ADVERTISEMENT

ಸಂಪಾದಕೀಯ: ಭಾರತದ ಕ್ರಿಕೆಟ್ ಸಿರಿಗೆ ಚಾಂಪಿಯನ್ಸ್ ಟ್ರೋಫಿಯ ಗರಿ

ಸಂಪಾದಕೀಯ
Published 10 ಮಾರ್ಚ್ 2025, 23:30 IST
Last Updated 10 ಮಾರ್ಚ್ 2025, 23:30 IST
   

ಮರಳುಗಾಡಿನ ಸಮೃದ್ಧ ನಗರ ದುಬೈನಲ್ಲಿ ಭಾರತ ಕ್ರಿಕೆಟ್‌ ತಂಡದ ಪ್ರತಿಭಾ ಸಿರಿ ಕಂಗೊಳಿಸಿತು. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ನಾಯಕತ್ವದ ತಂಡವು ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ಮುತ್ತಿಕ್ಕಿತು. ಟೂರ್ನಿಯ 27 ವರ್ಷಗಳ ಇತಿಹಾಸದಲ್ಲಿ ಮೂರನೇ ಬಾರಿಗೆ ಭಾರತವು ಕಿರೀಟ ಧರಿಸಿತು. 2002ರಲ್ಲಿ ಶ್ರೀಲಂಕಾದೊಂದಿಗೆ ಜಂಟಿ ಚಾಂಪಿಯನ್ ಆಗಿದ್ದ ತಂಡವು 2013ರಲ್ಲಿ ಮಹೇಂದ್ರಸಿಂಗ್ ಧೋನಿ ನಾಯಕತ್ವದಲ್ಲಿ ಪ್ರಶಸ್ತಿ ಗೆದ್ದಿತ್ತು. 2017ರಲ್ಲಿ ನಡೆದಿದ್ದ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವು ಪಾಕಿಸ್ತಾನದ ಎದುರು ಸೋತಿತ್ತು. ಇದೀಗ ಮತ್ತೊಮ್ಮೆ ಈ ಪ್ರತಿಷ್ಠಿತ ಟ್ರೋಫಿ ಗಳಿಸುವಲ್ಲಿ ಯಶಸ್ವಿಯಾಗಿದೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸಾರ್ವಭೌಮ ತಂಡ ತಾನೆಂಬುದನ್ನು ಭಾರತ ಮತ್ತೊಮ್ಮೆ ಸಾಬೀತು ಮಾಡಿತು. 2023ರಲ್ಲಿ ಏಕದಿನ ವಿಶ್ವಕಪ್, 2024ರಲ್ಲಿ ಟಿ20 ವಿಶ್ವಕಪ್ ಮತ್ತು ಈಗ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಆಡಿದ್ದು ಸಣ್ಣ ಸಾಧನೆಯೇನಲ್ಲ. ಈ ವಿಜಯವು ಭಾರತದ ಕ್ರಿಕೆಟ್‌ ತಂಡಕ್ಕೆ ಹೊಸ ಚೈತನ್ಯ ತುಂಬುವ ಭರವಸೆ ಮೂಡಿಸಿದೆ. ಏಕೆಂದರೆ, ಕಳೆದ ಆರು ತಿಂಗಳಲ್ಲಿ ರೋಹಿತ್ ಬಳಗವು  ವೈಫಲ್ಯಗಳನ್ನು ಅನುಭವಿಸಿದ್ದೇ ಹೆಚ್ಚು. ತವರಿನಲ್ಲಿ ನಡೆದಿದ್ದ ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪ್ರವೇಶಿಸುವ ಅವಕಾಶ  ಕಳೆದುಕೊಂಡಿತ್ತು. ಅದಕ್ಕಾಗಿ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, ರೋಹಿತ್, ಅನುಭವಿ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ, ಶುಭಮನ್ ಗಿಲ್, ಕೆ.ಎಲ್. ರಾಹುಲ್ ಅವರು ತೀವ್ರ ಟೀಕೆಗಳಿಗೆ ಒಳಗಾಗಿದ್ದರು. ಅಷ್ಟೇ ಅಲ್ಲ, ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡುವ ತಂಡದ ಆಯ್ಕೆಯ ಬಗ್ಗೆಯೂ ಹಲವರು ಅಪಸ್ವರ ಎತ್ತಿದ್ದರು. ಐವರು ಸ್ಪಿನ್‌ ಬೌಲರ್‌ಗಳಿಗೆ ತಂಡದಲ್ಲಿ ಸ್ಥಾನ ಕೊಟ್ಟಿದ್ದು, ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು ಬಿಟ್ಟು ಸ್ಪಿನ್ನರ್ ವರುಣ್ ಚಕ್ರವರ್ತಿಗೆ ಅವಕಾಶ ನೀಡಿದ್ದು ಚರ್ಚೆಗೆ ಗ್ರಾಸವಾಗಿದ್ದವು. ವಿರಾಟ್ ಕೊಹ್ಲಿಯ ಫಾರ್ಮ್ ಕೊರತೆ, ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರು ಗಾಯದ ಸಮಸ್ಯೆಯಿಂದಾಗಿ ಟೂರ್ನಮೆಂಟ್‌ಗೆ ಲಭ್ಯವಾಗದೇ ಇದ್ದುದು, ಮೊಹಮ್ಮದ್ ಶಮಿ ಅವರ ಫಿಟ್‌ನೆಸ್ ಕೊರತೆ ಕಾಡಿದ್ದವು. ಈ ಎಲ್ಲ ಸವಾಲುಗಳನ್ನೂ ಮೀರಿ ನಿಂತ ಆಟಗಾರರು ತಂಡವಾಗಿ ಆಡಿ ಗೆದ್ದರು. ರೋಹಿತ್ ಅವರು ನಾಯಕತ್ವದ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಸೈ ಎನಿಸಿಕೊಂಡರು. ವಿರಾಟ್, ಗಿಲ್,  ಶ್ರೇಯಸ್ ಅಯ್ಯರ್ ಮರಳಿ ಅರಳಿದರು. ಕನ್ನಡಿಗ ರಾಹುಲ್ ವಿಕೆಟ್‌ಕೀಪಿಂಗ್‌ ಹಾಗೂ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಸ್ಪಿನ್ನರ್‌ಗಳ ಆಟವೂ ತಂಡದ ಗೆಲುವಿನಲ್ಲಿ ನಿರ್ಣಾಯಕವಾಯಿತು. 

ಎಂಟು ತಂಡಗಳು ಸ್ಪರ್ಧಿಸಿದ್ದ ಈ ಟೂರ್ನಿಯಲ್ಲಿ ಇನ್ನೂ ಕೆಲವು ಸಂಗತಿಗಳು ಗಮನ ಸೆಳೆದವು. ಆತಿಥೇಯ ಪಾಕಿಸ್ತಾನ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಕಾರಣಕ್ಕಾಗಿ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಯಿತು. ಅದರಿಂದಾಗಿ ಭಾರತ ತಂಡವು ಆಡುವ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸಲಾಯಿತು. ಉಳಿದ ತಂಡಗಳ ಪಂದ್ಯಗಳನ್ನು ಪಾಕಿಸ್ತಾನದ ನಗರಗಳಲ್ಲಿ ಆಡಿಸಲಾಯಿತು. ಉಳಿದ ತಂಡಗಳು ಭಾರತದೊಂದಿಗೆ ಆಡಲು ದುಬೈಗೆ ಪ್ರಯಾಣ ಮಾಡುವ ಒತ್ತಡ ಅನುಭವಿಸಬೇಕಾಯಿತು. ಇದರಿಂದ ಭಾರತಕ್ಕೆ ಹೆಚ್ಚು ಅನುಕೂಲವಾಯಿತು ಎಂಬ ಟೀಕೆಗಳೂ ಕೇಳಿಬಂದವು. ಆದರೆ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನ ಬೇಸರ ತರಿಸಿದ್ದು ನಿಜ. ದಶಕದ ಹಿಂದೆ ಬಲಿಷ್ಠವಾಗಿದ್ದ ಪಾಕ್  ಕ್ರಿಕೆಟ್ ತಂಡ ಈಗ ವಿಪರೀತ ಸೊರಗಿದೆ. ಆಂತರಿಕ ಕಲಹ ಮತ್ತು ರಾಜಕೀಯ ಹಸ್ತಕ್ಷೇಪದಿಂದಾಗಿ ಪಾಕ್ ಕ್ರಿಕೆಟ್ ತಂಡ ಬಲ ಕಳೆದುಕೊಂಡಿರುವುದು ಈ ಟೂರ್ನಿಯಿಂದ ಜಗಜ್ಜಾಹೀರಾಗಿದೆ. ರಾವಲ್ಪಿಂಡಿಯಲ್ಲಿ ಮಳೆ ಬಂದಾಗ ಮೈದಾನವನ್ನು ಒಣಗಿಸಲು  ಆಧುನಿಕ ಸೌಲಭ್ಯಗಳ ಕೊರತೆ ಇರುವುದು ಕೂಡ ಈ ದೇಶದ ಆಡಳಿತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಈಡುಮಾಡಿತು. ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಇದು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಎಂಬುದರಲ್ಲಿ ಎರಡು ಮಾತಿಲ್ಲ. ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ತಂಡಗಳೂ ಈ ಬಾರಿ ಮಂಕಾಗಿದ್ದವು. ಆದರೆ ಅಫ್ಗಾನಿಸ್ತಾನ ತಂಡದ ಸಾಧನೆ ಗಮನ ಸೆಳೆಯಿತು. ಹಷ್ಮತ್‌ವುಲ್ಲಾ ಶಹೀದಿ ನಾಯಕತ್ವದ ತಂಡವು ಇಂಗ್ಲೆಂಡ್ ವಿರುದ್ಧ ಜಯಿಸಿ ಅಚ್ಚರಿ ಮೂಡಿಸಿತು. ಕೆಲವು ವರ್ಷಗಳಿಂದ ಅಫ್ಗನ್ ತಂಡವು ಪ್ರಮುಖ ಟೂರ್ನಿಗಳಲ್ಲಿ ದಿಟ್ಟ ಆಟದ ಮೂಲಕ ಗಮನ ಸೆಳೆಯುತ್ತಿದೆ. ಯುದ್ಧ, ಹಿಂಸೆಯಿಂದ ಸೊರಗಿರುವ ಅಫ್ಗನ್ ಪ್ರಜೆಗಳಿಗೆ ಸಂತಸದ ಕ್ಷಣಗಳನ್ನು ಈ ಕ್ರಿಕೆಟ್ ತಂಡ ನೀಡುತ್ತಿದೆ. ಅಫ್ಗನ್ ತಂಡವು ಭವಿಷ್ಯದಲ್ಲಿ ಅತ್ಯುನ್ನತ ಸಾಧನೆ ಮಾಡುವ ಭರವಸೆ ಮೂಡಿಸಿರುವುದು ಈ ಟೂರ್ನಿಯ ಯಶೋಗಾಥೆಗಳಲ್ಲಿ ಒಂದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT