ADVERTISEMENT

ಸಂಪಾದಕೀಯ | ರಾಜ್ಯಪಾಲರ ರಾಜಕೀಯ ನಡೆ: ‘ಅರ್ಥಹೀನ’ ಸಂಪ್ರದಾಯ ಬೇಕೆ?

ಸಂಪಾದಕೀಯ
Published 22 ಜನವರಿ 2026, 23:30 IST
Last Updated 22 ಜನವರಿ 2026, 23:30 IST
   

ರಾಜ್ಯಪಾಲರು ಮಾಡಬೇಕಾದ ಸಾಂಪ್ರದಾಯಿಕ ಭಾಷಣಗಳು ಈಗೀಗ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ವಿಧಾನಸಭೆಗಳಲ್ಲಿ ಹಲವು ನಾಟಕೀಯ ಸನ್ನಿವೇಶ ಗಳಿಗೆ ಕಾರಣವಾಗುತ್ತಿದ್ದು, ವಿವಾದದ ಸ್ವರೂಪವನ್ನೂ ಪಡೆಯುತ್ತಿವೆ. ಭಾಷಣವನ್ನು ಮಾಡಲು ನಿರಾಕರಿಸುವುದು, ಸರ್ಕಾರ ಸಿದ್ಧಪಡಿಸಿಕೊಟ್ಟ ಭಾಷಣದ ಕೆಲ ಭಾಗಗಳನ್ನು ಓದದೇ ಕೈಬಿಡುವುದು ಇಲ್ಲವೆ ರಾಜ್ಯಪಾಲರೇ ಕೆಲವು ವಾಕ್ಯಗಳು ಮತ್ತು ಪದಗಳನ್ನು ಸೇರ್ಪಡೆ ಮಾಡಿ ಓದುವುದು ಹೊಸ ರೂಢಿಯಾಗಿದೆ. ಗುರುವಾರ ಆರಂಭವಾದ ರಾಜ್ಯ ವಿಧಾನಮಂಡಲದ ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಸರ್ಕಾರ ಸಿದ್ಧಪಡಿಸಿದ ಪೂರ್ಣ ಭಾಷಣ ಓದದೇ, ಕೆಲವು ಸಾಲುಗಳನ್ನು ಮಾತ್ರ ಓದಿ ಸಭೆಯಿಂದ ಹೊರನಡೆದಿದ್ದಾರೆ. ಹಾಗೆ ಮಾಡುವ ಮೂಲಕ ಅವರು ತಮ್ಮ ಮೇಲಿನ ಸಾಂವಿಧಾನಿಕ ಹೊಣೆಯನ್ನು ಕಡೆಗಣಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ಈ ವರ್ತನೆಯನ್ನು ಸದನಕ್ಕೆ ಮಾಡಿದ ಅವಮಾನ ಎಂದು ಬಣ್ಣಿಸಿದ್ದಾರೆ. ತಮಿಳುನಾಡಿನಲ್ಲಿ ರಾಜ್ಯಪಾಲರ ಶಿಷ್ಟಾಚಾರಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಿರುವ ರಾಜ್ಯಪಾಲ ಆರ್.ಎನ್. ರವಿ ಕೂಡ ಭಾಷಣವನ್ನು ಓದಲು ನಿರಾಕರಿಸಿ ಮಂಗಳವಾರವಷ್ಟೇ ಸದನದಿಂದ ಹೊರನಡೆದಿದ್ದರು. ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ ಅವರು ಭಾಷಣದ ಕೆಲವು ಭಾಗಗಳನ್ನು ಕೈಬಿಟ್ಟು, ತಮ್ಮದೇ ವಾಕ್ಯಗಳನ್ನು ಸೇರಿಸಿ ಓದಿದ್ದರು. ಅಲ್ಲಿನ ವಿಧಾನಸಭೆಯು ಈ ಬದಲಾವಣೆಯನ್ನು ತಿರಸ್ಕರಿಸಿ, ಸರ್ಕಾರ ಸಿದ್ಧಪಡಿಸಿದ ಭಾಷಣವನ್ನೇ ದಾಖಲೆಗೆ ಸೇರ್ಪಡೆ ಮಾಡಲು ನಿರ್ಧರಿಸಿತ್ತು.

ಮಸೂದೆಗಳಿಗೆ ಅಂಕಿತ ಹಾಕು ವುದು, ಕುಲಪತಿಗಳಂತಹ ಹುದ್ದೆಗಳಿಗೆ ನೇಮಕ ಮಾಡುವುದು ಮತ್ತು ಸಾಂಪ್ರದಾಯಿಕ ಭಾಷಣ ಮಾಡುವ ವಿಷಯಗಳಲ್ಲಿ ಸರ್ಕಾರಗಳು ಮತ್ತು ರಾಜ್ಯಪಾಲರ ನಡುವೆ ಸಂಘರ್ಷಗಳು ಹೆಚ್ಚಾಗುತ್ತಿವೆ. ಕೇಂದ್ರ ಮತ್ತು ರಾಜ್ಯಗಳನಡುವೆ ಸಾಂವಿಧಾನಿಕ ಪ್ರತಿನಿಧಿಗಳಾಗಿರ
ಬೇಕಾದ ರಾಜ್ಯಪಾಲರು ಆ ಸಾಂವಿಧಾನಿಕ ಹುದ್ದೆಗಿಂತಲೂ ಹೆಚ್ಚಾಗಿ ರಾಜಕೀಯ ಏಜೆಂಟರಂತೆ ವರ್ತಿಸುತ್ತಿರುವುದೇ ಈಎಲ್ಲ ಅಹಿತಕರ ವಿದ್ಯಮಾನಗಳಿಗೆ ಕಾರಣವಾಗಿದೆ. ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮಾತ್ರ ಈ ಸಂಘರ್ಷಗಳು ಕಂಡುಬರುತ್ತಿರುವುದು ರಾಜ್ಯಪಾಲರ ನಡವಳಿಕೆಯ ಹಿಂದಿರುವ ರಾಜಕೀಯಕ್ಕೆ ದ್ಯೋತಕವಾಗಿದೆ.

ರಾಜ್ಯಪಾಲರು ನಡೆಸುವ ಇಂತಹವಾರ್ಷಿಕ ಗೊಂದಲಮಯ ಪ್ರದರ್ಶನ ಗಳು ಅವರಿಗಷ್ಟೇ ಅಲ್ಲ, ಅವರು ಹೊಂದಿರುವ ಸಾಂವಿಧಾನಿಕ ಹುದ್ದೆಯ ಘನತೆಗೂ ಕುಂದು ತರುತ್ತವೆ. ಭಾಷಣ ಓದದಿರುವ ಮೂಲಕ, ಸರ್ಕಾರ ಏನು ಹೇಳಲು ಹೊರಟಿದೆ ಎಂಬುದನ್ನು ಕೇಳಿಸಿಕೊಳ್ಳುವ ಜನಪ್ರತಿನಿಧಿಗಳ ಸಭೆಯ ಹಕ್ಕನ್ನೂ ಅವರು ಕಸಿದಿದ್ದಾರೆ. ಸರ್ಕಾರ ಸಿದ್ಧಪಡಿಸಿದ ಭಾಷಣ ಓದುವ ವಿಷಯದಲ್ಲಿ ಸಂವಿಧಾನವು ರಾಜ್ಯಪಾಲರಿಗೆ ಯಾವುದೇ ಆಯ್ಕೆಯನ್ನು ಕೊಟ್ಟಿಲ್ಲ. ರಾಜ್ಯ ಸರ್ಕಾರವು ತನ್ನ ನೀತಿ–ನಿಲುವುಗಳನ್ನು ವಿವರಿಸುವ ಭಾಷಣದ ನಿಖರವಾದ ಪಠ್ಯವನ್ನು ರಾಜ್ಯಪಾಲರು ಯಥಾವತ್ತಾಗಿ ಓದಬೇಕು ಎನ್ನುವುದು ಸಂವಿಧಾನ ತಜ್ಞರ ಪ್ರತಿಪಾದನೆ. ಕೇಂದ್ರ ಸರ್ಕಾರವನ್ನು ಟೀಕಿಸುವ ಹಕ್ಕು ರಾಜ್ಯ ಸರ್ಕಾರಕ್ಕೆ ಇದ್ದೇ ಇದೆ ಮತ್ತು ಸರ್ಕಾರದ ನಿಲುವುಗಳನ್ನು ರಾಜ್ಯಪಾಲರು ಅನುಮೋದಿಸುವ ಇಲ್ಲವೆ ತಿರಸ್ಕರಿಸುವ ಅಗತ್ಯವಿಲ್ಲ. ರಾಜಕೀಯದಿಂದ ನಿರ್ದೇಶಿತವಾದ ಮತ್ತು ಚುನಾಯಿತ ರಾಜ್ಯ ಸರ್ಕಾರದ ದಾರಿಗೆ ಅಡ್ಡಿಯಾಗುವ ರಾಜ್ಯಪಾಲರ ಕಾರ್ಯವೈಖರಿಗೆ ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ಸ್ಥಾನವಿಲ್ಲ. ಹಾಗೆಯೇ ರಾಜ್ಯಪಾಲರನ್ನು ಅಡ್ಡಗಟ್ಟಲು ಮುಂದಾದ ಆಡಳಿತ ಪಕ್ಷವಾದ ಕಾಂಗ್ರೆಸ್‌ನ ಕೆಲವು ಶಾಸಕರ ವರ್ತನೆಯೂ ಸದನಕ್ಕೆ ಶೋಭೆ ತರುವಂಥದ್ದಲ್ಲ. ಸಾಂವಿಧಾನಿಕ ಹುದ್ದೆಯಲ್ಲಿದ್ದವರು ಸದನಕ್ಕೆ ಬಂದಾಗ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ಪ್ರತಿಯೊಬ್ಬ ಸದಸ್ಯರ ಹೊಣೆ. ಈ ವಿಷಯದಲ್ಲಿ ಆಡಳಿತ ಪಕ್ಷ ಎಡವಿದೆ ಎಂದೇ ಹೇಳಬೇಕಾಗುತ್ತದೆ. ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರಿಂದ ಭಾಷಣ ಮಾಡಿಸುವ ಸಂಪ್ರದಾಯವನ್ನು ಕೈಬಿಡಲು ಸಂವಿಧಾನ ತಿದ್ದುಪಡಿಯ ಅಗತ್ಯವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಪ್ರತಿಪಾದಿಸಿದ್ದಾರೆ. ರಾಜ್ಯಪಾಲರಿಂದ ಹೀಗೆ ಭಾಷಣ ಮಾಡಿಸುವುದು ‘ಅರ್ಥಹೀನ ಸಂಪ್ರದಾಯ’ ಎಂದು ಮೂರೂವರೆ ದಶಕಗಳಷ್ಟು ಹಿಂದೆಯೇ ಅಭಿಪ್ರಾಯಪಟ್ಟಿದ್ದ ಅಂದಿನ ರಾಷ್ಟ್ರಪತಿ ಆರ್‌. ವೆಂಕಟರಾಮನ್‌, ಈ ಸಂಪ್ರದಾಯಕ್ಕೆ ವಿದಾಯ ಹೇಳುವಂತೆ ಸಲಹೆಯನ್ನೂ ನೀಡಿದ್ದರು. ಆ ಸಲಹೆಯನ್ನು ಪರಿಗಣಿಸಲು ಇದು ಸಕಾಲ. ಏಕೆಂದರೆ, ಇದರಿಂದ ಪ್ರತಿವರ್ಷ ರಾಜ್ಯಪಾಲರು ರೂಢಿ ಮತ್ತು ಸಂಪ್ರದಾಯ ಮುರಿಯುವ ನಾಟಕೀಯ ಸನ್ನಿವೇಶ ಸೃಷ್ಟಿಸದಂತೆ ತಡೆಯಲು ಸಾಧ್ಯವಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.