ಶುಭಮನ್ ಗಿಲ್
(ರಾಯಿಟರ್ಸ್ ಚಿತ್ರ)
ಲೀಡ್ಸ್: SENA (ದ.ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದೇಶಗಳಲ್ಲಿ ಟೆಸ್ಟ್ ಸರಣಿ ಗೆಲುವು ಐಪಿಎಲ್ ಪ್ರಶಸ್ತಿಗಿಂತ ಮಿಗಿಲಾದುದು ಎಂದು ಭಾರತ ಟೆಸ್ಟ್ ಕ್ರಿಕೆಟ್ ತಂಡದ ನೂತನ ನಾಯಕ ಶುಭಮನ್ ಗಿಲ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಬಹುನಿರೀಕ್ಷಿತ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಲೀಡ್ಸ್‌ನಲ್ಲಿ ಶುಕ್ರವಾರದಿಂದ ಆರಂಭವಾಗಲಿದೆ.
ಇದರಂತೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿರುವ 25 ವರ್ಷದ ಗಿಲ್, 'ನಾಯಕನಾಗಿ ಇಲ್ಲಿಗೆ ಪ್ರವಾಸ ಕೈಗೊಳ್ಳಲು ನಿಮಗೆ ಹೆಚ್ಚಿನ ಅವಕಾಶಗಳು ಸಿಗುವುದಿಲ್ಲ. ನಿಮ್ಮ ಪೀಳಿಗೆಯ ಅತ್ಯುತ್ತಮ ಆಟಗಾರನಾಗಿದ್ದರೆ ಮಾತ್ರ ಒಂದು, ಎರಡು ಅಥವಾ ಮೂರು ಪ್ರವಾಸಗಳನ್ನಷ್ಟೇ ಕೈಗೊಳ್ಳಬಹುದು' ಎಂದು ಸರಣಿಯ ಮಹತ್ವವನ್ನು ವಿವರಿಸಿದ್ದಾರೆ.
'ಐಪಿಎಲ್ ಟೂರ್ನಿಯು ಪ್ರತಿ ವರ್ಷವೂ ಬರುತ್ತದೆ. ಹಾಗಾಗಿ ಪ್ರತಿ ವರ್ಷವೂ ಅವಕಾಶ ಇರುತ್ತದೆ. ಆದರೆ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಮಹತ್ತರವೆನಿಸುತ್ತದೆ' ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಆರ್. ಅಶ್ವಿನ್ ನಿವೃತ್ತಿಯ ಬಳಿಕ ಅನನುಭವಿ ತಂಡವನ್ನು ಹೊಂದಿದೆ ಎಂಬುದನ್ನು ಒಪ್ಪಿಕೊಳ್ಳಲು ಗಿಲ್ ತಯಾರಾಗಲಿಲ್ಲ. 'ಬಹಳಷ್ಟು ಮಂದಿ ಅನನುಭವಿ ತಂಡ ಎಂದು ಹೇಳುತ್ತಾರೆ. ಆದರೆ ಅನೇಕ ಧನಾತ್ಮಕ ಅಂಶಗಳಿದ್ದು, ನಮ್ಮ ಮೇಲೆ ಯಾವುದೇ ಒತ್ತಡವಿಲ್ಲ. ಅನೇಕ ಮಂದಿ ಆಟಗಾರರು ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿಲ್ಲ' ಎಂದು ಹೇಳಿದ್ದಾರೆ.
ನಾಲ್ಕನೇ ಕ್ರಮಾಂಕದಲ್ಲಿ ಆಡುವುದರ ಬಗ್ಗೆ ವಿವರಿಸಿದ ಗಿಲ್, 'ವಿರಾಟ್ ನಿವೃತ್ತಿಯ ಬಳಿಕ ಕೋಚ್ ಗೌತಮ್ ಗಂಭೀರ್ ಜೊತೆ ಮಾತುಕತೆ ನಡೆಸಿದ್ದೇನೆ. ನಾನು ಸಹ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಇಚ್ಚಿಸುತ್ತೇನೆ' ಎಂದು ಹೇಳಿದ್ದಾರೆ.
'ನಾಯಕನಾಗಿ ತಂಡದಲ್ಲಿ ಉತ್ತಮ ವಾತಾವರಣ ಸೃಷ್ಟಿಸುವುದು ಹಾಗೂ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಯಶಸ್ಸನ್ನು ಮುಂದುವರಿಸುವುದು ನನ್ನ ಇರಾದೆಯಾಗಿದೆ' ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.