ADVERTISEMENT

ರೂಂಮೇಟ್‌ಗೆ ಇರಿದ ಭಾರತೀಯ ಟೆಕಿ; ಗುಂಡಿಕ್ಕಿ ಕೊಂದ US ಪೊಲೀಸ್: ಕುಟುಂಬದ ಆಕ್ರೋಶ

ಏಜೆನ್ಸೀಸ್
Published 19 ಸೆಪ್ಟೆಂಬರ್ 2025, 6:01 IST
Last Updated 19 ಸೆಪ್ಟೆಂಬರ್ 2025, 6:01 IST
<div class="paragraphs"><p>ಮೊಹಮ್ಮದ್‌ ನಿಜಾಮುದ್ದೀನ್</p></div>

ಮೊಹಮ್ಮದ್‌ ನಿಜಾಮುದ್ದೀನ್

   

ಹೈದರಾಬಾದ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ತನ್ನೊಂದಿಗೆ ಕೊಠಡಿಯಲ್ಲಿದ್ದ ವ್ಯಕ್ತಿಯನ್ನೇ ಇರಿದ ಆರೋಪದಡಿ ತೆಲಂಗಾಣ ಮೂಲದ ಟೆಕಿಯನ್ನು ಅಮೆರಿಕ ಪೊಲೀಸರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಮೃತ ವ್ಯಕ್ತಿಯನ್ನು ತೆಲಂಗಾಣದ ಮೆಹಬೂಬನಗರದ ಮೊಹಮ್ಮದ್‌ ನಿಜಾಮುದ್ದೀನ್ (30) ಎಂದು ಗುರುತಿಸಲಾಗಿದೆ. ಈತ ಕ್ಯಾಲಿಫೋರ್ನಿಯಾದ ಸಂತಾ ಕ್ಲಾರಾ ಜಿಲ್ಲೆಯ ವಸತಿ ಗೃಹದಲ್ಲಿದ್ದ. ಸೆ. 3ರಂದು ಈತ ತನ್ನೊಂದಿಗಿದ್ದ ವ್ಯಕ್ತಿಯೊಂದಿಗೆ ಮಾತಿನ ಚಕಮಕಿ ನಡೆದಿತ್ತು. ಅದು ವಿಕೋಪಕ್ಕೆ ಹೋದ ಪರಿಣಾಮ ನಿಜಾಮುದ್ದೀನ್‌ ಚಾಕುವಿನಿಂದ ಇರಿದಿದ್ದ. ಗಾಯಗೊಂಡ ವ್ಯಕ್ತಿ ತಕ್ಷಣ ತುರ್ತು ಸಂಖ್ಯೆ 911ಕ್ಕೆ ಕರೆ ಮಾಡಿದ್ದ. 

ADVERTISEMENT

ಸ್ಥಳಕ್ಕೆ ಬಂದ ಪೊಲೀಸರು ಗುಂಡು ಹಾರಿಸಿದ್ದಾರೆ. ಇದರಲ್ಲಿ ನಿಜಾಮುದ್ದೀನ್ ಗಾಯಗೊಂಡಿದ್ದ. ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ನಿಜಾಮುದ್ದೀನ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಇರಿತಕ್ಕೊಳಗಾದ ವ್ಯಕ್ತಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಅಧಿಕಾರಿಗಳು ತಮ್ಮ ಹೇಳಿಕೆಯಲ್ಲಿ ದಾಖಲಿಸಿದ್ದಾರೆ.

‘ಘಟನೆ ಕುರಿತು ಸಂತಾ ಕ್ಲಾರಾ ಜಿಲ್ಲಾ ಅಟಾರ್ನಿ ಕಚೇರಿ ಮತ್ತು ಅಲ್ಲಿನ ಪೊಲೀಸರು ಜಂಟಿ ತನಿಖೆ ಕೈಗೊಂಡಿದ್ದಾರೆ. ತನಿಖೆಯ ವರದಿ ಇನ್ನಷ್ಟೇ ಬರಬೇಕಿದೆ’ ಎಂದಿದ್ದಾರೆ.

ನಿಜಾಮುದ್ದೀನ್‌ ಹತ್ಯೆಗೆ ತೆಲಂಗಾಣದಲ್ಲಿರುವ ಅವರ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಹಲ್ಲೆಗೊಳಗಾಗಿದ್ದು ನಿಜಾಮುದ್ದೀನ್‌. ಆತನೇ ಪೊಲೀಸರಿಗೆ ಕರೆ ಮಾಡಿದ್ದ. ಆದರೆ ಅಮೆರಿಕದಲ್ಲಿ ವ್ಯಾಪಕವಾಗಿರುವ ವರ್ಣಭೇದದಲ್ಲಿ ತಮ್ಮ ಮಗನನ್ನು ಪೊಲೀಸರು ಕೊಂದಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಫ್ಲೋರಿಡಾದಲ್ಲಿ ಕಂಪ್ಯೂಟರ್‌ ಸೈನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಿಜಾಮುದ್ದೀನ್‌, ಸಂತಾ ಕ್ಲಾರಾದ ಟೆಕ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಆತ ಧಾರ್ಮಿಕ ನಂಬಿಕೆಯುಳ್ಳ ಮತ್ತು ತನ್ನ ಪಾಡಿಗೆ ತಾನಿರುವ ವ್ಯಕ್ತಿಯಾಗಿದ್ದ. ಜತೆಗೆ ವರ್ಣಭೇದ ದೌರ್ಜನ್ಯ ಅನುಭವಿಸುತ್ತಿರುವುದಾಗಿ ಸಾರ್ವಜನಿಕವಾಗಿಯೇ ಹೇಳಿಕೊಂಡಿದ್ದ. ತನ್ನ ಮೇಲಿನ ದೌರ್ಜನ್ಯವನ್ನು ಬಹಿರಂಗವಾಗಿ ಹೇಳಿಕೊಂಡಿದ್ದಕ್ಕೆ ಆತನನ್ನು ಕೆಲಸದಿಂದಲೂ ತೆಗೆದಿದ್ದರು’ ಎಂದು ಅವರ ಕುಟುಂಬದವರು ಆರೋಪಿಸಿದ್ದಾರೆ.

‘ವರ್ಣಭೇದ, ವರ್ಣ ತಾರತಮ್ಯ, ದೌರ್ಜನ್ಯ, ಹಿಂಸೆ, ವೇತನ ವಂಚನೆ, ಅನ್ಯಾಯವಾಗಿ ನೌಕರಿಯಿಂದ ತೆಗೆಯಲಾಗಿದೆ ಮತ್ತು ನ್ಯಾಯದಾನದಲ್ಲೂ ವಂಚನೆಗೊಳಗಾದೆ. ಇವೆಲ್ಲವೂ ಅತಿಯಾಯಿತು. ಬಿಳಿಯರ ಶ್ರೇಷ್ಠತೆ, ವರ್ಣಭೇದ ಮಾಡುವ ಅಮೆರಿಕದವರ ಮನಸ್ಥಿತಿ ಕೊನೆಯಾಗಬೇಕು’ ಎಂದು ಲಿಂಕ್‌ಡಿನ್‌ ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದ’ ಎಂದಿದ್ದಾರೆ.

ಈ ಘಟನೆ ಕುರಿತು ಸಮರ್ಪಕ ತನಿಖೆ ನಡೆಯಬೇಕು ಎಂದು ಆಗ್ರಹಿಸಿರುವ ನಿಜಾಮುದ್ದೀನ್ ಕುಟುಂಬದವರು, ಮೃತದೇಹವನ್ನು ಭಾರತಕ್ಕೆ ತರಲು ನೆರವಾಗುವಂತೆ ಭಾರತೀಯ ವಿದೇಶಾಂಗ ಇಲಾಖೆಯನ್ನು ಕೋರಿದ್ದಾರೆ. 

ಜನಾಂಗೀಯ ದ್ವೇಷ:  ‘ನಾನು ಜನಾಂಗೀಯ ದ್ವೇಷಕ್ಕೆ ಬಲಿಪಶು ಆಗಿದ್ದೇನೆ. ವೇತನ ತಾರತಮ್ಯ ಮಾಡಲಾಗಿದೆ. ನನ್ನನ್ನು  ಅನ್ಯಾಯವಾಗಿ ಕೆಲಸದಿಂದ ತೆಗೆದು ಹಾಕಲಾಗಿದೆ. ಅನ್ಯಾಯದ ವಿರುದ್ಧ ಹೋರಾಡಿದ್ದರಿಂದ ಈಗ ಕೊಠಡಿಯಿಂದಲೂ ನನ್ನನ್ನು ಹೊರಗೆ ಹಾಕುವ ಪ್ರಯತ್ನ ನಡೆಯುತ್ತಿದೆ. ಇವೆಲ್ಲವುಗಳಿಂದ ಅಪಾರ ನೋವು ಅನುಭವಿಸುತ್ತಿದ್ದೇವೆ. ಇದಕ್ಕೆ  ಮುಕ್ತಿ ಹಾಡಬೇಕೆಂದು ನಿರ್ಧರಿಸಿದ್ದೇನೆ. ಕಾರ್ಪೊರೇಟ್‌ ದಬ್ಬಾಳಿಕೆ ಕೊನೆಗೊಳ್ಳಬೇಕು,  ಇದರಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು’ ಎಂದು  ಮಹಮ್ಮದ್‌ ನಿಜಾಮುದ್ದೀನ್‌ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು.

ಈ ಪೋಸ್ಟ್‌ನ ವಿಚಾರವು ಆತನ ಸ್ನೇಹಿತನಿಂದ ನಮಗೆ ತಿಳಿಯಿತು. ‘ನನ್ನ ಮಗ ಜನಾಂಗೀಯ ತಾರತಮ್ಯಕ್ಕೆ ಒಳಗಾಗಿದ್ದ. ಆತ ಇದ್ದ ಕೊಠಡಿಗೆ ಎ.ಸಿ ಸಂಪರ್ಕ ಕಡಿತಗೊಳಿಸಲಾಗಿತ್ತು. ಒಮ್ಮೆ ಆಹಾರದಲ್ಲಿ ವಿಷ ಬೆರೆಸಿ ನೀಡಲಾಗಿತ್ತು. ಈಗ ಅಮೆರಿಕ ಪೊಲೀಸರು ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಈ  ಘಟನೆ ಸೆ.3ರಂದು ನಡೆದಿದ್ದರೂ ನಮ್ಮ ಗಮನಕ್ಕೆ ತಂದಿಲ್ಲ. ಮಗನ ಸಾವಿಗೆ ನ್ಯಾಯ ಲಭಿಸಬೇಕು’  ಎಂದು ನಿಜಾಮುದ್ದೀನ್‌ ತಂದೆ ಹಸನುದ್ದೀನ್‌ ಮನವಿ ಮಾಡಿದ್ದಾರೆ. 

ಘಟನೆಗೆ ಸಂಬಂಧಿಸಿದ ವಿಡಿಯೊ ತುಣುಕನ್ನು ಸಾಂತಾ ಕ್ಲಾರಾ  ಪೊಲೀಸರು ಬಿಡುಗಡೆ ಮಾಡಿದ್ದು, ಇದು ಜನಾಂಗೀಯ ತಾರತಮ್ಯಕ್ಕೆ ಸಂಬಂಧಿಸಿದ ಪ್ರಕರಣ ಎಂದು  ಹೇಳಿದ್ದಾರೆ. 

ಮೃತದೇಹ ಭಾರತಕ್ಕೆ ತರಲು ಮನವಿ

‘ನಿಜಾಮುದ್ದೀನ್‌ ಮೃತದೇಹವನ್ನು ಸ್ವದೇಶಕ್ಕೆ ತರಲು ವಾಷಿಂಗ್ಟನ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಮತ್ತು ಸ್ಯಾನ್‌ಫ್ರಾನ್ಸಿಸ್ಕೊದಲ್ಲಿರುವ ಭಾರತದ ಕಾನ್ಸುಲೇಟ್‌ ಜನರಲ್‌ ಅವರಿಗೆ ಮನವಿ ಮಾಡುವಂತೆ ನಿಜಾಮುದ್ದೀನ್  ಅವರ ತಂದೆ ಮಹಮ್ಮದ್‌ ಹಸನುದ್ದೀನ್‌  ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ‘ಈ ಕುಟುಂಬದ ನೆರವಿಗೆ ಧಾವಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್‌ ಅವರಿಗೂ ಮನವಿ ಸಲ್ಲಿಸಲಾಗಿದೆ’ ಎಂದು ಮಜ್ಲಿಸ್‌ ಬಚಾವೊ ತೆಹ್ರೀಕ್‌ (ಎಂಬಿಟಿ) ವಕ್ತಾರ ಅಮ್ಜದ್ ಉಲ್ಲಾಖಾನ್‌ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.