
ಶುಭಮನ್ ಗಿಲ್
(ಪಿಟಿಐ ಚಿತ್ರ)
ಕೋಲ್ಕತ್ತ: ಕುತ್ತಿಗೆ ನೋವಿನಿಂದ ಬಳಲುತ್ತಿರುವ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್‌ನಲ್ಲಿ ಆಡುವುದು ಅನುಮಾನವೆನಿಸಿದೆ.
ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾದ ಆಟಗಾರರು ಬುಧವಾರ ಗುವಾಹಟಿಗೆ ಪ್ರಯಾಣ ಬೆಳೆಸಲಿದ್ದಾರೆ. ಆದರೆ ತಂಡದ ಸಹ ಆಟಗಾರರೊಂದಿಗೆ ಗಿಲ್ ಪ್ರಯಾಣ ಬೆಳೆಸುವುದಿಲ್ಲ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆಯ ಮೂಲಗಳು ತಿಳಿಸಿವೆ.
'ತೀವ್ರ ಕುತ್ತಿಗೆ ನೋವಿನಿಂದ ಗಿಲ್ ಬಳಲುತ್ತಿದ್ದು, ನೆಕ್ ಕಾಲರ್ ಧರಿಸಿದ್ದಾರೆ. ಅವರಿಗೆ ಮೂರು-ನಾಲ್ಕು ದಿನಗಳ ವಿಶ್ರಾಂತಿ ಸೂಚಿಸಲಾಗಿದೆ. ಈ ಸಮಯದಲ್ಲಿ ಪ್ರಯಾಣಿಸದಂತೆ ಸಲಹೆ ನೀಡಲಾಗಿದೆ. ಗಿಲ್ ಅವರ ಗಾಯದ ಬಗ್ಗೆ ಅವಲೋಕಿಸಲಾಗುತ್ತಿದೆ. ಮಂಗಳವಾರದ ವೇಳೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ' ಎಂದು ಹೇಳಿದೆ.
ಮಂಗಳವಾರದಂದು ಆಟಗಾರರಿಗೆ ಐಚ್ಛಿಕ ಅಭ್ಯಾಸದ ಅವಧಿ ಇರಲಿದೆ.
ಒಂದು ವೇಳೆ ಗಿಲ್ ಅಲಭ್ಯವಾದರೆ ಸಾಯಿ ಸುದರ್ಶನ್ ಅಥವಾ ಕರ್ನಾಟಕದ ದೇವದತ್ತ ಪಡಿಕ್ಕಲ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಅಂತಿಮ ಟೆಸ್ಟ್ ಶನಿವಾರದಿಂದ (ನ.22) ಆರಂಭವಾಗಲಿದೆ. ಗಿಲ್ ಅನುಪಸ್ಥಿತಿಯಲ್ಲಿ ತಂಡವನ್ನು ರಿಷಭ್ ಪಂತ್ ಮುನ್ನಡೆಸಿದ್ದರು.
ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 30 ರನ್ ಅಂತರದ ಸೋಲಿಗೆ ಶರಣಾಗಿತ್ತು. ಆ ಮೂಲಕ ಸರಣಿಯಲ್ಲಿ 0-1 ಅಂತರದ ಹಿನ್ನಡೆಗೊಳಗಾಗಿದೆ.
ಈ ಪಂದ್ಯವು ಕೇವಲ ಮೂರು ದಿನಗಳಲ್ಲೇ ಮುಕ್ತಾಯಗೊಂಡಿರುವುದು ಹಾಗೂ ಅಂತಿಮ ಇನಿಂಗ್ಸ್‌ನಲ್ಲಿ 124 ರನ್ ಬೆನ್ನಟ್ಟುವಲ್ಲಿ ಟೀಮ್ ಇಂಡಿಯಾ ವಿಫಲವಾಗಿರುವುದು ತೀವ್ರ ಟೀಕೆಗೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.