ಪಂದ್ಯದ ಬಳಿಕ ಪರಸ್ಪರ ಕೈಕುಲುಕಿದ ಭಾರತ, ಬಾಂಗ್ಲಾದೇಶ ಆಟಗಾರರು
ರಾಯಿಟರ್ಸ್ ಚಿತ್ರ
ಕರಾಚಿ: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಭಾರತ ಹಾಗೂ ಬಾಂಗ್ಲಾದೇಶ ನಡುವಣ ಪಂದ್ಯದ ನೇರಪ್ರಸಾರದ ವೇಳೆ ಪಂದ್ಯಾವಳಿಯ ಲೋಗೊದಲ್ಲಿ ಪಾಕಿಸ್ತಾನದ ಹೆಸರು ಇಲ್ಲದ್ದಕ್ಕೆ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಪತ್ರ ಬರೆದಿದೆ.
ಈ ಪಂದ್ಯವು ದುಬೈನಲ್ಲಿ ಗುರುವಾರ ನಡೆದಿತ್ತು.
ಪಿಸಿಬಿ ಮೂಲಗಳ ಪ್ರಕಾರ, ಆಗಿರುವ ಪ್ರಮಾದವನ್ನು ಐಸಿಸಿಯು ಒಪ್ಪಿಕೊಂಡಿದೆ. ದುಬೈನಲ್ಲಿ ನಡೆಯುವ ಎಲ್ಲ ಪಂದ್ಯದ ವೇಳೆ ಟೂರ್ನಿಯ ಮೂರು ಸಾಲಿನ ಲೋಗೊದಲ್ಲಿ ಪಾಕಿಸ್ತಾನ ಹೆಸರು ಇರುವಂತೆ ಮತ್ತು ಪಂದ್ಯಗಳ ಪ್ರಸಾರದ ವೇಳೆ ಬಳಸುವ ಗ್ರಾಫಿಕ್‌ನಲ್ಲಿಯೂ ಆತಿಥೇಯ ರಾಷ್ಟ್ರದ ಹೆಸರು ಇರುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದೆ ಎನ್ನಲಾಗಿದೆ.
ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿರುವ ಭಾರತ, ತನ್ನ ಪಾಲಿನ ಎಲ್ಲ ಪಂದ್ಯಗಳನ್ನು 'ಹೈಬ್ರಿಡ್ ಮಾದರಿ'ಯಲ್ಲಿ ದುಬೈನಲ್ಲಿ ಆಡುತ್ತಿದೆ.
'ಹೌದು, ಪಿಸಿಬಿಯು ಐಸಿಸಿಗೆ ಪತ್ರ ಬರೆದಿದೆ. ಫೆಬ್ರುವರಿ 19 ಹಾಗೂ 21ರಂದು ಕರಾಜಿಯಲ್ಲಿ ನಡೆದ ಪಂದ್ಯಗಳ ವೇಳೆ ಬಳಸಿದ್ದ ಲೋಗೊದಲ್ಲಿ ಪಾಕಿಸ್ತಾನದ ಹೆಸರು ಇದ್ದಂತೆಯೇ, ದುಬೈನಲ್ಲಿ ನಡೆಯುವ ಎಲ್ಲ ಪಂದ್ಯಗಳ ಪ್ರಸಾರದ ಸಂದರ್ಭ ಗ್ರಾಫಿಕ್ ಲೋಗೊದಲ್ಲಿ ಪಾಕಿಸ್ತಾನದ ಹೆಸರನ್ನು ಸೇರಿಸಲಾಗುವುದು ಎಂದು ಭರವಸೆ ನೀಡಿದೆ' ಎಂದು ಪಿಸಿಬಿ ಮೂಲಗಳು ತಿಳಿಸಿವೆ.
ತಾಂತ್ರಿಕ ದೋಷದಿಂದಾಗಿ ಹೀಗಾಗಿದೆ ಎಂಬುದಾಗಿ ಐಸಿಸಿ ಅನೌಪಚಾರಿಕವಾಗಿ ಪಿಸಿಬಿಗೆ ತಿಳಿಸಿದೆ ಎನ್ನಲಾಗಿದೆ.
ಭಾರತ–ಬಾಂಗ್ಲಾದೇಶ ಪಂದ್ಯದ ಪ್ರಸಾರದ ವೇಳೆ ಬಳಸಲಾಗಿದ್ದ ಗ್ರಾಫಿಕ್ ಲೋಗದಲ್ಲಿ ಪಂದ್ಯಾವಳಿಯ ಹೆಸರಷ್ಟೇ (Champions Trophy 2025) ಇತ್ತು. ಆತಿಥೇಯ ರಾಷ್ಟ್ರವಾದ ಪಾಕ್ ಹೆಸರು ಇರಲಿಲ್ಲ.
ಇಂಗ್ಲೆಂಡ್ ಮೂಲದ 'Sunset & Vine' ಕಂಪನಿಯು ಐಸಿಸಿಯ ಮೇಲ್ವಿಚಾರಣೆಯಲ್ಲಿ ಟೂರ್ನಿಯ ಗ್ರಾಫಿಕ್ ಸಿದ್ಧಪಡಿಸಿತ್ತು.
ಬಾಂಗ್ಲಾ ಎದುರಿನ ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಗೆದ್ದುಕೊಂಡಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಣ ಬಹುನಿರೀಕ್ಷಿತ ಪಂದ್ಯವು ನಾಳೆ (ಭಾನುವಾರ) ದುಬೈನಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.