ADVERTISEMENT

ಸತತ ವೈಫಲ್ಯ ಅನುಭವಿಸುತ್ತಿರುವ ರೋಹಿತ್, ಕೊಹ್ಲಿ ಪರ ಗಂಭೀರ್ ಬ್ಯಾಟಿಂಗ್

​ಪ್ರಜಾವಾಣಿ ವಾರ್ತೆ
Published 5 ಜನವರಿ 2025, 15:49 IST
Last Updated 5 ಜನವರಿ 2025, 15:49 IST
ಗೌತಮ್ ಗಂಭೀರ್ 
ಗೌತಮ್ ಗಂಭೀರ್    

ಸಿಡ್ನಿ: ಸತತ ವೈಫಲ್ಯ ಅನುಭವಿಸುತ್ತಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಲ್ಲಿ ಇನ್ನೂ ಸಾಧನೆಯ ಹಸಿವು ಇದೆ. ಅವರಲ್ಲಿ ಸಾಮರ್ಥ್ಯವೂ ಇದೆ ಎಂದು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಸಮರ್ಥಿಸಿಕೊಂಡರು. 

ಭಾನುವಾರ ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾನು ಯಾವುದೆ ಆಟಗಾರನ ಭವಿಷ್ಯದ ಬಗ್ಗೆ ಮಾತನಾಡುತ್ತಿಲ್ಲ. ಅದು ಅವರವರಿಗೇ ಬಿಟ್ಟಿದ್ದು. ಆದರೆ ಒಂದಂತೂ ಸತ್ಯ. ಅವರಲ್ಲಿ ಇನ್ನೂ ಕ್ರಿಕೆಟ್ ಬಾಕಿ ಇದೆ. ಸಾಧನೆಯ ಹಸಿವು ಕೂಡ ಅಪಾರವಾಗಿದೆ. ಅವರು ಬಹಳ ಗಟ್ಟಿ ಮನೋಬಲದ ವ್ಯಕ್ತಿಗಳು. ಭಾರತದ ಕ್ರಿಕೆಟ್ ಅನ್ನು ಮತ್ತಷ್ಟು ಉನ್ನತವಾದ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಾರೆಂಬ ವಿಶ್ವಾಸವಿದೆ’ ಎಂದರು. 

‘ಪ್ರತಿಯೊಬ್ಬ ಆಟಗಾರನಿಗೂ ತಮ್ಮ ಸಾಮರ್ಥ್ಯ ಮತ್ತು ಸಾಧಿಸುವ ಗುರಿಯ ಬಗ್ಗೆ ಸ್ಪಷ್ಟವಾದ ಅರಿವು ಇರುತ್ತದೆ. ಇದು ಆಟಕ್ಕೆ ಮಾತ್ರವಲ್ಲ ಎಲ್ಲ ವೃತ್ತಿಪರರಿಗೂ ಅನ್ವಯಿಸುತ್ತದೆ’ ಎಂದರು. 

ADVERTISEMENT

‘ನನ್ನ ಮುಖ್ಯ ಹೊಣೆಯೆಂದರೆ ತಂಡದಲ್ಲಿರುವ ಪ್ರತಿಯೊಬ್ಬರೊಂದಿಗೂ ಪಾರದರ್ಶಕವಾಗಿರುವುದು. ಕೇವಲ ಒಬ್ಬರು ಅಥವಾ ಇಬ್ಬರೊಂದಿಗೆ ಮಾತ್ರ ಮುಕ್ತವಾಗಿರುವುದಲ್ಲ. ಒಂದೊಮ್ಮೆ ಈ ರೀತಿನೀತಿಯಲ್ಲಿ ತಪ್ಪಿದರೆ, ನನ್ನ ಕರ್ತವ್ಯ ಮತ್ತು ಸ್ಥಾನಕ್ಕೆ ಅಪ್ರಾಮಾಣಿಕನಾದಂತೆಯೇ ಸರಿ. ಇನ್ನೂ ಪದಾರ್ಪಣೆ ಮಾಡಲಿರುವ ಮತ್ತು ಈಗಾಗಲೇ 100 ಪಂದ್ಯಗಳನ್ನು ಆಡಿರುವ ಇಬ್ಬರೂ ನನಗೆ ಸಮಾನರು’ ಎಂದರು. 

‘ಕೆಂಪು ಚೆಂಡಿನ ಮಾದರಿಯ ಕ್ರಿಕೆಟ್‌ನಲ್ಲಿ ಆಡುವ ಬದ್ಧತೆ ಇದ್ದರೆ, ದೇಶಿ ಟೂರ್ನಿಗಳಲ್ಲಿ ಆಡಬೇಕು’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.