ADVERTISEMENT

ಸಂಗತ: ಒಂದು ಮಳೆ, ನೂರಾರು ಸಿಂಚನ

ಸಂಜಯ್ ಗುಬ್ಬಿ
Published 8 ಏಪ್ರಿಲ್ 2025, 23:30 IST
Last Updated 8 ಏಪ್ರಿಲ್ 2025, 23:30 IST
   

ಬಂಡೀಪುರದ ಹತ್ತಿರ ಕಾಡಿನ ಪಕ್ಕದಲ್ಲೇ ನನ್ನದೊಂದು ಜಮೀನು. ಆನೆಯಂತಹ ವನ್ಯಜೀವಿಗಳು ಓಡಾ
ಡುವ ಕಾಡು. ಇದು ನೂರಾರು ಎಕರೆ ಖಾಸಗಿ ಜಮೀನುಗಳಿರುವ ಪ್ರದೇಶ. ಹಾಗಾಗಿ, ಈ ಭೂಮಿಯನ್ನು ಸರ್ಕಾರ ತೆಗೆದುಕೊಂಡು ವನ್ಯಜೀವಿಗಳ ಸಂರಕ್ಷಣೆಗೆ ಅನುವು ಮಾಡಿಕೊಡಬೇಕು, ಇಲ್ಲವಾದಲ್ಲಿ ಖಾಸಗಿಯ
ವರು ತಮ್ಮ ಜಮೀನುಗಳನ್ನು ವನ್ಯಜೀವಿಸ್ನೇಹಿಯಾಗಿ ಬಳಸಬೇಕು. ಎರಡನೇ ದೃಷ್ಟಿಕೋನದಿಂದ ಜಮೀನು ಕೊಂಡು ವನ್ಯಜೀವಿ ಸಂರಕ್ಷಣೆಯೊಡನೆ ನಿಸರ್ಗದ ಬಗ್ಗೆ ಹಲವಾರು ಹೊಸ ವಿಚಾರಗಳನ್ನು ಅರಿತಿದ್ದೇನೆ.

ಇದೇ ವರ್ಷದ ಮಾರ್ಚ್‌ 11. ಸಂಜೆ ಸುಮಾರು 5.40ರ ಹೊತ್ತಿಗೆ ವರ್ಷದ ಮೊದಲ ಮಳೆಹನಿಗಳು ಬೀಳಲು ಪ್ರಾರಂಭಿಸಿದವು. ಆದರೆ ಬರೀ ಐದು ನಿಮಿಷ ತುಂತುರು ಹನಿಸಿ ಭೂಮಿಯನ್ನು ಇನ್ನಷ್ಟು ಬಾಯಾರಿಸಿ ಮರೆಯಾದ ಮಳೆರಾಯ. ಆದರೆ ಅದಾದ ಐದೇ ದಿನಗಳಲ್ಲಿ ವರುಣದೇವ ನಮ್ಮ ಮೇಲೆ ದಯೆ ತೋರಿದ. ಮೋಡಗಳಲ್ಲಿ ತಾನು ತಿಂಗಳುಗಟ್ಟಲೆ ಅವಿತು ಕೂತಿದ್ದು ಸಾಕಾಯಿತು ಎನ್ನುವಂತೆ 16ನೇ ತಾರೀಕು ಎರಡು ತಾಸು ಮಳೆ ಸುರಿಯಿತು.

ಅಂದು ರಾತ್ರಿ ಎಂದಿಗಿಂತ ಹತ್ತರಷ್ಟು ಸೊಳ್ಳೆಗಳ ಕಾಟ, ನಿದ್ದೆಗೆ ಅವಕಾಶವೇ ಇಲ್ಲದಂತಾಯಿತು. ಬೆಳಗಾ
ದರೆ ಅದ್ಭುತ ಲೋಕವೊಂದು ತೆರೆದುಕೊಂಡಿತು. ಅದೆಲ್ಲಿದ್ದವೋ ಅನ್ನುವಂತೆ ನೂರಾರು ಕವಲು
ತೋಕೆಗಳು ತಮ್ಮ ಕಾರುಬಾರು ಪ್ರಾರಂಭಿಸಿದ್ದವು. ಸಾಮಾನ್ಯವಾಗಿ ಬಿಸಿಲೇರಿದ ಮೇಲೆ ಕೆಲ ಕವಲು
ತೋಕೆಗಳು ನಮ್ಮ ಮನೆಯ ಸುತ್ತಮುತ್ತ ತಮ್ಮ ದಿನಚರಿ ಪ್ರಾರಂಭಿಸಿದರೆ, ಅಂದು ಬೆಳಕು ಹರಿದೊಡನೆ ನೂರಾರು ಕವಲುತೋಕೆಗಳು ನೆಲಕ್ಕೆ ಹತ್ತಿರವೇ ಹಾರಾಡುತ್ತಿದ್ದವು. ಹೆಚ್ಚಾಗಿ ಸೊಳ್ಳೆ, ಪತಂಗದಂತಹ ಹಾರುವ ಕೀಟಗಳನ್ನು ತಿನ್ನುವ ಕವಲುತೋಕೆಗಳಿಗೆ ಮಳೆರಾಯ ಕೀಟಗಳ ಔತಣಕೂಟವನ್ನೇ ಏರ್ಪಡಿಸಿದ್ದ.

ADVERTISEMENT

ಸ್ವಲ್ಪ ಬಿಸಿಲೇರುತ್ತಿದ್ದಂತೆ ಪಶ್ಚಿಮದಿಂದ ಪೂರ್ವಕ್ಕೆ ಚಿಟ್ಟೆಗಳು ಹಾರುವುದು ಪ್ರಾರಂಭವಾಯಿತು. ಎಲ್ಲಿ ನೋಡಿದರೂ ತಿಳಿನೀಲಿ, ಕಪ್ಪು ಬಣ್ಣದ ನೀಲಿ ನಂಜ (ಬ್ಲೂ ಟೈಗರ್) ಮತ್ತು ತಿಳಿ ಕಪ್ಪು, ಬಿಳಿ ಬಣ್ಣದ ಪುಟ್ಟಮುದ್ರೆ ಕಾಗಕ್ಕ (ಕಾಮನ್ ಕ್ರೋ) ಚಿಟ್ಟೆಗಳು. ಸಂಜೆಯ ವೇಳೆಗೆ ಸಾವಿರಾರು ಚಿಟ್ಟೆಗಳು ನಮಗೆ ಏನನ್ನೂ ತಿಳಿಸದೆ ಎಲ್ಲಿಗೋ ವಲಸೆ ಹೋಗಿದ್ದವು. ಸೂರ್ಯ ಇಳಿಯುವ ಹೊತ್ತಿಗೆ ಸೊಳ್ಳೆಗಿಂತಲೂ ಸಣ್ಣದಾದ ಬಿಳಿ ಹುಳುಗಳು ಮತ್ತು ಅವುಗಳನ್ನು ತಿನ್ನಲು ನಾ ಮೊದಲು ತಾ ಮೊದಲು ಎಂಬಂತೆ ಇನ್ನೂ ಹೆಚ್ಚಿನ ಕವಲುತೋಕೆಗಳು.

ಸೂರ್ಯದೇವ ಭೂಮಿಯ ಇನ್ನೊಂದು ಭಾಗದಲ್ಲಿ ಲಾಗಿನ್ ಆಗಲು ಹೋದರೆ, ಇಲ್ಲಿ ಸಾವಿರಾರು ಗೆದ್ದಲು
ಹುಳುಗಳು ತಮ್ಮ ಇರುವಿಕೆಯನ್ನು ಪ್ರಪಂಚಕ್ಕೆ ತೆರೆದಿಟ್ಟವು. ಕತ್ತಲಾದ ಮೇಲೆ ಯಾವುದೋ ಭಾರ
ವಾದ ಹಕ್ಕಿ ತನ್ನ ರೆಕ್ಕೆಗಳನ್ನು ರಭಸವಾಗಿ ಬಡಿಯುತ್ತ ಹಾರಿಹೋದಂತೆ ಸದ್ದಾಯಿತು. ಇಷ್ಟು ಹೊತ್ತಿನಲ್ಲಿ ಇದ್ಯಾವುದು ಇಷ್ಟು ಶಬ್ದ ಮಾಡುವ ಪಕ್ಷಿ ಎಂದು ಕೈದೀಪ ಹಾಕಿ ನೋಡಿದರೆ, ನಮ್ಮ ನಾಲ್ಕು ಅಂಗೈಯಗಲದ ಹತ್ತಾರು ದೊಡ್ಡ ಬಾವಲಿಗಳು! ಗಾಳಿಯಲ್ಲಿ ಗೆದ್ದಲುಹುಳುಗಳ ಮೇಲೆ ತಮ್ಮ ವೈಮಾನಿಕ ದಾಳಿಯನ್ನು ಪ್ರಾರಂಭಿಸಿದ್ದವು ಬಾವಲಿಗಳು.

ಪ್ರಕೃತಿಯಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ಆಸ್ವಾದಿಸುತ್ತಿದ್ದ ನನಗೆ ಸಮಯ ಹೋದದ್ದೇ ತಿಳಿಯ
ಲಿಲ್ಲ. ಬೇಲಿಯ ಪಕ್ಕದಲ್ಲಿಯೇ ಏನೋ ಸರ ಸರ ಸದ್ದು. ಸೂಕ್ಷ್ಮವಾಗಿ ಗಮನಿಸಿದರೆ, ದೊಡ್ಡ ಕರಡಿಯೊಂದು ಅಲ್ಲಿದ್ದ ಮಣ್ಣಿನ ಗುಪ್ಪೆಯನ್ನು ಕೆರೆಯುತ್ತಿದೆ. ಇಷ್ಟು ದಿನ ಸುಳ್ಳಿ, ಬಾರೆ ಹಣ್ಣುಗಳ ಡಯಟ್‌ನಲ್ಲಿದ್ದ ಕರಡಿಗೆ ಆಗ ನಾಲಿಗೆ ರುಚಿ ಬದಲಾಯಿಸುವ ಸಮಯವಾಗಿತ್ತು. ತನ್ನದೇ ಪ್ರಪಂಚದಲ್ಲಿ ಮುಳುಗಿಹೋಗಿದ್ದ ಕರಡಿಗೆ ತನ್ನ ಪಕ್ಕದಲ್ಲಿ ಪುನುಗುಬೆಕ್ಕು ಬಂದದ್ದು ತಿಳಿಯಲೇ ಇಲ್ಲ. ಅದನ್ನು ನೋಡಿದ ತಕ್ಷಣವೇ ಸ್ವಲ್ಪ ಗಲಿಬಿಲಿಯಾಗಿ ಅದಕ್ಕೆ ಹಾದಿ ಬಿಟ್ಟು ಬೇರೆಡೆಗೆ ತನ್ನ ಪಯಣ ಎಂಬಂತೆ ಹೋಗಿಬಿಟ್ಟ ಕರಡಿಯಣ್ಣ.

ಪುನುಗುಬೆಕ್ಕು ಕೂಡ ಗೆದ್ದಲುಹುಳುಗಳ ಪಾಲು ಪಡೆಯಲು ಬಂದಿತ್ತು. ಅದು ಸರಿಯೇ, ಇಷ್ಟೊಂದು ಗೆದ್ದಲುಗಳಿದ್ದ ಮೇಲೆ ಅದರಲ್ಲಿ ಸಿಕ್ಕುವ ಪ್ರೋಟೀನ್ ನಿರುಪಯುಕ್ತವಾಗುವುದನ್ನು ತಡೆಯಲು ಬಂದಿದ್ದವು ಎನ್ನುವಂತಿತ್ತು ಈ ಸಸ್ತನಿಗಳ ಆಗಮನ. ಅಷ್ಟು ಹೊತ್ತಿಗೆ ನಾನು ಮಲಗುವ ಸಮಯವಾಗಿತ್ತು.

24 ಗಂಟೆಗಳಲ್ಲಿ ಎಷ್ಟೆಲ್ಲ ನಡೆದುಹೋಗಿತ್ತು. ನಾ ಕಂಡಿದ್ದು ಇಷ್ಟು. ನನಗೆ ತಿಳಿಯದೆ, ಕಾಣದೆ, ಕೇಳದೆ ಇನ್ನೆಷ್ಟು ವಿಸ್ಮಯಗಳು ಅಂದು ನಡೆದುಹೋಗಿದ್ದವೋ ಏನೋ, ಆ ಪ್ರಕೃತಿಯೇ ಬಲ್ಲದು. ಒಂದು ಮಳೆ ಏನೆಲ್ಲ ಬದಲಾವಣೆಗಳನ್ನು ತರಬಹುದು ಎಂಬುದು ಯಾರ ಊಹೆಗೂ ನಿಲುಕದಂತಹದು. ಪ್ರಾಣಿ-ಪಕ್ಷಿಗಳು, ಮರಗಿಡಗಳು ನಮಗಿಂತ ಹೆಚ್ಚು ಸೂಕ್ಷ್ಮಮತಿಗಳು. ವಾತಾವರಣದಲ್ಲಿನ ಆಗುಹೋಗುಗಳನ್ನು ಗುರುತಿಸಿ ತಮ್ಮ ನೈಸರ್ಗಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತವೆ ಅಥವಾ ಆ ಪ್ರಕ್ರಿಯೆಯನ್ನು ಬದಲಾಯಿಸಿ
ಕೊಳ್ಳುತ್ತವೆ. ಅದನ್ನು ಅರಿತುಕೊಳ್ಳದೆ ‘ಪ್ರಾಣಿಗಳಿಗೆ ನೀರು ಕೊಡಿ’, ‘ಹಣ್ಣು ಬಿಡುವ ಗಿಡಗಳನ್ನು ಕಾಡಿನಲ್ಲಿ ನೆಡಿ’ ಎಂದೆಲ್ಲ ಮಾನವಜನ್ಯ ಸಲಹೆಗಳನ್ನು ನೀಡುತ್ತೇವೆ. ನಿಸರ್ಗದಲ್ಲಿ ಒಂದಕ್ಕೊಂದು ಸಂಬಂಧಿಸಿದ ತನ್ನದೇ ನೀತಿ ನಿಯಮಗಳಿವೆ, ಕಾಲಗಳಿವೆ. ಒಂದಾದ ಮೇಲೆ ಒಂದರಂತೆ, ಅದರದೇ ಪದ್ಧತಿಯಂತೆ ಪ್ರಕೃತಿಕಾರ್ಯಗಳು ಯಾವುದೂ ಹೆಚ್ಚು ಕಡಿಮೆ ಆಗದಂತೆ ಸರಿಸಮನಾಗಿ ನಡೆಯಬೇಕು. ನಾವು ಪಾಯಸಕ್ಕೆ ಅಳೆದು ತೂಗಿ ಬೆಲ್ಲ, ಏಲಕ್ಕಿ, ಹಾಲು, ಗೋಡಂಬಿ, ದ್ರಾಕ್ಷಿ ಎಲ್ಲವನ್ನೂ ಹಾಕುವ ಹಾಗೆ ಪ್ರಕೃತಿಯು ಯಾವುದು ಎಷ್ಟರ ಮಟ್ಟಿಗೆ, ಯಾವಾಗ ಆಗಬೇಕೆಂದು ನಿರ್ಧರಿಸುತ್ತದೆ. ಅದಕ್ಕೆ ಸ್ವಲ್ಪ ಸ್ಥಳಾವಕಾಶ ಮಾಡಿಕೊಟ್ಟರೆ ಸಾಕು. ಆದರೆ ನಮ್ಮ ದೃಷ್ಟಿಕೋನದಲ್ಲೇ ನೋಡುವ ನಾವು, ಪ್ರಕೃತಿ ನಿಯಮವನ್ನು ಪಾಲಿಸಿದರೆ ಸಾಕು ಎಂದು ಈ ಜಗತ್ತಿಗೆ ಹೇಗೆ ಹೇಳುವುದು ಎನ್ನುವುದೇ ತಿಳಿಯುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.