
ವಿರಾಟ್ ಕೊಹ್ಲಿ
(ಪಿಟಿಐ ಚಿತ್ರ)
ರಾಜ್‌ಕೋಟ್: 'ರನ್ ಮೆಶಿನ್' ಖ್ಯಾತಿಯ ಭಾರತ ಕ್ರಿಕೆಟ್ ತಂಡದ ತಾರೆ ವಿರಾಟ್ ಕೊಹ್ಲಿ ಅವರು ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮಗದೊಂದು ದಾಖಲೆಯನ್ನು ಮುರಿದಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಎಂಬ ಹಿರಿಮೆಗೆ ಕೊಹ್ಲಿ ಭಾಜನರಾಗಿದ್ದಾರೆ.
ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ 42 ಏಕದಿನ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್ 1,750 ರನ್ ಗಳಿಸಿದ್ದರು. ಈ ದಾಖಲೆಯನ್ನೀಗ ಕೊಹ್ಲಿ ಮುರಿದಿದ್ದಾರೆ. 35ನೇ ಪಂದ್ಯದಲ್ಲಿ ಸಚಿನ್ ದಾಖಲೆಯನ್ನು ಕೊಹ್ಲಿ ಹಿಮ್ಮೆಟ್ಟಿಸಿದ್ದಾರೆ.
ಒಟ್ಟಾರೆಯಾಗಿ ನ್ಯೂಜಿಲೆಂಡ್ ವಿರುದ್ಧ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅಗ್ರಸ್ಥಾನದಲ್ಲಿದ್ದಾರೆ. ಪಾಂಟಿಂಗ್ 51 ಪಂದ್ಯಗಳಲ್ಲಿ 1,971 ರನ್ ಗಳಿಸಿದ್ದರು.
ನ್ಯೂಜಿಲೆಂಡ್ ವಿರುದ್ಧ ಏಕದಿನದಲ್ಲಿ ಅತಿ ಹೆಚ್ಚು ರನ್ ಸಾಧಕರು:
ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ): 1,971
ವಿರಾಟ್ ಕೊಹ್ಲಿ (ಭಾರತ): 1751
ಸಚಿನ್ ತೆಂಡೂಲ್ಕರ್ (ಭಾರತ): 1,750
ಸನತ್ ಜಯಸೂರ್ಯ (ಶ್ರೀಲಂಕಾ): 1,519
ಏತನ್ಮಧ್ಯೆ ಎರಡನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ವೈಫಲ್ಯವನ್ನು ಕಂಡಿದ್ದಾರೆ. 29 ಎಸೆತಗಳಲ್ಲಿ 23 ರನ್ ಗಳಿಸಿ ಔಟ್ ಆದರು.
ಮೊದಲ ಏಕದಿನ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪುರಸ್ಕೃತರಾಗಿದ್ದ ವಿರಾಟ್ (93 ರನ್), ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 28 ಸಾವಿರ ಮೈಲಿಗಲ್ಲನ್ನು ತಲುಪಿದ್ದರು. ಆ ಮೂಲಕ ಸಚಿನ್ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.