ಶತಕ ಗಳಿಸಿ ಸಂಭ್ರಮಿಸಿದ ಕೆ.ಎಲ್. ರಾಹುಲ್
ಕೃಪೆ: ಪಿಟಿಐ
ಲಾರ್ಡ್ಸ್: ಕನ್ನಡಿಗ ಕೆ.ಎಲ್. ರಾಹುಲ್ ಅವರ ಅಮೋಘ ಶತಕ, ವಿಕೆಟ್‌ಕೀಪರ್ ರಿಷಭ್ ಪಂತ್ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜ ಗಳಿಸಿದ ಅರ್ಧಶತಕಗಳ ಬಲದಿಂದ ಭಾರತ ಕ್ರಿಕೆಟ್ ತಂಡವು ಲಾರ್ಡ್ಸ್ ಟೆಸ್ಟ್‌ನ ಮೊದಲ ಇನಿಂಗ್ಸ್ ಇಂಗ್ಲೆಂಡ್ ಲೆಕ್ಕ ಚುಕ್ತಾ ಮಾಡಿದೆ.
ಗುರುವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 387 ರನ್ ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಟೀಂ ಇಂಡಿಯಾ ಕೂಡ ಅಷ್ಟೇ ರನ್ ಗಳಿಸಿ ಸರ್ವಪತನ ಕಂಡಿದೆ.
2ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ಗೆ 145 ರನ್ ಗಳಿಸಿದ್ದ ಶುಭಮನ್ ಗಿಲ್ ಪಡೆಗೆ, ರಾಹುಲ್ ಹಾಗೂ ಪಂತ್ ಇಂದು ನೆರವಾದರು. 4ನೇ ವಿಕೆಟ್ ಪಾಲುದಾರಿಕೆಯಲ್ಲಿ 141 ರನ್ ಕಲೆಹಾಕಿದ ಈ ಇಬ್ಬರು, ತಂಡವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದರು. ಆದರೆ, ಕೇವಲ 6 ರನ್ ಅಂತರದಲ್ಲೇ ವಿಕೆಟ್ ಒಪ್ಪಿಸಿದರು.
177 ಎಸೆತಗಳನ್ನು ಎದುರಿಸಿದ ರಾಹುಲ್ 100 ರನ್ ಕಲೆಹಾಕಿದರೆ, ಪಂತ್ 112 ಎಸೆತಗಳಲ್ಲಿ 74 ರನ್ ಗಳಿಸಿ ಔಟಾದರು.
ಹೀಗಾಗಿ, ಭಾರತವನ್ನು ಬೇಗನೆ ಕಟ್ಟಿಹಾಕಿ ಇನಿಂಗ್ಸ್ ಮುನ್ನಡೆ ಕಾಯ್ದುಕೊಳ್ಳಲು ಬೆನ್ ಸ್ಟೋಕ್ಸ್ ಪಡೆ ಯೋಜಿಸಿತ್ತು. ಆದರೆ, ಕೆಳ ಕ್ರಮಾಂಕದ ಬ್ಯಾಟರ್‌ಗಳೊಂದಿಗೆ ಜವಾಬ್ದಾರಿಯುತ ಆಟವಾಡಿದ ಜಡೇಜ (72 ರನ್) ಆ ಲೆಕ್ಕಾಚಾರವನ್ನು ಉಲ್ಟಾ ಮಾಡಿದರು.
ನಿತೀಶ್ ಕುಮಾರ್ ರೆಡ್ಡಿ (30 ರನ್) ಜೊತೆ 6ನೇ ವಿಕೆಟ್ ಪಾಲುದಾರಿಕೆಯಲ್ಲಿ 72 ರನ್ ಸೇರಿಸಿದ ಅವರು, 7ನೇ ವಿಕೆಟ್‌ಗೆ ವಾಷಿಂಗ್ಟನ್ ಸುಂದರ್ ಅವರೊಂದಿಗೆ ಅರ್ಧಶತಕದ ಜೊತೆಯಾಟವಾಡಿದರು.
ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ ಮೂರು ವಿಕೆಟ್ ಉರುಳಿಸಿದರೆ, ನಾಯಕ ಬೆನ್ ಸ್ಟೋಕ್ಸ್ ಹಾಗೂ ಜೋಫ್ರಾ ಆರ್ಚರ್ ತಲಾ ಎರಡು ವಿಕೆಟ್ ಪಡೆದರು. ಬ್ರೇಯ್ಡನ್ ಕೇರ್ಸ್, ಶೋಯಬ್ ಬಷೀರ್ ಒಂದೊಂದು ವಿಕೆಟ್ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.