ADVERTISEMENT

IND vs AUS ODI: ಗಿಲ್‌ಗೆ ನಾಯಕನಾಗಿ ಮೊದಲ ಸರಣಿ, ರೋಹಿತ್-ಕೊಹ್ಲಿ ಆಟದತ್ತ ಚಿತ್ತ

ಪಿಟಿಐ
Published 18 ಅಕ್ಟೋಬರ್ 2025, 23:30 IST
Last Updated 18 ಅಕ್ಟೋಬರ್ 2025, 23:30 IST
<div class="paragraphs"><p>ವಿರಾಟ್‌ ಕೊಹ್ಲಿ ಮತ್ತು ರೋಹಿತ್ ಶರ್ಮಾ</p></div>

ವಿರಾಟ್‌ ಕೊಹ್ಲಿ ಮತ್ತು ರೋಹಿತ್ ಶರ್ಮಾ

   

ಪರ್ತ್‌: ಕ್ರಿಕೆಟ್‌ ಜೀವನದ ಸಂಧ್ಯಾಕಾಲದಲ್ಲಿರುವ ವಿರಾಟ್‌ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಪಾಲಿಗೆ ಆಸ್ಟ್ರೇಲಿಯಾ ವಿರುದ್ಧ ಭಾನುವಾರ ಇಲ್ಲಿ ಆರಂಭವಾಗಲಿರುವ ಏಕದಿನ ಸರಣಿ ಮಹತ್ವದ್ದು. ಇದೇ ಮೊದಲ ಬಾರಿ ಏಕದಿನ ಸರಣಿಗೆ ಪೂರ್ಣ ಪ್ರಮಾಣದ ನಾಯಕನಾಗಿರುವ ಶುಭಮನ್‌ ಗಿಲ್‌ ಅವರನ್ನೂ ಈ ಸರಣಿ ಸತ್ವಪರೀಕ್ಷೆಗೆ ಒಡ್ಡಲಿದೆ.

ಅನುಭವಿಗಳಾದ ಕೊಹ್ಲಿ ಮತ್ತು ರೋಹಿತ್‌ ಅವರು ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಡಿ ಏಳು ತಿಂಗಳಾದ ಮೇಲೆ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಈ ಅವಧಿಯಲ್ಲಿ ಭಾರತದ ಕ್ರಿಕೆಟ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕೊಹ್ಲಿ, ರೋಹಿತ್ ಅವರ ಅನುಪಸ್ಥಿತಿ ಎದ್ದುಕಾಣದಂತೆ ಟೆಸ್ಟ್‌ ತಂಡ ಆಡುತ್ತಿದೆ.

ADVERTISEMENT

ಯಾವುದೇ ಮಾನದಂಡದಲ್ಲಿ ನೋಡಿದರೂ, ಈ ಇಬ್ಬರೂ ಏಕದಿನ ಕ್ರಿಕೆಟ್‌ನ ಸರ್ವಶ್ರೇಷ್ಠ ಆಟಗಾರರಾಗಿ ಹೆಸರು ಮಾಡಿದವರು. ಈ ಸರಣಿಗೆ ಸಜ್ಜಾಗಲು ಇಬ್ಬರೂ ಸಾಕಷ್ಟು ಶ್ರಮ ಹಾಕಿದ್ದಾರೆ. ರೋಹಿತ್ ಶರ್ಮಾ ತಮ್ಮ ತೂಕವನ್ನು ಸಾಕಷ್ಟು ಇಳಿಸಿಕೊಂಡಿದ್ದಾರೆ. ಅತ್ತ ಲಂಡನ್‌ನಲ್ಲಿ ನೆಲೆಕಂಡಿರುವ ವಿರಾಟ್‌ ಕೊಹ್ಲಿ ಅವರೂ ಖಾಸಗಿ ಟ್ರೇನರ್‌ ನೆರವಿನಿಂದ ಫಿಟ್ನೆಸ್‌ ಕಾಪಾಡಿಕೊಳ್ಳಲು ದೇಹ ದಂಡಿಸಿದ್ದಾರೆ.

ಆದರೆ ಐಪಿಎಲ್‌ ನಂತರ ಸ್ಪರ್ಧಾತ್ಮಕ ಪಂದ್ಯದ ಅಭ್ಯಾಸವಿಲ್ಲದೇ ಕಣಕ್ಕಿಳಿಯುತ್ತಿರುವುದು ಈ ಇಬ್ಬರೂ ತಾರೆಯರಿಗೆ ಸವಾಲು ಒಡ್ಡಲಿದೆ. ಇಬ್ಬರಿಗೂ ಇರುವ ಸಕಾರಾತ್ಮಕ ಅಂಶ ಎಂದರೆ, ಈ ಹಿಂದೆ ಸುದೀರ್ಘ ಕ್ರಿಕೆಟ್‌ ಜೀವನದಲ್ಲಿ ಸಾಕಷ್ಟು ಯಶಸ್ಸು ಗಳಿಸಿರುವ ತಂಡದ ವಿರುದ್ಧವೇ ಕಣಕ್ಕಿಳಿಯುತ್ತಿರುವುದು.

ಈಗ ತಮಗೆ ಉಳಿದಿರುವ ಏಕೈಕ ಮಾದರಿಯಲ್ಲಿ ತಮ್ಮ ವೃತ್ತಿ ಬದುಕನ್ನು ಇನ್ನಷ್ಟು ದೀರ್ಘ ಕಾಲ ವಿಸ್ತರಿಸಬೇಕಾದರೆ ಇಲ್ಲಿ ಯಶಸ್ಸು ಗಳಿಸುವುದು ಅನಿವಾರ್ಯವಾಗಿದೆ.

ಆದರೆ ಕೊಹ್ಲಿ ಅವರಿಗಿಂತ ಹೆಚ್ಚು ಒತ್ತಡ ರೋಹಿತ್ ಶರ್ಮಾ ಅವರಿಗೆ ಇದೆ. ಅವರು ಈಗ ನಾಯಕನಾಗಿರದೇ, ಸೀನಿಯರ್ ಆಟಗಾರನ ಹೊಸ ಪಾತ್ರದಲ್ಲಿ ಹೊಂದಿಕೊಳ್ಳಬೇಕಿದೆ. ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಕೊನೆಯ ಬಾರಿ ಆಡಿದಾಗ ಐಸಿಸಿ ಟ್ರೋಫಿ ಗೆದ್ದ ಸಂಭ್ರಮವನ್ನು ಅವರು  ಅನುಭವಿಸಿದ್ದರು. ಮೆಲ್ಬರ್ನ್‌ನಲ್ಲಿ ತಮ್ಮ ಕೊನೆಯ ಟೆಸ್ಟ್‌ ಆಡಿದಾಗಲೂ ಅವರು ನಾಯಕರಾಗಿದ್ದರು.

ಕೊಹ್ಲಿ ಎಂದಿನಂತೆ ಆಕರ್ಷಕ ಇನಿಂಗ್ಸ್ ಆಡಿದರೆ ಮತ್ತು ರೋಹಿತ್ ತಮ್ಮ ಶಾಟ್‌ ಮೇಕಿಂಗ್‌ನಲ್ಲಿ ಲಯ ಕಂಡುಕೊಂಡರೆ ಅವರ ಕ್ರಿಕೆಟ್‌ ಜೀವನ ಇನ್ನಷ್ಟು ಲಂಬಿಸಬಹುದು.

ಆತಿಥೇಯ ತಂಡದ ವೇಗಿಗಳಾದ ಮಿಚೆಲ್‌ ಸ್ಟಾರ್ಕ್‌ ಮತ್ತು ಜೋಶ್‌ ಹೇಜಲ್‌ವುಡ್‌ ಅವರ ದಾಳಿಯನ್ನು ಈ ಇಬ್ಬರು ಹೇಗೆ ನಿಭಾಯಿಸುತ್ತಾರೆ ಎಂಬುದೂ ಕುತೂಹಲಕ್ಕೆ ಎಡೆಮಾಡಿದೆ. ಈಗ ಕ್ರಿಕೆಟ್‌ ಆಯ್ಕೆ ಸಮಿತಿ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿರುವ ಕಾರಣ ಇವರಿಬ್ಬರೂ ಯಾವುದನ್ನೂ ಹಗುರವಾಗಿ ತೆಗೆದುಕೊಳ್ಳುವಂತೆ ಇಲ್ಲ. ತಂಡದ ಚಿಂತಕರ ಚಾವಡಿ 2027ರ ಏಕದಿನ ವಿಶ್ವಕಪ್‌ಗೆ ತಂಡ ಕಟ್ಟುವತ್ತ ದೃಷ್ಟಿ ನೆಟ್ಟಿದೆ.

‘ಅವರಿಬ್ಬರು (ರೋಹಿತ್‌, ಕೊಹ್ಲಿ) ಈಗ ಆಸ್ಟ್ರೇಲಿಯಾ ವಿರುದ್ಧ ತಂಡದಲ್ಲಿದ್ದಾರೆ. ಅವರನ್ನೇನೂ ಪರೀಕ್ಷೆಗೆ ಒಳಪಡಿಸಿಲ್ಲ. ಅವರು ಆಡಲು ಆರಂಭಿಸಿದ ಬಳಿಕವಷ್ಟೇ ಮಾಲ್ಯಮಾಪನದಲ್ಲಿ ತೊಡಗಬಹುದು’ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರಕರ್ ಸೂಚ್ಯವಾಗಿ ಹೇಳಿದ್ದಾರೆ.

ಗಿಲ್‌ಗೆ ಹೆಚ್ಚಿದ ಭಾರ

ಶುಭಮನ್ ಗಿಲ್‌ ಅವರಿಗೆ ಈಗ ಟಿ20, ಟೆಸ್ಟ್‌ ಜೊತೆಗೆ ಏಕದಿನ ತಂಡದ ಸಾರಥ್ಯವನ್ನೂ ವಹಿಸಲಾಗಿದೆ. ಆದರೆ ಇಲ್ಲಿ ಅವರಿಗೆ ಅನುಭವಿಗಳಾದ ಕೊಹ್ಲಿ, ರೋಹಿತ್ ಅವರ ಮಾರ್ಗದರ್ಶನ ಪಡೆಯಲು ಅವಕಾಶವಿದೆ.

ಕೊಹ್ಲಿ ಹಾಕಿಕೊಟ್ಟ ಪರಂಪರೆಯನ್ನು ಮುಂದುವರಿಸಲು ತಾನು ಸಮರ್ಥ ಎಂಬುದನ್ನು 26 ವರ್ಷ ವಯಸ್ಸಿನ ಗಿಲ್‌ ಈಗಾಗಲೇ ಕೆಲವು ಇನಿಂಗ್ಸ್‌ಗಳ ಮೂಲಕ ಸಾಬೀತುಪಡಿಸಿದ್ದಾರೆ.

ಸಂಯೋಜನೆ

ತಂಡದ ಆಡಳಿತವು, ರೋಹಿತ್ ಮತ್ತು ಶುಭಮನ್ ಗಿಲ್ ಅವರ ಯಶಸ್ವಿ ಆರಂಭಿಕ ಸಂಯೋಜನೆಯನ್ನು ಮುಂದುವರಿಸುವ ಸಾಧ್ಯತೆ ಹೆಚ್ಚು. ಮೂರನೇ ಕ್ರಮಾಂಕದಲ್ಲಿ ಕೊಹ್ಲಿ, ನಂತರ ಶ್ರೇಯಸ್‌ ಅಯ್ಯರ್, ಕೆ.ಎಲ್‌.ರಾಹುಲ್‌ ಆಡಲು ಇಳಿಯಬಹುದು. ರಾಹುಲ್‌ಗೆ ಕೀಪಿಂಗ್ ಹೊಣೆಯೂ ಹೆಗಲೇರಬಹುದು.

ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಗಾಯಾಳಾಗಿರುವ ಕಾರಣ ನಿತೀಶ್‌ ಕುಮಾರ್ ರೆಡ್ಡಿ ಅವರು ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಮೊಹಮ್ಮದ್ ಸಿರಾಜ್‌, ಅರ್ಷದೀಪ್‌ ಅವರಿಗೆ ಬೆಂಬಲವಾಗಿ ಹರ್ಷಿತ್‌ ರಾಣಾ ಮತ್ತು ಪ್ರಸಿದ್ಧ ಕೃಷ್ಣ ಕಣಕ್ಕಿಳಿಯಬಹುದು. ಸ್ಪಿನ್ ವಿಭಾಗವನ್ನು ಅಕ್ಷರ್‌ ಪಟೇಲ್‌ ಮತ್ತು ಕುಲದೀಪ್‌ ನಿಭಾಯಿಸಲಿದ್ದಾರೆ.

ಆಸ್ಟ್ರೇಲಿಯಾ ತಂಡವು ಅನುಭವಿಗಳಾದ ಮಿಚೆಲ್‌ ಮಾರ್ಷ್‌ ಮತ್ತು ಟ್ರಾವಿಸ್‌ ಹೆಡ್‌ ಅವರ ಜೊತೆಗೆ ಕೂಪರ್ ಕಾನೊಲಿ, ಮಾರ್ನಸ್‌ ಲಾಬುಷೇನ್‌, ಮ್ಯಾಥ್ಯೂ ರೆನ್‌ಶಾ ಅವರಿಂದ ಉಪಯುಕ್ತ ಕೊಡುಗೆ ನಿರೀಕ್ಷಿಸುತ್ತಿದೆ.

ತಂಡಗಳು ಹೀಗಿವೆ:

ಭಾರತ: ಶುಭಮನ್ ಗಿಲ್‌ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್ (ಉಪ ನಾಯಕ), ಅಕ್ಷರ್ ಪಟೇಲ್‌, ಕೆ.ಎಲ್‌.ರಾಹುಲ್ (ವಿಕೆಟ್ ಕೀಪರ್‌), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್‌, ಕುಲದೀಪ್‌ ಯಾದವ್, ಹರ್ಷಿತ್‌ ರಾಣಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ಧ್ರುವ್ ಜುರೇಲ್ (ವಿಕೆಟ್‌ ಕೀಪರ್‌), ಯಶಸ್ವಿ ಜೈಸ್ವಾಲ್.

ಆಸ್ಟ್ರೇಲಿಯಾ: ಮಿಚೆಲ್‌ ಮಾರ್ಷ್‌, ಕ್ಸೇವಿಯರ್‌ ಬಾರ್ಟ್ಲೆಟ್‌, ಕೂಪರ್ ಕಾನೊಲಿ, ಬೆನ್‌ ದ್ವಾರ್ಷಿಯಸ್‌, ನಥಾನ್ ಎಲಿಸ್‌, ಜೋಶ್‌ ಹೇಜಲ್‌ವುಡ್‌, ಟ್ರಾವಿಸ್‌ ಹೆಡ್‌, ಮ್ಯಾಥ್ಯೂ ಕುನ್ಹೆಮನ್‌, ಮಾರ್ನಸ್‌ ಲಾಬುಷೇನ್‌, ಮಿಚೆಲ್‌ ಓವೆನ್‌, ಜೋಶ್‌ ಫಿಲಿಪ್‌, ಮ್ಯಾಥ್ಯೂ ರೆನ್‌ಶಾ, ಮ್ಯಾಥ್ಯೂ ಶಾರ್ಟ್, ಮಿಚೆಲ್‌ ಸ್ಟಾರ್ಕ್‌.

ಪಂದ್ಯ ಆರಂಭ: ಬೆಳಿಗ್ಗೆ 9 (ಭಾರತೀಯ ಕಾಲಮಾನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.