ಟೀಮ್ ಇಂಡಿಯಾ
(ಚಿತ್ರ ಕೃಪೆ: X/@BCCI)
ಕೋಲ್ಕತ್ತ: ಬೌಲರ್‌ಗಳ ಸಾಂಘಿಕ ದಾಳಿ ಮತ್ತು ಅಭಿಷೇಕ್ ಶರ್ಮಾ ಅವರ ಬಿರುಸಿನ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ, ಪ್ರವಾಸಿ ಇಂಗ್ಲೆಂಡ್ ವಿರುದ್ಧ ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಮೊದಲ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಇದರೊಂದಿಗೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮುನ್ನಡೆ ದಾಖಲಿಸಿದೆ. ಭಾರತ 12.5 ಓವರ್‌ಗಳಲ್ಲೇ ಗುರಿ ತಲುಪಿತು.
133 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಭಾರತಕ್ಕೆ ಅಭಿಷೇಕ್ ಶರ್ಮಾ ನೆರವಾದರು. ಅಭಿಷೇಕ್ 20 ಎಸೆತಗಳಲ್ಲೇ ಅರ್ಧಶತಕ ಸಾಧನೆ ಮಾಡಿದರು. ಅಂತಿಮವಾಗಿ 34 ಎಸೆತಗಳಲ್ಲಿ 79 ರನ್ ಗಳಿಸಿ ಅಬ್ಬರಿಸಿದರು. ಅಭಿಷೇಕ್ ಇನಿಂಗ್ಸ್‌ನಲ್ಲಿ ಎಂಟು ಸಿಕ್ಸರ್ ಹಾಗೂ ಐದು ಬೌಂಡರಿಗಳು ಸೇರಿದ್ದವು.
ನಾಯಕ ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ಔಟ್ ಆದರೆ ಸಂಜು ಸ್ಯಾಮ್ಸನ್ 26 ರನ್‌ಗಳ ಉಪಯುಕ್ತ ಕೊಡುಗೆ ನೀಡಿದರು.
ಚಕ್ರವರ್ತಿ, ಅರ್ಷದೀಪ್ ಮಿಂಚು; ಇಂಗ್ಲೆಂಡ್ 132ಕ್ಕೆ ಆಲೌಟ್
ಈ ಮೊದಲು ವರುಣ್ ಚಕ್ರವರ್ತಿ (23ಕ್ಕೆ 3), ಅರ್ಷದೀಪ್ ಸಿಂಗ್ (17ಕ್ಕೆ 2) ಸೇರಿದಂತೆ ಭಾರತೀಯ ಬೌಲರ್‌ಗಳ ಸಾಂಘಿಕ ದಾಳಿಗೆ ಸಿಲುಕಿರುವ ಇಂಗ್ಲೆಂಡ್, ಇಲ್ಲಿ ನಡೆಯುತ್ತಿರುವ ಮೊದಲ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ 132 ರನ್‌ಗಳಿಗೆ ಆಲೌಟ್ ಆಯಿತು.
ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.
ಇನಿಂಗ್ಸ್‌ನ ಮೊದಲ ಓವರ್‌ನಲ್ಲೇ ಫಿಲಿಪ್ ಸಾಲ್ಟ್ (0)ವಿಕೆಟ್ ಕಬಳಿಸಿದ ಅರ್ಷದೀಪ್ ಸಿಂಗ್ ಆಘಾತ ನೀಡಿದರು. ಇದಾದ ಬೆನ್ನಲ್ಲೇ ಬೆನ್ ಡಕೆಟ್ (4) ಅವರಿಗೂ ಪೆವಿಲಿಯನ್ ದಾರಿ ತೋರಿಸಿದರು.
ಬಳಿಕ ದಾಳಿಗಿಳಿದ ವರುಣ್ ಚಕ್ರವರ್ತಿ ಮೋಡಿ ಮಾಡಿದರು. ಹ್ಯಾರಿ ಬ್ರೂಕ್ (17) ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ (0) ಅವರನ್ನು ಹೊರದಬ್ಬಿದರು. ಅವರಿಗೆ ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಅವರಿಂದಲೂ ಉತ್ತಮ ಬೆಂಬಲ ದೊರಕಿತು.
ಏತನ್ಮಧ್ಯೆ ಏಕಾಂಗಿ ಹೋರಾಟ ನೀಡಿದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್, ಸಮಯೋಚಿತ ಅರ್ಧಶತಕದ ಸಾಧನೆ ಮಾಡಿದರು. ಆದರೆ ಅಪಾಯಕಾರಿಯಾಗಿ ಮುನ್ನುಗ್ಗುತ್ತಿದ್ದ ಬಟ್ಲರ್ ಓಟಕ್ಕೆ ಚಕ್ರವರ್ತಿ ಬ್ರೇಕ್ ಹಾಕಿದರು.
ಬಟ್ಲರ್ 44 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 68 ರನ್ ಗಳಿಸಿದರು.
ಇನ್ನುಳಿದಂತೆ ಜೇಕಬ್ ಬೆತೆಲ್ (7), ಜೆಮಿ ಒವರ್‌ಟನ್ (2), ಗಸ್ ಅಟ್ಕಿನ್ಸನ್ (2), ಜೋಫ್ರಾ ಆರ್ಚರ್ (12), ಅದಿರ್ ರಶೀದ್ (8*) ಹಾಗೂ ಮಾರ್ಕ್ ವುಡ್ (1) ನಿರಾಸೆ ಮೂಡಿಸಿದರು.
ಭಾರತದ ಪರ ವರುಣ್ ಚಕ್ರವರ್ತಿ ಮೂರು ಮತ್ತು ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್ ಗಳಿಸಿದರು.
ಟಾಸ್ ಗೆದ್ದ ಭಾರತ ಫೀಲ್ಡಿಂಗ್...
ಈ ಮೊದಲು ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇಂದು ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿದೆ.
ಟೀಮ್ ಇಂಡಿಯಾ ಆಡುವ ಹನ್ನೊಂದರ ಬಳಗ ಇಂತಿದೆ:
ಸೂರ್ಯಕುಮಾರ್ ಯಾದವ್ (ನಾಯಕ),
ಅಕ್ಷರ್ ಪಟೇಲ್ (ಉಪನಾಯಕ),
ಅಭಿಷೇಕ್ ಶರ್ಮಾ,
ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್),
ತಿಲಕ್ ವರ್ಮಾ,
ಹಾರ್ದಿಕ್ ಪಾಂಡ್ಯ,
ರಿಂಕು ಸಿಂಗ್,
ನಿತೀಶ್ ಕುಮಾರ್ ರೆಡ್ಡಿ,
ರವಿ ಬಿಷ್ಣೋಯಿ,
ಅರ್ಷದೀಪ್ ಸಿಂಗ್,
ವರುಣ್ ಚಕ್ರವರ್ತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.