ಜೆಮೀ ಸ್ಮಿತ್
ರಾಯಿಟರ್ಸ್ ಚಿತ್ರ
ಎಜ್‌ಬಾಸ್ಟನ್: ಭಾರತ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿರುವ ಜೆಮೀ ಸ್ಮಿತ್, ಇಂಗ್ಲೆಂಡ್ ಪರ ಪಂದ್ಯವೊಂದರಲ್ಲಿ ಗರಿಷ್ಠ ಮೊತ್ತ ಕಲೆಹಾಕಿದ ವಿಕೆಟ್‌ಕೀಪರ್–ಬ್ಯಾಟರ್ ಎನಿಸಿದ್ದಾರೆ.
ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅಜೇಯ 184 ರನ್ ಗಳಿಸಿದ್ದ ಅವರು, ಎರಡನೇ ಇನಿಂಗ್ಸ್‌ನಲ್ಲಿ 88 ರನ್ ಗಳಿಸಿ ಔಟಾಗಿದ್ದಾರೆ. ಇದರೊಂದಿಗೆ ಅವರು ಗಳಿಸಿದ ಮೊತ್ತ 272ಕ್ಕೆ ಏರಿಕೆಯಾಗಿದೆ.
ಅಲೆಕ್ ಸ್ಟೆವರ್ಟ್ ಅವರು 1998ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ನಡೆದ ಪಂದ್ಯದಲ್ಲಿ 204 ರನ್ ಗಳಿಸಿದ್ದದ್ದು ಈವರೆಗೆ ದಾಖಲೆಯಾಗಿತ್ತು. ಮೊದಲ ಇನಿಂಗ್ಸ್‌ನಲ್ಲಿ 40 ರನ್ ಗಳಿಸಿದ್ದ ಅವರು, ನಂತರ 164 ರನ್ ಗಳಿಸಿದ್ದರು. ಇದೀಗ, ಈ ದಾಖಲೆಯನ್ನು ಸ್ಮಿತ್ ಮುರಿದಿದ್ದಾರೆ.
ಮೂರನೇ ಸ್ಥಾನದಲ್ಲಿ ಜಾನಿ ಬೆಸ್ಟೋ ಇದ್ದಾರೆ. ಅವರು ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ಶ್ರೀಲಂಕಾ ಎದುರು 2016ರಲ್ಲಿ 199 ರನ್ (ಅಜೇಯ 167 ರನ್ ಹಾಗೂ 32 ರನ್) ಬಾರಿಸಿದ್ದರು.
ಒಟ್ಟಾರೆಯಾಗಿ, ಪಂದ್ಯವೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆ ಜಿಂಬಾಬ್ವೆಯ ಆ್ಯಂಡಿ ಫ್ಲವರ್ ಹೆಸರಲ್ಲಿದೆ. ಅವರು ದಕ್ಷಿಣ ಆಫ್ರಿಕಾ ವಿರುದ್ಧ 2001ರಲ್ಲಿ 341 (142 & ಅಜೇಯ 199) ರನ್ ಹಾಗೂ ಭಾರತದ ವಿರುದ್ಧ 2000ನೇ ಇಸವಿಯಲ್ಲಿ 287 (55 & ಅಜೇಯ 232) ರನ್ ಗಳಿಸಿದ್ದರು.
ನಾಲ್ಕನೇ ಸ್ಥಾನದಲ್ಲಿ ಭಾರತದ ರಿಷಭ್ ಪಂತ್ ಇದ್ದಾರೆ. ಪಂತ್, ಪ್ರಸ್ತುತ ಸರಣಿಯ ಮೊದಲ ಪಂದ್ಯದಲ್ಲಿ 252 (134 & 118) ರನ್ ಕಲೆಹಾಕಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.