ADVERTISEMENT

ಲಾರ್ಡ್ಸ್‌ನಲ್ಲಿ 350ರ ಗಡಿ ದಾಟಿದ ಇಂಗ್ಲೆಂಡ್; ಭಾರತದ ಜಯದ ಹಾದಿ ಕಠಿಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜುಲೈ 2025, 15:47 IST
Last Updated 11 ಜುಲೈ 2025, 15:47 IST
<div class="paragraphs"><p>ಭಾರತ ತಂಡದ ಆಟಗಾರರು</p></div>

ಭಾರತ ತಂಡದ ಆಟಗಾರರು

   

ಪಿಟಿಐ ಚಿತ್ರ

ಲಾರ್ಡ್ಸ್‌: ಭಾರತದ ವಿರುದ್ಧ ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡ 387 ರನ್ ಗಳಿಸಿ ಆಲೌಟ್‌ ಆಗಿದೆ.

ADVERTISEMENT

ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ಗೆ 251 ರನ್‌ ಗಳಿಸಿ ಸುಸ್ಥಿತಿಯಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಭಾರತದ ವೇಗಿ ಜಸ್‌ಪ್ರೀತ್‌ ಬೂಮ್ರಾ, ಎರಡನೇ ದಿನ ಆಘಾತ ನೀಡಿದರು. ಹೀಗಾಗಿ, ಬೃಹತ್‌ ಮೊತ್ತ ಕಲೆಹಾಕುವ ಅವಕಾಶವನ್ನು ಆತಿಥೇಯ ತಂಡ ಕೈಚೆಲ್ಲಿತು.

ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ, 20 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್‌ ಕಳೆದುಕೊಂಡು 74 ರನ್‌ ಗಳಿಸಿ ಆಡುತ್ತಿದೆ. ಆಂಗ್ಲರ ಲೆಕ್ಕ ಚುಕ್ತಾ ಮಾಡಲು ಇನ್ನೂ 313 ರನ್‌ ಗಳಿಸಬೇಕಿದೆ.

ಕೆ.ಎಲ್‌. ರಾಹುಲ್‌ (21 ರನ್‌) ಹಾಗೂ ಇನ್ನೂ ಖಾತೆ ತೆರೆಯದ ನಾಯಕ ಶುಭಮನ್‌ ಗಿಲ್‌ ಕ್ರೀಸ್‌ನಲ್ಲಿದ್ದಾರೆ.

ಭಾರತದ ಮುಂದೆ ಭಾರಿ ಸವಾಲು
ಇಂಗ್ಲೆಂಡ್‌ ಗಳಿಸಿರುವ ಮೊತ್ತದೆದುರು ಭಾರತ ದಿಟ್ಟ ಆಟವನ್ನೇನೋ ಆಡುತ್ತಿದೆ. ಆದರೆ, ಅಷ್ಟಕ್ಕೇ ಜಯ ಸುಲಭವಲ್ಲ. ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯಗಳ ಇತಿಹಾಸವನ್ನೊಮ್ಮೆ ಅವಲೋಕಿದರೆ ಅದು ಸ್ಪಷ್ಟವಾಗುತ್ತದೆ.

ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 350ಕ್ಕಿಂತ ಹೆಚ್ಚು ರನ್‌ ಗಳಿಸಿದ ತಂಡ ಸೋಲು ಕಂಡಿರುವುದು ಕೇವಲ ಎರಡು ಬಾರಿಯಷ್ಟೇ.

ಆಸ್ಟ್ರೇಲಿಯಾ ಎದುರು 1930ರಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಮೊದಲ ಇನಿಂಗ್ಸ್‌ನಲ್ಲಿ 425 ರನ್‌ ಗಳಿಸಿ ಸೋತಿತ್ತು. ಅದಾದ ನಂತರ, ಇಂಗ್ಲೆಂಡ್‌ ವಿರುದ್ಧ 2004ರಲ್ಲಿ ನಡೆದ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 386 ರನ್‌ ಗಳಿಸಿದ್ದ ನ್ಯೂಜಿಲೆಂಡ್‌ ಪರಾಭವಗೊಂಡಿತ್ತು.

ಹೀಗಾಗಿ, ಸದ್ಯದ ಟೆಸ್ಟ್‌ನಲ್ಲಿ ಗೆಲ್ಲುವುದು ಶುಭಮನ್‌ ಪಡೆಗೆ ಕಠಿಣ ಸವಾಲೇ ಸರಿ. ಆದರೆ, ಅಸಾಧ್ಯವೇನಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.