ADVERTISEMENT

ಟೆಸ್ಟ್‌ನಲ್ಲಿ ಹೆಚ್ಚು ರನ್ | 2ನೇ ಸ್ಥಾನಕ್ಕೇರಿದ ರೂಟ್: ಸಚಿನ್ ದಾಖಲೆಗೆ ಆಪತ್ತು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜುಲೈ 2025, 14:51 IST
Last Updated 25 ಜುಲೈ 2025, 14:51 IST
   

ಮ್ಯಾಂಚೆಸ್ಟರ್‌: ಭಾರತ ವಿರುದ್ಧದ ಟೆಸ್ಟ್ ಕ್ರಿಕೆಟ್‌ ಸರಣಿಯ ನಾಲ್ಕನೇ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿರುವ ಇಂಗ್ಲೆಂಡ್‌ನ ಜೋ ರೂಟ್‌, ಈ ಮಾದರಿಯಲ್ಲಿ ಹೆಚ್ಚು ರನ್‌ ಗಳಿಸಿದ ಎರಡನೇ ಬ್ಯಾಟರ್‌ ಎನಿಸಿಕೊಂಡಿದ್ದಾರೆ.

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, 358 ರನ್‌ ಗಳಿಸಿ ಆಲೌಟ್‌ ಆಗಿದೆ. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡುತ್ತಿರುವ ಆತಿಥೇಯ ತಂಡ, ಮೂರನೇ ದಿನ ಚಹಾ ವಿರಾಮದ ಹೊತ್ತಿಗೆ 75 ರನ್‌ಗಳ ಮುನ್ನಡೆ ಸಾಧಿಸಿದೆ.

ಶತಕ ಬಾರಿಸಿರುವ ಜೋ ರೂಟ್‌ ಮತ್ತು ನಾಯಕ ಬೆನ್‌ ಸ್ಟೋಕ್ಸ್‌ (36 ರನ್‌) ಕ್ರೀಸ್‌ನಲ್ಲಿದ್ದು, ತಂಡದ ಮೊತ್ತ 4 ವಿಕೆಟ್‌ಗೆ 433 ರನ್ ಆಗಿದೆ.

ADVERTISEMENT

ರೂಟ್‌ ದಾಖಲೆ
ಇಂಗ್ಲೆಂಡ್‌ ತಂಡದ ಭರವಸೆಯ ಬ್ಯಾಟರ್‌ ರೂಟ್‌, 201 ಎಸೆತಗಳಲ್ಲಿ 13 ಬೌಂಡರಿ ಸಹಿತ 121 ರನ್ ಗಳಿಸಿದ್ದಾರೆ. ಇದೊಂದಿಗೆ ಅವರು, ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ಗಳ ಸಾಲಿನಲ್ಲಿ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌, ದಕ್ಷಿಣ ಆಫ್ರಿಕಾದ ಜಾಕ್‌ ಕಾಲಿಸ್‌ ಹಾಗೂ ಭಾರತದ ರಾಹುಲ್ ದ್ರಾವಿಡ್‌ ಅವರನ್ನು ಹಿಂದಿಕ್ಕಿದ್ದಾರೆ.

ಇದುವರೆಗೆ 157 ಪಂದ್ಯಗಳ 286 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ರೂಟ್‌ ಖಾತೆಯಲ್ಲಿ 13,380 ರನ್ ಗಳಿವೆ. ಅವರ ಬ್ಯಾಟ್‌ನಿಂದ 66 ಅರ್ಧಶತಕ ಮತ್ತು 38 ಶತಕಗಳು ದಾಖಲಾಗಿವೆ.

ದೀರ್ಘ ಮಾದರಿಯಲ್ಲಿ ಹೆಚ್ಚು ರನ್‌ ಗಳಿಸಿದ ದಾಖಲೆ ಸದ್ಯ ಬ್ಯಾಟಿಂಗ್ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಲ್ಲಿದೆ.

ಸಚಿನ್‌ ದಾಖಲೆಗೆ ಆಪತ್ತು!
34 ವರ್ಷದ ರೂಟ್‌ಗೆ ಸಚಿನ್‌ ದಾಖಲೆ ಮುರಿಯಲು ಇನ್ನು 2,541 ರನ್‌ ಬೇಕಿದೆ.

ರೂಟ್‌ ಅವರು, 2021ರಿಂದ 2024ರ ವರೆಗಿನ ನಾಲ್ಕು ವರ್ಷಗಳಲ್ಲಿ ಆಡಿರುವ 40 ಪಂದ್ಯಗಳ 72 ಇನಿಂಗ್ಸ್‌ಗಳಲ್ಲಿ 3,441 ರನ್‌ ಗಳಿಸಿದ್ದಾರೆ. ಇದೇ ರೀತಿ ಆಡಿದರೆ ಮುಂದಿನ ಎರಡು–ಮೂರು ವರ್ಷಗಳಲ್ಲಿ ಸಚಿನ್‌ ದಾಖಲೆಯನ್ನು ಮುರಿಯಬಲ್ಲರು‌ ಎಂದು ಕ್ರಿಕೆಟ್‌ ಪಂಡಿತರು ವಿಶ್ಲೇಷಿಸಿದ್ದಾರೆ.

ವಿಶೇಷವೆಂದರೆ, ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರ ಹತ್ತರಲ್ಲಿರುವ ಏಕೈಕ ಸಕ್ರಿಯ ಆಟಗಾರ ಜೋ ರೂಟ್.

ಟೆಸ್ಟ್ ಕ್ರಿಕೆಟ್‌ನಲ್ಲಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.