ADVERTISEMENT

ACC ಸಭೆಗೆ ವರ್ಚುವಲ್ ಆಗಿ ಹಾಜರಾಗಲಿದೆ BCCI; ಏಷ್ಯಾಕಪ್ ಆಯೋಜನೆ ಕುರಿತು ಚರ್ಚೆ

ಪಿಟಿಐ
Published 24 ಜುಲೈ 2025, 9:33 IST
Last Updated 24 ಜುಲೈ 2025, 9:33 IST
ಬಿಸಿಸಿಐ
ಬಿಸಿಸಿಐ   

ನವದೆಹಲಿ: ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ (ಎಸಿಸಿ) ಸಭೆಯು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್‌ ನಖ್ವಿ ಅಧ್ಯಕ್ಷತೆಯಲ್ಲಿ ಢಾಕಾದಲ್ಲಿ ಇಂದು (ಗುರುವರ) ನಡೆಯಲಿದೆ. ಸಭೆಯನ್ನು ಬಹಿಷ್ಕರಿಸುವುದಾಗಿ ಆರಂಭದಲ್ಲಿ ಬೆದರಿಕೆ ಹಾಕಿದ್ದ ಭಾರತ, ಇದೀಗ ವರ್ಚುವಲ್‌ ಆಗಿ ಭಾಗವಹಿಸುವುದಾಗಿ ಹೇಳಿದೆ.

ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಷ್ಯಾಕಪ್‌ ಟಿ20 ಕ್ರಿಕೆಟ್‌ ಟೂರ್ನಿಗೆ ಸ್ಥಳಗಳನ್ನು ನಿರ್ಧರಿಸುವ ವಿಚಾರವು ಸಭೆಯಲ್ಲಿ ಚರ್ಚೆಯಾಗಲಿದೆ.

'ಬಿಸಿಸಿಐ ಉಪಾಧ್ಯಕ್ಷ ಹಾಗೂ ಎಸಿಸಿ ಮಂಡಳಿ ಸದಸ್ಯ ರಾಜೀವ್‌ ಶುಕ್ಲಾ ಅವರು ವರ್ಚುವಲ್‌ ಆಗಿ, ಮಂಡಳಿಯನ್ನು ಪ್ರತಿನಿಧಿಸಲಿದ್ದಾರೆ. ಏಷ್ಯಾ ಕಪ್‌ ಆಯೋಜನೆಗೆ ಸ್ಥಳಗಳ ನಿಗಧಿ ಸಂಬಂಧ ಬಿಕ್ಕಟ್ಟು ಶಮನಗೊಳಿಸಬೇಕಿರುವುದರಿಂದ, ವರ್ಚುವಲ್‌ ಆಗಿ ಸಭೆಯಲ್ಲಿ ಭಾಗವಹಿಸಲು ಬಿಸಿಸಿಐ ನಿರ್ಧರಿಸಿದೆ' ಎಂದು ಎಸಿಸಿ ಮೂಲಗಳು ತಿಳಿಸಿವೆ.

ADVERTISEMENT

ಬಿಸಿಸಿಐ ಇತ್ತೀಚೆಗೆ ಬಾಂಗ್ಲಾದೇಶ ಪ್ರವಾಸವನ್ನು ರದ್ದು ಮಾಡಿದೆ. ಬಾಂಗ್ಲಾದಲ್ಲಿ ಭದ್ರತೆಗೆ ಆತಂಕವಿರುವುದರಿಂದ ಸ್ಥಳ ಬದಲಾವಣೆ ಮಾಡುವಂತೆ ಬಿಸಿಸಿಐ ಕೇಳಿತ್ತು.

ಬಿಸಿಸಿಐ ಮಾತ್ರವಲ್ಲದೆ, ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕೂಡ ರಾಜಕೀಯ ಅಸ್ಥಿರತೆ ಎದುರಿಸುತ್ತಿರುವ ಬಾಂಗ್ಲಾದೇಶಕ್ಕೆ ಪ್ರಯಾಣಿಸದಿರಲು ಮತ್ತು ಎಸಿಸಿ ಸಭೆಯನ್ನು ಬಹಿಷ್ಕರಿಸುವ ಸಾಧ್ಯತೆ ಇತ್ತು.

ಪಿಸಿಬಿ ಅಧ್ಯಕ್ಷ ನಖ್ವಿ ಈಗಾಗಲೇ ಢಾಕಾದಲ್ಲಿದ್ದಾರೆ. ನಖ್ವಿ ಅವರು ಸದ್ಯದ ಪರಿಸ್ಥಿತಿಯನ್ನು ಸಂಪೂರ್ಣ ಅರ್ಥ ಮಾಡಿಕೊಂಡಿದ್ದಾರೆ ಎಂದು ಬಾಂಗ್ಲಾದೇಶ ಕ್ರಿಕೆಟ್‌ (ಬಿಸಿಬಿ) ಮೂಲಗಳು ಹೇಳಿವೆ.

'ಬಿಸಿಬಿ ಮಂಡಳಿಯು ಸಭೆಗೆ ಅಗತ್ಯ ಸಹಕಾರ, ವ್ಯವಸ್ಥಾಪನಾ ಬೆಂಬಲವನ್ನಷ್ಟೇ ನೀಡುತ್ತಿದೆ. ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸುವುದು, ಅವರ ಪ್ರಯಾಣ, ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಅಧಿಕಾರಿಯನ್ನು ನೇಮಿಸಿದ್ದೇವೆ' ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.