ಯಶಸ್ವಿ ಜೈಸ್ವಾಲ್
ರಾಯಿಟರ್ಸ್ ಚಿತ್ರ
ಎಜ್‌ಬಾಸ್ಟನ್: ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 2,000 ರನ್ ಪೂರೈಸಿದ ಬ್ಯಾಟರ್‌ಗಳ ಸಾಲಿನಲ್ಲಿ ದಿಗ್ಗಜರಾದ ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಅವರೊಂದಿಗೆ ಸ್ಥಾನ ಹಂಚಿಕೊಂಡಿದ್ದಾರೆ.
ಎಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ವೇಳೆ ಜೈಸ್ವಾಲ್ ಈ ಸಾಧನೆ ಮಾಡಿದ್ದಾರೆ.
ಐದು ಪಂದ್ಯಗಳ ಸರಣಿಯ ಎರಡನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರತ 180 ರನ್‌ಗಳ ಉತ್ತಮ ಮುನ್ನಡೆ ಸಾಧಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, ಮೊದಲ ಇನಿಂಗ್ಸ್‌ನಲ್ಲಿ 587 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಇಂಗ್ಲೆಂಡ್ 407 ರನ್ ಗಳಿಸಿ ಆಲೌಟ್ ಆಗಿದೆ. ಸದ್ಯ ಎರಡನೇ ಇನಿಂಗ್ಸ್ ಆರಂಭಿಸಿರುವ ಭಾರತ 1 ವಿಕೆಟ್‌ಗೆ 64 ರನ್ ಗಳಿಸಿದ್ದು 244 ರನ್‌ಗಳ ಮುನ್ನಡೆಯೊಂದಿಗೆ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಕನ್ನಡಿಗರಾದ ಕೆ.ಎಲ್.ರಾಹುಲ್ (28 ರನ್) ಹಾಗೂ ಕರುಣ್ ನಾಯರ್ (7 ರನ್) ಕ್ರೀಸ್‌ನಲ್ಲಿದ್ದಾರೆ.
ಅನುಭವಿ ರಾಹುಲ್ ಅವರೊಂದಿಗೆ ಕ್ರೀಸ್‌ಗಿಳಿದ ಜೈಸ್ವಾಲ್, 28 ರನ್ ಗಳಿಸಿ ಔಟಾಗಿದ್ದಾರೆ. ಆದರೆ, 10 ರನ್ ಗಳಿಸಿದ್ದಾಗಲೇ ಈ ಮಾದರಿಯಲ್ಲಿ ಎರಡು ಸಹಸ್ರ ರನ್ ಪೂರೈಸಿದ ಸಾಧನೆ ಮಾಡಿದ ಅವರು, ಭಾರತ ಪರ ವೇಗವಾಗಿ ಇಷ್ಟು ರನ್‌ಗಳಿಸಿದ ಬ್ಯಾಟರ್ ಎಂಬ ಶ್ರೇಯವನ್ನು ದಿಗ್ಗಜರೊಂದಿಗೆ ಹಂಚಿಕೊಂಡರು.
ಜೈಸ್ವಾಲ್ ಈವರೆಗೆ 21 ಪಂದ್ಯಗಳ 40 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ದ್ರಾವಿಡ್ ಮತ್ತು ಸೆಹ್ವಾಗ್ ಅವರೂ ತಮ್ಮ 40ನೇ ಇನಿಂಗ್ಸ್‌ನಲ್ಲೇ 2,000 ರನ್ ಪೂರೈಸಿದ್ದರು.
ಒಟ್ಟಾರೆಯಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 2 ಸಾವಿರ ರನ್ ಗಳಿಸಿದ ದಾಖಲೆ ಇರುವುದು ಬ್ಯಾಟಿಂಗ್ ದಂತಕತೆ ಡಾನ್ ಬ್ರಾಡ್ಮನ್ ಹೆಸರಿನಲ್ಲಿ. ಆಸ್ಟ್ರೇಲಿಯಾದ ಈ ಬ್ಯಾಟರ್ ತಮ್ಮ 22ನೇ ಇನಿಂಗ್ಸ್‌ನಲ್ಲೇ ಇಷ್ಟು ರನ್ ಕಲೆಹಾಕಿದ್ದರು. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ವೆಸ್ಟ್ ಇಂಡೀಸ್‌ನ ಜಾರ್ಜ್ ಹೆಡ್ಲೇ (32 ಇನಿಂಗ್ಸ್), ಇಂಗ್ಲೆಂಡ್‌ನ ಹರ್ಬರ್ಟ್ ಸಟ್‌ಕ್ಲಿಫ್ (33 ಇನಿಂಗ್ಸ್), ಆಸ್ಟ್ರೇಲಿಯಾದ ಮೈಕಲ್ ಹಸ್ಸಿ (33 ಇನಿಂಗ್ಸ್), ಮಾರ್ನಸ್ ಲಾಬುಶೇನ್ (34 ಇನಿಂಗ್ಸ್) ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.