂತೆ ಮಾಡಿತ್ತು.
ಸೀರೆಯೊಂದಿಗೆ ಹಸಿರು, ಕೆಂಪು ಮಣಿಗಳ ಸರ ಹಾಗೂ ಇದೇ ಸಂಯೋಜನೆಯ ಉಂಗುರ, ಕೈಬಳೆ ಮತ್ತು ಕಿವಿಯೋಲೆಯನ್ನು ನೀತಾ ಧರಿಸಿದ್ದರು.
ನೀತಾ ಅವರ ಫೋಟೊ ನೋಡಿ ಸ್ವದೇಶಿ ನಿರ್ಮಿತ ಸಾಂಪ್ರದಾಯಿಕ ಉಡುಗೆ ತೊಟ್ಟು ಭಾರತೀಯ ಸಂಸ್ಕೃತಿಯನ್ನು ಅಮೆರಿಕದಲ್ಲಿ ಮೆರೆಸಿದ್ದಾರೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.