
ಜೋಹ್ರಾನ್ ಮಮ್ದಾನಿ ಮತ್ತು ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್/ವಾಷಿಂಗ್ಟನ್: ನ್ಯೂಯಾರ್ಕ್ ನಗರದ ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಜೋಹ್ರಾನ್ ಮಮ್ದಾನಿ ಅವರೊಂದಿಗೆ ಅತ್ಯಂತ ಫಲಪ್ರದವಾದ ಸಭೆಯನ್ನು ನಡೆಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಓವಲ್ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ‘ನ್ಯೂಯಾರ್ಕ್ ನಗರದ ಮೇಯರ್ ಆಗಿ ಆಯ್ಕೆಯಾಗಿ ಮಮ್ದಾನಿ ಅವರು ಉತ್ತಮ ರೀತಿಯಲ್ಲಿ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸ ನನಗಿದೆ. ಮಮ್ದಾನಿ ಅವರೊಂದಿಗಿನ ಸಭೆ ಅತ್ಯಂತ ಅದ್ಭುತವಾಗಿತ್ತು ಮತ್ತು ಈ ಭೇಟಿಯನ್ನು ಆನಂದಿಸಿದ್ದೇನೆ’ ಎಂದು ಬಣ್ಣಿಸಿದ್ದಾರೆ.
‘ನಾವು ಅತ್ಯಂತ ಇಷ್ಟಪಡುವ ನಮ್ಮ ನಗರವು (ನ್ಯೂಯಾರ್ಕ್) ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ನಾವು ಬಯಸುತ್ತೇವೆ. ಚುನಾವಣೆಯಲ್ಲಿ ಪ್ರಬಲ ಪ್ರತಿಸ್ಫರ್ಧಿಗಳ ವಿರುದ್ಧ ಹೋರಾಟ ನಡೆಸಿ ಅದ್ಭುತ ಗೆಲುವನ್ನು ಸಾಧಿಸಿರುವ ಮಮ್ದಾನಿ ಅವರನ್ನು ಅಭಿನಂದಿಸುತ್ತೇನೆ. ಹಾಗೆಯೇ ನ್ಯೂಯಾರ್ಕ್‌ನ ಒಳಿತಿಗಾಗಿ ನಾವು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಮಮ್ದಾನಿ ಆಡಳಿತದಡಿಯಲ್ಲಿ ನ್ಯೂಯಾರ್ಕ್ ನಗರದಲ್ಲಿ ವಾಸಿಸುತ್ತಿರುವ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ‘ಹೌದು, ವಿಶೇಷವಾಗಿ ಈ ಸಭೆಯ ನಂತರ ನಾನು ನಿಶ್ಚಿಂತೆಯಿಂದ ಇರುತ್ತೇನೆ’ ಎಂದು ಉತ್ತರಿಸಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಮಮ್ದಾನಿ ಅವರನ್ನು ಟ್ರಂಪ್ ಹಲವು ದಿನಗಳಿಂದ ಟೀಕಿಸುತ್ತಿದ್ದರು. ‘ಕಮ್ಯುನಿಸ್ಟ್ ಮಮ್ದಾನಿ ಚುನಾಯಿತರಾದರೆ ನ್ಯೂಯಾರ್ಕ್ ನಾಶವಾಗಲಿದೆ’ ಎಂದಿದ್ದರು. ಉಗಾಂಡಾದಲ್ಲಿ ಜನಿಸಿ ಅಮೆರಿಕದ ಪೌರತ್ವ ಪಡೆದಿರುವ ಮಮ್ದಾನಿಯನ್ನು ಗಡಿಪಾರು ಮಾಡುವುದಾಗಿಯೂ ಹೇಳಿದ್ದರು.
ಚುನಾವಣಾ ಗೆಲುವಿನ ಭಾಷಣ ಮಾಡಿದ್ದ ಮಮ್ದಾನಿ, ‘ದೇಶದ ಅಧ್ಯಕ್ಷರನ್ನು ಹೇಗೆ ಸೋಲಿಸಬಹುದು ಎಂಬುವುದನ್ನು ನ್ಯೂಯಾರ್ಕ್ ಜನರಿಗೆ ತೋರಿಸುವುದು ನನ್ನ ಬಯಕೆಯಾಗಿತ್ತು’ ಎಂದು ಹೇಳಿದ್ದರು. ಆದರೆ ‘ನ್ಯೂಯಾರ್ಕ್ ಜನರಿಗಾಗಿ ಅಧ್ಯಕ್ಷರು ಸೇರಿದಂತೆ ಯಾರೊಂದಿಗೂ ಕೆಲಸ ಮಾಡಲು ಸಿದ್ಧ’ ಎಂದೂ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.