ಜಸ್‌ಪ್ರೀತ್ ಬೂಮ್ರಾ
ರಾಯಿಟರ್ಸ್ ಚಿತ್ರ
ಲೀಡ್ಸ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವುದರ ಹೊರತಾಗಿಯೂ, ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರಿಗೆ ಎರಡು ಪಂದ್ಯಗಳಿಗೆ ವಿಶ್ರಾಂತಿ ನೀಡುವ ಕುರಿತು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಮಾತನಾಡಿದ್ದಾರೆ.
ಬೆನ್ನು ನೋವಿನ ಕಾರಣ ನಾಲ್ಕು ತಿಂಗಳು ಚಿಕಿತ್ಸೆ, ವಿಶ್ರಾಂತಿಯಲ್ಲಿದ್ದ ಬೂಮ್ರಾ, ಕಾರ್ಯಭಾರ ಒತ್ತಡ ನಿರ್ವಹಣೆ ಕಾರಣಕ್ಕಾಗಿ ಟೆಸ್ಟ್ ತಂಡದ ನಾಯಕತ್ವವನ್ನು ನಿರಾಕರಿಸಿದ್ದರು. ಅವರು, ಹೆಡಿಂಗ್ಲೆಯಲ್ಲಿ ನಡೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗೊಂಚಲು ಸಾಧನೆ ಮಾಡುವ ಮೂಲಕ, ಟೀಂ ಇಂಡಿಯಾಗೆ 6 ರನ್ ಅಂತರದ ಮುನ್ನಡೆ ತಂದುಕೊಟ್ಟಿದ್ದರು. ಆದರೆ, ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಆಟವಾಡಿದ ಆತಿಥೇಯ ತಂಡ ಜಯದ ನಗೆ ಬೀರಿತ್ತು.
31ದ ವರ್ಷ ಬೂಮ್ರಾ ಅವರು ಉಳಿದ ನಾಲ್ಕು ಪಂದ್ಯಗಳ ಪೈಕಿ ಎರಡಕ್ಕೆ ಗೈರಾಗಲಿದ್ದಾರೆ ಎನ್ನಲಾಗಿದೆ. ಹಾಗೇನಾದರೂ ಆದರೆ, ಆಂಗ್ಲರ ಪಡೆಯ ಆಕ್ರಮಣಕಾರಿ ಬ್ಯಾಟರ್‌ಗಳ ಎದುರು ಭಾರತ ತಂಡ ಅನನುಭವಿ ಬೌಲಿಂಗ್ ವಿಭಾಗದೊಂದಿಗೆ ಕಣಕ್ಕಿಳಿಯಬೇಕಾಗುತ್ತದೆ. ಇದರಿಂದ ಹಿನ್ನಡೆಯಾಗುವ ಆತಂಕವಿದ್ದರೂ, ಗೌತಮ್ ಅವರು ಸುದೀರ್ಘ ಫಲಿತಾಂಶಗಳ ಬಗ್ಗೆ ಗಮನಹರಿಸಬೇಕಿದೆ ಎಂದಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಗಂಭೀರ್, 'ನಮ್ಮ ಪಾಲಿಗೆ ಬೂಮ್ರಾ ಅವರ ಕೆಲಸದ ಹೊರೆ ನಿರ್ವಹಿಸುವುದು ಅತಿಮುಖ್ಯ. ಇನ್ನೂ ಸಾಕಷ್ಟು ಆಟ ಆಡುವುದಿದೆ. ಅವರು ಎಂತಹ ಫಲಿತಾಂಶಗಳನ್ನು ತಂದುಕೊಡಬಲ್ಲರು ಎಂಬುದು ಗೊತ್ತಿದೆ' ಎಂದು ಹೇಳಿದ್ದಾರೆ.
'ಅವರು (ಜಸ್‌ಪ್ರೀತ್ ಬೂಮ್ರಾ) ಮೂರು ಟೆಸ್ಟ್‌ಗಳನ್ನಷ್ಟೇ ಆಡಲಿದ್ದಾರೆ ಎಂಬುದು ಈ ಸರಣಿಗೆ ಬರುವ ಮೊದಲೇ ನಿರ್ಧಾರವಾಗಿತ್ತು. ಆದರೆ, ಅವರ ದೇಹ ಹೇಗೆ ಸಹಕರಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಉಳಿದ ಟೆಸ್ಟ್‌ಗಳಲ್ಲಿ ಅವರು ಆಡುವರೇ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ' ಎಂದಿದ್ದಾರೆ.
ಎರಡನೇ ಟೆಸ್ಟ್ ಪಂದ್ಯವು ಬರ್ಮಿಂಗ್‌ಹ್ಯಾಮ್‌ನಲ್ಲಿ ಜೂನ್ 2ರಿಂದ 6ರ ವರೆಗೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.