ಭಾರತದಲ್ಲಿ ಸ್ಥೂಲಕಾಯದ ಸಮಸ್ಯೆಯು ಸಾಂಕ್ರಾಮಿಕದಂತೆ ಆಗಿದೆ. ಜನರ ಆರೋಗ್ಯಕ್ಕೆ ಬಹುದೊಡ್ಡ ಬೆದರಿಕೆಯಾಗಿದೆ. ಸ್ಥೂಲಕಾಯದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಜಗತ್ತಿನ ಮೂರನೇ ದೇಶ ಭಾರತ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5ರ ಪ್ರಕಾರ, ಶೇಕಡ 24ರಷ್ಟು ಮಹಿಳೆಯರು ಮತ್ತು ಶೇ 23ರಷ್ಟು ಗಂಡಸರಿಗೆ ಸ್ಥೂಲಕಾಯ ಇದೆ. ಲ್ಯಾನ್ಸೆಟ್ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ವರದಿಯೊಂದರ ಪ್ರಕಾರ, ಭಾರತದಲ್ಲಿ 2050ರ ಹೊತ್ತಿಗೆ 45 ಕೋಟಿ ಮಂದಿ ಸ್ಥೂಲಕಾಯ ಹೊಂದಲಿದ್ದಾರೆ. ಇದು ಜಗತ್ತಿನಲ್ಲಿಯೇ ಅತಿ ದೊಡ್ಡ ಸಂಖ್ಯೆ ಆಗಲಿದೆ. ಈಗ 18 ಕೋಟಿ ಜನರಿಗೆ ಬೊಜ್ಜು ಇದೆ. ಕಳೆದ ಎರಡು ದಶಕಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ. 2022ರಲ್ಲಿ 73 ಲಕ್ಷ ಬಾಲಕರು ಮತ್ತು 52 ಲಕ್ಷ ಬಾಲಕಿಯರು ಸ್ಥೂಲಕಾಯ ಹೊಂದಿದ್ದರು. 1990ರಲ್ಲಿ ಈ ಸಂಖ್ಯೆ ಎರಡು ಲಕ್ಷದ ಆಸುಪಾಸಿನಲ್ಲಿ ಇತ್ತು. ಬೊಜ್ಜು ಹೊಂದಿರುವ ಜನರ ಸಂಖ್ಯೆಯಲ್ಲಿ ಆಗಿರುವ ಏರಿಕೆಯು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ದೊಡ್ಡ ಸವಾಲಾಗಿದೆ. ಭಾರತವು ಜಗತ್ತಿನ ಮಧುಮೇಹದ ರಾಜಧಾನಿ ಎಂದು ಗುರುತಿಸಿಕೊಂಡಿದೆ. ಜಗತ್ತಿನಲ್ಲಿ ಇರುವ ಮಧುಮೇಹಿಗಳಲ್ಲಿ ಶೇ 23ರಷ್ಟು ಮಂದಿ ಭಾರತದಲ್ಲಿ ಇದ್ದಾರೆ. ಸ್ಥೂಲಕಾಯ, ಮಧುಮೇಹ ಮತ್ತು ಜೀವನ ಶೈಲಿಗೆ ಸಂಬಂಧಿಸಿದ ಇತರ ಸಮಸ್ಯೆಗಳು ಜನಸಂಖ್ಯೆಯ ಬಹುದೊಡ್ಡ ವರ್ಗವನ್ನು ಅನಾರೋಗ್ಯಕಾರಿಯಾಗಿಸುತ್ತವೆ. ಸ್ಥೂಲಕಾಯವು ಆರೋಗ್ಯಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಯಾಗಿದ್ದು ಅದಕ್ಕೆ ಸಿಗಬೇಕಾದಷ್ಟು ಗಮನ ತೀರಾ ಇತ್ತೀಚೆಗಷ್ಟೇ ಸಿಕ್ಕಿದೆ.
ಪೌಷ್ಟಿಕವಲ್ಲದ ಆಹಾರ ಸೇವನೆ, ಕೆಲಸದ ಅವಧಿಯಲ್ಲಿನ ಬದಲಾವಣೆ, ದೈಹಿಕ ಚಟುವಟಿಕೆಯ ಕೊರತೆ, ಮೊಬೈಲ್ ಫೋನ್–ಟಿ.ವಿ. ನೋಡಿಕೊಂಡು ಹೆಚ್ಚಿನ ಸಮಯ ಕಳೆಯುವುದು ಬೊಜ್ಜು ಬರುವುದಕ್ಕೆ ಇರುವ ಪ್ರಮುಖ ಕಾರಣಗಳು. ಜನರು ನಡೆಯುವುದು ಕಡಿಮೆಯಾಗಿ, ವಾಹನಗಳಲ್ಲಿ ಪ್ರಯಾಣಿಸುವುದು ಹೆಚ್ಚಾಗಿದೆ. ಜೀವನಶೈಲಿಯಲ್ಲಿನ ಇಂತಹ ಬದಲಾವಣೆಗಳು ಜನರ ದೇಹ ದಪ್ಪವಾಗಲು ಕಾರಣವಾಗುತ್ತವೆ. ದಪ್ಪ ದೇಹದಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು, ಮಾನಸಿಕ ಅಸ್ವಸ್ಥತೆ ಮತ್ತು ಕ್ಯಾನ್ಸರ್‌ನಂತಹ ರೋಗಗಳು ಬರಬಹುದು. ಇಂತಹ ಸ್ಥಿತಿಯಿಂದಾಗಿ ಆರೋಗ್ಯಕ್ಕೆ ಸಂಬಂಧಿಸಿ ಮಾಡುವ ವೆಚ್ಚದ ಮೊತ್ತವು ಹೆಚ್ಚಾಗುತ್ತದೆ. ಅರ್ಥ ವ್ಯವಸ್ಥೆಯ ಮೇಲೆಯೂ ಇದು ಪ್ರತಿಕೂಲ ಪರಿಣಾಮ ಬೀರುತ್ತದೆ. 2035ರ ಹೊತ್ತಿಗೆ, ಸ್ಥೂಲಕಾಯದಿಂದ ಆಗುವ ಆರೋಗ್ಯ ಸಮಸ್ಯೆ ಗಳಿಂದಾಗಿ ಜಿಡಿಪಿಯು ಶೇ 1.8ರಷ್ಟು ಕುಗ್ಗಬಹುದು ಎಂದು ಅಂದಾಜಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಸಮಸ್ಯೆಯ ಕುರಿತು ಇತ್ತೀಚೆಗೆ ಗಮನ ಸೆಳೆದಿದ್ದಾರೆ. ಬೊಜ್ಜು ದೇಹದಿಂದ ಆಗಬಹುದಾದ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲು ವಿವಿಧ ಕ್ಷೇತ್ರಗಳ 10 ಮಂದಿ ಗಣ್ಯರನ್ನು ಪ್ರಧಾನಿ ಹೆಸರಿಸಿದ್ದಾರೆ. ಅಡುಗೆ ಎಣ್ಣೆಯ ಬಳಕೆಯು ದೇಹ ಸ್ಥೂಲವಾಗಲು ಪ್ರಮುಖ ಕಾರಣ. ಹಾಗಾಗಿ, ಜನ ಅಡುಗೆ ಎಣ್ಣೆ ಬಳಕೆಯನ್ನು ಶೇ 10ರಷ್ಟು ಕಡಿಮೆ ಮಾಡಬೇಕು ಎಂದು ಪ್ರಧಾನಿ ಕರೆ ಕೊಟ್ಟಿದ್ದಾರೆ. ಭಾರತದಲ್ಲಿ ಪ್ರತಿ ವ್ಯಕ್ತಿ ವರ್ಷಕ್ಕೆ ಸೇವಿಸುವ ಅಡುಗೆ ಎಣ್ಣೆಯು 20 ಕೆ.ಜಿ. ಪ್ರತಿ ವ್ಯಕ್ತಿ ವರ್ಷದಲ್ಲಿ ಸೇವಿಸುವ ಅಡುಗೆ ಎಣ್ಣೆಯ ಪ್ರಮಾಣ 12 ಕೆ.ಜಿ. ಮೀರಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಸು ಮಾಡಿದೆ. ಸ್ಥೂಲಕಾಯವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮುಂದೆ ಇರುವ ದೊಡ್ಡ ಸವಾಲು. ಈ ಸವಾಲಿಗೆ ಕಾರಣವಾಗುವ ಎಲ್ಲ ಅಂಶಗಳಿಗೂ ಪರಿಹಾರ ಕಂಡುಕೊಳ್ಳಬೇಕು. ಮಕ್ಕಳು ಮತ್ತು ಹದಿಹರೆಯದವರನ್ನು ಕೇಂದ್ರೀಕರಿಸಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಶಾಲೆಗಳಿಗೆ ಅದರಲ್ಲಿ ಮಹತ್ವದ ಪಾತ್ರ ಇರಬೇಕು. ಬಾಲ್ಯದಲ್ಲಿ ಅಪೌಷ್ಟಿಕತೆಯಿಂದ ಬಳಲಿದವರು ನಂತರದ ಹಂತದಲ್ಲಿ ಸ್ಥೂಲಕಾಯವನ್ನು ಹೊಂದುವ ಸಾಧ್ಯತೆ ಇದೆ. ಸ್ಥೂಲಕಾಯ ಸಮಸ್ಯೆಯ ಎಲ್ಲ ಆಯಾಮಗಳನ್ನು ಗುರಿಯಾಗಿಸಿದ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ರೂಪಿಸಿ, ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.