ADVERTISEMENT

ENG vs IND Test | 400ಕ್ಕಿಂತ ಅಧಿಕ ರನ್ ಗಳಿಸಿದ 9 ಬ್ಯಾಟರ್‌ಗಳು: ಇದೇ ಮೊದಲು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಆಗಸ್ಟ್ 2025, 12:54 IST
Last Updated 3 ಆಗಸ್ಟ್ 2025, 12:54 IST
<div class="paragraphs"><p>ಟೀಂ ಇಂಡಿಯಾ ನಾಯಕ ಶುಭಮನ್‌ ಗಿಲ್‌ ಹಾಗೂ&nbsp;ಆರಂಭಿಕ ಯಶಸ್ವಿ ಜೈಸ್ವಾಲ್‌</p></div>

ಟೀಂ ಇಂಡಿಯಾ ನಾಯಕ ಶುಭಮನ್‌ ಗಿಲ್‌ ಹಾಗೂ ಆರಂಭಿಕ ಯಶಸ್ವಿ ಜೈಸ್ವಾಲ್‌

   

ಕೃಪೆ: ಪಿಟಿಐ

ಲಂಡನ್‌: ಇಂಗ್ಲೆಂಡ್ ಹಾಗೂ ಭಾರತ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡೂ ತಂಡಗಳ ಬ್ಯಾಟರ್‌ಗಳು ವಿಶೇಷ ದಾಖಲೆಯೊಂದನ್ನು ರಚಿಸಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ 9 ಮಂದಿ 400ಕ್ಕಿಂತ ಹೆಚ್ಚು ರನ್‌ ಕಲೆಹಾಕಿದ್ದಾರೆ. ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಸರಣಿಯೊಂದರಲ್ಲಿ ಇಷ್ಟು ಬ್ಯಾಟರ್‌ಗಳು ಈ ರೀತಿಯ ಸಾಧನೆ ಮಾಡಿರುವುದು ಇದೇ ಮೊದಲು.

ADVERTISEMENT

ಈ ಹಿಂದೆ ವೆಸ್ಟ್‌ ಇಂಡೀಸ್‌ ವಿರುದ್ಧ ಆಸ್ಟ್ರೇಲಿಯಾದಲ್ಲಿ 1975/76ರಲ್ಲಿ ನಡೆದ ಸರಣಿಯಲ್ಲಿ ಹಾಗೂ 1993ರ ಆ್ಯಷಸ್‌ (ಆಸ್ಟ್ರೇಲಿಯಾ vs ಇಂಗ್ಲೆಂಡ್‌) ಟೂರ್ನಿಯಲ್ಲಿ ತಲಾ 8 ಮಂದಿ 400ಕ್ಕಿಂತ ಅಧಿಕ ರನ್‌ ಗಳಿಸಿದ್ದರು. ಈವರೆಗೆ ಅದೇ ದಾಖಲೆಯಾಗಿತ್ತು.

'ಟಾಪ್ 4' ಪಟ್ಟಿಯಲ್ಲಿ ನಾಲ್ವರು ಭಾರತೀಯರು
ಪ್ರಸಕ್ತ ಸರಣಿಯಲ್ಲಿ ಭಾರತದ ಬ್ಯಾಟರ್‌ಗಳೇ ಪಾರಮ್ಯ ಮೆರೆದಿದ್ದಾರೆ. ಅತಿಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರ ನಾಲ್ಕು ಸ್ಥಾನಗಳಲ್ಲಿ ಭಾರತೀಯರೇ ಇದ್ದಾರೆ.

ಮೊದಲ ಸ್ಥಾನದಲ್ಲಿರುವ ಟೀಂ ಇಂಡಿಯಾ ನಾಯಕ ಶುಭಮನ್‌ ಗಿಲ್‌, 5 ಪಂದ್ಯಗಳ 10 ಇನಿಂಗ್ಸ್‌ಗಳಿಂದ ಒಂದು ದ್ವಿಶತಕ ಹಾಗೂ ನಾಲ್ಕು ಶತಕ ಸಹಿತ 754 ರನ್‌ ಕಲೆಹಾಕಿದ್ದಾರೆ. ಅವರಿಗೂ ಎರಡನೇ ಸ್ಥಾನದಲ್ಲಿರುವ ಕನ್ನಡಿಗ ಕೆ.ಎಲ್‌.ರಾಹುಲ್‌ ಅವರಿಗೂ 200ಕ್ಕೂ ಹೆಚ್ಚು ರನ್‌ಗಳ ಅಂತರವಿದೆ.

ಗಿಲ್‌ ಅವರಷ್ಟೇ ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ರಾಹುಲ್‌ (532 ರನ್‌) ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜ (516 ರನ್‌) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿದ್ದಾರೆ. ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವ ರಿಷಭ್‌ ಪಂತ್‌ (7 ಇನಿಂಗ್ಸ್‌, 479 ರನ್‌) ನಾಲ್ಕನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್‌ನ ಬೆನ್‌ ಡಕೆಟ್‌ (462 ರನ್‌), ಜೋ ರೂಟ್‌ (455 ರನ್‌), ಜೆಮೀ ಸ್ಮಿತ್‌ (432 ರನ್‌) ನಂತರದ ಸ್ಥಾನಗಳಲ್ಲಿ ಇದ್ದಾರೆ.

ಉಳಿದಂತೆ ಭಾರತದ ಆರಂಭಿಕ ಯಶಸ್ವಿ ಜೈಸ್ವಾಲ್‌ (411 ರನ್‌), ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್‌ (408 ರನ್‌) ಕೂಡ ನಾನೂರರ ಗಡಿ ದಾಟಿದ್ದಾರೆ.

ಗೆಲುವಿಗಾಗಿ ಸೆಣಸಾಟ
ಸರಣಿಯ ಐದನೇ ಹಾಗೂ ಅಂತಿಮ ಪಂದ್ಯವು ಕೆನ್ನಿಂಗ್ಟನ್‌ ಓವಲ್‌ ಕ್ರಿಡಾಂಗಣದಲ್ಲಿ ನಡೆಯುತ್ತಿದೆ. ಉಭಯ ತಂಡಗಳು ಗೆಲುವಿಗಾಗಿ ಸೆಣಸಾಟ ನಡೆಸುತ್ತಿವೆ.

374 ರನ್‌ಗಳ ಕಠಿಣ ಗುರಿ ಬೆನ್ನತ್ತಿರುವ ಆತಿಥೇಯ ತಂಡ ನಾಲ್ಕನೇ ದಿನ ಊಟದ ವಿರಾಮದ ಹೊತ್ತಿಗೆ 3 ವಿಕೆಟ್‌ ಕಳೆದುಕೊಂಡು 164 ರನ್‌ ಗಳಿಸಿದೆ. ಗೆಲ್ಲಲು ಇನ್ನೂ 210 ರನ್‌ ಗಳಿಸಬೇಕಿದೆ. ಭಾರತಕ್ಕೆ 7 ವಿಕೆಟ್‌ಗಳ ಅಗತ್ಯವಿದೆ.

'ಟೆಸ್ಟ್‌ ಪರಿಣತ' ಬ್ಯಾಟರ್‌ಗಳಾದ ಜೋ ರೂಟ್‌ ಮತ್ತು ಹ್ಯಾರಿ ಬ್ರೂಕ್‌ ಕ್ರೀಸ್‌ನಲ್ಲಿದ್ದಾರೆ. ರೂಟ್‌ 46 ಎಸೆತಗಳಲ್ಲಿ 23 ರನ್‌ ಗಳಿಸಿದ್ದರೆ, ಬೀಸಾಟಕ್ಕೆ ಒತ್ತು ನೀಡಿರುವ ಬ್ರೂಕ್‌ 30 ಎಸೆತಗಳಲ್ಲೇ 38 ರನ್‌ ಗಳಿಸಿ ಆಡುತ್ತಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ 224 ರನ್‌ ಗಳಿಗೆ ಆಲೌಟ್‌ ಆಗಿತ್ತು. ಇದಕ್ಕುತ್ತವಾಗಿ ಇಂಗ್ಲೆಂಡ್‌, 247 ರನ್‌ ಗಳಿಸಿತ್ತು. ಬಳಿಕ ಎರಡನೇ ಇನಿಂಗ್ಸ್‌ ಆರಂಭಿಸಿದ ಭಾರತ, 396 ಕಲೆಹಾಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.