ADVERTISEMENT

ಒಂದೇ ಸರಣಿಯಲ್ಲಿ 21 ಶತಕ: 70 ವರ್ಷ ಹಿಂದಿನ ದಾಖಲೆ ಸರಿಗಟ್ಟಿದ ಭಾರತ, ಇಂಗ್ಲೆಂಡ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಆಗಸ್ಟ್ 2025, 10:06 IST
Last Updated 4 ಆಗಸ್ಟ್ 2025, 10:06 IST
<div class="paragraphs"><p>ಕೆ.ಎಲ್‌. ರಾಹುಲ್‌, ಜೋ ರೂಟ್‌, ಶುಭಮನ್ ಗಿಲ್‌</p></div>

ಕೆ.ಎಲ್‌. ರಾಹುಲ್‌, ಜೋ ರೂಟ್‌, ಶುಭಮನ್ ಗಿಲ್‌

   

ಕೃಪೆ: ಪಿಟಿಐ

ಲಂಡನ್‌: ಇಂಗ್ಲೆಂಡ್‌ ಹಾಗೂ ಭಾರತ ನಡುವಣ ಟೆಸ್ಟ್ ಕ್ರಿಕೆಟ್‌ ಸರಣಿಯು ಕುತೂಹಲದ ಹಂತಕ್ಕೆ ಬಂದು ನಿಂತಿದೆ. ಕೆನ್ನಿಂಗ್ಟನ್‌ ಓವಲ್‌ನಲ್ಲಿ ನಡೆಯುತ್ತಿರುವ ಅಂತಿಮ ಪಂದ್ಯ ಗೆಲ್ಲಲು ಆತಿಥೇಯರು ಕೊನೇ ದಿನ 35 ರನ್‌ ಗಳಿಸಬೇಕಿದೆ. ಭಾರತಕ್ಕೆ ನಾಲ್ಕು ವಿಕೆಟ್‌ಗಳ ಆಗತ್ಯವಿದೆ.

ADVERTISEMENT

ಇಂಗ್ಲೆಂಡ್‌ ಗೆದ್ದರೆ, 3–1 ಅಂತರದಲ್ಲಿ ಟ್ರೋಫಿ ವಶಪಡಿಸಿಕೊಳ್ಳಲಿದೆ. ಭಾರತ ಜಯ ಸಾಧಿಸಿದರೆ, 2–2 ಅಂತರದಲ್ಲಿ ಸರಣಿ ಸಮವಾಗಲಿದೆ.

ಐದೂ ಪಂದ್ಯಗಳು ಕೊನೇ ದಿನದವರೆಗೆ ಸಾಗಿರುವುದು, ಟೂರ್ನಿಯ ಜಿದ್ದಾಜಿದ್ದಿಗೆ ಸಾಕ್ಷಿಯೆಂಬಂತಾಗಿದೆ.

ಲೀಡ್ಸ್‌ನಲ್ಲಿ ಮೊದಲ ಪಂದ್ಯವನ್ನು 5 ವಿಕೆಟ್‌ ಅಂತರದಿಂದ ಗೆದ್ದಿದ್ದ ಆಂಗ್ಲರು, ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ನಲ್ಲಿ 336 ರನ್‌ ಅಂತರದಿಂದ ಮುಗ್ಗರಿಸಿದ್ದರು. ನಂತರ, ಲಾರ್ಡ್ಸ್‌ನಲ್ಲಿ ಪುನಃ ಮೇಲುಗೈ ಸಾಧಿಸಿ 22 ರನ್‌ ಅಂತರದ ಜಯ ಸಾಧಿಸಿದ್ದರು. ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಪಂದ್ಯ ಡ್ರಾ ಆಗಿತ್ತು.

ಹೀಗಾಗಿ, ಐದನೇ ಪಂದ್ಯದ ಫಲಿತಾಂಶ 'ಟ್ರೋಫಿ' ಭವಿಷ್ಯವನ್ನೂ ನಿರ್ಧರಿಸಲಿದೆ.

'21 ಶತಕ'
ಪ್ರಸಕ್ತ ಟೂರ್ನಿಯಲ್ಲಿ ಎರಡೂ ತಂಡಗಳ 9 ಬ್ಯಾಟರ್‌ಗಳು 400ಕ್ಕಿಂತ ಹೆಚ್ಚು ರನ್‌ ಕಲೆಹಾಕಿದ್ದಾರೆ. ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಸರಣಿಯೊಂದರಲ್ಲಿ ಇಷ್ಟು ಬ್ಯಾಟರ್‌ಗಳು ಈ ರೀತಿಯ ಸಾಧನೆ ಮಾಡಿರುವುದು ಇದೇ ಮೊದಲು.

ಅದಷ್ಟೇ ಅಲ್ಲ. ಒಟ್ಟು 12 ಮಂದಿ 21 ಶತಕಗಳನ್ನು ಸಿಡಿಸಿದ್ದಾರೆ. ಇದರೊಂದಿಗೆ, 70 ವರ್ಷಗಳ ಹಿಂದಿನ ದಾಖಲೆಯನ್ನು 'ಆ್ಯಂಡರ್ಸನ್‌–ತೆಂಡೂಲ್ಕರ್‌ ಟ್ರೋಫಿ' ಟೆಸ್ಟ್‌ ಸರಣಿಯಲ್ಲಿ ಸರಿಗಟ್ಟಲಾಗಿದೆ.

1955ರಲ್ಲಿ ವೆಸ್ಟ್‌ ಇಂಡೀಸ್‌ ಹಾಗೂ ಆಸ್ಟ್ರೇಲಿಯಾ ನಡುವಣ ಸರಣಿಯಲ್ಲಿಯೂ ಇಷ್ಟೇ (21) ಶತಕಗಳು ದಾಖಲಾಗಿದ್ದವು. ಅದು ಈವರೆಗೆ ಸಾಧನೆಯಾಗಿತ್ತು.

ಪ್ರಸ್ತುತ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ಶುಭಮನ್‌ ಗಿಲ್‌ ಅವರು 4 ಶತಕ ಸಹಿತ 754 ರನ್‌ ಕಲೆಹಾಕಿದ್ದಾರೆ. ನಂತರದ ಸ್ಥಾನದಲ್ಲಿರುವ ಜೋ ರೂಟ್‌ (537 ರನ್‌) ಮೂರು ಸಲ ಮೂರಂಕಿ ಮೊತ್ತ ದಾಟಿದ್ದಾರೆ. ಕೆ.ಎಲ್‌. ರಾಹುಲ್‌, ಹ್ಯಾರಿ ಬ್ರೂಕ್‌, ರಿಷಭ್‌ ಪಂತ್‌, ಯಶಸ್ವಿ ಜೈಸ್ವಾಲ್‌ ತಲಾ ಎರಡು ಶತಕ ಸಿಡಿಸಿದ್ದಾರೆ. ರವೀಂದ್ರ ಜಡೇಜ, ಬೆನ್‌ ಡಕೆಟ್‌, ಜೆಮೀ ಸ್ಮಿತ್‌, ಓಲಿ ಪೋಪ್‌, ಬೆನ್‌ ಸ್ಟೋಕ್ಸ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಒಂದೊಂದು ಶತಕ ಬಾರಿಸಿದ್ದಾರೆ.

2003–04ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ ಇಂಡೀಸ್‌ ಸರಣಿಯಲ್ಲಿ 20 ಶತಕಗಳು ದಾಖಲಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.