ADVERTISEMENT

ಭಯೋತ್ಪಾದನೆಗೆ ಪಾಕ್‌ ನೆರವು: UAE, ಜಪಾನ್‌ಗೆ ಭಾರತದ ನಿಲುವು ವಿವರಿಸಿದ MP ನಿಯೋಗ

ಪಿಟಿಐ
Published 22 ಮೇ 2025, 10:19 IST
Last Updated 22 ಮೇ 2025, 10:19 IST
<div class="paragraphs"><p>ಜಪಾನ್‌ನ ಟೊಕಿಯೊದಲ್ಲಿ ನಡೆದ ಸಭೆ ಹಾಗೂ ಅಬುಧಾಬಿಯಲ್ಲಿ ಯುಎಇ ರಾಜತಾಂತ್ರಿಕರ ಭೇಟಿಯಾದ ಭಾರತದ ನಿಯೋಗ</p></div>

ಜಪಾನ್‌ನ ಟೊಕಿಯೊದಲ್ಲಿ ನಡೆದ ಸಭೆ ಹಾಗೂ ಅಬುಧಾಬಿಯಲ್ಲಿ ಯುಎಇ ರಾಜತಾಂತ್ರಿಕರ ಭೇಟಿಯಾದ ಭಾರತದ ನಿಯೋಗ

   

ಎಕ್ಸ್ ಚಿತ್ರ

ಅಬುಧಾಬಿ, ಟೊಕಿಯೊ: ಭಯೋತ್ಪಾದನೆಗೆ ಪಾಕಿಸ್ತಾನ ನೀಡುತ್ತಿರುವ ನೆರವನ್ನು ಜಗತ್ತಿಗೆ ಮನದಟ್ಟು ಮಾಡುವ ಉದ್ದೇಶದಿಂದ ಭಾರತ ಕಳುಹಿಸಿದ ಸರ್ವ ಪಕ್ಷಗಳ ನಿಯೋಗಗಳ ಪ್ರವಾಸ ಗುರುವಾರದಿಂದ ಆರಂಭವಾಗಿದೆ. 

ADVERTISEMENT

ವಿವಿಧ ಪಕ್ಷಗಳ ಸಂಸದರ ನಿಯೋಗವು ಸಂಯುಕ್ತ ಅರಬ್ ಸಂಸ್ಥಾನ (UAE) ಮತ್ತು ಜಪಾನ್‌ ದೇಶಗಳ ರಾಜತಾಂತ್ರಿಕರನ್ನು ಭೇಟಿ ಮಾಡಿ, ಭಯೋತ್ಪಾದನೆ ವಿರುದ್ಧ ‘ಆಪರೇಷನ್ ಸಿಂಧೂರ’ದ ಹೆಸರಿನ ಮೂಲಕ ಭಾರತ ನಡೆಸಿದ ಆತ್ಮರಕ್ಷಣೆಯ ಕ್ರಮವನ್ನು ಜಗತ್ತಿನ ನಾಯಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.

ಜೆಡಿಯು ಸಂಸದ ಸಂಜಯ್ ಝಾ ನೇತೃತ್ವದ ತಂಡವು ಜಪಾನ್‌ಗೆ ಭೇಟಿ ನೀಡಿದರೆ, ಶಿವಸೇನಾ ಸಂಸದ ಶ್ರೀಕಾಂತ್ ಶಿಂದೆ ನೇತೃತ್ವದ ನಿಯೋಗವು ಸಂಯುಕ್ತ ಅರಬ್ ಸಂಸ್ಥಾನಕ್ಕೆ ಭೇಟಿ ನೀಡಿ ಭಾರತದ ನಿಲುವನ್ನು ಸಮರ್ಥಿಸಿಕೊಂಡವು. ಈ ತಂಡಗಳು ಆಯಾ ರಾಷ್ಟ್ರಗಳ ಸಚಿವರು, ಪ್ರಮುಖ ವ್ಯಕ್ತಿಗಳು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

‘ಆಪರೇಷನ್ ಸಿಂಧೂರಕ್ಕೆ ಸಂಬಂಧಿಸಿದಂತೆ ಭಾರತ ಕಳುಹಿಸಿದ ಸರ್ವ ಪಕ್ಷಗಳ ನಿಯೋಗವು ಮೊದಲು ಭೇಟಿ ನೀಡಿದ್ದು ಯುಎಇಗೆ. ಉಭಯ ರಾಷ್ಟ್ರಗಳ ಪ್ರಬಲವಾದ ಸ್ನೇಹದ ಭಾಗವಾಗಿ ಈ ಭೇಟಿ ನಡೆದಿದೆ. ಭಯೋತ್ಪಾದನೆ ವಿರುದ್ಧ ಜತೆಗೂಡಿ ಹೋರಾಡುವ ಕುರಿತು ಶೇಖ್‌ ನಹ್ಯಾನ್‌ ಬಿನ್ ಮುಬಾರಕ್ ಅಲ್ ನಹ್ಯಾನ್‌ ಅವರೂ ಭಾರತವನ್ನು ಬೆಂಬಲಿಸುವ ಭರವಸೆ ನೀಡಿದ್ದಾರೆ’ ಎಂದು ಯುಎಇನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದೆ.

‘ನಿಯೋಗವು ರಕ್ಷಣಾ ವ್ಯವಹಾರಗಳ ಅಧ್ಯಕ್ಷ ಡಾ. ಅಲಿ ಅಲ್ನುವಾಮಿ ಅವರನ್ನೂ ಭೇಟಿ ಮಾಡಿತು. ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿರುವುದಾಗಿ ಉಭಯ ನಾಯಕರು ಹೇಳಿಕೆ ನೀಡಿದ್ದಾರೆ. ಇದಕ್ಕೂ ಪೂರ್ವದಲ್ಲಿ ಯುಎಇ ಫೆಡರಲ್‌ ನ್ಯಾಷನಲ್‌ ಕೌನ್ಸಿಲ್‌ ಸದಸ್ಯ ಅಹ್ಮದ್ ಮೀರ್‌ ಖೂರಿ ಅವರನ್ನು ಭೇಟಿ ಮಾಡಿದ ಸಂಸದ ಶಿಂದೆ, ಪಾಕಿಸ್ತಾನ ನೆಲದಲ್ಲಿರುವ ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಭಾರತ ದಿಟ್ಟ ಉತ್ತರ ನೀಡಿರುವುದನ್ನು ಮನವರಿಕೆ ಮಾಡಿಕೊಟ್ಟರು’ ಎಂದು ರಾಯಭಾರ ಕಚೇರಿ ಹೇಳಿದೆ.

ಭಾರತದ ನಿಯೋಗದಲ್ಲಿ ಬಿಜೆಪಿಯ ಮನನ್‌ ಕುಮಾರ್ ಮಿಶ್ರಾ, ಸಸ್ಮಿತ್ ಪಾತ್ರಾ (ಬಿಜೆಡಿ), ಇ.ಟಿ.ಮೊಹಮ್ಮದ್ ಬಶೀರ್ (ಐಯುಎಂಎಲ್‌), ಎಸ್.ಎಸ್. ಅಹ್ಲುವಾಲಿಯಾ (ಬಿಜೆಪಿ), ಅತುಲ್ ಗರ್ಗ್ (ಬಿಜೆಪಿ), ಮಾನ್ಸುರಿ ಸ್ವರಾಜ್ (ಬಿಜೆಪಿ), ಮಾಜಿ ರಾಜತಾಂತ್ರಿಕ ಅಧಿಕಾರಿ ಸುಜನ್ ಆರ್. ಚಿನಾಯ್‌, ಯುಎಇಯಲ್ಲಿರುವ ಭಾರತದ ರಾಯಭಾರಿ ಸಂಜಯ್‌ ಸುಧೀರ್‌ ಇದ್ದರು.

‘ಜಾಗತಿಕ ಭದ್ರತೆಗೆ ನಾವು ಸ್ಪಷ್ಟ ನಿಲುವು ತೆಗೆದುಕೊಂಡಿದ್ದೇವೆ. ಇದರೊಂದಿಗೆ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನೂ ಗೌರವಿಸುತ್ತೇವೆ’ ಎಂದು ನಿಯೋಗದ ನೇತೃತ್ವ ವಹಿಸಿರುವ ಶಿಂದೆ ಹೇಳಿದ್ದಾರೆ.

ಭಾರತದ ಪ್ರತಿಕ್ರಿಯೆಗೆ ಜಪಾನ್‌ ಮೆಚ್ಚುಗೆ

ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ನೇತೃತ್ವದ ಭಾರತದ ನಿಯೋಗವು ಜಪಾನ್‌ಗೆ ಗುರುವಾರ ಭೇಟಿ ನೀಡಿದೆ. ಬ್ರಿಜಾಲ್‌, ಪ್ರಧಾನ್ ಬರುವಾ ಮತ್ತು ಹೇಮಂಗ್ ಜೋಶಿ, ಮಾಜಿ ವಿದೇಶಾಂಗ ಸಚಿವ ಕಾಂಗ್ರೆಸ್‌ನ ಸಲ್ಮಾನ್ ಖುರ್ಷಿದ್, ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ, ಸಪಿಐಎಂನ ಜಾನ್ ಬ್ರಿಟ್ಟಾಸ್ ಮತ್ತು ಮಾಜಿ ರಾಯಭಾರಿ ಮೋಹನ್ ಕುಮಾರ್ ಈ ನಿಯೋಗದಲ್ಲಿದ್ದರು.

ಈ ನಿಯೋಗವು ಜಪಾನ್‌ನ ವಿದೇಶಾಂಗ ಸಚಿವ ಟಾಕೇಷಿ ಇವಾಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು. ಎಲ್ಲಾ ಬಗೆಯ ಭಯೋತ್ಪಾದನೆಯನ್ನು ಎದುರಿಸಲು ಭಾರತದ ರಾಷ್ಟ್ರೀಯ ಒಮ್ಮತ ಮತ್ತು ದೃಢವಾದ ನಿರ್ಧಾರವನ್ನು ಮನವರಿಕೆ ಮಾಡಿಕೊಡಲಾಯಿತು. ಭಯೋತ್ಪಾದಕರ ನೆಲೆ ಮೇಲೆ ಭಾರತ ನಡೆಸಿದ ಕಾರ್ಯಾಚರಣೆಯನ್ನು ಶ್ಲಾಘಿಸಿದ ಇವಾಯ, ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ ಎಂದು ರಾಯಭಾರ ಕಚೇರಿ ಹೇಳಿದೆ.

‘ಜಪಾನ್‌ನ ಮಾಜಿ ಪ್ರಧಾನಿ ಮತ್ತು ಜಪಾನ್‌ ಭಾರತ ಒಕ್ಕೂಟದ ಅಧ್ಯಕ್ಷ ಯೋಶಿಹಿದಾ ಸುಗಾ ಅವರನ್ನೂ ನಿಯೋಗ ಭೇಟಿ ಮಾಡಿತು. ಗಡಿಯಾಚಿನ ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟದ ಕ್ರಮ ಸರಿಯಾಗಿದೆ. ಭಯೋತ್ಪಾದನೆ ನಿರ್ಮೂಲನೆ ವಿಷಯದಲ್ಲಿ ಭಾರತದೊಂದಿಗೆ ಜಪಾನ್ ಸದಾ ಇರಲಿದೆ ಎಂದು ಸುಗಾ ತಿಳಿಸಿರುವುದಾಗಿ’ ಕಚೇರಿ ಹೇಳಿದೆ.

ಭಾರತದ ಸರ್ವಪಕ್ಷಗಳ ನಿಯೋಗವು ಜಪಾನ್ ಭೇಟಿಯಲ್ಲಿ ಟೊಕಿಯೊದ ಎಡೊಗಾವಾದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತದ ರಕ್ಷಣಾ ಪಡೆಗಳು, ಉಗ್ರರ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ 'ಆಪರೇಷನ್‌ ಸಿಂಧೂರ' ನಡೆಸುವ ಮೂಲಕ ತಕ್ಕ ಉತ್ತರ ನೀಡಿದ್ದವು.

ಭಾರತವು ಪಾಕಿಸ್ತಾನದ ಪ್ರಮುಖ ವಾಯುನೆಲೆಗಳು ಸೇರಿದಂತೆ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ತಿರುಗೇಟು ನೀಡಿತ್ತು. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಪಂಜಾಬ್, ಗುಜರಾತ್‌. ರಾಜಸ್ಥಾನ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನ ನಡೆಸಿದ ದಾಳಿಗೂ ಭಾರತೀಯ ಸೇನೆ ದಿಟ್ಟ ಪ್ರತಿರೋಧ ಒಡ್ಡಿತ್ತು.

ಭಾರತ–ಪಾಕ್‌ ಎರಡೂ ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳಾಗಿರುವುದರಿಂದ ಸಂಘರ್ಷವು ಯಾವ ಮಟ್ಟಕ್ಕಾದರೂ ಹೋಗಬಹುದು ಎನ್ನಲಾಗಿತ್ತು. ಆದರೆ, ನಾಲ್ಕು ದಿನಗಳ ನಂತರ ದಿಢೀರ್‌ ಕದನ ವಿರಾಮ ಏರ್ಪಟ್ಟಿತ್ತು. 

ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಮತ್ತು ಅದರ ವಿರುದ್ಧ ಭಾರತ ಇತ್ತೀಚೆಗೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಕುರಿತು ಜಗತ್ತಿನ 33 ರಾಷ್ಟ್ರಗಳಿಗೆ ಸರ್ವಪಕ್ಷಗಳ ಸಂಸದರನ್ನು ಒಳಗೊಂಡ ಏಳು ತಂಡಗಳನ್ನು ಭಾರತ ಕಳುಹಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.