
ಡೊನಾಲ್ಡ್ ಟ್ರಂಪ್ ಮತ್ತು ಎಡ್ ಡೇವ್
ಲಂಡನ್: ‘ತನಗೆ ಬೇಕಾದ ಇತರರ ವಸ್ತುವನ್ನು ಬಲಪ್ರಯೋಗದಿಂದ ವಶಪಡಿಸಿಕೊಳ್ಳುವ ಪ್ರವೃತ್ತಿಯ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಂತರರಾಷ್ಟ್ರೀಯ ಗ್ಯಾಂಗ್‌ಸ್ಟರ್‌ನಂತೆ ವರ್ತಿಸುತ್ತಿದ್ದಾರೆ’ ಎಂದು ಬ್ರಿಟನ್ ಸಂಸದ ಎಡ್ ಡೇವ್ ಕಟುವಾಗಿ ಟೀಕಿಸಿದ್ದಾರೆ.
ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳಲು ಸೇನೆ ಕಳುಹಿಸುವ ಟ್ರಂಪ್ ಹೇಳಿಕೆ ಕುರಿತಂತೆ ಬ್ರಿಟನ್ ಸಂಸತ್‌ನಲ್ಲಿ ನಡೆದ ಚರ್ಚೆಯಲ್ಲಿ, ಡೇವ್ ಈ ಹೇಳಿಕೆ ನೀಡಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಬ್ರಿಟನ್‌ನ ವಿದೇಶಾಂಗ ಸಚಿವ ಯೆವೆಟ್ ಕೂಪರ್ ಅವರ ಮಾತಿಗೆ ಪ್ರತಿಕ್ರಿ ಯಿಸಿದ ಡೇವ್, ‘ಟ್ರಂಪ್ ‘ಪೀಡಕ’ರಾಗಿದ್ದಾರೆ. ಇದರ ವಿರುದ್ಧ ಐರೋಪ್ಯ ಒಕ್ಕೂಟದ ಜತೆ ನಿಲ್ಲಲು ಬ್ರಿಟನ್ ಒಗ್ಗಟ್ಟು ಪ್ರದರ್ಶಿಸಬೇಕು. ಅವರನ್ನು ಹಿಮ್ಮೆಟ್ಟಿಸಬೇಕು’ ಎಂದಿದ್ದಾರೆ.
‘ಮಿತ್ರ ರಾಷ್ಟ್ರಗಳ ಸಾರ್ವಭೌಮತ್ವ ಮೆಟ್ಟಿನಿಲ್ಲುವ ಮಾತುಗಳನ್ನಾಡುತ್ತಿರುವ ಟ್ರಂಪ್, ಅಂತರರಾಷ್ಟ್ರೀಯ ಗ್ಯಾಂಗ್‌ಸ್ಟರ್‌ನಂತೆ ವರ್ತಿಸುತ್ತಿದ್ದಾರೆ. ನ್ಯಾಟೊವನ್ನು ಸಂಪೂರ್ಣವಾಗಿ ನೆಲಕಚ್ಚಿಸುವ ಬೆದರಿಕೆಯೊಡ್ಡುತ್ತಿದ್ದಾರೆ. ಗ್ರೀನ್‌ಲ್ಯಾಂಡ್ ತನಗೆ ಬೇಕು ಎಂದು ಹಠಕ್ಕೆ ಬಿದ್ದಿರುವ ಟ್ರಂಪ್, ಐರೋಪ್ಯ ಒಕ್ಕೂಟದ ಏಳು ರಾಷ್ಟ್ರಗಳ ಮೇಲೆ ಸುಂಕ ಹೇರಿಕೆಯ ಭೀತಿ ಹುಟ್ಟಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಆರ್ಥಿಕತೆ, ಜನರ ಬದುಕು ಮತ್ತು ರಾಷ್ಟ್ರದ ಭದ್ರತೆ ಮೇಲೆ ಅಪ್ರಚೋಧಿತ ಆಕ್ರಮಣ ಮಾಡುತ್ತಿರುವ ಟ್ರಂಪ್ ವಿರುದ್ಧ ಐರೋಪ್ಯ ರಾಷ್ಟ್ರಗಳನ್ನೂ ಒಳಗೊಂಡು ಇಡೀ ಜಗತ್ತು ಒಟ್ಟಾಗಿ ನಿಲ್ಲಬೇಕಿದೆ. ಬ್ರಿಟನ್ ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸುವ ಕ್ಷಣವಿದು’ ಎಂದು ಹೇಳಿದ್ದಾರೆ.
ಅಮೆರಿಕದ ಇತಿಹಾಸದಲ್ಲೇ ಇಂಥ ಅತಿ ಭ್ರಷ್ಟ ಅಧ್ಯಕ್ಷನನ್ನು ನೋಡಿಯೇ ಇಲ್ಲ. ಯಾವ ರಾಷ್ಟ್ರದವರಿಗಾದರೂ ಟ್ರಂಪ್ ಬಳಿ ಇರುವುದು ಎರಡೇ ಆಯ್ಕೆ. ಒಂದು ಆತನಿಗೆ ಹೊಚ್ಚ ಹೊಸ ವಿಮಾನವನ್ನೂ ಒಳಗೊಂಡು ದುಬಾರಿ ಉಡುಗೊರೆ ಹಾಗೂ ಹಣ ನೀಡುವುದು, ಮತ್ತೊಂದು ಆತನ ಕ್ರಿಪ್ಟೊ ಖಾತೆಗೆ ನೂರಾರು ಕೋಟಿ ಹಣವನ್ನು ಹೂಡುವುದು ಅಥವಾ ಆತನ ಬೆನ್ನಿಗೆ ನಿಲ್ಲಬೇಕು’ ಎಂದಿದ್ದಾರೆ.
ಗ್ರೀನ್‌ಲ್ಯಾಂಡ್ ಆಕ್ರಮಣಕ್ಕೆ ವಿರೋಧಿಸಿದ ರಾಷ್ಟ್ರಗಳ ವಿರುದ್ಧ ಸುಂಕ ಹೆಚ್ಚಿಸುವ ಬೆದರಿಕೆಯೊಡ್ಡಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಟ್ರಂಪ್ ಬೇಡಿಕೆಯನ್ನು ಸರಾಸಗಟಾಗಿ ತಿರಸ್ಕರಿಸಿದ ಐರೋಪ್ಯ ಒಕ್ಕೂಟದ ಡೆನ್ಮಾರ್ಕ್, ಫ್ರಾನ್ಸ್, ಜರ್ಮನಿ ಹಾಗೂ ಬ್ರಿಟನ್ ಅನ್ನೂ ಒಳಗೊಂಡಂತೆ ಎಂಟು ರಾಷ್ಟ್ರಗಳ ವಿರುದ್ಧ ಶೇ 10ರಷ್ಟು ಹೆಚ್ಚುವರಿ ಸುಂಕ ವಿಧಿಸಿದ್ದಾರೆ. ಇದು ಫೆ. 1ರಿಂದ ಜಾರಿಗೆ ಬರಲಿದೆ. ಒಂದೊಮ್ಮೆ ಗ್ರೀನ್‌ಲ್ಯಾಂಡ್ ವಿಷಯದಲ್ಲಿ ಯಾವುದೇ ಒಪ್ಪಂದಕ್ಕೆ ಮುಂದಾಗದಿದ್ದರೆ ಜೂನ್ 1ರಿಂದ ಸುಂಕವನ್ನು ಶೇ 25ಕ್ಕೆ ಹೆಚ್ಚಿಸುವ ಬೆದರಿಕೆಯನ್ನೂ ಟ್ರಂಪ್ ಒಡ್ಡಿದ್ದಾರೆ.
‘ಬೆದರಿಸುವವರನ್ನು ಗೌರವಿಸೋಣ’ ಎಂದಿರುವ ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರಾನ್, ಸ್ವೀಕಾರ್ಹವಲ್ಲದ ಸುಂಕವನ್ನು ತಿರಸ್ಕರಿಸಿರುವುದಾಗಿ ಹೇಳಿದ್ದಾರೆ.
ಆದರೆ ಹೇರಳ ಖನಿಜಯುಕ್ತ ಗ್ರೀನ್‌ಲ್ಯಾಂಡ್ ಅನ್ನು ರಷ್ಯಾ ಮತ್ತು ಚೀನಾದಿಂದ ಕಾಪಾಡುವುದೇ ನನ್ನ ಉದ್ದೇಶ ಎಂದು ಟ್ರಂಪ್ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಜತೆಗೆ ರಾಷ್ಟ್ರದ ಭದ್ರತೆಗೆ ಇದು ಅವಶ್ಯಕ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.