ADVERTISEMENT

ಹಳೆಯದನ್ನು ಮರೆತುಬಿಡಿ; ಸಹ ಆಟಗಾರರಿಗೆ ಪಾಕಿಸ್ತಾನ ನಾಯಕ ಬಾಬರ್ ಸಲಹೆ

ಪಿಟಿಐ
Published 23 ಅಕ್ಟೋಬರ್ 2021, 10:04 IST
Last Updated 23 ಅಕ್ಟೋಬರ್ 2021, 10:04 IST
ಬಾಬರ್ ಆಜಂ
ಬಾಬರ್ ಆಜಂ   

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ವಿರುದ್ಧ ಕಣಕ್ಕಿಳಿಯುವಾಗ ಹಳೆಯ ಕಳಪೆ ದಾಖಲೆಗಳ ಬಗ್ಗೆ ಯೋಚಿಸಬಾರದು ಎಂದು ಪಾಕಿಸ್ತಾನದ ನಾಯಕ ಬಾಬರ್ ಆಜಂ ಸಹ ಆಟಗಾರರಿಗೆ ಸಲಹೆ ಮಾಡಿದ್ದಾರೆ.

ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯವು ಅಕ್ಟೋಬರ್ 24 ಭಾನುವಾರ ದುಬೈಯಲ್ಲಿ ನಡೆಯಲಿದೆ. ಕ್ರಿಕೆಟ್ ಅಭಿಮಾನಿಗಳಲ್ಲಿ ರೋಚಕತೆ ಮನೆ ಮಾಡಿದೆ.

ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಆಡಿದ ಎಲ್ಲ 12 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಏಕದಿನ ವಿಶ್ವಕಪ್‌ನಲ್ಲಿ 7-0 ಹಾಗೂ ಟಿ20 ವಿಶ್ವಕಪ್‌ನಲ್ಲಿ 5-0 ಅಂತರದ ಗೆಲುವಿನ ದಾಖಲೆ ಹೊಂದಿದೆ.

ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕಳೆದು ಹೋಗಿರುವುದರ ಬಗ್ಗೆ ಚಿಂತಿಸಬಾರದು. 'ದಾಖಲೆಗಳು ಇರುವುದೇ ಮುರಿಯಲು' ಎಂದು ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನ ಶನಿವಾರ ನಡೆದ ವರ್ಚ್ಯುವಲ್ ಸುದ್ದಿಗೋಷ್ಠಿಯಲ್ಲಿ ಸಹ ಆಟಗಾರರಿಗೆ ಸಲಹೆ ಮಾಡಿದರು.

'ಪಾಕಿಸ್ತಾನ ಹಾಗೂ ಭಾರತ ನಡುವಣ ಪಂದ್ಯವು ಯಾವಾಗಲೂ ತೀವ್ರತೆಯಿಂದ ಆಡಲಾಗುತ್ತದೆ. ಆದ್ದರಿಂದ ಪಂದ್ಯದ ಎಲ್ಲ ಮೂರು ವಿಭಾಗಗಳಲ್ಲೂ ನಾವು ಅತ್ಯುತ್ತಮ ಪ್ರದರ್ಶನ ನೀಡಬೇಕಿದೆ' ಎಂದು ಹೇಳಿದರು.

'ವಿಶ್ವಕಪ್‌ನಲ್ಲಿ ಆಡಲು ಎಲ್ಲರೂ ಅತೀವ ಉತ್ಸುಕರಾಗಿದ್ದು, ಭಾನುವಾರ ಮಹತ್ವದ ಪಂದ್ಯವಿದೆ. ಗೆಲುವು ದಾಖಲಿಸುವುದು ಮುಖ್ಯವೆನಿಸುತ್ತದೆ' ಎಂದು ಹೇಳಿದರು.

ಪಾಕ್ ಪ್ರಧಾನಿ ಇಮ್ರಾನ್ ಸಲಹೆ...
'ವಿಶ್ವಕಪ್‌ಗೆ ತೆರಳುವ ಮುನ್ನ ಪ್ರಧಾನಿ ಇಮ್ರಾನ್ ಖಾನ್ ನಮ್ಮನ್ನು ಭೇಟಿ ಮಾಡಿದರು. ಅವರು 1992ರ ವಿಶ್ವಕಪ್ ಗೆಲುವಿನ ಅನುಭವಗಳನ್ನು ಹಂಚಿಕೊಂಡರು. ಭಾರತದ ವಿರುದ್ಧ ಆಕ್ರಮಣಕಾರಿ ಹಾಗೂ ನಿರ್ಭೀತ ಕ್ರಿಕೆಟ್ ಆಡುವಂತೆ ಸಲಹೆ ಮಾಡಿದ್ದಾರೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.