ಭಾರತದ ಜಸ್‌ಪ್ರೀತ್ ಬೂಮ್ರಾ
ರಾಯಿಟರ್ಸ್ ಚಿತ್ರ
ಲೀಡ್ಸ್: ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಕಬಳಿಸಿರುವ ಭಾರತದ ಜಸ್‌ಪ್ರೀತ್ ಬೂಮ್ರಾ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸೀಂ ಆಕ್ರಂ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.
SENA (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದೇಶಗಳಲ್ಲಿ 150 ವಿಕೆಟ್‌ಗಳನ್ನು ಪಡೆದ ಏಷ್ಯಾದ ಏಕೈಕ ಬೌಲರ್ ಎನಿಸಿಕೊಂಡಿದ್ದಾರೆ. ಈ ದೇಶಗಳಲ್ಲಿ ಈವರೆಗೆ 32 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಬೂಮ್ರಾ, ಹತ್ತು ಬಾರಿ ಐದು ವಿಕೆಟ್ ಸಾಧನೆಯನ್ನೂ ಮಾಡಿದ್ದಾರೆ.
SENA ದೇಶಗಳಲ್ಲಿ ಏಷ್ಯಾದ ಬೇರಾವ ಬೌಲರ್ 150 ವಿಕೆಟ್ ಪಡೆದಿಲ್ಲ. ಪಾಕಿಸ್ತಾನದ ದಿಗ್ಗಜ ವಾಸೀಂ ಅಕ್ರಂ ಅವರು 32 ಟೆಸ್ಟ್‌ಗಳಲ್ಲಿ 146 ವಿಕೆಟ್ ಪಡೆದಿರುವುದು ಈವರೆಗೆ ದಾಖಲೆಯಾಗಿತ್ತು.
ಭಾರತದವರೇ ಆದ ಅನಿಲ್ ಕುಂಬ್ಳೆ (141 ವಿಕೆಟ್), ಇಶಾಂತ್ ಶರ್ಮಾ (130 ವಿಕೆಟ್) ಹಾಗೂ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (125 ವಿಕೆಟ್) ಈ ಪಟ್ಟಿಯಲ್ಲಿ ಕ್ರಮವಾಗಿ 3, 4 ಹಾಗೂ 5ನೇ ಸ್ಥಾನಗಳಲ್ಲಿ ಇದ್ದಾರೆ.
ವಿದೇಶದಲ್ಲಿ 12ನೇ ಐದು ವಿಕೆಟ್ ಗೊಂಚಲು
ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆಯುವ ಮೂಲಕ ಮಾಜಿ ನಾಯಕ ಕಪಿಲ್ ದೇವ್ ಅವರ ಹೆಸರಲ್ಲಿದ್ದ ಮತ್ತೊಂದು ದಾಖಲೆಯನ್ನೂ ಬೂಮ್ರಾ ಹಂಚಿಕೊಂಡಿದ್ದಾರೆ.
ವಿದೇಶದ ಕ್ರೀಡಾಂಗಣಗಳಲ್ಲಿ ಒಟ್ಟು 34 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಬೂಮ್ರಾ, ಟೀಂ ಇಂಡಿಯಾ ಪರ 12ನೇ ಬಾರಿ ಇನಿಂಗ್ಸ್‌ವೊಂದರಲ್ಲಿ ಐದು ವಿಕೆಟ್ ಗೊಂಚಲು ಸಾಧನೆ ಮಾಡಿದ್ದಾರೆ. ಕಪಿಲ್ ಅವರೂ ಇಷ್ಟೇ ಸಲ ಐದು ವಿಕೆಟ್ ಉರುಳಿಸಿದ್ದಾರೆ. ಆದರೆ, ಅವರಿಗೆ ಈ ಸಾಧನೆ ಮಾಡಲು 66 ಟೆಸ್ಟ್ ಪಂದ್ಯಗಳು ಬೇಕಾಗಿದ್ದವು.
ಬೂಮ್ರಾ ಹಾಗೂ ಕಪಿಲ್ ನಂತರದ ಸ್ಥಾನಗಳಲ್ಲಿ ಇಶಾಂತ್ ಶರ್ಮಾ (63 ಟೆಸ್ಟ್‌ಗಳಲ್ಲಿ 9 ಬಾರಿ), ಜಹೀರ್ ಖಾನ್ (54 ಟೆಸ್ಟ್‌ಗಳಲ್ಲಿ 8 ಬಾರಿ) ಹಾಗೂ ಇರ್ಫಾನ್ ಪಠಾಣ್ (15 ಟೆಸ್ಟ್‌ಗಳಲ್ಲಿ 7 ಬಾರಿ) ಇದ್ದಾರೆ.
ಭಾರತಕ್ಕೆ ಇನಿಂಗ್ಸ್ ಮುನ್ನಡೆ
ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯವು ಲೀಡ್ಸ್‌ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಭಾರತ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ.
ಶುಕ್ರವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (101 ರನ್), ನಾಯಕ ಶುಭಮನ್ ಗಿಲ್ (147 ರನ್), ಉಪನಾಯಕ ರಿಷಭ್ ಪಂತ್ (134 ರನ್) ಸಿಡಿಸಿದ ಶತಕಗಳ ಬಲದಿಂದ 471 ರನ್ ಗಳಿಸಿತ್ತು.
ಈ ಮೊತ್ತದೆದುರು ಉತ್ತಮ ಆಟವಾಡಿದರೂ 465 ರನ್ ಗಳಿಗೆ ಸರ್ವಪತನ ಕಂಡ ಇಂಗ್ಲೆಂಡ್, 6 ರನ್‌ಗಳ ಅಲ್ಪ ಹಿನ್ನಡೆ ಅನುಭವಿಸಿದೆ. ಆರಂಭಿಕ ಬೆನ್ ಡಕೆಟ್ (62 ರನ್), ಓಲಿ ಪೋಪ್ (106 ರನ್) ಹಾಗೂ ಹ್ಯಾರಿ ಬ್ರೂಕ್ (99 ರನ್) ಆಂಗ್ಲರ ತಂಡದ ಪರ ಉತ್ತಮ ಆಟವಾಡಿದರು.
ಭಾರತ ಪರ ಬೂಮ್ರಾ, ಐದು ವಿಕೆಟ್ ಕಬಳಿಸಿದರೆ, ಪ್ರಸಿದ್ಧ ಕೃಷ್ಣ ಮೂರು ಹಾಗೂ ಮೊಹಮ್ಮದ್ ಸಿರಾಜ್ ಇನ್ನೆರಡು ವಿಕೆಟ್ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.