
ಡೊನಾಲ್ಡ್ ಟ್ರಂಪ್
(ಪಿಟಿಐ ಚಿತ್ರ)
ವಾಷಿಂಗ್ಟನ್/ನ್ಯೂಯಾರ್ಕ್: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ.
'ಇರಾನ್ ಮೊದಲು ದಾಳಿ ನಡೆಸಲು ತಯಾರಿ ನಡೆಸಿತ್ತು. ಸಂಭಾವ್ಯ ಅಣ್ವಸ್ತ್ರ ದಾಳಿಯನ್ನು ತಡೆಯಲು ಈ ಕ್ರಮ ಅತ್ಯಗತ್ಯವಾಗಿತ್ತು' ಎಂದು ಅವರು ಹೇಳಿದ್ದಾರೆ.
ಮತ್ತೊಂದೆಡೆ ಅಮೆರಿಕ ಮತ್ತು ಇಸ್ರೇಲ್ ಸೇನೆಗಳು ಸತತ ನಾಲ್ಕನೇ ದಿನವೂ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿವೆ. ಇದಕ್ಕೆ ಪ್ರತೀಕಾರವಾಗಿ ಗಲ್ಫ್ ರಾಷ್ಟ್ರಗಳಲ್ಲಿನ ಅಮೆರಿಕದ ಮಿಲಿಟರಿ ನೆಲೆ ಹಾಗೂ ಮೂಲಸೌಕರ್ಯಗಳನ್ನು ಗುರಿಯಾಸಿಕೊಂಡು ಇರಾನ್ ದಾಳಿಯನ್ನು ಮುಂದುವರಿಸಿದೆ.
'ಒಂದು ವೇಳೆ ಇರಾನ್ ಮೇಲೆ ದಾಳಿ ನಡೆಸದಿದ್ದರೆ ಅದು ಹಲವು ರಾಷ್ಟ್ರಗಳನ್ನು ನಾಶಪಡಿಸುತ್ತಿತ್ತು' ಎಂದು ಟ್ರಂಪ್ ಹೇಳಿದ್ದಾರೆ.
'ನಾವು ಮಾಡದಿದ್ದರೆ ಪರಮಾಣು ದಾಳಿ ಸಂಭವನೀಯವಾಗಿತ್ತು. ಏಕೆಂದರೆ ಅವರು ಮಾನಸಿಕ ಅಸ್ವಸ್ಥರು. ಅನಾರೋಗ್ಯ ಪೀಡಿತರು. ಉದ್ರಿಕ್ತರು, ಹುಚ್ಚರು' ಎಂದು ವಾಗ್ದಾಳಿ ನಡೆಸಿದ್ದಾರೆ.
'ನಾವು ಏನನ್ನಾದರೂ ಮಾಡಲೇಬೇಕಿತ್ತು. 47 ವರ್ಷಗಳಾಗಿವೆ. ಅವರು ಬಹಳ ಕಾಲದಿಂದ ಜನರನ್ನು ಕೊಲ್ಲುತ್ತಿದ್ದಾರೆ. ಜಗತ್ತಿನಾದ್ಯಂತ ಭಯೋತ್ಪಾದನೆ ಹಬ್ಬುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.
'ಗುಪ್ತಚರ ಮಾಹಿತಿಯ ಪ್ರಕಾರ ಇರಾನ್ ಸದ್ಯದಲ್ಲೇ ದಾಳಿ ನಡೆಸುವ ಬಗ್ಗೆ ಬೆದರಿಕೆ ಇತ್ತು. ನಾವು ದಾಳಿ ನಡೆಸದಿದ್ದರೆ ಇರಾನ್ ಅತ್ಯಂತ ಶಕ್ತಿಶಾಲಿ ಅಣ್ವಸ್ತ್ರ ಹೊಂದುತ್ತಿತ್ತು. ಅಣ್ವಸ್ತ್ರ ಪ್ರಯೋಗಿಸುವ ಸಾಧ್ಯತೆಯೂ ಇತ್ತು' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.