ಟೀಮ್ ಇಂಡಿಯಾ
(ಚಿತ್ರ ಕೃಪೆ: ಬಿಸಿಸಿಐ)
ಅಡಿಲೇಡ್: ಟೆಸ್ಟ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಸತತ ನಾಲ್ಕನೇ ಸೋಲಿಗೆ ಗುರಿಯಾಗಿದೆ.
ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್‌ನಲ್ಲಿ ನಡೆದ ಹಗಲು-ರಾತ್ರಿ ಪಿಂಕ್ ಟೆಸ್ಟ್ ಪಂದ್ಯದಲ್ಲಿ ಭಾರತ 10 ವಿಕೆಟ್ ಅಂತರದ ಹೀನಾಯ ಸೋಲಿಗೆ ಗುರಿಯಾಗಿದೆ.
ಈ ಮೊದಲು ತವರು ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಭಾರತ 0-3ರ ಅಂತರದ ಕ್ಲೀನ್‌ಸ್ವೀಪ್ ಸೋಲಿನ ಮುಖಭಂಗಕ್ಕೆ ಒಳಗಾಗಿತ್ತು.
ಈ ಎಲ್ಲ ನಾಲ್ಕು ಸೋಲುಗಳು 2024ನೇ ಸಾಲಿನಲ್ಲಿ ದಾಖಲಾಗಿವೆ.
ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಿತೃತ್ವದ ರಜೆಯಲ್ಲಿದ್ದ ರೋಹಿತ್ ಶರ್ಮಾ ಬದಲು ಭಾರತ ತಂಡವನ್ನು ಜಸ್‌ಪ್ರೀತ್ ಬೂಮ್ರಾ ಮುನ್ನಡೆಸಿದ್ದರು. ಅಲ್ಲದೆ ಭಾರತ 295 ರನ್ ಅಂತರದ ಭರ್ಜರಿ ಜಯ ಗಳಿಸಿತ್ತು.
ಧೋನಿ, ಕೊಹ್ಲಿ ನಾಯಕತ್ವದಲ್ಲೂ ಸತತ 4 ಸೋಲು...
ಈ ಹಿಂದೆ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ನಾಯಕತ್ವದಲ್ಲೂ ಭಾರತ ತಂಡ ಸತತ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಸೋಲಿಗೆ ಗುರಿಯಾಗಿತ್ತು.
ಧೋನಿ ನಾಯಕತ್ವದಲ್ಲಿ ಎರಡು ಸಲ (2011 ಹಾಗೂ 2014) ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಹಾಗೆಯೇ 2020-21ರ ಅವಧಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಸತತ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು.
ಅಂದ ಹಾಗೆ 1967-68ರ ಅವಧಿಯಲ್ಲಿ ಮನ್ಸೂರ್ ಅಲಿ ಖಾನ್ ಪಟೌಡಿ ನಾಯಕತ್ವದಲ್ಲಿ ಭಾರತ ಅತಿ ಹೆಚ್ಚು ಸತತ ಆರು ಟೆಸ್ಟ್ ಪಂದ್ಯಗಳಲ್ಲಿ ಸೋಲು ಕಂಡಿತ್ತು. ಇನ್ನು 1999ರಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿ ಸತತ ಐದು ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.