ADVERTISEMENT

ವಿಶ್ವ ಸುದ್ದಿ ದಿನದ ವಿಶೇಷ: ಕಗ್ಗತ್ತಲ ಕಾಲದಲ್ಲಿ ಬೆಳಕಿನ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 0:30 IST
Last Updated 27 ಸೆಪ್ಟೆಂಬರ್ 2025, 0:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   
ಕ್ಷೋಭೆಯ ಕಾಲದಲ್ಲಿ ಪತ್ರಿಕೋದ್ಯಮದ ಮಹತ್ವ ವಿವರಿಸುವ ಜಾಗತಿಕ ಮಾಧ್ಯಮ ಲೋಕದ ಅನುಭವಿಗಳ ಅಭಿಪ್ರಾಯಗಳು

ಸುಳ್ಳು ಮಾಹಿತಿಗಳಿಂದಲೇ ಕೂಡಿದ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಆದರೂ ಅನೇಕ ಜನರಿಗೆ ಇದರ ಬಗ್ಗೆ ತಿಳಿದೇ ಇಲ್ಲ. ಈಗಿನ ಸನ್ನಿವೇಶವು ಗೊಂದಲ ಮತ್ತು ಅಪನಂಬಿಕೆಯಿಂದ ಕೂಡಿದೆ. ಸುಳ್ಳು ಮಾಹಿತಿಗಳು ಎಷ್ಟು ವೇಗವಾಗಿ ರೂಪಾಂತರಗೊಳ್ಳುತ್ತಿವೆ ಮತ್ತು ತುಂಬಾ ದೂರಕ್ಕೆ ತಲುಪುತ್ತಿವೆ ಎಂದರೆ, ಅವುಗಳನ್ನು ಗ್ರಹಿಸಲು ಅಥವಾ ಅವುಗಳಿಂದಾಗುವ ಪರಿಣಾಮಗಳನ್ನು ಊಹಿಸಲು ಸಾಧ್ಯವೇ ಇಲ್ಲವೇನೋ ಎಂಬಂತಾಗಿದೆ. ತೀವ್ರವಾಗಿ ಧ್ರುವೀಕರಣಗೊಂಡಿರುವ ಸಾಮಾಜಿಕ ವಾತಾವರಣದಲ್ಲಿ ಇಂತಹ ದಿಗ್ಭ್ರಾಂತಿಯನ್ನು ಸೃಷ್ಟಿಸಲಾಗುತ್ತಿದೆ.

ಅತ್ಯಂತ ಬಲಶಾಲಿಯಾದ ರಾಜಕೀಯ ಶಕ್ತಿಗಳು, ಭಾವನೆಗಳನ್ನು ಕೆರಳಿಸುವುದರಲ್ಲಿ ನಿಸ್ಸೀಮರಾದವರು ಸಾಮಾಜಿಕ ಮಾಧ್ಯಮಗಳ ಮೂಲಕ ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಅಸ್ಥಿರತೆ ಸೃಷ್ಟಿಸುವ ಸಾಮರ್ಥ್ಯ ಹೊಂದಿದ್ದಾರೆ. ಸುಳ್ಳು ಮಾಹಿತಿಗಳ ತ್ವರಿತ ಪ್ರಸರಣ ಹಾಗೂ ವಿಶ್ವಾಸಾರ್ಹವಲ್ಲದ ಅಗಾಧ ಪ್ರಮಾಣದ ಮಾಹಿತಿಗಳು ಇಂತಹ ದುರ್ಬಲ ಭಾವನೆಗಳು ಮೂಡಲು ಗಮನಾರ್ಹ ಕೊಡುಗೆಗಳನ್ನು ನೀಡುತ್ತಿವೆ. ಈ ಎಲ್ಲ ಕಾರಣಗಳಿಂದ ಮತ್ತು ನಾವು ಸಾಕ್ಷೀಕರಿಸುತ್ತಿರುವ ಈಗಿನ ಬೆಳವಣಿಗೆಗಳನ್ನು ಗಮನಿಸಿದಾಗ ನಾವು ‘ಬದಲಾವಣೆಯ ಯುಗ’ದ ಬದಲಿಗೆ ‘ಯುಗದ ಬದಲಾವಣೆ’ಯನ್ನು ನೋಡುತ್ತಿದ್ದೇವೆಯೇನೋ ಎಂಬ ಆತಂಕ ಮೂಡುತ್ತದೆ. 

ADVERTISEMENT

ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ವಿಸ್ತರಿಸುತ್ತಿರುವ ಕೀಳು ಮಟ್ಟದ ರಾಜಕಾರಣವು ಈಗಾಗಲೇ ದುರ್ಬಲವಾಗಿರುವ ಜಾಗತಿಕ ಸನ್ನಿವೇಶ ಮತ್ತಷ್ಟು ಹಾಳಾಗಲು ಕಾರಣವಾಗುತ್ತಿದೆ. ದುರದೃಷ್ಟಕರ ಸಂಗತಿ ಎಂದರೆ, ವಿವಿಧ ದೇಶಗಳಲ್ಲಿ ಜಾರಿಯಲ್ಲಿರುವ ಸಂಸ್ಕೃತಿಹೀನ ರಾಜಕಾರಣವು ಪ್ರಜಾಪ್ರಭುತ್ವ ವಿರೋಧಿ ಕಾರ್ಯಸೂಚಿಗಳಿಗೆ ಉತ್ತೇಜನ ನೀಡಲು ಪ್ರಜಾಪ್ರಭುತ್ವವನ್ನೇ ಬಳಸುತ್ತಿದೆ. ಇಂತಹ ರಾಜಕಾರಣದಲ್ಲಿ ತೊಡಗಿಕೊಂಡಿರುವ ರಾಜಕಾರಣಿಗಳು, ಸುಳ್ಳು ಮಾಹಿತಿ ಆಧಾರಿತ ಕಾರ್ಯತಂತ್ರವನ್ನು ಜಾಗತೀಕರಣಗೊಳಿಸಿರುವ ಜಗತ್ತಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿಯೊಬ್ಬರನ್ನು ಅನುಸರಿಸುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಆ ನಾಯಕನ ಬೆಂಬಲಿಗರು ಚುನಾವಣೆಯ ಫಲಿತಾಂಶದ ವಿರುದ್ಧ ತೊಡೆ ತಟ್ಟಿದ್ದರು. ಆದರೆ, ನಾಲ್ಕು ವರ್ಷಗಳ ನಂತರ ಅದೇ ವ್ಯಕ್ತಿ ಪ್ರಜಾಸತ್ತಾತ್ಮಕವಾಗಿಯೇ ರಾಷ್ಟ್ರ ನಾಯಕನಾಗಿ ಆಯ್ಕೆಯಾಗಿದ್ದಾರೆ. ಮೊದಲೆಲ್ಲ ಅಮೆರಿಕದಲ್ಲಿ ಇಂತಹ ಬಂಡಾಯವನ್ನು ಊಹಿಸಲು ಸಾಧ್ಯವೇ ಇರಲಿಲ್ಲ. ಆದರೆ, ಅಲ್ಲಿಯೇ ಇದು ನಡೆದಿದೆ. ಜಗತ್ತಿನಾದ್ಯಂತ ಇಂತಹ ಪ್ರವೃತ್ತಿ ಕಂಡುಬರುತ್ತಿದೆ ಎಂಬುದಕ್ಕೆ ಸಾಕ್ಷ್ಯ ಎಂಬಂತೆ, ಒಂದು ವರ್ಷದ ನಂತರ ಇಂತಹುದೇ ಪರಿಸ್ಥಿತಿ ಬ್ರೆಜಿಲ್‌ನಲ್ಲಿ ಸೃಷ್ಟಿಯಾಯಿತು. 

ಜನಪ್ರಿಯ  ಮತ್ತು ನಿರಂಕುಶಪ್ರಭುತ್ವದ ಪ್ರವೃತ್ತಿಗಳು ತೀವ್ರಗಾಮಿ ಧೋರಣೆಯ ಹೊಸ ರಾಜಕಾರಣಿಗಳನ್ನು ಪ್ರಭಾವಿಸುತ್ತಿವೆ. ಅವರಷ್ಟೇ ಅಲ್ಲ; ಈ ಹಿಂದೆ ಮೃದು ಧೋರಣೆಗೆ ಹೆಸರಾಗಿದ್ದ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ರಾಜಕಾರಣಿಗಳೂ ಇವುಗಳ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಹಂಗರಿ, ಪೋಲೆಂಡ್‌, ಇಸ್ರೇಲ್‌, ಫಿಲಿಪ್ಪೀನ್ಸ್‌, ಟರ್ಕಿ, ಎಲ್‌ ಸಾಲ್ವಡಾರ್‌, ಮೆಕ್ಸಿಕೊ, ಅರ್ಜೆಂಟೀನಾ, ಸ್ಪೇನ್‌, ಫ್ರಾನ್ಸ್‌ ಮತ್ತು ಇಟಲಿಗಳಲ್ಲಿ ಇಂತಹ ಪ್ರವೃತ್ತಿಯನ್ನು ಕಾಣಬಹುದು. ಈ ರೀತಿಯ ಹೊಸ ಸಿದ್ಧಾಂತದ ಪ್ರಭಾವಿ ನಾಯಕರು ಸಾಮಾಜಿಕ ಮಾಧ್ಯಮಗಳ ಮೂಲಕ ಹೊರಹೊಮ್ಮುತ್ತಿದ್ದಾರೆ. ಭಿನ್ನವಾಗಿ ಆಲೋಚಿಸುವ, ಸರ್ಕಾರಿ ಸಂಸ್ಥೆಗಳು ಹಾಗೂ ಜನರ ಪ್ರತಿನಿಧಿಯಾಗಿ ಆಯ್ಕೆಯಾಗಿರುವವರನ್ನು ನಿರಂತರವಾಗಿ ಪ್ರಶ್ನಿಸುವವರ ಮೇಲೆ ನಿರ್ದಯವಾಗಿ ದಾಳಿ ನಡೆಸಲು ಸಾಮಾಜಿಕ ಮಾಧ್ಯಮವನ್ನು ಬಳಸಲಾಗುತ್ತಿದೆ. ಅಚ್ಚರಿಯ ಸಂಗತಿ ಎಂದರೆ, ಹೀಗೆ ಪ್ರಶ್ನಿಸುವವರನ್ನು ಜನರ ಶತ್ರುಗಳು ಎಂದು ಇದೇ ಮಾಧ್ಯಮದ ಮೂಲಕ ಬಿಂಬಿಸಲಾಗುತ್ತಿದೆ. ಉದಾಹರಣೆಗೆ, ನ್ಯಾಯಾಂಗ ವ್ಯವಸ್ಥೆಯ ಮೇಲಿನ ದಾಳಿಗಳು ಉನ್ಮಾದದಿಂದ ಕೂಡಿರುತ್ತವೆ. ಅದೇ ರೀತಿ ಮಾಧ್ಯಮಗಳು ಮತ್ತು ಪತ್ರಕರ್ತರ ವಿರುದ್ಧವೂ ಯಾವುದೇ ಭೀತಿ ಇಲ್ಲದೆ ಎಲ್ಲರನ್ನೂ ಬೆಚ್ಚಿಬೀಳಿಸುವಂತೆ ನಿರ್ದಯವಾಗಿ ದಾಳಿ ನಡೆಸಲಾಗುತ್ತಿದೆ. ಈ ಎಲ್ಲವೂ ಹಲವು ಉದಾರವಾದಿ ಸಮಾಜಗಳಲ್ಲಿ ಏಕಕಾಲಕ್ಕೆ ನಡೆಯುತ್ತಿವೆ. ನಿಜವಾಗಿಯೂ ಇದು ಕಾಕತಾಳೀಯವೇ?

ನಾವು ಈ ಕಗ್ಗತ್ತಲಿನ ಕಾಲದಲ್ಲಿ ಇದ್ದೇವೆ. ಭವಿಷ್ಯದಲ್ಲಿ ಇದು ಒಂದು ಅಧ್ಯಯನದ ವಿಷಯವಾಗಲಿದೆ. ಪ್ರಮುಖ ತಂತ್ರಜ್ಞಾನಗಳು ಪತ್ರಿಕೋದ್ಯಮ ಮತ್ತು ಪ್ರಜಾಪ್ರಭುತ್ವಗಳ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುತ್ತಿವೆ. ಈ ಹೊಸ ಪ್ರಕ್ಷುಬ್ಧ ವಾತಾವರಣವು ಸುಳ್ಳು ಮಾಹಿತಿಗಳು, ಅವುಗಳ ಪ್ರಸರಣಕ್ಕೆ ಉತ್ತೇಜನ ನೀಡುವುದರ ಜೊತೆಗೆ ಮಾಧ್ಯಮ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿವೆ ಎಂಬುದು ಸ್ಪಷ್ಟ. ಕಣ್ಣ ಮುಂದೆ ತಕ್ಷಣಕ್ಕೆ ಯಾವ ಪರಿಹಾರವೂ ಕಾಣುತ್ತಿಲ್ಲ. ಜಗತ್ತಿನ ಬಹುತೇಕ ಮಾಧ್ಯಮ ಸಂಸ್ಥೆಗಳು ವರ್ಷಗಳ ಹಿಂದೆಯೇ ಬಿಕ್ಕಟ್ಟಿಗೆ ಸಿಲುಕಿವೆ. ಇದರ ನಡುವೆಯೇ, ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯವು ಫ್ರಾನ್ಸ್‌, ಸ್ಪೇನ್‌ ಅಥವಾ ಇಟಲಿಯಂತಹ ರಾಷ್ಟ್ರಗಳ ಜಿಡಿಪಿಯನ್ನು ಮೀರಿ ಬೆಳೆದಿದೆ.  ಅಲ್ಗರಿದಮ್‌ಗಳ ಮೂಲಕ ನಡೆಯುವ ಸುಳ್ಳು ಮತ್ತು ‌ಅತಿರಂಜಿತ ವಿಚಾರಗಳನ್ನು ಹರಡಲು ಪ್ರೋತ್ಸಾಹ ನೀಡುವ ಬ್ಯುಸಿನೆಸ್‌ ಮಾದರಿ ಆಧಾರಿತ ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲಿ ಪ್ರತಿ ದಿನ ಲಕ್ಷಾಂತರ ಜನರು ಹಲವು ಗಂಟೆಗಳನ್ನು ವ್ಯಯಿಸುತ್ತಿದ್ದಾರೆ. ಈ ಮಾಧ್ಯಮಗಳು ನಕಲಿ ಸುದ್ದಿಗಳನ್ನು ಹರಡುವ, ಸಮಾಜದ ಧ್ರುವೀಕರಣ ಮತ್ತು ದ್ವೇಷ ಹರಡುವ ಮೈದಾನಗಳಾಗಿವೆ.   

ಉದಾರವಾದಿ ಸಮಾಜಗಳಲ್ಲಿ ಪ್ರಜಾಪ್ರಭುತ್ವವು ಹೇಗೆ ಬೇರೂರಿದೆ ಎಂದರೆ, ಎಂತಹದ್ದೇ ಪರಿಸ್ಥಿತಿಯಲ್ಲೂ ಅದು ಸುರಕ್ಷಿತವಾಗಿದೆ ಎಂಬಂತೆ ಕಾಣಿಸುತ್ತದೆ. ಆದರೆ, ಈ ವ್ಯವಸ್ಥೆ ಕೊಂಚ ಮೈಮರೆತರೂ ಅದು ಅದಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಹುದು. ಜಗತ್ತಿನಲ್ಲೆಡೆ ಕಂಡುಬರುತ್ತಿರುವ ರಾಜಕೀಯ ಗೊಂದಲಗಳು, ಊಹಿಸಲು ಸಾಧ್ಯವಾಗದ ನಾಯಕತ್ವ ಮತ್ತು ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳ ಬಗೆಗಿನ ಅಗೌರವದ ವರ್ತನೆಗಳು ದಶಕಗಳಿಂದ ಅಂಗೀಕರಿಸಿರುವ ಮತ್ತು ಗೌರವಿಸಿರುವ ಜಾಗತಿಕ ಮೌಲ್ಯಗಳ ವ್ಯವಸ್ಥೆಯ ಅಡಿಪಾಯವನ್ನೇ ಅಲುಗಾಡಿಸುತ್ತಿವೆ.

ಟೀಕೆ ಮತ್ತು ದಾಳಿಗಳ ಹೊರತಾಗಿಯೂ ಪ್ರಜಾಪ್ರಭುತ್ವಕ್ಕೆ ಯಾವ ಧಕ್ಕೆಯೂ ಆಗದು ಎಂಬುದು ನಮ್ಮ ಬಲವಾದ ಸಹಜ ನಂಬಿಕೆ. ಇತಿಹಾಸ ತೋರಿಸುವ ರೀತಿಯಲ್ಲಿ ಇದು ಯಾವಾಗಲೂ ನಿಜವಲ್ಲ. ಜಗತ್ತಿನಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಇದನ್ನು ಸಾರಿ ಹೇಳುತ್ತಿವೆ. ಈ ಹಿಂದೆ ಯೋಚಿಸಲೂ ಸಾಧ್ಯವಿಲ್ಲ ಎಂದು ನಂಬಲಾದ ಸಂಗತಿಗಳೆಲ್ಲ ಈಗ ನಡೆಯುತ್ತಿವೆ. ಯುರೋಪ್‌ನಲ್ಲಿ ಒಂದು ರಾಷ್ಟ್ರವು ಇನ್ನೊಂದು ದೇಶದ ಮೇಲೆ ಆಕ್ರಮಣ ಮಾಡಿರುವುದು ಅಥವಾ ಪಶ್ಚಿಮ ಏಷ್ಯಾದಲ್ಲಿ ನಾಗರಿಕರು ಮಾನವೀಯ ಮಹಾದುರಂತದ ಭಾಗವಾಗಿರುವುದು ಇದಕ್ಕೆ ಉದಾಹರಣೆ. ಈ ಬಿಕ್ಕಟ್ಟಿನ ಸ್ಥಿತಿಯಲ್ಲಿ ಸಂಕಷ್ಟಕ್ಕೆ ಗುರಿಯಾಗಿರುವುದು ಭದ್ರತೆ ಅಲ್ಲ; ಆರ್ಥಿಕತೆ ಅಲ್ಲ, ವಲಸೆಯೂ ಅಲ್ಲ ಅಥವಾ ಅನನ್ಯತೆಯೂ ಅಲ್ಲ. ಸಂಕಷ್ಟಕ್ಕೆ ಸಿಲುಕಿರುವುದು ಪ್ರಜಾಪ್ರಭುತ್ವ ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಪೂರಕವಾಗಿ ಮತ್ತು ಜನರಿಗಾಗಿ ಕೆಲಸ ಮಾಡುವ ಪತ್ರಿಕೋದ್ಯಮ. ಜನರಿಗಾಗಿ ಕೆಲಸ ಮಾಡುವ ಕಾರಣಕ್ಕಾಗಿಯೇ ಇದು ಜಾಗತಿಕ ಆಕ್ರಮಣಕ್ಕೆ ಗುರಿಯಾಗಿದೆ. 

ಆಧುನಿಕ ತಂತ್ರಜ್ಞಾನಗಳು ಪತ್ರಿಕೋದ್ಯಮ ಮತ್ತು ಪ್ರಜಾಪ್ರಭುತ್ವಗಳ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುತ್ತಿವೆ. ಸಾಮಾಜಿಕ ಮಾಧ್ಯಮಗಳು ಸುಳ್ಳು ಮಾಹಿತಿಗಳು, ಅವುಗಳ ಪ್ರಸರಣಕ್ಕೆ ಉತ್ತೇಜನ ನೀಡುವುದರ ಜೊತೆಗೆ ಮಾಧ್ಯಮ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿವೆ. ಈ ಮಾಧ್ಯಮಗಳು ನಕಲಿ ಸುದ್ದಿಗಳನ್ನು ಹರಡುವ, ಸಮಾಜದ ಧ್ರುವೀಕರಣ ಮತ್ತು ದ್ವೇಷ ಹರಡುವ ಮೈದಾನಗಳಾಗಿವೆ. ‌ಜಗತ್ತಿನಾದ್ಯಂತ ಕಂಡುಬರುತ್ತಿರುವ ಪ್ರಕ್ಷುಬ್ಧ ಸನ್ನಿವೇಶದಿಂದಾಗಿ ಪ್ರಜಾಪ್ರಭುತ್ವ ಮತ್ತು ಪತ್ರಿಕೋದ್ಯಮ ಸಂಕಷ್ಟಕ್ಕೆ ಸಿಲುಕಿವೆ. ಕಣ್ಣ ಮುಂದೆ ತಕ್ಷಣಕ್ಕೆ ಯಾವ ಪರಿಹಾರವೂ ಕಾಣುತ್ತಿಲ್ಲ

ಫರ್ನಾಂಡೊ ಬೆಲ್‌ಝನ್ಸ್‌

ಪತ್ರಿಕೋದ್ಯಮ ಇಲ್ಲದಿದ್ದರೆ ಪ್ರಜಾಪ್ರಭುತ್ವ ಇಲ್ಲ

ವಿಶ್ವ ಸುದ್ದಿ ದಿನ ಆಚರಿಸುತ್ತಿರುವ ಈ ಸಂದರ್ಭವು ಪತ್ರಿಕೋದ್ಯಮದ ಮೌಲ್ಯ ಮತ್ತು ಪ್ರಾಮುಖ್ಯವನ್ನು ಸ್ಮರಿಸಲು ಅತ್ಯಂತ ಸೂಕ್ತವಾದ ಸಮಯ. ಸಮಾಜಗಳಿಗೆ ವೃತ್ತಿಪರವಾದ, ಸತ್ಯ ಆಧಾರಿತ ಮತ್ತು ನಿಖರ ಮಾಹಿತಿಗಳನ್ನು ನೀಡಲು ಪತ್ರಿಕೋದ್ಯಮ ಅತ್ಯಂತ ಉತ್ತಮ ವ್ಯವಸ್ಥೆ. ಇದು ನೀಡುವ ಖಚಿತ ಮಾಹಿತಿಗಳು ಸಮಾಜಗಳಿಗೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಅವಕಾಶ ನೀಡುತ್ತದೆ. ಪತ್ರಿಕೋದ್ಯಮ ಎನ್ನುವುದು ಸರ್ಕಾರಗಳು, ಕಂಪನಿಗಳು ಮತ್ತು ಸಂಸ್ಥೆಗಳು ಹಾಗೂ ಅವುಗಳ ಕಾರ್ಯವೈಖರಿಯ ಮೇಲೆ ಕಣ್ಣಿಡುವ ಚಟುವಟಿಕೆಯೂ ಹೌದು. ಜನರ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಾ, ವಿಭಿನ ದೃಷ್ಟಿಕೋನಗಳನ್ನು ನೀಡುವ ಮೂಲಕ ಸಮಾಜದಲ್ಲಿ ಬಹುತ್ವಕ್ಕೆ ಉತ್ತೇಜನವನ್ನೂ ನೀಡುತ್ತದೆ. ‌

ಪತ್ರಿಕೋದ್ಯಮವು ಈಗ ಈ ಹಿಂದೆಂದಿಗಿಂತಲೂ ಕಠಿಣ, ಸುಂದರವಾದ ಮತ್ತು ಅನಿವಾರ್ಯವಾದ ಉದ್ಯೋಗವಾಗಿದೆ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯು (ಎಐ) ವಾಸ್ತವದ ಬಗ್ಗೆ ನಮ್ಮ ಗ್ರಹಿಕೆಯನ್ನು ಶಾಶ್ವತವಾಗಿ ಬದಲಾಯಿಸಲಿದೆ. ಈ ತಂತ್ರಜ್ಞಾನವು ಖಂಡಿತವಾಗಿಯೂ ಸುಳ್ಳು ಮಾಹಿತಿಗಳನ್ನು ಹರಡಲು ಕೊಡುಗೆ ನೀಡಲಿದೆ ಎನ್ನುದರಲ್ಲಿ ಅನುಮಾನವೂ ಇಲ್ಲ. ಇಂತಹ ಸನ್ನಿವೇಶದಲ್ಲಿ ಮಾಹಿತಿಗಳನ್ನು ದೃಢಪಡಿಸಿಕೊಂಡು ದತ್ತಾಂಶ, ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿ, ಘಟನೆ ನಡೆಯುವ ಸ್ಥಳಗಳಿಗೆ ಭೇಟಿ ಕೊಟ್ಟು ಅಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿಯನ್ನು ವೃತ್ತಿಪರತೆಯಿಂದ ನೀಡುವ ವ್ಯಕ್ತಿಗಳು ನಮಗೆ ಬೇಕು. ಯಾಕೆಂದರೆ, ಪತ್ರಿಕೋದ್ಯಮ ಇಲ್ಲದಿದ್ದರೆ ಪ್ರಜಾಪ್ರಭುತ್ವ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದೇ ಹೋದರೆ ಕತ್ತಲು ಪೂರ್ತಿ ಕವಿಯುತ್ತದೆ.

ಲೇಖಕ: ಸ್ಪೇನ್‌ನ ವೊಸಂಟೊ ಮಾಧ್ಯಮ ಸಮೂಹದ ಕಾರ್ಯನಿರ್ವಾಹಕ ಸಂಪಾದಕೀಯ ನಿರ್ದೇಶಕ. ‘ಜರ್ನಲಿಸ್ಟ್ಸ್‌ ಇನ್‌ ಟೈಮ್ಸ್‌ ಆಫ್‌ ಡಾರ್ಕ್‌ನೆಸ್‌’ ಎಂಬ ಕೃತಿಯನ್ನೂ ಬರೆದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.