ADVERTISEMENT

ವಿಶ್ಲೇಷಣೆ | ಪರಿಸರ ಸಂರಕ್ಷಣೆ: ನಾಗರಿಕರ ಹೊಣೆ!

ಹನಿ ಹನಿ ಕಾಳಜಿಗಳು ಸೇರಿ ಪರಿಸರ ಸಂರಕ್ಷಣೆಯ ಹಳ್ಳ ಹರಿಯಬಹುದು

ಚಂದ್ರಕಾಂತ ವಡ್ಡು
Published 4 ಜೂನ್ 2025, 23:30 IST
Last Updated 4 ಜೂನ್ 2025, 23:30 IST
   

‘ವಿಶ್ವ ಪರಿಸರ ದಿನಾಚರಣೆ’ಯನ್ನು (ಜೂನ್ 5) ವಿಶ್ವಮಟ್ಟದಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತದೆ. ಇದೊಂದು ರೀತಿಯಲ್ಲಿ ಸಾಂಪ್ರದಾಯಿಕವಾಗಿ ಪರಿಸರ ಸಂರಕ್ಷಣೆಯ ಜಪ ಪಠಿಸುವ ಸಂದರ್ಭ! ವಿಶ್ವ ಪರಿಸರ ದಿನಾಚರಣೆಯ ಜಾಗತಿಕ ಘೋಷಣೆ ಹೊರಹೊಮ್ಮಿದ್ದು 1972ರಲ್ಲಿ. ಅಂದರೆ, ವಿಶ್ವಸಂಸ್ಥೆಯ ನೇತೃತ್ವದಲ್ಲಿ ಈ ದಿನಾಚರಣೆ ಆರಂಭವಾಗಿ ಐವತ್ತಮೂರು ವರ್ಷಗಳಷ್ಟು ಸುದೀರ್ಘ ಸಮಯ ಗತಿಸಿದೆ. ಈ ಸಂದರ್ಭದಲ್ಲಿ ಸರ್ಕಾರಗಳು, ಸಂಘ– ಸಂಸ್ಥೆಗಳು, ಪರಿಸರ ಪ್ರೇಮಿಗಳು ರಾಶಿ ರಾಶಿ ಕಾರ್ಯಕ್ರಮ ಹಾಕಿಕೊಂಡಿದ್ದನ್ನು ಕಂಡಿದ್ದೇವೆ. ಎಲ್ಲರೂ ಘೋಷಿಸಿದ, ಆಶಿಸಿದ ಉತ್ಕಟ ಪರಿಸರಸ್ನೇಹಿ ನುಡಿಮುತ್ತುಗಳಲ್ಲಿ ಎಷ್ಟು ಕಾರ್ಯರೂಪಕ್ಕೆ ಬಂದಿವೆ ಎಂಬ ಸಂದೇಹಕ್ಕೆ ಖಚಿತ ಉತ್ತರವಿಲ್ಲ. ಆದರೆ, ಆ ದಿಕ್ಕಿನ ಚಿಂತನೆಗೆ ಉತ್ತೇಜನ ಸಿಕ್ಕಿರುವುದಂತೂ ಸತ್ಯ.

ಪರಿಸರದ ಪ್ರಸಕ್ತ ಶೋಚನೀಯ ಪರಿಸ್ಥಿತಿಯನ್ನು ಪರಿಗಣಿಸಿದರೆ ಜೂನ್ 5 ಅನ್ನು ‘ಪರಿಸರ ದಿನ’ವಾಗಿ ‘ಆಚರಿಸುವ’ ಕ್ರಮವೇ ಅಸಂಬದ್ಧವಾಗಿ ಕಾಣಿಸುತ್ತದೆ. ಪರಿಸರದ ವಿಷಯದಲ್ಲಿ ಮಾನವ ಸಂಕುಲ ಸಂಭ್ರಮಾಚರಣೆಗೆ ಇಳಿಯಲು ಕಾರಣವೇ ಕಾಣಿಸುವುದಿಲ್ಲ; ಮನುಷ್ಯನ ಅಮಾನುಷ ದಾಳಿಗೆ ಸತತ ಬಲಿಯಾಗುತ್ತಾ ಸಂತ್ರಸ್ತ ಸ್ಥಿತಿ ತಲುಪಿರುವ ನಿಸರ್ಗಕ್ಕೆ ಸಂತಾಪ ಸೂಚಿಸುವುದೇ ಸೂಕ್ತ ಎನ್ನಿಸುತ್ತದೆ.

ಈ ಬಾರಿಯ ‘ವಿಶ್ವ ಪರಿಸರ ದಿನಾಚರಣೆ’ಗೆ ವಿಶೇಷ ಮಹತ್ವವಿದೆ. ರಿಪಬ್ಲಿಕ್ ಆಫ್ ಕೊರಿಯಾ ಈ ವರ್ಷದ ಪರಿಸರ ದಿನಾಚರಣೆಯ ಆತಿಥೇಯ ರಾಷ್ಟ್ರವಾಗಿದೆ. ‘ಪ್ಲಾಸ್ಟಿಕ್ ಮಾಲಿನ್ಯ ಮಣಿಸಿ’ ಎಂಬುದು ವಿಶ್ವ ಪರಿಸರ ದಿನಾಚರಣೆಯ ಘೋಷವಾಕ್ಯ. ಜಗತ್ತನ್ನು ಸುತ್ತಲಿರುವ ಈ ಸದಾಶಯದ ದನಿ ಎಷ್ಟು ಜನರ ಮನಸ್ಸು ಮುಟ್ಟುವುದೆಂಬುದನ್ನು ದುಗುಡದಿಂದ ಕಾದು ನೋಡಬೇಕಿದೆ. ಏಕೆಂದರೆ, ಪ್ಲಾಸ್ಟಿಕ್‌ಮಾರಿ ನಮ್ಮ ಬದುಕನ್ನು ಆವರಿಸಿಕೊಂಡಿರುವ ರೀತಿ, ಹರಹು, ವೇಗ ಗಾಬರಿ ಹುಟ್ಟಿಸುತ್ತದೆ.

ADVERTISEMENT

ಕಳೆದ ಒಂದು ದಶಕದಲ್ಲಿ ನಾವು ಬಳಸಿ ಬಿಸಾಕಿದ ಪ್ಲಾಸ್ಟಿಕ್ ಪ್ರಮಾಣ ಹಿಂದಿನ ಒಂದು ಶತಮಾನದ ಒಟ್ಟು ಬಳಕೆಯ ಮೊತ್ತಕ್ಕೆ ಸಮ. ನಾವು ಬಳಸುವ ಅರ್ಧದಷ್ಟು ಪ್ಲಾಸ್ಟಿಕ್ ಪದಾರ್ಥ ಒಮ್ಮೆ ಬಳಸಿ ಎಸೆಯುವಂತಹದು. ನಾವು ಪ್ರತಿ ನಿಮಿಷಕ್ಕೆ ಹತ್ತು ಲಕ್ಷ ಪ್ಲಾಸ್ಟಿಕ್ ಬಾಟಲಿಗಳನ್ನು ಕೊಳ್ಳುತ್ತಿದ್ದೇವೆ. ಒಂದು ಸಮೀಕ್ಷೆ ಪ್ರಕಾರ, 2050ರ ವೇಳೆಗೆ ಸಮುದ್ರಗಳಲ್ಲಿ ಮೀನುಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಸೇರಿರುತ್ತದೆ. ಅನಾಹುತದ ಅಗಾಧವು ಅಂದಾಜಿಗೂ ನಿಲುಕದಷ್ಟು ದೊಡ್ಡದಾಗಿದೆ.

ಪ್ಲಾಸ್ಟಿಕ್‌ನಿಂದ ಉಂಟಾಗುವ ಅನಾಹುತವನ್ನು ಎದುರಿಸಲು ಒಂದು ಸರ್ಕಾರವಾಗಿ, ಒಂದು ಸಮಾಜವಾಗಿ, ಪರಿಸರಪ್ರೇಮಿ ಸಂಘಟನೆಗಳಾಗಿ, ವ್ಯಕ್ತಿಗಳಾಗಿ ನಾವು ಎಷ್ಟರ ಮಟ್ಟಿಗೆ ಸಿದ್ಧರಾಗಿದ್ದೇವೆ? ಈ ದಿಸೆಯಲ್ಲಿ ಮನಸ್ಸನ್ನಾದರೂ ಹುರಿಗೊಳಿಸಿದ್ದೇವೆಯೇ? ಈ ಪ್ರಶ್ನೆಗಳಿಗೆ ಉತ್ತರವಾಗಿ ದೊರೆಯುವುದು ‘ಥಮ್ಸ್ ಡೌನ್’ ಇಮೋಜಿ ಮಾತ್ರ. ಏನೆಲ್ಲಾ ಎಷ್ಟೆಲ್ಲಾ ಹೆಮ್ಮೆಪಡುವ ನಮ್ಮ ಪರಂಪರೆಯಲ್ಲಿ ಸಾಮುದಾಯಿಕ ಬದುಕಿನ ಅಡಿಪಾಯವಾದ ‘ನಾಗರಿಕ ಪ್ರಜ್ಞೆ’ ಗೈರಾಗಿರುವುದರಲ್ಲಿ ಸಮಸ್ಯೆಯ ಮೂಲವಿದೆ.

ಪರಿಸರ ಕಾನೂನುಗಳು, ಹಕ್ಕುಗಳು ಮತ್ತು ಹೊಣೆಗಾರಿಕೆ ಬಗ್ಗೆ ನಾಗರಿಕರಲ್ಲಿ ಅರಿವಿನ ಕೊರತೆ; ಪರಿಸರ ಹಾನಿ ಬಗೆಗಿನ ನಾಗರಿಕರ ದೂರುಗಳಿಗೆ ಆಡಳಿತಶಾಹಿಯ ನಿರ್ಲಕ್ಷ್ಯ ಅಥವಾ ನಿಧಾನಶಾಹಿ ಪ್ರತಿಕ್ರಿಯೆ; ಎಲ್ಲಕ್ಕಿಂತ ಹೆಚ್ಚಾಗಿ ಸರ್ಕಾರ ತೋರಿಸುವ ಪರಿಸರ ಕಾಳಜಿಯನ್ನು ಮೀರಿದ ರಾಜಕೀಯ ಮತ್ತು ವಾಣಿಜ್ಯ ಹಿತಾಸಕ್ತಿಗಳು ನಿಸರ್ಗವನ್ನು ನಿರ್ನಾಮ ಮಾಡುವ ದಿಕ್ಕಿನಲ್ಲಿ ಅಪಾರ ಕೊಡುಗೆ ನೀಡುತ್ತಿವೆ. ಏಕಬಳಕೆ ಪ್ಲಾಸ್ಟಿಕ್ ಉಂಟು ಮಾಡುವ ಅಪಾಯ ಕುರಿತು ಜನಜಾಗೃತಿಗಾಗಿ ಹೆಣಗುವ ಬದಲು ಅದರ ಉತ್ಪಾದನೆಯನ್ನೇ ನಿಲ್ಲಿಸಲು ಸರ್ಕಾರ ಏಕೆ ಮನಸ್ಸು ಮಾಡುವುದಿಲ್ಲ ಎಂಬ ಸಂದೇಹಕ್ಕೆ ಸಮಜಾಯಿಷಿ ಸಿಗುವ ಸಾಧ್ಯತೆಯಿಲ್ಲ.

ಜೀವವೈವಿಧ್ಯ ತಾಣವಾದ ಪಶ್ಚಿಮ ಘಟ್ಟದಲ್ಲಿ ನಡೆಯುತ್ತಿರುವ ‘ಅಭಿವೃದ್ಧಿ ಕಾಮಗಾರಿ’ಗಳ ಹಿನ್ನೆಲೆಯಲ್ಲಿ ಆ ಪ್ರದೇಶದ ಧಾರಣ ಸಾಮರ್ಥ್ಯವನ್ನು ಅಧ್ಯಯನ ಮಾಡಲು ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ವಾಗತಾರ್ಹ ಆದೇಶ ಮಾಡಿದ್ದಾರೆ. ಆದರೆ, ಬಯಲುಸೀಮೆಯ ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿನ ಉದ್ಯಮಗಳ ಆರ್ಭಟದ ಹಿನ್ನೆಲೆಯಲ್ಲಿ ಅಲ್ಲಿನ ಪರಿಸರದ ಧಾರಣ ಶಕ್ತಿ ತಿಳಿಯಲು ಸಚಿವರೇಕೋ ಮನಸ್ಸು ಮಾಡಿಲ್ಲ.

ಸರ್ಕಾರದ ನೀತಿಗಳು, ಕಾರ್ಪೊರೇಟ್ ಸಂಸ್ಥೆಗಳ ಜವಾಬ್ದಾರಿ ಹಾಗೂ ಪರಿಸರಪರ ಸಂಘಟನೆಗಳ ಕ್ರಿಯಾಶೀಲತೆಯನ್ನು ಪರಿಸರದ ಅಳಿವು– ಉಳಿವು ಬಹುಮಟ್ಟಿಗೆ ಅವಲಂಬಿಸಿರುತ್ತದೆ. ಹಾಗೆಂದು, ನಾಗರಿಕರು ತಮ್ಮ ವೈಯಕ್ತಿಕ ನೆಲೆಯಲ್ಲಿ ನಿರ್ವಹಿಸಬೇಕಾದ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರದ ನೀತಿ ನಿರೂಪಣೆ ಹಾಗೂ ಉದ್ಯಮಗಳ ಮಹತ್ವಾಕಾಂಕ್ಷೆ ಬಗ್ಗೆ ಎಚ್ಚರದಿಂದಿದ್ದು, ಪರಿಸರ ಕಾಳಜಿಯ ಸಂಘಟನೆಗಳೊಂದಿಗೆ ಕೈಜೋಡಿಸುವುದು ನಾಗರಿಕರ ಆದ್ಯ ಕರ್ತವ್ಯ. ದೈನಂದಿನ ಕ್ರಿಯೆಯಲ್ಲಿ ನಾಗರಿಕರು ಎಷ್ಟು ಪರಿಸರಸ್ನೇಹಿ ಆಗಿದ್ದಾರೆ ಎಂಬುದು ಕೂಡ ಒಂದು ಸಮಾಜದ ಸ್ವಾಸ್ಥ್ಯ ಮತ್ತು ಭವಿಷ್ಯವನ್ನು ನಿರ್ಧರಿಸುತ್ತದೆ.

ಈ ವರ್ಷದ ವಿಶ್ವ ಪರಿಸರ ದಿನಾಚರಣೆಯ ಘೋಷಣೆಯಂತೆ ಪ್ಲಾಸ್ಟಿಕ್ ಹಾವಳಿಯನ್ನು ಸೋಲಿಸಲು ಜವಾಬ್ದಾರಿಯುತ ನಾಗರಿಕರಾಗಿ ದೈನಂದಿನ ಚಟುವಟಿಕೆಗಳಲ್ಲಿ ನಾವೇನು ಮಾಡಬಹುದು? ಜನಸಾಮಾನ್ಯರ ನಿತ್ಯ ಜೀವನದ ಹನಿ ಹನಿ ಕಾಳಜಿಗಳು ಸೇರಿದರೂ ಪರಿಸರ ಸಂರಕ್ಷಣೆಯ ಹಳ್ಳ ಹರಿಯಲು ಸಾಧ್ಯವಿದೆ. ಅನಿವಾರ್ಯ ಎನ್ನಿಸದ ಹೊರತು ಪ್ಲಾಸ್ಟಿಕ್ ಬಳಸದಿದ್ದರೆ ಸಾಕು, ಕನಿಷ್ಠ ಅರ್ಧದಷ್ಟು ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸುವುದು ಅಸಂಭವವಲ್ಲ.

ಅಂಗಡಿಗೆ ಹೋಗುವಾಗ ಬಟ್ಟೆಯ ಒಂದು ಕೈಚೀಲ, ಮದುವೆ ಮುಂತಾದ ಸಭೆ, ಸಮಾರಂಭಗಳಿಗೆ ಹೋಗುವಾಗ ಕುಡಿಯುವ ನೀರಿನ ಸ್ಟೀಲ್ ಅಥವಾ ತಾಮ್ರದ ಬಾಟಲು, ಪ್ರಯಾಣದಲ್ಲಿ ಪುನರ್ಬಳಕೆಯ ಬಾಟಲು ತೆಗೆದುಕೊಂಡು ಹೋಗುವುದು ಯಾರಿಗೂ ಹೊರೆಯಾಗಲಿಕ್ಕಿಲ್ಲ. ಹಾಲಿನ ಪ್ಯಾಕೆಟ್ ಮುಂತಾದ ಪ್ಲಾಸ್ಟಿಕ್ ಕವರ್‌ಗಳನ್ನು ಹೇಗೆಂದರೆ ಹಾಗೆ ಕತ್ತರಿಸಿ ಎಸೆಯದೇ, ಕತ್ತರಿಸಿದ ತುಂಡನ್ನು ಖಾಲಿ ಕವರ್ ಒಳಗೆಯೇ ಸೇರಿಸಿ ಕಸದ ಬುಟ್ಟಿಯಲ್ಲಿ ಹಾಕುವುದು ಶ್ರಮದಾಯಕವೇನಲ್ಲ. ಪ್ರಯಾಣದಲ್ಲಿ ಖರೀದಿಸುವ ಚಿಪ್ಸ್, ಬಿಸ್ಕತ್ತು ಕವರ್‌ಗಳನ್ನು ರಸ್ತೆಯಲ್ಲಿ ಎಸೆಯುವ ಚಾಳಿ ಒಳ್ಳೆಯದಲ್ಲ. ಶುಭಾಶಯ ಕೋರುವ ಹೂಗುಚ್ಛ, ಹಾರ ಹಾಗೂ ಉಡುಗೊರೆ ಪ್ಯಾಕೆಟ್‌ನಲ್ಲಿ ಪ್ಲಾಸ್ಟಿಕ್ ಇರದಿರಲಿ.

ಖಾಸಗಿ ವಾಹನ ಬಳಕೆಯನ್ನು ಪ್ರತಿಷ್ಠೆ ಎಂದು ಭ್ರಮಿಸಿ ಸಾರ್ವಜನಿಕ ಸಾರಿಗೆ ಬಳಸದಿರುವುದು ಅಜ್ಞಾನ ಎಂಬುದನ್ನು ಆದಷ್ಟು ಬೇಗ ಅರಿಯಬೇಕಿದೆ. ಯಾವ ನಗರ, ಪಟ್ಟಣ, ಹಳ್ಳಿಗೆ ಹೋದರೂ ರಸ್ತೆಬದಿಯಲ್ಲಿ ಮದ್ಯದ ಬಾಟಲಿಗಳು, ಟೆಟ್ರಾಪ್ಯಾಕ್‌ಗಳು, ಗುಟ್ಕಾ ಚೀಟಿಗಳು ಹರಡಿಕೊಂಡಿರುವುದು ಸಾಮಾನ್ಯ ದೃಶ್ಯವಾಗಿದೆ. ಊರಿಗೆ ಹತ್ತಿರವಿರುವ ಹೊಲಗಳಂತೂ ತ್ಯಾಜ್ಯಗಳ ಉಗ್ರಾಣದಂತೆ ರೈತರನ್ನು ಕಾಡುತ್ತಿವೆ. ಹಳ್ಳ, ಹೊಳೆ, ಕಾಲುವೆ, ಎಲ್ಲೆಡೆ ಪ್ಲಾಸ್ಟಿಕ್ ತ್ಯಾಜ್ಯದ ರಾಶಿಯನ್ನು ಕಾಣಬಹುದು. ನಮ್ಮ ದೇಶವನ್ನು ಹಾಳುಗೆಡವಲು ಶತ್ರು ದೇಶ ಇವೆಲ್ಲವನ್ನೂ ತಂದು ಸುರಿದಿಲ್ಲ; ಇದು, ಪರಿಣಾಮದ ಭೀಕರತೆಯ ಅರಿವಿಲ್ಲದೇ ನಮ್ಮ ವಿರುದ್ಧ ನಾವೇ ಸಾಧಿಸುತ್ತಿರುವ ದ್ವೇಷ ಅಥವಾ ಎಸಗುತ್ತಿರುವ ದೇಶದ್ರೋಹ!

ರಾಜಕೀಯ, ಸಾಮಾಜಿಕ, ಕೌಟುಂಬಿಕ, ಸ್ನೇಹ, ವೃತ್ತಿ... ಹೀಗೆ ಬದುಕಿನ ಬಹುತೇಕ ಪರಿಸರ ಮಲಿನಗೊಂಡ ಸಂದರ್ಭದಲ್ಲಿ ನಾವಿದ್ದೇವೆ. ಈ ಎಲ್ಲಾ ಪರಿಸರ ನಾಶದ ಮೂಲವಿರುವುದು ಆಧುನಿಕ ಮನುಷ್ಯನ ಮನದಲ್ಲಿ.

ಸ್ವಾರ್ಥ, ಲೋಭ, ಲಾಲಸೆ, ನಿಷ್ಕರುಣೆ, ತೋರಿಕೆ, ಸಮಯಸಾಧಕತನದ ಕೊಳಕು ತುಂಬಿಕೊಂಡಿರುವ ಮನಸ್ಸುಗಳನ್ನು ನಿಭಾಯಿಸುವ, ನಿರ್ಮಲಗೊಳಿಸುವ ದಿಸೆಯಲ್ಲಿ ನಾವು ಗಂಭೀರವಾಗಿ ಯೋಚಿಸಬೇಕಿದೆ. ಪ್ರಕೃತಿ ಮಾಲಿನ್ಯದ ವಿರುದ್ಧವಷ್ಟೇ ಅಲ್ಲ; ಮನದ ಮಾಲಿನ್ಯದ ವಿರುದ್ಧವೂ ನಾವು ಯುದ್ಧ ಹೂಡಬೇಕಿದೆ. ಮನದ ಮಾಲಿನ್ಯ ತೊಲಗಿಸುವುದು ವಿಶ್ವಸಂಸ್ಥೆ, ಸರ್ಕಾರ, ಸಂಘಟನೆಗಳ ಹೊಣೆಯಲ್ಲ, ಕರ್ತವ್ಯವೂ ಅಲ್ಲ. ಅದೇನಿದ್ದರೂ ವ್ಯಕ್ತಿನೆಲೆಯಲ್ಲಿ ನೆರವೇರಬೇಕಾದ ಸ್ವಚ್ಛತಾ ಕಾರ್ಯ. ಅದು ಕಾರ್ಯಗತವಾದರೆ ಎಲ್ಲಾ ಬಗೆಯ ಪರಿಸರ ಮಾಲಿನ್ಯದ ನಿಯಂತ್ರಣವಷ್ಟೇ ಅಲ್ಲ, ನಿರ್ಮೂಲನೆಯೂ ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.