
ಶಫಾಲಿ ವರ್ಮಾ, ಸ್ಮೃತಿ ಮಂದಾನ
(ಚಿತ್ರ ಕೃಪೆ: ಬಿಸಿಸಿಐ)
ನವಿ ಮುಂಬೈ: ಶಫಾಲಿ ವರ್ಮಾ (87) ಹಾಗೂ ದೀಪ್ತಿ ಶರ್ಮಾ (58) ಆಕರ್ಷಕ ಅರ್ಧಶತಕಗಳ ನೆರವಿನಿಂದ ಭಾರತ ತಂಡವು ಇಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ 2025ರ ಟೂರ್ನಿಯ ಫೈನಲ್ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 298 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ.
ಮಳೆಯಿಂದಾಗಿ ಪಂದ್ಯ ಎರಡು ತಾಸುಗಳಷ್ಟು ವಿಳಂಬವಾಗಿ ಆರಂಭವಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಆತಿಥೇಯರಿಗೆ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಉತ್ತಮ ಆರಂಭವೊದಗಿಸಿದರು.
ಇವರಿಬ್ಬರು ಮೊದಲ ವಿಕೆಟ್‌ಗೆ 17.4 ಓವರ್‌ಗಳಲ್ಲಿ ಶತಕದ (104) ಜೊತೆಯಾಟ ಕಟ್ಟಿದರು.
ಮಗದೊಮ್ಮೆ ಗಮನಾರ್ಹ ಇನಿಂಗ್ಸ್ ಕಟ್ಟಿದ ಸ್ಮೃತಿ 58 ಎಸೆತಗಳಲ್ಲಿ 45 ರನ್ (8 ಬೌಂಡರಿ) ಗಳಿಸಿದರು.
ಅತ್ತ ನಾಕೌಟ್ ಹಂತದ ವೇಳೆಗೆ ತಂಡಕ್ಕೆ ಸೇರಿಕೊಂಡಿದ್ದ ಶಫಾಲಿ, ತಮ್ಮ ಎಂದಿನ ಆಕ್ರಮಣಕಾರಿ ಶೈಲಿಯಲ್ಲಿ ಬ್ಯಾಟ್ ಬೀಸಿದ್ದರಲ್ಲದೆ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಧಶತಕ ಗಳಿಸಿದ ಅತಿ ಕಿರಿಯ ಆಟಗಾರ್ತಿ ಎನಿಸಿದರು.
ಆದರೆ ಕೇವಲ 13 ರನ್ ಅಂತರದಿಂದ ಶತಕ ವಂಚಿತರಾದರು. ಶಫಾಲಿ 78 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 87 ರನ್ ಗಳಿಸಿದರು.
ಈ ನಡುವೆ ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ಜೆಮಿಮಾ ರಾಡ್ರಿಗಸ್ (24) ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ (20) ವಿಕೆಟ್‌ಗಳನ್ನು ಬೇಗನೇ ಕಳೆದುಕೊಂಡಿರುವುದು ಹಿನ್ನಡೆಯಾಗಿ ಪರಿಣಮಿಸಿತು.
ಆದರೆ ಮಧ್ಯಮ ಕ್ರಮಾಂಕದಲ್ಲಿ ಸಮಯೋಚಿತ ಅರ್ಧಶತಕ ಗಳಿಸಿದ ದೀಪ್ತಿ ಶರ್ಮಾ (58) ತಂಡವನ್ನು ಸವಾಲಿನ ಮೊತ್ತದತ್ತ ಮುನ್ನಡೆಸಿದರು.
ಕೊನೆಯಲ್ಲಿ 24 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಮೂರು ಬೌಂಡರಿಗಳಿಂದ 34 ರನ್ ಗಳಿಸಿದ ರಿಚಾ ಘೋಷ್ ತಂಡವನ್ನು 300ರ ಗಡಿಯ ಸನಿಹಕ್ಕೆ ತಲುಪಿಸಿದರು.
ಪಂದ್ಯಕ್ಕೆ ಮಳೆ ಅಡಚಣೆ...
ಈ ಮೊದಲು ಮಳೆಯಿಂದಾಗಿ ಟಾಸ್ ವಿಳಂಬವಾಯಿತು. ಟಾಸ್ ಗೆದ್ದ ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೊಲ್ವಾರ್ಟ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಆದರೂ ಓವರ್‌ಗಳ ಸಂಖ್ಯೆಯಲ್ಲಿ ಕಡಿತವಾಗಿಲ್ಲ.
ಫೈನಲ್ ಪಂದ್ಯವು ನಿಗದಿಯಂತೆ ಸಂಜೆ 3ಕ್ಕೆ ಆರಂಭವಾಗಬೇಕಿತ್ತು. ಆದರೆ ಮಳೆಯಿಂದಾಗಿ ಎರಡು ತಾಸು ವಿಳಂಬವಾಗಿ ಆರಂಭವಾಗಿದೆ.
ನವಿ ಮುಂಬೈಯ ಡಿ.ವೈ.ಪಾಟೀಲ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯವು ನಡೆಯುತ್ತಿದೆ.
ಚೊಚ್ಚಲ ಪ್ರಶಸ್ತಿಯ ಕನಸು...
ಇತ್ತಂಡಗಳು ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಹರ್ಮನ್‌ಪ್ರೀತ್ ಕೌರ್ ಸಾರಥ್ಯದ ಭಾರತ ತಂಡವು ಸೆಮಿಫೈನಲ್‌ನಲ್ಲಿ ಏಳು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಅತ್ತ ಲಾರಾ ವೊಲ್ವಾರ್ಟ್ ನೇತೃತ್ವದ ದಕ್ಷಿಣ ಆಫ್ರಿಕಾ, ಅಂತಿಮ ನಾಲ್ಕರ ಘಟ್ಟದಲ್ಲಿ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿತ್ತು.
ಭಾರತ ಮಹಿಳಾ ತಂಡವು 2005ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಸೋತಿತ್ತು. 2017ರ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ಸೋತಾಗ ಹರ್ಮನ್ ಪ್ರೀತ್ ಕೂಡ ತಂಡದಲ್ಲಿದ್ದರು. ಈಗ ಚಾರಿತ್ರಿಕ ಸಾಧನೆ ಮಾಡುವ ನಿರೀಕ್ಷೆಯಲ್ಲಿದೆ.
ತಂಡಗಳು
ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ರಿಚಾ ಘೋಷ್ (ವಿಕೆಟ್‌ಕೀಪರ್), ಉಮಾ ಚೆಟ್ರಿ (ವಿಕೆಟ್‌ಕೀಪರ್), ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೊಲ್, ಶಫಾಲಿ ವರ್ಮಾ, ಅಮನ್ಜೋತ್ ಕೌರ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ಕ್ರಾಂತಿ ಗೌಡ್, ರೇಣುಕಾಸಿಂಗ್ ಠಾಕೂರ್, ಶ್ರೀಚರಣಿ, ಅರುಂಧತಿ ರೆಡ್ಡಿ, ರಾಧಾ ಯಾದವ್.
ದಕ್ಷಿಣ ಆಫ್ರಿಕಾ: ಲಾರಾ ವೊಲ್ವಾರ್ಟ್ (ನಾಯಕಿ), ತಾಜ್ಮೀನ್ ಬ್ರಿಟ್ಸ್, ಸಿನಾಲೊ ಝಾಪ್ತಾ (ವಿಕೆಟ್‌ಕೀಪರ್), ಕರೇಬೊ ಮೆಸೊ (ವಿಕೆಟ್‌ಕೀಪರ್), ಅನಿಕೆ ಬಾಷ್, ನದೀನ್ ಡಿ ಕ್ಲರ್ಕ್, ಅನೇರಿ ಡರ್ಕಸನ್, ಮರೈಝಾನ್ ಕಾಪ್, ಸುನಿ ಲೂಸ್, ನೊಂದುಮಿಸೊ ಶಾಂಗೇಸ್, ಚೋಲೆ ಟ್ರೈಯನ್, ಅಯಾಬೊಂಗಾ ಕಾಕಾ, ಮಸಾಬತಾ ಕ್ಲಾಸ್, ನಾನ್‌ಕುಲುಲೆಕೊ ಮ್ಲಾಬಾ, ತಮಿ ಸೆಕುಖುನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.