ADVERTISEMENT

ಕೊಹ್ಲಿಯಲ್ಲದೆ ಬೇರೆಯವರು ನನಗೆ ಸಿಕ್ಸರ್ ಸಿಡಿಸಿದ್ದರೆ ನೋವಾಗುತ್ತಿತ್ತು: ರವೂಫ್

ಪಿಟಿಐ
Published 1 ಡಿಸೆಂಬರ್ 2022, 11:38 IST
Last Updated 1 ಡಿಸೆಂಬರ್ 2022, 11:38 IST
 ವಿರಾಟ್‌ ಕೊಹ್ಲಿ ಬ್ಯಾಟಿಂಗ್ ವೈಖರಿ (ಚಿತ್ರಕೃಪೆ: Twitter / @T20WorldCup)
ವಿರಾಟ್‌ ಕೊಹ್ಲಿ ಬ್ಯಾಟಿಂಗ್ ವೈಖರಿ (ಚಿತ್ರಕೃಪೆ: Twitter / @T20WorldCup)   

ಕರಾಚಿ: 2022ರ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮಹತ್ವದ ಸಂದರ್ಭದಲ್ಲಿ ವಿರಾಟ್‌ ಕೊಹ್ಲಿ ಸಿಡಿಸಿದ ಅಮೋಘ ಸಿಕ್ಸರ್‌ಗಳ ಬಲದಿಂದ ಭಾರತ ತಂಡ ಗೆಲುವು ಸಾಧಿಸಿತ್ತು. ಅತ್ಯಂತ ಒತ್ತಡದ ಸನ್ನಿವೇಶದಲ್ಲಿ ವಿಶ್ವದ ಬೇರೆ ಯಾವ ಬ್ಯಾಟರ್‌ ಸಹ ಆ ರೀತಿ ಸಿಕ್ಸರ್‌ ಹೊಡೆಯಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ವೇಗಿ ಹ್ಯಾರಿಸ್‌ ರವೂಫ್ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್ 23 ರಂದುಮೆಲ್ಬರ್ನ್ ಕ್ರಿಕೆಟ್‌ ಮೈದಾನದಲ್ಲಿ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 159 ರನ್‌ ಕಲೆಹಾಕಿತ್ತು.

ಸವಾಲಿನ ಗುರಿ ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿರಲಿಲ್ಲ.ಇನಿಂಗ್ಸ್‌ ಆರಂಭಿಸಿದ ನಾಯಕ ರೋಹಿತ್‌ ಶರ್ಮಾ(4) ಹಾಗೂ ಉಪನಾಯಕ ಕೆ.ಎಲ್‌.ರಾಹುಲ್‌ (4) ತಂಡದ ಮೊತ್ತ 10 ರನ್ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡಿದ್ದರು.ಬಳಿಕ ಬಂದ ಸೂರ್ಯಕುಮಾರ್‌ ಯಾದವ್‌ (15) ಮತ್ತು ಅಕ್ಷರ್ ಪಟೇಲ್‌ (2) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಹೀಗಾಗಿ ಕೇವಲ 31 ರನ್‌ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಹಾರ್ದಿಕ್‌ ಪಾಂಡ್ಯ (40) ಜೊತೆಗೂಡಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಕೊಹ್ಲಿ, ರಕ್ಷಣಾತ್ಮಕವಾಗಿ ಅಡುತ್ತಲೇ ರನ್‌ ಗತಿ ಹೆಚ್ಚಿಸಿದ್ದರು. ಕೊನೆಯವರೆಗೂ ಹೋರಾಡಿ ಗೆಲುವು ತಂದುಕೊಟ್ಟರು.

ಒಟ್ಟಾರೆ 53 ಎಸೆತಗಳನ್ನು ಎದುರಿಸಿದ್ದ ವಿರಾಟ್, 6 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 82 ರನ್‌ ಬಾರಿಸಿ ಮಿಂಚಿದ್ದರು. ಅಂದಹಾಗೆ, ಮೊದಲ 50 ರನ್‌ ಗಳಿಸಲು 43 ಎಸೆತಗಳನ್ನು ತೆಗೆದುಕೊಂಡಿದ್ದ ಅವರು, ನಂತರದ 32 ರನ್‌ ಅನ್ನು ಕೇವಲ 10 ಎಸೆತಗಳಲ್ಲೇ ಚಚ್ಚಿದ್ದರು.

ಕೊಹ್ಲಿ ಆಟದಬಲದಿಂದಾಗಿ ಭಾರತಕ್ಕೆ 4 ವಿಕೆಟ್‌ ಅಂತರದ ಜಯ ಒಲಿದಿತ್ತು.

ಸಿಕ್ಸರ್‌ ಕುರಿತು ರವೂಫ್‌ ಮಾತು
ಭಾರತ ಗೆಲ್ಲಲು ಕೊನೇ 2 ಓವರ್‌ಗಳಲ್ಲಿ 31 ರನ್‌ ಬೇಕಿತ್ತು. ವೇಗಿ ರವೂಫ್‌ ಎಸೆದ 19ನೇ ಓವರ್‌ನ ಮೊದಲ ನಾಲ್ಕು ಎಸೆತಗಳಲ್ಲಿ ಕೇವಲ 3 ರನ್‌ ಬಂದಿತ್ತು. ಕೊಹ್ಲಿ ಒಂದು ಎಸೆತದಲ್ಲಿ ಒಂದು ರನ್‌ ಹಾಗೂ ಹಾರ್ದಿಕ್‌ ಪಾಂಡ್ಯ ಮೂರು ಎಸೆತದಲ್ಲಿ ಎರಡು ರನ್ ಗಳಿಸಿದ್ದರು. ಹೀಗಾಗಿ ಅಂತಿಮ 8ಎಸೆತಗಳಲ್ಲಿ 28 ರನ್‌ ಕಲೆಹಾಕುವ ಒತ್ತಡ ಸೃಷ್ಟಿಯಾಯಿತು. ಈ ವೇಳೆ ಕ್ರೀಸ್‌ನಲ್ಲಿದ್ದ ಕೊಹ್ಲಿ, 5 ಹಾಗೂ 6ನೇ ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿ,ಪಂದ್ಯಕ್ಕೆ ತಿರುವು ನೀಡಿದ್ದರು.

ಕೊನೇ ಓವರ್‌ನಲ್ಲೂ ಸಿಕ್ಸರ್ ಸಹಿತ 8 ರನ್ ಬಾರಿಸಿ ನೆರವಾಗಿದ್ದರು.

ತಮಗೆ ಸತತ ಸಿಕ್ಸರ್‌ ಸಿಡಿಸಿದ ಕೊಹ್ಲಿ ಬ್ಯಾಟಿಂಗ್ ಬಗ್ಗೆ ರವೂಫ್‌ ಅವರು ಪಾಕಿಸ್ತಾನದ ವೆಬ್‌ಸೈಟ್‌ವೊಂದರ ಜೊತೆ ಮಾತನಾಡಿದ್ದಾರೆ. ಹಾರ್ದಿಕ್‌ ಪಾಂಡ್ಯ ಅಥವಾ ದಿನೇಶ್‌ ಕಾರ್ತಿಕ್‌ ಆ ರೀತಿ ಸಿಕ್ಸರ್‌ ಬಾರಿಸಿದ್ದರೆ, ನೋವಾಗುತ್ತಿತ್ತು ಎಂದಿದ್ದಾರೆ.

'ಅದು ಕೊಹ್ಲಿ ಆಟದ ಶ್ರೇಷ್ಠತೆ. ಕೊಹ್ಲಿ ಸಿಡಿಸಿದ ರೀತಿಯಲ್ಲಿ ಎರಡು ಸಿಕ್ಸರ್‌ಗಳನ್ನು ವಿಶ್ವದ ಬೇರೆ ಯಾರಾದರು ಹೊಡೆಯಬಲ್ಲರು ಎನಿಸುವುದಿಲ್ಲ. ಕೊಹ್ಲಿಯಂತೆ ಹಾರ್ದಿಕ್‌ ಅಥವಾ ಕಾರ್ತಿಕ್‌ ಬಾರಿಸಿದ್ದರೆ, ನೋವಾಗುತ್ತಿತ್ತು. ಆದರೆ, ಬಾರಿಸಿದ್ದು ಕೊಹ್ಲಿ. ಅದು ಬೇರೆಯದ್ದೇ ಹಂತದ ಬ್ಯಾಟಿಂಗ್‌' ಎಂದಿದ್ದಾರೆ.

ಕೊಹ್ಲಿ ಸಿಕ್ಸರ್‌ ಸಿಡಿಸಿ ಒಂದೂವರೆ ತಿಂಗಳು ಕಳೆದಿದ್ದರೂ, ಅದನ್ನು ಊಹಿಸಿಕೊಳ್ಳುವುದೂ ಸಾಧ್ಯವಾಗುತ್ತಿಲ್ಲ ಎಂದು ರವೂಫ್‌ ಹೇಳಿಕೊಂಡಿದ್ದಾರೆ.

'ಅಂತಹ (ಬ್ಯಾಕ್‌ ಆಫ್‌ ಲೆಂತ್‌) ಎಸೆತವನ್ನು ಅವರು (ಕೊಹ್ಲಿ) ಸಿಕ್ಸರ್‌ಗೆ ಕಳುಹಿಸಬಲ್ಲರು ಎಂಬ ಅಂದಾಜು ಸಹ ಇರಲಿಲ್ಲ. ಹಾಗಾಗಿ, ಅಂತಹ ಸಿಕ್ಸರ್‌ ಬಾರಿಸಿದ್ದಾರೆಂದರೆ ಅದು ಅವರ ಶ್ರೇಷ್ಠತೆ. ನಾನು ಯೋಜನೆ ರೂಪಿಸಿದ್ದು ಮತ್ತು ಕಾರ್ಯರೂಪಕ್ಕೆ ಇಳಿಸಿದ್ದು ಚೆನ್ನಾಗಿಯೇ ಇತ್ತು. ಆದರೆ, ಕೊಹ್ಲಿಯ ಹೊಡೆತಗಳು ಶ್ರೇಷ್ಠವಾಗಿದ್ದವು' ಎಂದು ಕೊಂಡಾಡಿದ್ದಾರೆ.

'ಭಾರತ 12 ಎಸೆತಗಳಲ್ಲಿ 31 ರನ್ ಗಳಿಸಬೇಕಿತ್ತು. ಮೊದಲ ನಾಲ್ಕು ಎಸೆತಗಳಲ್ಲಿ ಮೂರು ರನ್‌ ಬಿಟ್ಟುಕೊಟ್ಟಿದ್ದೆ. ಕೊನೇ ಓವರ್‌ ಮೊಹಮ್ಮದ್ ನವಾಜ್‌ ಬೌಲಿಂಗ್‌ ಮಾಡಲಿದ್ದಾರೆ, ಅವರು ಸ್ಪಿನ್ನರ್‌ ಎಂಬುದು ಗೊತ್ತಿತ್ತು. ಹಾಗಾಗಿ ಅವರಿಗೆ ಕನಿಷ್ಠ 20ಕ್ಕಿಂತ ಹೆಚ್ಚು ರನ್‌ ಉಳಿಸಿಕೊಡುವ ಯೋಜನೆಯಲ್ಲಿದ್ದೆ. ಕೊಹ್ಲಿಯ ಬ್ಯಾಟಿಂಗ್‌ ನಮ್ಮ ತಂತ್ರವನ್ನು ಬುಡಮೇಲು ಮಾಡಿತು' ಎಂದು ವಿವರಿಸಿದ್ದಾರೆ.

ಕೊಹ್ಲಿ ಜೊತೆ ಉತ್ತಮ ಒಡನಾಟ ಹೊಂದಿರುವುದಾಗಿಯೂ ರವೂಫ್‌ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.