
ಹ್ಯಾರಿಸ್ ರವೂಫ್ ಬೋಲ್ಡ್ ಆದ ದೃಶ್ಯ; ಜಸ್‌ಪ್ರೀತ್ ಬೂಮ್ರಾ ಅವರ ‘ಪ್ಲೇನ್ ಕ್ರಾಶ್‘ ಸನ್ನೆ
ಎಕ್ಸ್ ಚಿತ್ರ
ನವದೆಹಲಿ: ದುಬೈನಲ್ಲಿ ಭಾನುವಾರ ನಡೆದ ಏಷ್ಯಾ ಕಪ್ ಫೈನಲ್‌ನ ಭಾರತ – ಪಾಕ್ ಪಂದ್ಯದಲ್ಲಿ ಪಾಕಿಸ್ತಾನದ ಹ್ಯಾರಿಸ್ ರವೂಫ್ ಔಟ್ ಮಾಡಿದ ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಅವರ ‘ವಿಮಾನ ಪತನ’ದ ಸನ್ನೆಯ ಚಿತ್ರವನ್ನ ಹಂಚಿಕೊಂಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ‘ಈ ಶಿಕ್ಷೆಗೆ ಪಾಕಿಸ್ತಾನ ಅರ್ಹ’ ಎಂದು ಬರೆದುಕೊಂಡಿದ್ದಾರೆ.
ಫೈನಲ್ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಐದು ವಿಕೆಟ್‌ಗಳ ಅಂತರದಿಂದ ಮಣಿಸಿತು. ಆ ಮೂಲಕ 9ನೇ ಬಾರಿಗೆ ಏಷ್ಯಾ ಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಈ ಇಡೀ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ಆಟಗಾರರ ಪ್ರಚೋಧನಕಾರಿ ಸನ್ನೆಗಳು ಮತ್ತು ಪಹಲ್ಗಾಮ್ ದಾಳಿಯಲ್ಲಿ 26 ಪ್ರವಾಸಿಗರ ಹತ್ಯೆಗೈದದ್ದಕ್ಕೆ ಪ್ರತೀಕಾರವಾಗಿ ಹಸ್ತಲಾಘವ ನೀಡಲು ಟೀಂ ಇಂಡಿಯಾ ಆಟಗಾರರ ನಕಾರ ಸೇರಿದಂತೆ ಹಲವು ಸಂಗತಿಗಳು ಭಾರೀ ಸುದ್ದಿಯಾದವು.
ಸೂಪರ್ ನಾಲ್ಕರ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ರವೂಫ್ ಅವರು ಭಾರತದ ಅಭಿಮಾನಿಗಳತ್ತ ತಿರುಗಿ ‘ವಿಮಾನ ಪತನ’ದಂತೆ ಸನ್ನೆ ಮಾಡಿದ್ದರು. ಇದು ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಭಾರತದ ಆರು ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂಬ ಪಾಕಿಸ್ತಾನದ ಆಧಾರ ರಹಿತ ಹೇಳಿಕೆಯನ್ನು ಪ್ರತಿನಿಧಿಸುವಂತಿತ್ತು. ಇದಕ್ಕೆ ಸರಿಯಾದ ಟಕ್ಕರ್ ನೀಡಲು ಟೀಂ ಇಂಡಿಯಾ ಕಾದಿತ್ತು. ಭಾನುವಾರದ ಫೈನಲ್ ಪಂದ್ಯದಲ್ಲಿ ಬೂಮ್ರಾ ಕೈಯಿಂದ ಸಿಡಿದ ಚಂಡು ನೇರವಾಗಿ ಆಫ್ ಸ್ಟಂಪ್ ಅನ್ನು ಮಕಾಡೆ ಮಲಗಿಸುವ ಮೂಲಕ ರವೂಫ್ ಅವರನ್ನು ಪೆವಿಲಿಯನ್‌ನತ್ತ ಅಟ್ಟಿತು. ಆದರೆ ಇದಕ್ಕಿಂತಲೂ ಬೂಮ್ರಾ ಅವರ ‘ಪ್ಲೇನ್ ಕ್ರಾಶ್’ ಸನ್ನೆ ಭಾರತೀಯರನ್ನು ಮತ್ತಷ್ಟು ಸಂಭ್ರಮಿಸುವಂತೆ ಮಾಡಿತು.
ರೋಚಕ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ಪಾಕಿಸ್ತಾನ ವಿರುದ್ಧ ಜಯ ಸಾಧಿಸಿತು. ವಿಜೇತ ತಂಡಕ್ಕೆ ಏಷ್ಯಾ ಕಪ್ ನೀಡಲು ನಿಂತಿದ್ದ ಎಸಿಸಿ ಅಧ್ಯಕ್ಷರೂ ಆಗಿರುವ ಪಾಕಿಸ್ತಾನದ ಸಚಿವ ಮೊಹಸೀನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡ ನಿರಾಕರಿಸಿತು. ಭಾರತದ ತಂಡದ ದಿಟ್ಟ ನಿಲುವಿಗೆ ಮಣಿದ ನಖ್ವಿ, ವೇದಿಕೆಯಿಂದ ಹೊರ ನಡೆದರು. ನಂತರ ಭಾರತ ತಂಡ ಟ್ರೋಫಿ ಇಲ್ಲದೇ ಸಂಭ್ರಮಿಸಿತು.
‘ಆಟದ ಮೈದಾನದಲ್ಲೂ ಆಪರೇಷನ್ ಸಿಂಧೂರ. ಅದೇ ಫಲಿತಾಂಶ – ಭಾರತದ ಗೆಲುವು! ನಮ್ಮ ಕ್ರಿಕೆಟಿಗರಿಗೆ ಅಭಿನಂದನೆಗಳು’ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.
‘ಅದ್ಭುತ ಗೆಲುವು, ಯಾವುದೇ ಕ್ಷೇತ್ರವಾಗಲಿ ನಮ್ಮ ಯುವಕರ ಉಗ್ರ ಶಕ್ತಿಯು ವೈರಿಗಳನ್ನು ಮತ್ತೊಮ್ಮೆ ಬಡಿದುಹಾಕಿದೆ. ಕ್ಷೇತ್ರ ಯಾವುದಾದರೂ ಆಗಿರಲಿ, ಗೆಲ್ಲಲೇಬೇಕೆಂಬ ಛಲ ಭಾರತಕ್ಕಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.