ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳು
ಸಾಂದರ್ಭಿಕ ಚಿತ್ರ
ಲಹೋರ್: ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ತಂಡವು ಭಾರತಕ್ಕೆ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ತಿಳಿಸಿದ್ದಾರೆ.
ಇದೇ ವರ್ಷ ಐಸಿಸಿ ಪುರುಷರ ಏಕದಿನ ಕ್ರಿಕೆಟ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಪಾಕಿಸ್ತಾನ ಆತಿಥ್ಯದಲ್ಲಿ ಆಯೋಜನೆಗೊಂಡಿತ್ತು. ರಾಜತಾಂತ್ರಿಕ ಬಿಕ್ಕಟ್ಟಿನ ಕಾರಣ, ಪಾಕ್‌ಗೆ ಪ್ರಯಾಣಿಸಲು ನಿರಾಕರಿಸಿದ್ದ ಭಾರತ ತಂಡ ತನ್ನ ಪಾಲಿನ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ತಟಸ್ಥ ಸ್ಥಳದಲ್ಲಿ (ದುಬೈನಲ್ಲಿ) ಆಡಿತ್ತು.
ಆಗ ಟೂರ್ನಿ ಆಯೋಜನೆ ಕುರಿತು ನಡೆದ ಮಾತುಕತೆ ಸಂದರ್ಭದಲ್ಲಿ, ಮುಂದೆ ಭಾರತದ ಆತಿಥ್ಯದಲ್ಲಿ ನಡೆಯುವ ಟೂರ್ನಿಗಳ ವೇಳೆ ತನ್ನ ಪಾಲಿನ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡುವುದಾಗಿ ಪಾಕಿಸ್ತಾನ ಪಟ್ಟುಹಿಡಿದಿತ್ತು. ಅದಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸಮ್ಮತಿಸಿತ್ತು.
ಆ ಮಾತುಕತೆಗೆ ಅನುಗುಣವಾಗಿ ಇದೀಗ ಪಾಕ್ ಮಹಿಳಾ ತಂಡ ತನ್ನ ಪಾಲಿನ ಪಂದ್ಯಗಳನ್ನು ಹೈಬ್ರೀಡ್ ಮಾದರಿಯಲ್ಲಿ ಆಡಲಿದೆ ಎಂದು ನಖ್ವಿ ಹೇಳಿದ್ದಾರೆ.
'ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ವೇಳೆ ಪಾಕಿಸ್ತಾನದಲ್ಲಿ ಆಡಲಿಲ್ಲ. ಆಗ ತಟಸ್ಥ ಸ್ಥಳದಲ್ಲಿ ಆಡುವ ಅವಕಾಶ ನೀಡಿದಂತೆಯೇ, ನಮ್ಮ ತಂಡಕ್ಕೂ ಅವಕಾಶ ಕಲ್ಪಿಸಬೇಕು. ಯಾವುದೇ ಸ್ಥಳವನ್ನು ನಿಗದಿ ಮಾಡಿದರೂ ಆಡುತ್ತೇವೆ. ಒಪ್ಪಂದವನ್ನು ಪಾಲಿಸಬೇಕು' ಎಂದು ಪ್ರತಿಪಾದಿಸಿದ್ದಾರೆ.
ಈ ವರ್ಷಾಂತ್ಯದಲ್ಲಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.